ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

'ಪರಾಶಕ್ತಿ' ಚಿತ್ರದ ನಿರ್ಮಾಪಕರ ವಿರುದ್ಧ ಸುಧಾ ಕೊಂಗರಾ ಕೆಂಡ; ಸಂಭಾವನೆ ಕೊಡದೇ ಸತಾಯಿಸಿದ್ದಕ್ಕೆ ಕೋರ್ಟ್‌ ಮೆಟ್ಟಿಲೇರಿದ ನಿರ್ದೇಶಕಿ!

ಶಿವಕಾರ್ತಿಕೇಯನ್ ಹಾಗೂ ಶ್ರೀಲೀಲಾ ನಟನೆಯ 'ಪರಾಶಕ್ತಿ' ಚಿತ್ರವನ್ನು ನಿರ್ದೇಶಿಸಿದ್ದಕ್ಕಾಗಿ ತಮಗೆ ಬರಬೇಕಿದ್ದ 8.39 ಕೋಟಿ ರೂಪಾಯಿ ಬಾಕಿ ಸಂಭಾವನೆಯನ್ನು ಪಾವತಿಸದ ನಿರ್ಮಾಣ ಸಂಸ್ಥೆ 'ಡಾನ್ ಪಿಕ್ಚರ್ಸ್' ವಿರುದ್ಧ ತಮಿಳಿನ ಖ್ಯಾತ ನಿರ್ದೇಶಕಿ ಸುಧಾ ಕೊಂಗರಾ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

'ಪರಾಶಕ್ತಿ' ನಿರ್ಮಾಪಕರ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಸುಧಾ ಕೊಂಗರಾ

-

Avinash GR
Avinash GR Jun 30, 2026 3:58 PM

ತಮಿಳು ನಟ ಶಿವಕಾರ್ತಿಕೇಯನ್, ರವಿ ಮೋಹನ್‌, ಅಥರ್ವ, ಶ್ರೀಲೀಲಾ ನಟಿಸಿದ್ದ 'ಪರಾಶಕ್ತಿ' ಚಿತ್ರವನ್ನು ನಿರ್ದೇಶಿಸಿದ್ದಕ್ಕಾಗಿ ತಮಗೆ ಬರಬೇಕಿದ್ದ 8.39 ಕೋಟಿ ರೂಪಾಯಿ ಸಂಭಾವನೆ ಇನ್ನೂ ಪಾವತಿಯಾಗಿಲ್ಲ ಎಂದು ಆರೋಪಿಸಿ ಸುಧಾ ಕೊಂಗರಾ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ನಿರ್ಮಾಪಕರಿಗೆ ಸೂಚನೆ ನೀಡಿದ ಕೋರ್ಟ್‌

ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆಯ (Arbitration and Conciliation Act) ಸೆಕ್ಷನ್ 9ರ ಅಡಿಯಲ್ಲಿ ಸಲ್ಲಿಕೆಯಾಗಿರುವ ಈ ಅರ್ಜಿಯಲ್ಲಿ, ಸಂಭಾವನೆ ಪಾವತಿಯಾಗದ ಹಿನ್ನೆಲೆಯಲ್ಲಿ ಮಧ್ಯಂತರ ರಕ್ಷಣೆ ಕೋರಲಾಗಿದೆ. ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಕುಮರೇಶ್ ಬಾಬು ಅವರು, ಈ ಪ್ರಕರಣವನ್ನು ಮತ್ತೆ ಕೈಗೆತ್ತಿಕೊಳ್ಳುವ ಜುಲೈ 8ರವರೆಗೆ 'ಪರಾಶಕ್ತಿ' ಚಿತ್ರವನ್ನು ವಾಹಿನಿಯಲ್ಲಿ ಬಿಡುಗಡೆ ಮಾಡಬಾರದು ಎಂದು ಸೂಚಿಸಿದ್ದಾರೆ. ಅಲ್ಲದೆ, ಜುಲೈ 7ರ ಒಳಗಾಗಿ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಚಿತ್ರದ ನಿರ್ಮಾಣ ಸಂಸ್ಥೆಯಾದ 'ಡಾನ್ ಪಿಕ್ಚರ್ಸ್'ಗೆ ಕೋರ್ಟ್ ನಿರ್ದೇಶನ ನೀಡಿದೆ.

Parasakthi OTT release: ಶಿವಕಾರ್ತಿಕೇಯನ್ ಅಭಿನಯದ 'ಪರಾಶಕ್ತಿ' ಒಟಿಟಿ ಎಂಟ್ರಿ ಯಾವಾಗ?

15 ಕೋಟಿ ಸಂಭಾವನೆ ಫಿಕ್ಸ್

ಸುಧಾ ಕೊಂಗರಾ ಅವರ ಅರ್ಜಿಯ ಪ್ರಕಾರ, ನಿರ್ಮಾಪಕರ ಜೊತೆಗಿನ ಒಪ್ಪಂದದಲ್ಲಿ ಅವರ ಸಂಭಾವನೆಯನ್ನು 15 ಕೋಟಿ ಎಂದು ನಿಗದಿಪಡಿಸಲಾಗಿತ್ತು. ಜಿಎಸ್‌ಟಿ (GST) ಸೇರಿದಂತೆ ಒಟ್ಟು ಮೊತ್ತ 17.70 ಕೋಟಿ ಆಗಿತ್ತು. ಸುಧಾ ಅವರ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಇದುವರೆಗೆ ಕೇವಲ 9.31 ಕೋಟಿ ರೂ. ಮಾತ್ರ ಪಾವತಿಯಾಗಿದ್ದು, ಇನ್ನು 8.39 ಕೋಟಿ ರೂ. ಹಣ ಬಾಕಿ ಉಳಿದಿದೆ ಎಂದು ತಿಳಿಸಿದ್ದಾರೆ.

‌ಕಲೆಕ್ಷನ್‌ ಆದರೂ ಸಂಭಾವನೆ ಸಿಕ್ಕಿಲ್ಲ!

ಒಪ್ಪಂದದ ಪ್ರಕಾರ, ಸುಧಾ ಕೊಂಗರಾ ಅವರು 'ಪರಾಶಕ್ತಿ' ಚಿತ್ರಕ್ಕೆ ಸಂಬಂಧಿಸಿದ ಎಲ್ಲಾ ಹಕ್ಕುಗಳನ್ನು (Intellectual Property Rights) ವರ್ಗಾಯಿಸಿದ್ದರು. ಆದರೆ ಸಿನಿಮಾ ಬಿಡುಗಡೆಯಾಗಿ ಐದು ತಿಂಗಳು ಕಳೆದರೂ ತಮಗೆ ಪೂರ್ಣ ಸಂಭಾವನೆ ಸಿಕ್ಕಿಲ್ಲ ಎಂದು ಅವರು ಆರೋಪಿಸಿದ್ದಾರೆ. ಚಿತ್ರವು ವಾಣಿಜ್ಯಿಕವಾಗಿ ದೊಡ್ಡ ಯಶಸ್ಸು ಕಂಡಿದೆ ಮತ್ತು 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕರು ಸಾರ್ವಜನಿಕವಾಗಿ ಘೋಷಿಸಿಕೊಂಡಿದ್ದಾರೆ, ಆದರೂ ಬಾಕಿ ಸಂಭಾವನೆಯನ್ನು ಪಾವತಿಸಿಲ್ಲ ಎಂದು ಸುಧಾ ಅವರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಇದಯಂ ಮುರಳಿ' ಸಿನಿಮಾಗೂ ಸಂಕಷ್ಟ!

'ಪರಾಶಕ್ತಿ' ಚಿತ್ರದ ಸ್ಯಾಟಲೈಟ್ ಹಕ್ಕುಗಳ ಮೇಲೆ ರಕ್ಷಣೆ ಕೋರುವುದರ ಜೊತೆಗೆ, ಜುಲೈ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿರುವ ಡಾನ್ ಪಿಕ್ಚರ್ಸ್ ನಿರ್ಮಾಣದ ಮತ್ತೊಂದು ಚಿತ್ರ 'ಇದಯಂ ಮುರಳಿ' ಬಿಡುಗಡೆಗೂ ತಡೆಯಾಜ್ಞೆ ನೀಡುವಂತೆ ಸುಧಾ ಕೊಂಗರಾ ಕೋರಿದ್ದಾರೆ. ಕೊನೆಯ ಕ್ಷಣದಲ್ಲಿ ನಿರ್ಮಾಪಕರು ಆಕ್ಷೇಪ ಎತ್ತದಂತೆ ತಡೆಯಲು ಈ ಅರ್ಜಿಯನ್ನು ಸಾಕಷ್ಟು ಮುಂಚಿತವಾಗಿಯೇ ಸಲ್ಲಿಸಲಾಗಿದೆ ಎಂದು ಅವರ ವಕೀಲರು ವಾದಿಸಿದ್ದಾರೆ. 'ಪರಾಶಕ್ತಿ' ಚಿತ್ರದ ಒಟಿಟಿ ಬಿಡುಗಡೆ ಈಗಾಗಲೇ ಆಗಿದ್ದು, ಪ್ರಸ್ತುತ ಸಲ್ಲಿಕೆಯಾಗಿರುವ ಅರ್ಜಿಯು ಕೇವಲ ಅದರ ಟಿವಿ ಪ್ರಸಾರದ ಬಿಡುಗಡೆಗೆ ಮಾತ್ರ ಸಂಬಂಧಿಸಿದೆ ಎಂದು ಕೋರ್ಟ್‌ಗೆ ಸ್ಪಷ್ಟಪಡಿಸಲಾಗಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 8 ರಂದು ನಡೆಯಲಿದೆ.

ಆರು ತಿಂಗಳ ಹಿಂದೆ ತೆರೆಕಂಡಿದ್ದ ʻಪರಾಶಕ್ತಿʼ ಸಿನಿಮಾ

ಸುಧಾ ಕೊಂಗರಾ ನಿರ್ದೇಶನದ ಮತ್ತು ಡಾನ್ ಪಿಕ್ಚರ್ಸ್ ನಿರ್ಮಿಸಿರುವ 'ಪರಾಶಕ್ತಿ' ಚಿತ್ರದಲ್ಲಿ ಶಿವಕಾರ್ತಿಕೇಯನ್, ರವಿ ಮೋಹನ್, ಅಥರ್ವ ಮತ್ತು ಶ್ರೀಲೀಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜನವರಿ 9ರಂದು ಬಿಡುಗಡೆಯಾದ ಈ ಸಿನಿಮಾ, ತಮಿಳುನಾಡಿನ ಹಿಂದಿ ವಿರೋಧಿ ಚಳವಳಿಯ ಹಿನ್ನೆಲೆಯನ್ನು ಹೊಂದಿತ್ತು.