ಎಂಟೇ ದಿನಗಳಲ್ಲಿ 1,000 ಕೋಟಿ ಕ್ಲಬ್ ಸೇರಿದ ‘ರಾಮಾಯಣ’: ‘ರಾಕಿಂಗ್ ಸ್ಟಾರ್’ ಯಶ್ ವೃತ್ತಿಬದುಕಿನಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ
Ramayana Box Office Collection: ʻರಾಮಾಯಣʼ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಕೇವಲ ಎಂಟು ದಿನಗಳಲ್ಲಿ ವಿಶ್ವಾದ್ಯಂತ 1,033.55 ಕೋಟಿ ಗಳಿಸಿ ಹೊಸ ಇತಿಹಾಸ ಬರೆದಿದೆ. ಪಠಾಣ್, ಅನಿಮಲ್ ಹಾಗೂ ಬಾಹುಬಲಿ 2 ದಾಖಲೆಗಳನ್ನು ಧೂಳೀಪಟ ಮಾಡಿರುವ ನಿತೇಶ್ ತಿವಾರಿ ನಿರ್ದೇಶನದ ಸಿನಿಮಾದ ಗಳಿಕೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ.
-
‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ (Ramayana: Rise of a Legend) ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಸುನಾಮಿ ಎಬ್ಬಿಸಿದ್ದು, ಬಿಡುಗಡೆಯಾದ ಕೇವಲ ಎಂಟೇ ದಿನಗಳಲ್ಲಿ ಜಾಗತಿಕವಾಗಿ 1,000 ಕೋಟಿ ರೂಪಾಯಿ ಕ್ಲಬ್ ಸೇರುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.
ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರವು 1,000 ಕೋಟಿ ಗಡಿ ದಾಟಿದ 11ನೇ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲದೆ, ಅತಿ ವೇಗವಾಗಿ ಈ ಮೈಲಿಗಲ್ಲು ತಲುಪಿದ ಸಾರ್ವಕಾಲಿಕ 3ನೇ ಭಾರತೀಯ ಚಿತ್ರವಾಗಿ ಹೊರಹೊಮ್ಮುವ ಮೂಲಕ ಚಿತ್ರರಂಗದಲ್ಲಿ ಅವಳಿ ದಾಖಲೆ ಬರೆದಿದೆ.
ಪಠಾಣ್, ಅನಿಮಲ್ ದಾಖಲೆ ಪುಡಿಪುಡಿ
ಬಾಕ್ಸ್ ಆಫೀಸ್ ಅಂಕಿಅಂಶಗಳ ಪ್ರಕಾರ, ಚಿತ್ರವು ತನ್ನ 8ನೇ ದಿನದಂದು ದೇಶದಾದ್ಯಂತ ಎಲ್ಲಾ ಭಾಷೆಗಳಿಂದ 53.50 ಕೋಟಿ ರೂಪಾಯಿ ನಿವ್ವಳ ಗಳಿಕೆ ಕಂಡಿದೆ. ಇದರೊಂದಿಗೆ ಚಿತ್ರದ ಒಟ್ಟು ದೇಶೀಯ ಗ್ರಾಸ್ ಗಳಿಕೆ 675.05 ಕೋಟಿ ರೂಪಾಯಿಗಳಿಗೆ ತಲುಪಿದೆ. ಇನ್ನು ಸಾಗರೋತ್ತರ ಮಾರುಕಟ್ಟೆಗಳಿಂದಲೂ ಈ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿದೇಶಿ ಗಳಿಕೆ 358.50 ಕೋಟಿ ರೂಪಾಯಿ ದಾಟಿದೆ.
Ramayana Movie: ಸ್ವೀಡನ್‌ನಲ್ಲೂ ಸದ್ದು ಮಾಡಿದ 'ರಾಮಾಯಣ': ಅನುಪಮ್ ಖೇರ್ ಭಾವುಕ ಪೋಸ್ಟ್!
ಒಟ್ಟಾರೆಯಾಗಿ ಚಿತ್ರದ ವಿಶ್ವಾದ್ಯಂತ ಕಲೆಕ್ಷನ್ ಬರೋಬ್ಬರಿ 1,033.55 ಕೋಟಿ ರೂಪಾಯಿಗಳಿಗೆ ಏರಿದೆ. ಈ ಭರ್ಜರಿ ಗಳಿಕೆಯ ಮೂಲಕ ‘ರಾಮಾಯಣ’ ಚಿತ್ರವು ದೇಶೀಯ ಮಾರುಕಟ್ಟೆಯಲ್ಲಿ ಶಾರುಖ್ ಖಾನ್ ಅವರ ‘ಪಠಾಣ್’ (₹544.28 ಕೋಟಿ) ಹಾಗೂ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ (₹556.36 ಕೋಟಿ) ಚಿತ್ರಗಳ ಸಂಪೂರ್ಣ ಥಿಯೇಟರ್ ಗಳಿಕೆಯ ದಾಖಲೆಯನ್ನು ಕೇವಲ ಎಂಟು ದಿನಗಳಲ್ಲೇ ಪುಡಿಗಟ್ಟಿದೆ.
ಬಾಹುಬಲಿ ದಾಖಲೆ ಪೀಸ್ ಪೀಸ್
ಅತಿ ವೇಗವಾಗಿ 1,000 ಕೋಟಿ ಕ್ಲಬ್ ಸೇರಿದ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ‘ಪುಷ್ಪ 2: ದಿ ರೂಲ್’ ಮತ್ತು ‘ಧುರಂಧರ್: ದಿ ರಿವೆಂಜ್’ (ಎರಡೂ ಚಿತ್ರಗಳು ತಲಾ 7 ದಿನಗಳಲ್ಲಿ ಈ ಸಾಧನೆ ಮಾಡಿವೆ) ನಂತರದ ಮೂರನೇ ಸ್ಥಾನವನ್ನು ‘ರಾಮಾಯಣ’ ಅಲಂಕರಿಸಿದೆ. ಈ ಮೂಲಕ ಭಾರತೀಯ ಚಿತ್ರರಂಗದ ದೈತ್ಯ ಸಿನಿಮಾಗಳಾದ ‘ಬಾಹುಬಲಿ 2: ದಿ ಕನ್‌ಕ್ಲೂಷನ್’ (10 ದಿನಗಳು), ‘ಆರ್‌ಆರ್‌ಆರ್’ (16 ದಿನಗಳು) ಮತ್ತು ‘ಜವಾನ್’ (18 ದಿನಗಳು) ಚಿತ್ರಗಳ ವೇಗದ ದಾಖಲೆಯನ್ನು ನಿತೇಶ್ ತಿವಾರಿ ಅವರ ಈ ದೃಶ್ಯಕಾವ್ಯ ಹಿಂದಿಕ್ಕಿದೆ.
ಯಶ್ ಪಾಲಿಗೆ ಮತ್ತೊಂದು ದೊಡ್ಡ ಗೆಲುವು
ಕನ್ನಡದ ಹೆಮ್ಮೆಯ ನಟ ‘ರಾಕಿಂಗ್ ಸ್ಟಾರ್’ ಯಶ್ ಅವರ ವೃತ್ತಿಬದುಕಿಗೆ ಈ ಗೆಲುವು ಮತ್ತೊಂದು ವಿಶೇಷ ಗರಿಯನ್ನು ತಂದುಕೊಟ್ಟಿದೆ. ಈ ಹಿಂದೆ ‘ಕೆಜಿಎಫ್ ಚಾಪ್ಟರ್ 2’ ಮೂಲಕ 1,000 ಕೋಟಿ ರೂಪಾಯಿ ಕ್ಲಬ್ ಸೇರಿದ ಮೊದಲ ಕನ್ನಡದ ನಟ ಎಂಬ ಇತಿಹಾಸ ಬರೆದಿದ್ದ ಯಶ್, ಇದೀಗ ‘ರಾಮಾಯಣ’ ಚಿತ್ರದ ಮೂಲಕವೂ ಅದೇ ಸಾಧನೆ ಮಾಡಿದ್ದಾರೆ. ಈ ಮೂಲಕ 1,000 ಕೋಟಿ ಕ್ಲಬ್‌ನಲ್ಲಿ ಎರಡು ಸಿನಿಮಾಗಳನ್ನು ಹೊಂದಿರುವ ಅಪರೂಪದ ಭಾರತೀಯ ನಟರ ಸಾಲಿಗೆ ಯಶ್ ಸೇರ್ಪಡೆಯಾಗಿದ್ದು, ಕನ್ನಡಿಗರ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ.
2028ರಲ್ಲಿ ಬರಲಿದೆ ಪಾರ್ಟ್ 2
ಈ ಬೃಹತ್ ಬಜೆಟ್‌ನ ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತಾದೇವಿಯಾಗಿ ಸಾಯಿ ಪಲ್ಲವಿ, ಲಕ್ಷ್ಮಣನಾಗಿ ರವಿ ದುಬೆ ಅಭಿನಯಿಸಿದ್ದರೆ, ಶಕ್ತಿಶಾಲಿ ರಾವಣನ ಪಾತ್ರದಲ್ಲಿ ಯಶ್ ಅಬ್ಬರಿಸಿದ್ದಾರೆ. ವಿಶೇಷವೆಂದರೆ, ಈ ಚಿತ್ರಕ್ಕೆ ನಟನಾಗಿ ಮಾತ್ರವಲ್ಲದೆ ನಮಿತ್ ಮಲ್ಹೋತ್ರಾ ಅವರೊಂದಿಗೆ ಯಶ್ ಸಹ-ನಿರ್ಮಾಪಕರಾಗಿಯೂ ಕೈಜೋಡಿಸಿದ್ದಾರೆ.
ಮೊದಲ ಭಾಗದ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಇದೀಗ ಚಿತ್ರದ ಎರಡನೇ ಭಾಗದ (ಸೀಕ್ವೆಲ್) ಮೇಲೆ ನಿರೀಕ್ಷೆ ಹೆಚ್ಚಾಗಿದ್ದು, 2028ರ ದೀಪಾವಳಿಗೆ ತೆರೆಗೆ ಬರಲಿರುವ ಮುಂದಿನ ಭಾಗದಲ್ಲಿ ಹನುಮಂತನ ಪಾತ್ರದಲ್ಲಿ ಬಾಲಿವುಡ್ ನಟ ಸನ್ನಿ ಡಿಯೋಲ್ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.