ಬೆಂಗಳೂರಿನಲ್ಲಿ ‘ಗಂಧದಗುಡಿ ಸಿನಿಹಬ್ಬ’; ಮೈಸೂರು ಸಿನಿಮಾ ಸೊಸೈಟಿಯಿಂದ ಕಿರುಚಿತ್ರೋತ್ಸವ ಆಯೋಜನೆ
‘ಗಂಧದಗುಡಿ ಸಿನಿಹಬ್ಬ’ ಹೆಸರಿನ ವಿಶಿಷ್ಟ ಕಿರುಚಿತ್ರೋತ್ಸವವನ್ನು ಮೈಸೂರು ಸಿನಿಮಾ ಸೊಸೈಟಿ ರಾಜಧಾನಿ ಬೆಂಗಳೂರಿನಲ್ಲಿ ಆಯೋಜಿಸಿದೆ. ನ.21 - 22ರಂದು ಕೆ. ಜಿ. ರಸ್ತೆಯ ಎಫ್.ಕೆ.ಸಿ.ಸಿ.ಐ ಸಭಾಂಗಣದಲ್ಲಿ ನಡೆಯುವ ಈ ಹಬ್ಬದಲ್ಲಿ 30ಕ್ಕೂ ಹೆಚ್ಚು ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ.
-
ಸಾಂಸ್ಕೃತಿಕ ನಗರಿ ಮೈಸೂರನ್ನು ಕೇಂದ್ರವಾಗಿಟ್ಟುಕೊಂಡು ಕಳೆದ ಐದು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ‘ಮೈಸೂರು ಸಿನಿಮಾ ಸೊಸೈಟಿ’ಯು ಇದೀಗ ರಾಜಧಾನಿ ಬೆಂಗಳೂರಿಗೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆ. ಈ ಹಿಂದೆ ಮೈಸೂರಿನಲ್ಲಿ ಯಶಸ್ವಿಯಾಗಿ ‘ಪರಿದೃಶ್ಯ’ ಕಿರುಚಿತ್ರೋತ್ಸವವನ್ನು ಸಂಘಟಿಸುತ್ತಿದ್ದ ಸಂಸ್ಥೆ, ಇದೀಗ ಬೆಂಗಳೂರಿನ ಸಿನಿಪ್ರಿಯರಿಗಾಗಿ ‘ಗಂಧದಗುಡಿ ಸಿನಿಹಬ್ಬ’ ಎಂಬ ವಿಶಿಷ್ಟ ಕಿರುಚಿತ್ರೋತ್ಸವವನ್ನು ಹಮ್ಮಿಕೊಂಡಿದೆ.
ಬೆಂಗಳೂರಿನಲ್ಲಿ ನವೆಂಬರ್ 21 ಮತ್ತು 22ರಂದು ಎರಡು ದಿನಗಳ ಕಾಲ ನಡೆಯಲಿರುವ ಈ ಉತ್ಸವದ ಪೂರ್ವಭಾವಿಯಾಗಿ ‘ಗಂಧದಗುಡಿ ಸಿನಿಹಬ್ಬ’ದ ಅಧಿಕೃತ ಲೋಗೋ ಅನಾವರಣ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡದ ನಟಿ ತೇಜಸ್ವಿನಿ ಶರ್ಮ ಹಾಗೂ ‘ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ’ದ ಅಧ್ಯಕ್ಷ ಎನ್.ಆರ್.ಕೆ. ವಿಶ್ವನಾಥ್ ಅವರು ಲಾಂಛನ ಬಿಡುಗಡೆಗೊಳಿಸಿ ಚಿತ್ರೋತ್ಸವಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ತೇಜಸ್ವಿನಿ ಶರ್ಮ, "ಕನ್ನಡ ಚಿತ್ರರಂಗದ ಬೆಳವಣಿಗೆ ಹಾಗೂ ಸದಭಿರುಚಿಯ ಪ್ರೇಕ್ಷಕರನ್ನು ರೂಪಿಸುವಲ್ಲಿ ‘ಮೈಸೂರು ಸಿನಿಮಾ ಸೊಸೈಟಿ’ಯಂತಹ ಸಂಸ್ಥೆಗಳ ಪಾತ್ರ ಹಿರಿದು. ಇಂತಹ ವೇದಿಕೆಗಳಿಂದಾಗಿ ಹೊಸ ಪ್ರತಿಭೆಗಳು, ನಿರ್ದೇಶಕರು ಮತ್ತು ತಂತ್ರಜ್ಞರಿಗೆ ಸೂಕ್ತ ಮನ್ನಣೆ ಹಾಗೂ ಗುರುತಿಸುವಿಕೆ ದೊರೆಯುತ್ತದೆ. ಕನ್ನಡ ಸಿನಿರಂಗಕ್ಕಾಗಿಯೇ ಸಮರ್ಪಿಸಿಕೊಂಡಿರುವ ಈ ಉತ್ಸವವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು" ಎಂದು ಕರೆ ನೀಡಿದರು.
ಬಳಿಕ ಮಾತನಾಡಿದ ‘ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ’ದ ಅಧ್ಯಕ್ಷ ಎನ್.ಆರ್.ಕೆ. ವಿಶ್ವನಾಥ್, "ಮೈಸೂರಿನಿಂದ ಬೆಂಗಳೂರಿಗೆ ತನ್ನ ಹೆಜ್ಜೆಯನ್ನಿಟ್ಟಿರುವ ಮೈಸೂರು ಸಿನಿಮಾ ಸೊಸೈಟಿಯ ಪ್ರಯತ್ನ ಶ್ಲಾಘನೀಯ. ‘ಗಂಧದಗುಡಿ ಸಿನಿಹಬ್ಬ’ವು ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ವಿಸ್ತರಿಸಿ, ಇನ್ನಷ್ಟು ಬೃಹತ್ ಮಟ್ಟದಲ್ಲಿ ಯಶಸ್ಸು ಕಾಣಲಿ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಸೊಸೈಟಿಯ ಅಧ್ಯಕ್ಷ ಚೇತನ್ ಎಂ., ಕಾರ್ಯದರ್ಶಿ ಜಯಶೇಖರ್ ವಿ. ಆರ್., ಖಜಾಂಚಿ ಸುರೇಶ್ ಚಂದ್ರ ಎಂ. ಆರ್., ಸದಸ್ಯರಾದ ಸೋಮಶೇಖರ್ ಪಿ. ಎಲ್., ಅಲ್ವಿನ್ ಮತ್ತಿತರರು ಉಪಸ್ಥಿತರಿದ್ದು ಉತ್ಸವದ ಸಿದ್ಧತೆಗಳ ಕುರಿತು ಮಾಹಿತಿ ಹಂಚಿಕೊಂಡರು.
ನವೆಂಬರ್ 21 ಮತ್ತು 22ರಂದು ನಗರದ ಗಾಂಧಿನಗರದ ಕೆ. ಜಿ. ರಸ್ತೆಯಲ್ಲಿರುವ ಎಫ್.ಕೆ.ಸಿ.ಸಿ.ಐ ಭವನದ ಸರ್.ಎಂ.ವಿ ಆಡಿಟೋರಿಯಂನಲ್ಲಿ ಈ ಕಿರುಚಿತ್ರೋತ್ಸವ ನಡೆಯಲಿದೆ. ಎರಡು ದಿನಗಳ ಕಾಲ ಒಟ್ಟು 12 ಗಂಟೆ 35 ನಿಮಿಷಗಳ ಸುದೀರ್ಘ ಅವಧಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಆಯ್ದ ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ.