Drishyam 3 Review: ಈ ಸಲ ಚಮತ್ಕಾರಿ ಆಟ ಕಟ್ಟುವಲ್ಲಿ ಸುಸ್ತಾದ ಜಾರ್ಜ್ ಕುಟ್ಟಿ; ಬಲವಂತದ ಸೀಕ್ವೇಲ್‌ನಲ್ಲಿ ಅನಗತ್ಯ ಪೈಪೋಟಿ!
Drishyam 3 Movie Review: ಜೀತು ಜೋಸೆಫ್ ನಿರ್ದೇಶನದ ಹಾಗೂ ಮೋಹನ್‌ಲಾಲ್ ನಟನೆಯ ಬಹುನಿರೀಕ್ಷಿತ 'ದೃಶ್ಯಂ 3' ಚಿತ್ರಕ್ಕೆ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲಾರ್ಧ ನಿಧಾನಗತಿಯಲ್ಲಿದ್ದು, ಕೊನೆಯ ಇಪ್ಪತ್ತು ನಿಮಿಷಗಳು ಮಾತ್ರ ನೈಜ ಥ್ರಿಲ್ಲರ್ ಅನುಭವ ನೀಡುತ್ತವೆ.
-
Movie: ದೃಶ್ಯಂ 3
Release Date: ಮೇ 21, 2026
Language: ಮಲಯಾಳಂ
Genre: ಥ್ರಿಲ್ಲರ್, ಡ್ರಾಮಾ,
Director: ಜೀತು ಜೋಸೆಫ್
Cast: ಮೋಹನ್‌ಲಾಲ್, ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಮುರಳಿ ಗೋಪಿ, ಸಿದ್ಧಿಕಿ, ಬಿಜು ಮೆನನ್, ಆಶಾ ಶರತ್
Duration: 159 ನಿಮಿಷ
Rating: 2.5/5
ಜಾರ್ಜ್ ಕುಟ್ಟಿ ಮತ್ತವನ ಕುಟುಂಬ ಕಳೆದ 13 ವರ್ಷಗಳಿಂದಲೂ ಸಿನಿಪ್ರಿಯರ ಸ್ಮೃತಿಪಟಲದಲ್ಲಿ ಬೆಚ್ಚಗೆ ಕುಳಿತುಬಿಟ್ಟಿದೆ. ತನ್ನ ಕುಟುಂಬ ಉಳಿಸಿಕೊಳ್ಳಲು ಜಾರ್ಜ್ ಕುಟ್ಟಿ ಏನೆಲ್ಲಾ ಸರ್ಕಸ್ ಮಾಡಬಹುದು ಎಂಬ ನಿರೀಕ್ಷೆಯೊಂದಿಗೆ ಪ್ರೇಕ್ಷಕರು ಕಾಯುತ್ತಿದ್ದಾರೆ. ದೃಶ್ಯಂ ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ಬಂದ ಸೀಕ್ವೇಲ್ ಕೂಡ ನೋಡುಗರಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿತ್ತು. "ಅಲೇಲೇ.. ಈ ಜಾರ್ಜ್ ಕುಟ್ಟಿ ಸಾಮಾನ್ಯದವನಲ್ಲಪ್ಪೋ.." ಅಂತ ಪ್ರೇಕ್ಷಕರು ಉದ್ಘರಿಸಿದ್ದರು. ಇದೇ ನಂಬಿಕೆ ಮೇಲೆ ದೃಶ್ಯಂ 3 ನೋಡಲು ಹೋದರೆ, "ಅಯ್ಯೋ, ನಮ್ ಜಾರ್ಜ್ ಕುಟ್ಟಿ ಯಾಕಿಂಗ್ ಆಗಿಬಿಟ್ಟ" ಅಂತ ಅನ್ನಿಸದೇ ಇರದು!
ʻದೃಶ್ಯಂʼ ಪಾರ್ಟ್ 3ರಲ್ಲಿ ಹೇಳಲು ಹೊರಟ ಕಥೆ ಏನು?
ಜಾರ್ಜ್ ಕುಟ್ಟಿ (ಮೋಹನ್‌ಲಾಲ್) ಈಗ ಕೇರಳದ ಒಬ್ಬ ಸಕ್ಸಸ್‌ಫುಲ್ ಸಿನಿಮಾ ಪ್ರೊಡ್ಯೂಸರ್. ತನ್ನ ಕುಟುಂಬದಲ್ಲಿ ನಡೆದ ನೈಜ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಆತ ನಿರ್ಮಿಸಿದ ಮೊದಲ ಸಿನಿಮಾವೇ ಭಾರಿ ಯಶಸ್ಸು ಕಂಡಿದೆ. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ಅನಾಮತ್ತು 100 ಕೋಟಿ ರೂ. ಬಾಚಿಕೊಂಡಿದೆ. ಒಂದು ಸಣ್ಣ ಹಳ್ಳಿಯ ಕೇಬಲ್ ಅಪರೇಟರ್ ಈಗ ಸಿನಿಮಾ ನಿರ್ಮಾಪಕನಾಗಿದ್ದಾನೆ.
Drishyam 3 trailer out: ದೃಶ್ಯಂ 3 ಟ್ರೈಲರ್ ಔಟ್! ಜಾರ್ಜ್‌ಕುಟ್ಟಿಗೆ ಇದೇಕೆ ಪಶ್ಚಾತ್ತಾಪ, ಭಯ?
ಒಂದು ಕಡೆ ತನ್ನ ಸಿನಿಮಾ ಹಿಟ್ ಆಗಿದೆ, ಮತ್ತೊಂದು ಕಡೆ ತನ್ನ ಮಗಳು ಅಂಜುಗೆ ಮದುವೆ ಮಾಡುವ ತಯಾರಿಯಲ್ಲಿದ್ದಾನೆ ಜಾರ್ಜ್ ಕುಟ್ಟಿ. ಇನ್ನು, ಈತನ ಮನೆಯತ್ತ ಪೊಲೀಸರು ಬರಬೇಕೆಂದರೆ, ಸಾವಿರ ಸಲ ಯೋಚಿಸಬೇಕಿದೆ. ಯಾಕೆಂದರೆ, ವರುಣ್ ಕೊಲೆ ಕೇಸ್‌ನಲ್ಲಿ ಪದೇಪದೇ ಕೋರ್ಟ್‌ನಲ್ಲಿ ಪೊಲೀಸರಿಗೆ ನ್ಯಾಯಾಧೀಶರು ಛೀಮಾರಿ ಹಾಕಿದ್ದಾರೆ. ಪಾರ್ಟ್ 2ರಲ್ಲೇ ಇಡೀ ಕಥೆಗೆ ಅಂತ್ಯ ಹಾಡಲಾಗಿದೆ ಎಂದುಕೊಂಡರೂ, ಈ ಬಾರಿ ಕೂಡ ತನಿಖೆ ಮುಂದುವರಿದಿದೆ. ಆದರೆ, ಇದನ್ನು ಪೊಲೀಸರು ಮಾಡುತ್ತಿಲ್ಲ ಅನ್ನೋದೇ ಇಲ್ಲಿನ ಇಂಟರೆಸ್ಟಿಂಗ್ ವಿಷಯ! ಪೊಲೀಸರಿಗೇ ಆಸಕ್ತಿ ಇಲ್ಲದ ಈ ಕೇಸ್ ಮೇಲೆ ಮತ್ತೆ ಯಾರು ಬೆನ್ನು ಬಿದ್ದಿದ್ದಾರೆ? ಅವರು ಹೇಗೆ ಜಾರ್ಜ್ ಕುಟ್ಟಿಯನ್ನು ಫೇಸ್ ಮಾಡುತ್ತಾರೆ? ಜಾರ್ಜ್ ಕುಟ್ಟಿ ಮಗಳ ಮದುವೆ ಆಗುತ್ತಾ? ಈ ಸಲವಾದರೂ ಈ ಕುಟುಂಬ ಸಿಕ್ಕಿಬೀಳುತ್ತಾ ಎಂಬ ಕುತೂಹಲದೊಂದಿಗೆ ಈ ಸಿನಿಮಾದ ಕಥೆ ಸಾಗಿದೆ.
ಈ ಬಾರಿ ಜೀತು ಜೋಸೆಫ್ ಕೆಲಸ ಹೇಗಿದೆ?
2013ರಲ್ಲಿ ಬಂದ 'ದೃಶ್ಯಂ' ಮೊದಲ ಭಾಗದಲ್ಲಿ ಒಂದು ಸ್ಲೋ ಬರ್ನ್ ಥ್ರಿಲ್ಲರ್ ಪರಿಕಲ್ಪನೆಯನ್ನು ಪರಿಚಯಿಸಿ ಭರ್ಜರಿ ಗೆಲುವು ಕಂಡಿದ್ದು ನಿರ್ದೇಶಕ ಜೀತು ಜೋಸೆಫ್. ಆನಂತರ 2021ರಲ್ಲಿ ಒಟಿಟಿಯಲ್ಲಿ ರಿಲೀಸ್ ಆದ ದೃಶ್ಯಂ 2 ಚಿತ್ರ ಸಿನಿಪ್ರಿಯರನ್ನು ನಿರಾಸೆಗೊಳಿಸಿರಲಿಲ್ಲ. ಆದರೆ ಈಗ ಬಂದಿರುವ 'ದೃಶ್ಯಂ 3' ಅಷ್ಟೊಂದು ಥ್ರಿಲ್ಲಿಂಗ್ ಅನ್ನಿಸುವುದಿಲ್ಲ. ಅಂದಹಾಗೆ, ನಿರ್ದೇಶಕ ಜೀತು ಜೋಸೆಫ್ ಅವರಲ್ಲಿನ ಕಸುವು ಮೊದಲಿನಷ್ಟಿಲ್ಲ ಅನ್ನೋದು ಅವರ ಇತ್ತೀಚಿನ ಕೆಲವು ಸಿನಿಮಾಗಳು ಸಾಬೀತು ಮಾಡಿವೆ. ಕೊಂಚ ಪ್ರಿಡಿಕ್ಟಬಲ್ ಆದಂತಹ ಚಿತ್ರಕಥೆಯನ್ನು ಈಚೆಗೆ ಅವರು ಬರೆಯುತ್ತಿದ್ದಾರೆ ಎಂಬ ಮಾತುಗಳಿವೆ. ಅದಕ್ಕೆ ಈ ದೃಶ್ಯಂ 3 ಕೂಡ ಹೊರತಲ್ಲ.
Drishyam 3: ‘ದೃಶ್ಯಂ 3’ ಹಿಂದಿ ಚಿತ್ರದಲ್ಲಿ ಭಾರೀ ಬದಲಾವಣೆ; ಹೇಗಿರಲಿದೆ?
ಅಂದಹಾಗೆ, ಈ 'ದೃಶ್ಯಂ' ಫ್ರಾಂಚೈಸಿ ನಿಂತಿರುವುದೇ ಅನಿರೀಕ್ಷಿತ ಟ್ವಿಸ್ಟ್‌ಗಳು ಮತ್ತು ಬಲವಾದ ಎಮೋಷನಲ್ ಕನೆಕ್ಷನ್ ಮೇಲೆ! ಆದರೆ, ದೃಶ್ಯಂ 3 ಮಾಡುವ ಹೊತ್ತಿಗೆ ಇದೇ ಈ ಚಿತ್ರದ ದೊಡ್ಡ ಮೈನಸ್ ಪಾಯಿಂಟ್ ಆಗಿದೆ. ಏಕೆಂದರೆ, ಪ್ರೇಕ್ಷಕರಿಗೆ ಆ ಫಾರ್ಮ್ಯಾಟ್ ಈಗಾಗಲೇ ಗೊತ್ತಾಗಿಹೋಗಿದೆ. ಉದಾಹರಣೆಗೆ, ಚಿತ್ರದಲ್ಲಿ ಅಂಜು ಮದುವೆ ನಿಶ್ಚಿತಾರ್ಥದ ಹುಡುಗನ ಎಂಟ್ರಿಯಾದಾಗಲೇ ಇಲ್ಲಿ ಏನೋ ಹೊಸ ಟ್ವಿಸ್ಟ್ ಇದೆ ಎಂಬುದು ಪ್ರೇಕ್ಷಕರಿಗೆ ಸುಲಭವಾಗಿ ಗೊತ್ತಾಗಿಬಿಡುತ್ತದೆ. ಈ ಹಿಂದಿನ ಎರಡು ಭಾಗಗಳಲ್ಲಿದ್ದ ಚುರುಕುತನ ಇಲ್ಲಿ ಕಾಣಿಸುವುದಿಲ್ಲ. ಈ ಬಾರಿ ಚಮತ್ಕಾರಿ ಟ್ವಿಸ್ಟ್‌ಗಳ ಬದಲು ಪಶ್ಚಾತ್ತಾಪದ ಮಾತುಗಳು ಕೇಳಿಬರುತ್ತವೆ.
ಇನ್ನು, ಈ ಸಿನಿಮಾದ ಚಿತ್ರದ ಮೊದಲಾರ್ಧವಂತೂ ನಿಂತಲ್ಲಿಯೇ ನಿಂತಿರುತ್ತದೆ. ಧಾರಾವಾಹಿಯಂತೆ ಮುಂದೆ ಸಾಗುವುದೇ ಇಲ್ಲ! ಆದರೆ, ದ್ವಿತಿಯಾರ್ಧದರಲ್ಲಿ ಸ್ವಲ್ಪ ವೇಗ ಪಡೆದುಕೊಳ್ಳುವ ಸಿನಿಮಾ, ಮತ್ತದೇ ಹಳೆ ಟ್ರ್ಯಾಕ್‌ಗೆ ಮರಳಿ ಸುಸ್ತು ಹೊಡೆಸುತ್ತದೆ. ಅಂದಹಾಗೆ, ಇಡೀ ಸಿನಿಮಾದ ಜೀವಂತಿಕೆ ಮತ್ತು ಥ್ರಿಲ್ಲಿಂಗ್ ವಿಚಾರ ಇರುವುದೇ ಕೊನೆಯ 20 ನಿಮಿಷಗಳಲ್ಲಿ ಮಾತ್ರ! ಇಡೀ ಸಿನಿಮಾವನ್ನು ನೋಡಿದಮೇಲೆ ಇದನ್ನು ಪಾರ್ಟ್ 3 ಮಾಡಲೇಬೇಕು ಎಂಬ ಪೈಪೋಟಿಗೆ ಬಿದ್ದು ಬಲವಂತವಾಗಿ ಮಾಡಿದಂತೆ ಭಾಸವಾಗುತ್ತದೆ. ಸತೀಶ್ ಕುರುಪ್ ಅವರ ಛಾಯಾಗ್ರಹಣ ಚೆನ್ನಾಗಿದೆ. ಅನಿಲ್ ಜಾನ್ಸನ್ ಅವರ ಸಂಗೀತ ಸಿನಿಮಾದ ಆಶಯಕ್ಕೆ ತಕ್ಕಂತೆ ಇದೆ.
ಎಂದಿನಂತೆ ಮೋಹನ್‌ಲಾಲ್ ಕ್ಲಾಸ್!
'ದೃಶ್ಯಂ 3' ಸಿನಿಮಾದಲಿ ಎಂದಿನಂತೆ ಮೋಹನ್‌ಲಾಲ್ ಅವರ ನಟನೆ ಅದ್ಭುತ. ಜಾರ್ಜ್ ಕುಟ್ಟಿ ಪಾತ್ರದಲ್ಲಿ ಅವರು ಮತ್ತೊಮ್ಮೆ ಎಲ್ಲರನ್ನು ಹಿಡಿದಿಟ್ಟುಕೊಳ್ಳುತ್ತಾರೆ. ತನ್ನದೇ ದೃಶ್ಯಗಳ ಜಾದೂ ಹೆಣೆಯುವಲ್ಲಿ ಜಾರ್ಜ್‌ಕುಟ್ಟಿ ಯಾವಾಗಲೂ ಪೊಲೀಸರಿಗಿಂತ ಒಂದು ಹೆಜ್ಜೆ ಮುಂದಿರುತ್ತಾನೆ ಎಂಬ ನಂಬಿಕೆಯನ್ನು ಮೋಹನ್‌ಲಾಲ್ ತಮ್ಮ ಸ್ಕ್ರೀನ್ ಪ್ರೆಸೆನ್ಸ್ ಮೂಲಕ ಉಳಿಸಿಕೊಂಡಿದ್ದಾರೆ. ಅವರ ಪತ್ನಿಯಾಗಿ ಮೀನಾ, ಹೆಣ್ಣುಮಕ್ಕಳಾಗಿ ಅನ್ಸಿಬಾ ಹಸನ್ ಮತ್ತು ಎಸ್ತರ್ ಅನಿಲ್ ಮುಂದುವರಿದಿದ್ದಾರೆ. ಆಶಾ ಶರತ್ ಮತ್ತು ಸಿದ್ದಿಕ್‌ಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಇಲ್ಲ. ಆದರೆ, ಕಥೆಗೆ ತಿರುವು ನೀಡುವಲ್ಲಿ ಸಫಲವಾಗಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಮುರಳಿ ಗೋಪಿ ಇಷ್ಟವಾಗುತ್ತಾರೆ.
ಅಂತಿಮವಾಗಿ, 'ದೃಶ್ಯಂ 3' ಸಿನಿಮಾದಲ್ಲಿ ಕಲಾವಿದರ ಉತ್ತಮ ನಟನೆ ಇದ್ದರೂ, ಚಿತ್ರಕಥೆಯ ವಿಚಾರದಲ್ಲಿ ಡಲ್ ಆಗಿದೆ. ʻದೃಶ್ಯಂʼ ಪ್ರಾಂಚೈಸಿಯ ಜನಪ್ರಿಯತೆಯನ್ನು ಬಳಕೆ ಮಾಡುವ ಬಲವಂತದ ಪ್ರಯತ್ನ ಇದು ಎನಿಸುತ್ತದೆ. ಇನ್ನು, ಕ್ಲೈಮ್ಯಾಕ್ಸ್‌ನಲ್ಲಿ ಓಪನ್ ಎಂಡ್ ಮಾಡಿಬಿಡಲಾಗಿದೆ. ಹಾಗಾಗಿ, ಇದರ ಪಾರ್ಟ್ 4 ಬಂದರೂ ಅಚ್ಚರಿ ಇಲ್ಲ!