ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೋಹನ್‌ಲಾಲ್‌ ಮನೆಯಲ್ಲಿ 10 ಆನೆ ದಂತ, 13 ಆನೆ ದಂತದ ವಿಗ್ರಹಗಳು; ಅರಣ್ಯಾಧಿಕಾರಿಗಳ ಮುಂದೆ ಶಾಕಿಂಗ್‌ ವಿಚಾರ ಬಯಲು

Mohanlal Ivory Case: ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರ ಕೊಚ್ಚಿ ನಿವಾಸದಲ್ಲಿ ಕಾನೂನುಬಾಹಿರವಾಗಿ ಸಂಗ್ರಹಿಸಿಡಲಾಗಿದ್ದ 10 ಆನೆದಂತಗಳು ಹಾಗೂ 45 ಕೆಜಿಗೂ ಅಧಿಕ ತೂಕದ 13 ದಂತದ ಮೂರ್ತಿಗಳು ಪತ್ತೆಯಾಗಿರುವುದು ಭಾರಿ ಸಂಚಲನ ಮೂಡಿಸಿದೆ. ಈ ಮಾಹಿತಿಯನ್ನು ಅರಣ್ಯ ಇಲಾಖೆಗೆ ಸ್ವತಃ ಮೋಹನ್‌ಲಾಲ್‌ ಅವರೇ ನೀಡಿದ್ದಾರೆ.

ʻನನ್ನ ಮನೇಲಿ 10 ಆನೆ ದಂತ, 13 ಆನೆ ದಂತದ ವಿಗ್ರಹಗಳಿವೆʼ ಎಂದ ಮೋಹನ್ ಲಾಲ್

-

Avinash GR
Avinash GR Jul 6, 2026 1:47 PM

ಈಗಾಗಲೇ ನಾಲ್ಕು ಆನೆದಂತಗಳನ್ನು ಕಾನೂನುಬಾಹಿರವಾಗಿ ಹೊಂದಿದ್ದಕ್ಕಾಗಿ ವಿಚಾರಣೆ ಎದುರಿಸುತ್ತಿರುವ ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರ ಬಳಿ ಇನ್ನೂ ಆರು ಆನೆದಂತಗಳು ಹಾಗೂ ಭಾರಿ ಪ್ರಮಾಣದ ಆನೆದಂತದ ಮೂರ್ತಿಗಳು ಇರುವುದು ಈಗ ಜಗಜ್ಜಾಹೀರಾಗಿದೆ. ಇದರೊಂದಿಗೆ ಮೋಹನ್‌ಲಾಲ್‌ ಬಳಿ ಇರುವ ಒಟ್ಟು ಆನೆದಂತಗಳ ಸಂಖ್ಯೆ 10ಕ್ಕೇರಿದ್ದು, 13 ಆನೆದಂತದ ಮೂರ್ತಿಗಳಿರುವುದು ಬೆಳಕಿಗೆ ಬಂದಿದೆ.

ವನ್ಯಜೀವಿಯ ವಸ್ತುಗಳನ್ನು ಅಕ್ರಮವಾಗಿ ಹೊಂದಿರುವವರು ಸ್ವಯಂಪ್ರೇರಣೆಯಿಂದ ಅವುಗಳನ್ನು ಇಲಾಖೆಗೆ ಹಿಂತಿರುಗಿಸುವ ಸಲುವಾಗಿ ಇಲಾಖಾ ಕ್ಷಮಾದಾನ ಯೋಜನೆ ಇದೆ. ಇದರಂತೆ ಮೋಹನ್ ಲಾಲ್ ಅವರು ತಮ್ಮ ಬಳಿ ವನ್ಯಜೀವಿಯ ವಸ್ತುಗಳು ಇರುವುದಾಗಿ ಘೋಷಿಸಿದ್ದಾರೆ ಎಂದು ಮಲಯತ್ತೂರು ವಿಭಾಗೀಯ ಅರಣ್ಯ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ನಟ ಮೋಹನ್‌ಲಾಲ್ ಅವರೇ ಅರಣ್ಯ ಅಧಿಕಾರಿಗಳಿಗೆ ಈ ಮಾಹಿತಿ ನೀಡಿದ್ದು, ಈ ರಹಸ್ಯ ಸಂಗ್ರಹದ ವಿವರಗಳು ಬಹಿರಂಗಗೊಂಡಿವೆ.

Drishyam 3 OTT: ಮೋಹನ್‌ಲಾಲ್ ಕ್ರೈಮ್ ಥ್ರಿಲ್ಲರ್ 'ದೃಶ್ಯಂ 3' ಒಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್; ಸ್ಟ್ರೀಮಿಂಗ್‌ ಯಾವಾಗಿನಿಂದ?

ಕೊಚ್ಚಿ ನಿವಾಸದಲ್ಲಿ ಆನೆದಂತಗಳ ಸಂಗ್ರಹ

ಹೊಸದಾಗಿ ಬಹಿರಂಗಗೊಂಡಿರುವ ಆರು ಆನೆದಂತಗಳನ್ನು ಮೋಹನ್‌ಲಾಲ್ ಅವರು ಕೊಚ್ಚಿಯ ತೇವರಾದಲ್ಲಿರುವ ತಮ್ಮ ನಿವಾಸದಲ್ಲಿ ಇರಿಸಿದ್ದಾರೆ. ಇವು ತಮಗೆ "ಪೂರ್ವಜರ ಅಥವಾ ವಂಶಪಾರಂಪರ್ಯ ಪರಂಪರೆ"ಯಾಗಿ ದೊರೆತಿವೆ ಎಂದು ಅವರು ಪ್ರತಿಪಾದಿಸಿದ್ದಾರೆ. ತಮ್ಮ ತಾಯಿಯ ಕಡೆಯ ಅಜ್ಜಿ ಗೌರಿಕುಟ್ಟಿ ಅಮ್ಮ ಅವರಿಂದ 152 ಸೆಂ.ಮೀ, 122 ಸೆಂ.ಮೀ ಮತ್ತು 114 ಸೆಂ.ಮೀ ಗಾತ್ರದ ಮೂರು ಜೊತೆ ಆನೆದಂತಗಳನ್ನು ಪರಂಪರೆಯಾಗಿ ಪಡೆದಿರುವುದಾಗಿ ಅವರು ಅರ್ಜಿಯೊಂದಿಗೆ ಲಗತ್ತಿಸಿರುವ ಕಚೇರಿ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.

45 ಕೆ.ಜಿಗೂ ಹೆಚ್ಚು ತೂಕದ ಮೂರ್ತಿಗಳು

ನಟ ಮೋಹನ್‌ಲಾಲ್ ಹೊಂದಿರುವ 13 ಮೂರ್ತಿಗಳು ಒಟ್ಟಾಗಿ 45.76 ಕೆ.ಜಿ ತೂಕ ಹೊಂದಿವೆ. ಇವುಗಳಲ್ಲಿ ಪ್ರಮುಖವಾಗಿ 7.86 ಕೆ.ಜಿ ತೂಕದ ತಿರುಪತಿ ಬಾಲಾಜಿ ಮೂರ್ತಿ, 7.26 ಕೆ.ಜಿ ತೂಕದ ಶ್ರೀರಾಮನ ಮೂರ್ತಿ, 3.97 ಕೆ.ಜಿ ತೂಕದ ದಶಾವತಾರ ಮೂರ್ತಿ, 3.55 ಕೆ.ಜಿ ತೂಕದ ಕೃಷ್ಣನ ಮೂರ್ತಿಗಳು ಸೇರಿವೆ.‌

ಆರೇ ದಿನಕ್ಕೆ ʻಆಡುಜೀವಿತಂʼ ದಾಖಲೆ ಧೂಳೀಪಟ ಮಾಡಿದ ʻದೃಶ್ಯಂ 3ʼ; ಬಾಕ್ಸ್‌ ಆಫೀಸ್‌ನಲ್ಲಿ ಮೋಹನ್‌ಲಾಲ್ ಮ್ಯಾಜಿಕ್‌!

2011ರಲ್ಲಿ ಮೋಹನ್‌ಲಾಲ್ ಅವರ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ಈ ವನ್ಯಜೀವಿ ಸ್ಮರಣಿಕೆಗಳ ಅಕ್ರಮ ಸಂಗ್ರಹ ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು. ತದನಂತರ ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠವು ಈ ದಂತಗಳು ಮತ್ತು ಮೂರ್ತಿಗಳಿಗೆ ನೀಡಲಾಗಿದ್ದ ಮಾಲೀಕತ್ವದ ಪ್ರಮಾಣಪತ್ರಗಳನ್ನು ರದ್ದುಗೊಳಿಸಿತ್ತು. ಈ ಹಿಂದೆ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರ್ಕಾರವು ಈ ಮೊಕದ್ದಮೆಯನ್ನು ನ್ಯಾಯಾಂಗದ ಸಮಯ ವ್ಯರ್ಥ ಎಂದು ಕರೆದು ಹಿಂಪಡೆಯಲು ಯತ್ನಿಸಿತ್ತಾದರೂ, ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ಈ ಮನವಿಯನ್ನು ತಳ್ಳಿಹಾಕಿದ್ದವು.

ಈ ಪ್ರಕರಣದಲ್ಲಿ ಶಿಕ್ಷೆ ಎಷ್ಟು?

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ವನ್ಯಜೀವಿ ಸ್ಮರಣಿಕೆಗಳನ್ನು ಕಾನೂನುಬಾಹಿರವಾಗಿ ಹೊಂದುವುದು ಗಂಭೀರ ಅಪರಾಧವಾಗಿದೆ. ಈ ಕಾಯ್ದೆಯ ಮೊದಲ ಅನುಸೂಚಿಯ ಅಡಿಯಲ್ಲಿ ದೋಷಿ ಎಂದು ಸಾಬೀತಾದರೆ ಗರಿಷ್ಠ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ 10,000 ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಪ್ರಸ್ತುತ ಪತ್ತೆಯಾಗಿರುವ ಆನೆದಂತಗಳು ನಿಜವಾಗಿಯೂ ಆನೆಗಳಿಗೆ ಸೇರಿದವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅರಣ್ಯ ಇಲಾಖೆಯು ಡಿಎನ್‌ಎ ಪರೀಕ್ಷೆಗಳನ್ನು ನಡೆಸಲು ಮುಂದಾಗಿದ್ದು, ಪ್ರಕರಣದ ಮುಂದಿನ ನಡಾವಳಿಗಳು ಸದ್ಯ ನ್ಯಾಯಾಲಯದ ಮುಂದೆ ಬಾಕಿ ಇವೆ.