Mark Movie: 'ಮಾರ್ಕ್' ಚಿತ್ರದ ಫಸ್ಟ್ ಸಾಂಗ್ ಬಿಡುಗಡೆಗೆ ದಿನಗಣನೆ; ಮಹತ್ವದ ಅಪ್‌ಡೇಟ್ ಹಂಚಿಕೊಂಡ ಕಿಚ್ಚ ಸುದೀಪ್
Kichcha Sudeepa: ತಮ್ಮ ʼಮಾರ್ಕ್ʼ ಚಿತ್ರದ ಕುರಿತಾಗಿ ಕಿಚ್ಚ ಸುದೀಪ್ ಇದೀಗ ಮಹತ್ವದ ಅಪ್‌ಡೇಟ್ ಘೋಷಿಸಿದ್ದಾರೆ. ಚಿತ್ರದ ಮೊದಲ ಹಾಡಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ತೆರೆಕಂಡ ʼಮ್ಯಾಕ್ಸ್ʼ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದ ವಿಜಯ್ ಕಾರ್ತಿಕೇಯ ಅವರೇ ʼಮಾರ್ಕ್ʼ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

-

ಬೆಂಗಳೂರು: ತಮ್ಮ ಮುಂಬರುವ ಚಿತ್ರದ ಟೈಟಲ್ ಘೋಷಿಸುವ ಮೂಲಕ ಇತ್ತೀಚೆಗೆ ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿದ್ದ ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeepa) ಇದೀಗ ಮತ್ತೊಂದು ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಜುಲೈಯಲ್ಲಿ ʼಕೆ 47ʼ (K 47) ಎನ್ನುವ ತಾತ್ಕಾಲಿಕ ಟೈಟಲ್ ಇಟ್ಟ ಶೂಟಿಂಗ್ ಆರಂಭಿಸಿದ್ದ ಚಿತ್ರತಂಡ ಇದಕ್ಕೆ ʼಮಾರ್ಕ್ʼ (Mark Movie) ಎನ್ನುವ ಶೀರ್ಷಿಕೆಯನ್ನು ಫೈನಲ್ ಮಾಡಿ ಸೆಪ್ಟೆಂಬರ್ 1ರಂದು ಟೀಸರ್ ರಿಲೀಸ್ ಮಾಡಿತ್ತು. ಇದೀಗ ಸುದೀಪ್ ಚಿತ್ರದ ಮೊದಲ ಹಾಡಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡ ಸುದೀಪ್, ʼʼಚಿತ್ರದ ಮೊದಲ ಲಿರಿಕಲ್ ವಿಡಿಯೊ ಸಾಂಗ್ ಶೀಘ್ರದಲ್ಲೇ ರಿಲೀಸ್ ಆಗಲಿದೆ. ಬಿ. ಅಜನೀಶ್ ಲೋಕನಾಥ್ ಅದ್ಭುತವಾಗಿ ಸಂಗೀತ ಸಂಯೋಜಿಸಿದ್ದು, ಶೋಬಿನ್ ಮಾಸ್ಟರ್ ಕೊರಿಯಾಗ್ರಫಿ ಇದೆ. ಹಾಡಿನ ಪ್ರತಿ ಬಿಟ್ ನಿಮ್ಮನ್ನು ಬೇರೊಂದು ಲೋಕಕ್ಕೆ ಕೊಂಡೊಯ್ಯಲಿದೆʼʼ ಎಂದು ಸುದೀಪ್ ಬರೆದುಕೊಂಡಿದ್ದಾರೆ.
ಸುದೀಪ್ ಅವರ ಎಕ್ಸ್ ಪೋಸ್ಟ್:
The lyrical song video releasing soon.
— Kichcha Sudeepa (@KicchaSudeep) September 15, 2025
Brilliant stand out composition by @AJANEESHB and exceptional choreography by @shobimaster.
Njoyed every bit of it.#Kichcha47 #Mark #MarkTheFilm #Mark25thDec@SathyaJyothi @Kichchacreatiin @VKartikeyaa @AJANEESHB @shekarchandra71…
ಈ ಸುದ್ದಿಯನ್ನೂ ಓದಿ: BBK 12: ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಕ್ಕೆ ಡೇಟ್ ಫಿಕ್ಸ್; ದಿನಾಂಕ ಪ್ರಕಟಿಸಿದ ಕಿಚ್ಚ ಸುದೀಪ್
ಕಳೆದ ವರ್ಷ ತೆರೆಕಂಡ ʼಮ್ಯಾಕ್ಸ್ʼ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದ ವಿಜಯ್ ಕಾರ್ತಿಕೇಯ ಅವರೇ ʼಮಾರ್ಕ್ʼ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ರಿಲೀಸ್ ಆಗಿರುವ ʼಮಾರ್ಕ್ʼ ಸಿನಿಮಾದ ಫಸ್ಟ್ ಲುಕ್ ಟೀಸರ್‌ನಲ್ಲಿ ಸುದೀಪ್ ಮತ್ತೊಮ್ಮೆ ಪವರ್‌ಫುಲ್ ಪಾತ್ರದಲ್ಲಿ ಮಿಂಚಿದ್ದಾರೆ. ಅವರ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಜಯ್ ಮಾರ್ಕಾಂಡೆ ಆಲಿಯಾಸ್ ಮಾರ್ಕ್ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದು, ಇದು ಕೂಡ ʼಮ್ಯಾಕ್ಸ್ʼನಂತೆ ಭರ್ಜರಿ ಆ್ಯಕ್ಷನ್ ಚಿತ್ರ ಎನ್ನುವ ಸೂಚನೆ ಟೀಸರ್‌ನಲ್ಲೇ ಸಿಕ್ಕಿದೆ. ಕನ್ನಡದ ಜತೆಗೆ ಇದು ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ತೆರೆ ಕಾಣಲಿದೆ.
ಈ ಚಿತ್ರವನ್ನು ಸತ್ಯಜ್ಯೋತಿ ಫಿಲ್ಮ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ಗಳು ಜತೆಯಾಗಿ ನಿರ್ಮಿಸುತ್ತಿದ್ದು, ಅರ್ಜುನ್ ತ್ಯಾಗರಾಜನ್ ಮತ್ತು ಸೆಂಥಿಲ್ ತ್ಯಾಗರಾಜನ್ ಬಂಡವಾಳ ಹೂಡಿದ್ದಾರೆ. ಛಾಯಾಗ್ರಾಹಕರಾಗಿ ಶೇಖರ್ ಚಂದ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಚಿತ್ರದ ಬಹುತೇಕ ಭಾಗದ ಶೂಟಿಂಗ್ ಪೂರ್ಣಗೊಂಡಿದ್ದು, ಕ್ರಿಸ್‌ಮಸ್‌ಗೆ ತೆರೆಗೆ ಬರಲಿದೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದ ಸುದೀಪ್, ʼʼನಾವು ಅಂದುಕೊಂಡಂತೆ ವೇಗವಾಗಿ ಶೂಟಿಂಗ್ ಮಾಡುತ್ತಿದ್ದೇವೆ. ಈಗಾಗಲೇ ಸಿನಿಮಾದ ಶೇ. 60ರಷ್ಟು ಶೂಟ್ ಪೂರ್ಣಗೊಂಡಿದೆ. ಅಕ್ಟೋಬರ್ ವೇಳೆಗೆ ಸಿನಿಮಾದ ಚಿತ್ರೀಕರಣ ಪೂರ್ಣಗೊಳ್ಳಲಿದೆ. ನವೆಂಬರ್ನಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯಲಿದೆʼʼ ಎಂದಿದ್ದರು. ಇನ್ನು ಚಿತ್ರದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ ಎನ್ನುವ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.
ಡಿಸೆಂಬರ್ 25ರಂದು ತೆರೆಗೆ
ವಿಶೇಷ ಎಂದರೆ ʼಮ್ಯಾಕ್ಸ್ʼ 2024ರ ಡಿಸೆಂಬರ್ 25ರಂದು ತೆರೆಗೆ ಬಂದಿತ್ತು. ಇದೀಗ ʼಮಾರ್ಕ್ʼ ಕೂಡ ಡಿಸೆಂಬರ್ 25ರಂದೇ ರಿಲೀಸ್ ಆಗಲಿದೆ. ಒಂದೇ ದಿನದಲ್ಲಿ ನಡೆಯುವ ಕಥೆಯನ್ನು ಒಳಗೊಂಡ ʼಮ್ಯಾಕ್ಸ್ʼನಲ್ಲಿ ಸುದೀಪ್ ಮತ್ತೊಮ್ಮೆ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಂಡು ಗೆಲುವಿನ ನಗೆ ಬೀರಿದ್ದರು. ಈ ಬಾರಿಯೂ ಯಶಸ್ಸು ಮುಂದುವರಿಯುತ್ತ ಎನ್ನುವುದನ್ನು ಕಾದು ನೋಡಬೇಕಿದೆ.