ತೆಲುಗು ನಿರ್ಮಾಪಕರಿಗೆ ಕಾಲ್‌ಶೀಟ್ ನೀಡಿದ ನಟಿ, ಸಂಸದೆ ಕಂಗನಾ ರಣಾವತ್; ‘ಸ್ಕೇರಿ ಪಿಕ್ಚರ್’ ಮೂಲಕ ಹಾರರ್ ಲೋಕಕ್ಕೆ ಎಂಟ್ರಿ!
Kangana Ranaut: ‘ಸ್ಕೇರಿ ಪಿಕ್ಚರ್’ ಚಿತ್ರದ ಮೂಲಕ ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಇದೇ ಮೊದಲ ಬಾರಿಗೆ ಹಾರರ್ ಲೋಕಕ್ಕೆ ಭರ್ಜರಿ ಎಂಟ್ರಿ ನೀಡುತ್ತಿದ್ದಾರೆ. ರಾಣಾ ದಗ್ಗುಬಾಟಿ ಮತ್ತು ಡಿ. ಸುರೇಶ್ ಬಾಬು ನಿರ್ಮಾಣದ, ರವಿ ಬಾಬು ನಿರ್ದೇಶನದ ಈ ಬಹುನಿರೀಕ್ಷಿತ ಸಿನಿಮಾದ ಶೀರ್ಷಿಕೆ ಶುಕ್ರವಾರ (ನ.13) ಅನಾವರಣಗೊಂಡಿದೆ.
-
ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಮತ್ತೆ ಬೆಳ್ಳಿತೆರೆಯ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಈ ವರ್ಷ ತೆರೆಕಂಡ ‘ಭಾರತ ಭಾಗ್ಯ ವಿಧಾತ’ ಚಿತ್ರದ ಬಾಕ್ಸ್ ಆಫೀಸ್ ಸೋಲಿನ ಬಳಿಕ ಇದೀಗ ಅವರು ತೆಲುಗಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗೆ ಕಾಲ್‌ಶೀಟ್ ನೀಡುವ ಮೂಲಕ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದ್ದಾರೆ. ಖ್ಯಾತ ನಟ ಮತ್ತು ನಿರ್ಮಾಪಕ ರಾಣಾ ದಗ್ಗುಬಾಟಿ ಅವರು ತಮ್ಮ ಮುಂಬರುವ ‘ಸ್ಕೇರಿ ಪಿಕ್ಚರ್’ ಎಂಬ ಹಾರರ್ ಚಿತ್ರದ ಮೊದಲ ಟೈಟಲ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದ್ದು, ಈ ಚಿತ್ರದಲ್ಲಿ ಕಂಗನಾ ರಣಾವತ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವುದನ್ನು ಖಚಿತಪಡಿಸಿದ್ದಾರೆ.
‘ಸ್ಕೇರಿ ಪಿಕ್ಚರ್’ 2027ರಲ್ಲಿ ರಿಲೀಸ್
ಹಾರರ್, ನಿಗೂಢತೆ ಮತ್ತು ಮೂಢನಂಬಿಕೆಗಳಿಗೆ ಹೆಸರಾದ 'ಶುಕ್ರವಾರ 13ರಂದು' ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಿರುವುದು ಚಿತ್ರತಂಡದ ವಿಶೇಷ ತಂತ್ರಗಾರಿಕೆಯಾಗಿದೆ. ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಣಾ ದಗ್ಗುಬಾಟಿ, "ಹೊಸ ದುಃಸ್ವಪ್ನವೊಂದು ತೆರೆದುಕೊಳ್ಳಲು ಸಜ್ಜಾಗಿದೆ. ಡಾ. ಡಿ. ರಾಮನಾಯ್ಡು ಅರ್ಪಿಸುವ, ಕಂಗನಾ ರಣಾವತ್ ಅಭಿನಯದ 'ಸ್ಕೇರಿ ಪಿಕ್ಚರ್'. ಫ್ಲೈಯಿಂಗ್ ಫ್ರಾಗ್ಸ್ ಪ್ರೊಡಕ್ಷನ್. ಡಿ. ಸುರೇಶ್ ಬಾಬು | ರವಿ ಬಾಬು. 2027ರಲ್ಲಿ ಯಾವಾಗ ಬೇಕಾದರೂ ಬಿಡುಗಡೆ" ಎಂದು ಬರೆದುಕೊಂಡು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದ್ದಾರೆ.
'ಸುರೇಶ್ ಪ್ರೊಡಕ್ಷನ್ಸ್' ಬ್ಯಾನರ್ ಅಡಿಯಲ್ಲಿ ಹಿರಿಯ ನಿರ್ಮಾಪಕ ಡಿ. ಸುರೇಶ್ ಬಾಬು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ‘ಸ್ಕೇರಿ ಪಿಕ್ಚರ್’ ಮೂಲಕ ಸುರೇಶ್ ಪ್ರೊಡಕ್ಷನ್ಸ್ ಸಂಸ್ಥೆಯು ಇದೇ ಮೊದಲ ಬಾರಿಗೆ ಹಾರರ್ ಪ್ರಕಾರಕ್ಕೆ ಕಾಲಿಡುತ್ತಿದ್ದು, ಆ ಪ್ರತಿಷ್ಠಿತ ಸಂಸ್ಥೆಯಿಂದ ಹೊರಬರುತ್ತಿರುವ ಅತ್ಯಂತ ವಿಭಿನ್ನ ಮತ್ತು ಪ್ರಯೋಗಾತ್ಮಕ ಕಥಾಹಂದರದ ಚಿತ್ರಗಳಲ್ಲಿ ಇದೂ ಒಂದಾಗಲಿದೆ.
ಹೊಸ ಯೋಜನೆ ಹಾಕಿಕೊಂಡಿರುವ ರಾಣಾ ದಗ್ಗುಬಾಟಿ
ಕೇವಲ ಒಂದು ಸಿನಿಮಾವಾಗಿ ಮಾತ್ರವಲ್ಲದೆ, ಭಾರತದಲ್ಲಿ ಹಾರರ್ ಚಿತ್ರರಂಗಕ್ಕಾಗಿಯೇ ಒಂದು ಪ್ರತ್ಯೇಕ ವ್ಯವಸ್ಥೆಯನ್ನು ನಿರ್ಮಿಸುವ ರಾಣಾ ದಗ್ಗುಬಾಟಿ ಅವರ ದೂರದೃಷ್ಟಿಗೆ 'ಸ್ಕೇರಿ ಪಿಕ್ಚರ್' ಒಂದು ಮಹತ್ವದ ಹೆಜ್ಜೆಯಾಗಿದೆ. ಸುರೇಶ್ ಪ್ರೊಡಕ್ಷನ್ಸ್ ಮತ್ತು ಸ್ಪಿರಿಟ್ ಮೀಡಿಯಾ ಮೂಲಕ ಹಾರರ್ ಪ್ರಕಾರದ ಬಗ್ಗೆ ಆಸಕ್ತಿ ಹೊಂದಿರುವ ಪ್ರತಿಭಾವಂತ ನಿರ್ದೇಶಕರಿಗೆ ನಿರಂತರ ಬೆಂಬಲ ಮತ್ತು ಚಿತ್ರಮಂದಿರಗಳಲ್ಲಿ ಬಿಡುಗಡೆಯ ಅವಕಾಶಗಳನ್ನು ಕಲ್ಪಿಸುವುದು ರಾಣಾ ದಗ್ಗುಬಾಟಿ ಅವರ ಪ್ರಮುಖ ಉದ್ದೇಶವಾಗಿದೆ.
ಟೈಟಲ್ ಲಾಂಚ್ ಮಾಡಿದ ರಾಣಾ ದಗ್ಗುಬಾಟಿ
A new nightmare is about to unfold. Dr. D. Ramanaidu presents SCARY PICTURE, starring Kangana Ranaut. A Flying Frogs Production. D. Suresh Babu | Ravi Babu ANYTIME 2027. #ScaryPicture @KanganaTeam @SureshProdns #FlyingFrogs #ScaryPicture2027 https://t.co/cPtPImXxww
— Rana Daggubati (@RanaDaggubati) November 13, 2026
ಈ ಪ್ರಾಜೆಕ್ಟ್ ಬಗ್ಗೆ ರಾಣಾ ದಗ್ಗುಬಾಟಿ ಏನಂದ್ರು?
ಈ ಹೊಸ ಪ್ರಯತ್ನದ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿರುವ ರಾಣಾ ದಗ್ಗುಬಾಟಿ, "ಸ್ಕೇರಿ ಪಿಕ್ಚರ್ ಚಿತ್ರದಿಂದ ಆರಂಭಿಸಿ, ಈ ಪ್ರಕಾರವನ್ನು ಪ್ರೀತಿಸುವ ನಿರ್ದೇಶಕರಿಗೆ ನಿರಂತರ ನಿರ್ಮಾಣ ಬೆಂಬಲ ಮತ್ತು ಬಿಡುಗಡೆಯ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಗುರಿಯಾಗಿದೆ. ಭಾರತವು ಪ್ರತಿಯೊಂದು ವಿಷಯದಲ್ಲೂ ವೈವಿಧ್ಯತೆಯನ್ನು ಹೊಂದಿದೆ, ಹಾರರ್ ಕೂಡ ಇದಕ್ಕೆ ಹೊರತಾಗಿಲ್ಲ. ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ಭಯ, ಕಥೆಗಳು ಮತ್ತು ಅವುಗಳನ್ನು ಹೇಳುವ ವಿಭಿನ್ನ ಶೈಲಿಗಳಿವೆ. ಸೈಕಲಾಜಿಕಲ್, ಕ್ರೀಚರ್, ಹಾರರ್-ಕಾಮಿಡಿ, ಸೋಷಿಯಲ್ ಹಾರರ್ ಅಥವಾ ನಿರ್ದೇಶಕರು ತರುವ ಯಾವುದೇ ಹೊಸ ಬಗೆಯ ಕಥೆಗಳಿಗೆ ನಾವು ಸದಾ ಮುಕ್ತವಾಗಿದ್ದೇವೆ" ಎಂದು ತಿಳಿಸಿದ್ದಾರೆ.
Kangana Ranaut: ರಾಖಿ ಸಾವಂತ್, ಸೋನು ಸೂದ್ ಸೇರಿದಂತೆ ಅನೇಕ ತಾರೆಯರನ್ನ ತರಾಟೆಗೆ ತೆಗೆದುಕೊಂಡ ಕಂಗನಾ!
ಹಿಂದಿ ಚಿತ್ರರಂಗಕ್ಕೆ ರವಿ ಬಾಬು ಎಂಟ್ರಿ
ತೆಲುಗಿನಲ್ಲಿ 'ಅನಸೂಯ' ಮತ್ತು 'ಅವುನು' ನಂತಹ ಸೂಪರ್ ಹಿಟ್ ಹಾರರ್ ಚಿತ್ರಗಳನ್ನು ನೀಡಿರುವ ಖ್ಯಾತ ನಿರ್ದೇಶಕ ರವಿ ಬಾಬು ಅವರಿಗೆ ‘ಸ್ಕೇರಿ ಪಿಕ್ಚರ್’ ಹಿಂದಿ ಚಿತ್ರರಂಗದಲ್ಲಿ ಚೊಚ್ಚಲ ನಿರ್ದೇಶನದ ಚಿತ್ರವಾಗಲಿದೆ. ಹಾರರ್ ಪ್ರಕಾರದಲ್ಲಿ ಒಂದು ಹೊಸ ಆಯಾಮವನ್ನು ಶೋಧಿಸುವ ವಿಭಿನ್ನ ಕಥಾಹಂದರಕ್ಕಾಗಿ ರವಿ ಬಾಬು ಮತ್ತು ಕಂಗನಾ ರಣಾವತ್ ಮೊದಲ ಬಾರಿಗೆ ಒಂದಾಗಿದ್ದಾರೆ. ಸುರೇಶ್ ಬಾಬು ಅವರ ನಿರ್ಮಾಣ, ರವಿ ಬಾಬು ಅವರ ನಿರ್ದೇಶನ ಹಾಗೂ ಕಂಗನಾ ರಣಾವತ್ ಅವರ ಪ್ರಮುಖ ಪಾತ್ರದೊಂದಿಗೆ ಮೂಡಿಬರುತ್ತಿರುವ ಈ ಚಿತ್ರವು 2027ರಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ.