ವಿಭಿನ್ನ ರೊಮ್ಯಾಂಟಿಕ್ ಥ್ರಿಲ್ಲರ್ 'ಲಾರ್ಡ್ ಗಾಗ' ಚಿತ್ರದ ಫಸ್ಟ್ ಲುಕ್- ಮೋಷನ್ ಪೋಸ್ಟರ್ ರಿಲೀಸ್
Lord Gaga Movie: 'ಲಾರ್ಡ್ ಗಾಗ' ಚಿತ್ರತಂಡವು ತನ್ನ ವಿಶಿಷ್ಟ ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿ ಸಿನಿಪ್ರಿಯರಲ್ಲಿ ಕೌತುಕ ಮೂಡಿಸಿದೆ. ಪ್ರೀತಿ, ಅಹಂ ಹಾಗೂ ವ್ಯಸನದ ಸಂಕೀರ್ಣತೆಯನ್ನು ಅನಾವರಣಗೊಳಿಸುವ ಈ ರೊಮ್ಯಾಂಟಿಕ್ ಸೈಕಾಲಜಿಕಲ್ ಥ್ರಿಲ್ಲರ್ ಚಿತ್ರವು ಸಂಪೂರ್ಣ ಕಾರ್ಪೊರೇಟ್ ಶೈಲಿಯಲ್ಲಿ ನಿರ್ಮಾಣಗೊಂಡಿದೆ.
-
ತನ್ನ ವಿಶಿಷ್ಟ ಶೀರ್ಷಿಕೆ ಮತ್ತು ಕುತೂಹಲಕಾರಿ ಕಂಟೆಂಟ್ ಮೂಲಕ ಇತ್ತೀಚೆಗಷ್ಟೇ ಸ್ಯಾಂಡಲ್‌ವುಡ್ ಸಿನಿಪ್ರಿಯರ ಗಮನ ಸೆಳೆದಿದ್ದ ಬಹುನಿರೀಕ್ಷಿತ 'ಲಾರ್ಡ್ ಗಾಗ' ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ಮೋಷನ್ ಪೋಸ್ಟರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಈಗಾಗಲೇ ಸದ್ದಿಲ್ಲದೆ ಬಹುತೇಕ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಚಿತ್ರತಂಡ, ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಚಿತ್ರದ ತಾರಾಗಣ ಹಾಗೂ ತಾಂತ್ರಿಕ ವರ್ಗವನ್ನು ಪರಿಚಯಿಸಿದೆ.
ಇದು ಇಂಡಿಯನ್ ಕಲ್ಟ್ ಸಿನಿಮಾ
ಈ ಚಿತ್ರಕ್ಕೆ ಯುವ ಪ್ರತಿಭೆ ವೈಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ಚಿತ್ರದ ಕಥಾಹಂದರದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ವೈಕೆ, "ಲಾರ್ಡ್ ಗಾಗ ಹೆಸರೇ ಹೇಳುವಂತೆ ಔಟ್ ಅಂಡ್ ಔಟ್ ಇಂಡಿಯನ್ ಕಲ್ಟ್ ಸಿನಿಮಾ. ಮನುಷ್ಯನ ಮನಸ್ಸಿನಲ್ಲಿ ಮೂಡುವ ಪ್ರೀತಿ, ಪ್ರೇಮ, ಪ್ರಣಯ, ಭಾವನೆ, ವ್ಯಸನ ಹಾಗೂ ಆತ ತೆಗೆದುಕೊಳ್ಳುವ ಆಯ್ಕೆಗಳ ಸಂಕೀರ್ಣ ಚಿತ್ರಣ ಇದರಲ್ಲಿದೆ. ಇದನ್ನು ರೊಮ್ಯಾಂಟಿಕ್ ಸೈಕಾಲಜಿಕಲ್ ಥ್ರಿಲ್ಲರ್ ಶೈಲಿಯಲ್ಲಿ ಕಟ್ಟಿಕೊಡಲಾಗಿದೆ. ಇಗೋ-ಸೆಂಟ್ರಿಕ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಿವರ್ಸ್ ಸ್ಕ್ರೀನ್ ತಂತ್ರವನ್ನು ಬಳಸಿದ್ದು, ಕಾಲಾತೀತ ಕಥೆಯನ್ನು ತೆರೆಮೇಲೆ ತರಲಾಗುತ್ತಿದೆ" ಎಂದು ತಿಳಿಸಿದರು.
ಕಾರ್ಪೊರೇಟ್ ಶೈಲಿಯ ನಿರ್ಮಾಣ
'ಝೀರೋ ಗ್ರ್ಯಾವಿಟಿ ಫಿಲಂಸ್' ಬ್ಯಾನರ್ ಅಡಿಯಲ್ಲಿ ಉದ್ಯಮಿ ಮುಕಿ ರೆಘುನಾಥನ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದು, ಚಿತ್ರದ ಪ್ರಮುಖ ಪಾತ್ರವೊಂದರಲ್ಲೂ ಬಣ್ಣ ಹಚ್ಚಿದ್ದಾರೆ. ಚಿತ್ರದ ನಿರ್ಮಾಣ ಅನುಭವದ ಬಗ್ಗೆ ಮಾತನಾಡಿದ ಅವರು, "ಇಡೀ ಸಿನಿಮಾವನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಪೊರೇಟ್ ಶೈಲಿಯಲ್ಲಿ ನಿರ್ಮಿಸಿದ್ದೇವೆ. ಚಿತ್ರತಂಡದ ಪ್ರತಿಯೊಬ್ಬ ಕಲಾವಿದರು ಮತ್ತು ತಂತ್ರಜ್ಞರಿಗೆ ಸೂಕ್ತ ಸಂಭಾವನೆಯ ಜೊತೆಗೆ ವಿಮೆ, ಉತ್ತಮ ವಸತಿ, ಆರೋಗ್ಯ ಸೌಲಭ್ಯ ಹಾಗೂ ಗುಣಮಟ್ಟದ ಸಾವಯವ ಆಹಾರವನ್ನು ಒದಗಿಸಲಾಗಿದೆ. ಕನ್ನಡ ಚಿತ್ರರಂಗಕ್ಕೆ ಈ ಚಿತ್ರ ಹೊಸ ಮೈಲಿಗಲ್ಲಾಗಬೇಕು ಎಂಬ ಉದ್ದೇಶದಿಂದ ಸಾಕಷ್ಟು ಪರಿಶ್ರಮ ಹಾಕಿದ್ದೇವೆ. ಹಲವು ಹಂತಗಳ ತಿದ್ದುಪಡಿಯ ನಂತರ ಸುಮಾರು 3,000ಕ್ಕೂ ಹೆಚ್ಚು ವಿವಿಧ ವರ್ಗದ ಪ್ರೇಕ್ಷಕರಿಗೆ ಸಿನಿಮಾ ತೋರಿಸಿ, ಅವರ ಅಭಿಪ್ರಾಯ ಹಾಗೂ ಸಲಹೆಗಳನ್ನು ಪಡೆದು ಚಿತ್ರಕ್ಕೆ ಅಂತಿಮ ರೂಪ ನೀಡಲಾಗಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
Maarutha Review: ಸೋಶಿಯಲ್ ಮೀಡಿಯಾದ ಕ್ರೈಮ್‌ಗಳ ಮೇಲೆ ಬೆಳಕು ಚೆಲ್ಲುವ ʻಮಾರುತʼ
ಈ ಸಿನಿಮಾದಲ್ಲಿ ಯಾರೆಲ್ಲಾ ನಟಿಸಿದ್ದಾರೆ?
ಈ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ಶೂನ್ಯ, "ನಾನು ಈ ಚಿತ್ರದ ಕೇವಲ ನಾಯಕ ಎನ್ನುವುದಕ್ಕಿಂತ ಒಂದು ಪ್ರಮುಖ ಪಾತ್ರ ಮಾಡಿದ್ದೇನೆ ಎನ್ನಬಹುದು. ಏಕೆಂದರೆ ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯೇ ಇಲ್ಲಿ ನಿಜವಾದ ಹೀರೋ. ಈ ಪ್ರಾಜೆಕ್ಟ್‌ಗೂ ಮುನ್ನ ಸುಮಾರು 45ಕ್ಕೂ ಹೆಚ್ಚು ಕಥೆಗಳನ್ನು ಕೇಳಿದ್ದೆ, ಆದರೆ ಈ ಕಥೆ ನನ್ನನ್ನು ಬಹುವಾಗಿ ಸೆಳೆಯಿತು. ಪ್ರೇಕ್ಷಕರ ಮನಸ್ಸಿನಲ್ಲಿ ಈ ಪಾತ್ರಗಳು ಅಚ್ಚಳಿಯದೆ ಉಳಿಯಲಿವೆ" ಎಂದರು. ಈ ಹಿಂದೆ 'ಮತ್ಸ್ಯಗಂಧ' ಚಿತ್ರದಲ್ಲಿ ಗಮನ ಸೆಳೆದಿದ್ದ ನಟಿ ದಿಶಾ ಹಾಗೂ ಸ್ವರೂಪಿಣಿ ನಾರಾಯಣ್ ಚಿತ್ರದ ಇಬ್ಬರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
7 ಭಾಷೆಗಳಲ್ಲಿ ರಿಲೀಸ್ ಮಾಡುವ ಪ್ಲ್ಯಾನ್
ಉಡುಪಿ, ಗೋಕರ್ಣ ಹಾಗೂ ಹಾಸನದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಅಂತಿಮ ಹಂತದಲ್ಲಿದೆ. ಸದ್ಯದಲ್ಲೇ ಚಿತ್ರ ಸೆನ್ಸಾರ್ ಮಂಡಳಿಯ ಮುಂದೆ ಹೋಗಲಿದೆ. ಈ ಚಿತ್ರವನ್ನು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ ಹಾಗೂ ಭೋಜಪುರಿ ಸೇರಿದಂತೆ ಏಕಕಾಲಕ್ಕೆ 7ಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಶೀಘ್ರದಲ್ಲೇ ಟೀಸರ್ ಬಿಡುಗಡೆಯಾಗಲಿದ್ದು, 2027ರ ಮಾರ್ಚ್ ವೇಳೆಗೆ 'ಲಾರ್ಡ್ ಗಾಗ' ಬೆಳ್ಳಿಪರದೆಗೆ ಅಪ್ಪಳಿಸುವ ಸಾಧ್ಯತೆಯಿದೆ.