The Raja Saab Movie ಇವೆಂಟ್‌ನಲ್ಲಿ ತಳ್ಳಾಟ; ಜನಸಂದಣಿಯಲ್ಲಿ ಪರದಾಡಿದ ನಟಿ ನಿಧಿ ಅಗರ್ವಾಲ್, ಪೊಲೀಸರು ಕೇಸ್ ದಾಖಲಿಸಿದ್ದು ಯಾರ ವಿರುದ್ಧ?
The Raja Saab Event Chaos: ಹೈದರಾಬಾದ್‌ನ ಲುಲು ಮಾಲ್‌ನಲ್ಲಿ ನಡೆದ 'ದಿ ರಾಜಾ ಸಾಬ್' ಚಿತ್ರದ ಎರಡನೇ ಹಾಡು 'ಸಹನಾ ಸಹನಾ' ಬಿಡುಗಡೆ ಸಮಾರಂಭದಲ್ಲಿ ಅಭಿಮಾನಿಗಳು ಅತಿರೇಕದ ವರ್ತನೆ ಭಾರಿ ಸದ್ದು ಮಾಡಿದೆ. ನಟಿ ನಿಧಿ ಅಗರ್ವಾಲ್ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಮುಗಿಬಿದ್ದ ಪರಿಣಾಮ ತೀವ್ರ ತಳ್ಳಾಟ ನಡೆದಿದೆ. ಘಟನೆ ನಂತರ ಪೊಲೀಸರು ಕೇಸ್ ದಾಖಲು ಮಾಡಿದ್ದಾರೆ.
-
ನಟ ಪ್ರಭಾಸ್ ನಾಯಕತ್ವದ, ಮಾರುತಿ ನಿರ್ದೇಶನದ ಹಾಗೂ 'ಪೀಪಲ್ ಮೀಡಿಯಾ ಫ್ಯಾಕ್ಟರಿ' ನಿರ್ಮಾಣ ಮಾಡಿರುವ ಬಹುನಿರೀಕ್ಷಿತ ಚಿತ್ರ 'ದಿ ರಾಜಾ ಸಾಬ್' ಚಿತ್ರದ ಎರಡನೇ ಹಾಡು 'ಸಹನಾ ಸಹನಾ' ಬುಧವಾರ ಹೈದರಾಬಾದ್‌ನ ಲುಲು ಮಾಲ್‌ನಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ರಿಲೀಸ್ ಆಗಿದೆ. ಆದರೆ ಈ ವೇಳೆ ನಡೆದ ತಳ್ಳಾಟ, ನೂಕಾಟದಲ್ಲಿ ನಟಿ ನಿಧಿ ಅಗರ್ವಾಲ್ ಅವರು ಸಿಕ್ಕಿ ಪರದಾಡಿದ ಘಟನೆ ನಡೆದಿದೆ.
ಹಾಡಿನ ಬಿಡುಗಡೆ ನಂತರ ಅಲ್ಲಿಂದ ಹೊರಟಾಗ ನಟಿ ನಿಧಿ ಅಗರ್ವಾಲ್ ಅವರ ಮೇಲೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಬೃಹತ್ ಜನಸಂದಣಿಯಲ್ಲಿ ಅವರೊಂದಿಗೆ ಸೆಲ್ಫಿ ಪಡೆಯಲು ಮತ್ತು ಅವರನ್ನು ಮುಟ್ಟಲು ಯತ್ನಿಸಿದ್ದಾರೆ. ಈ ವೇಳೆ ಜೋರು ತಳ್ಳಾಟ ನಡೆದಿದ್ದು, ನಿಧಿ ಆ ಗುಂಪಿನಲ್ಲಿ ಸಿಲುಕಿ ನಲುಗಿದ್ದಾರೆ. ನಿಧಿ ಅವರು ಜನಸಂದಣಿಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವುದು ಮತ್ತು ಅವರ ತಂಡವು ಅವರನ್ನು ರಕ್ಷಿಸಲು ಹರಸಾಹಸ ಪಡುತ್ತಿರುವುದು ಕಂಡುಬಂದಿದೆ.
ಸಂಜೆ 5 ಗಂಟೆಗೆ ಮಾಲ್‌ನಲ್ಲಿ ಹಾಡು ಬಿಡುಗಡೆಯಾಗಬೇಕಿತ್ತು. ಹಲವು ಗಂಟೆಗಳ ಕಾಲ ವಿಳಂಬವಾಯಿತು. ಅಲ್ಲಿ ಅಷ್ಟರಲ್ಲಾಗಲೇ ಬೃಹತ್ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಈ ಘಟನೆ ಕುರಿತ ಆಘಾತಕಾರಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ, ಜೊತೆಗೆ ಈ ಕಾರ್ಯಕ್ರಮದಲ್ಲಿನ ಭದ್ರತೆಯ ವೈಫಲ್ಯದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.
ಎಚ್ಚೆತ್ತ ಪೊಲೀಸರು!
ಈ ಘಟನೆ ನಡೆದ ಬೆನ್ನಲ್ಲೇ ಮಾಲ್ ಮ್ಯಾನೇಜ್‌ಮೆಂಟ್ ಮತ್ತು ಕಾರ್ಯಕ್ರಮದ ಆಯೋಜಕರ ವಿರುದ್ಧ ಪ್ರಕರಣ ದಾಖಲಾಗಿದೆ. ಮುನ್ಸೂಚನೆ ಅಥವಾ ಪೂರ್ವಾನುಮತಿ ಪಡೆಯದೆ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಅನುಮತಿ ಪಡೆಯದೆ ಸೆಲೆಬ್ರಿಟಿಯನ್ನು ಆಹ್ವಾನಿಸಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ" ಎಂದು ಪೊಲೀಸರು ತಿಳಿಸಿದ್ದಾರೆ.
ಜನಸಂದಣಿಯಲ್ಲಿ ನಲುಗಿದ ನಿಧಿ; ದುರ್ವರ್ತನೆ ಕಂಡು ನಟಿ ಬೇಸರ
ಘಟನೆಗೂ ಮುನ್ನ ನಿಧಿ ಏನು ಹೇಳಿದ್ದರು?
ಈ ಆಘಾತಕಾರಿ ಘಟನೆ ನಡೆಯುವುದಕ್ಕೂ ಮುನ್ನ ಚಿತ್ರತಂಡವು ಸಿನಿಮಾ ಮತ್ತು ಹಾಡಿನ ಬಗ್ಗೆ ಮಾತನಾಡಿದ್ದರು. "ಹೈದರಾಬಾದ್‌ನಲ್ಲಿ ಬೃಹತ್ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜಿಸುವ ಪ್ಲಾನ್ ಇದೆ. ಜನವರಿ 8 ರಂದು ಪ್ರೀಮಿಯರ್ ಶೋಗಳು ಪ್ರಾರಂಭವಾಗಲಿವೆ" ಎಂದು ಮಾಹಿತಿ ನೀಡಿತ್ತು. ಪ್ರಭಾಸ್ ಅಭಿಮಾನಿಗಳು ತೋರುತ್ತಿರುವ ಅತೀವ ಪ್ರೀತಿಗೆ ನಿಧಿ ಅಗರ್ವಾಲ್ ಕೃತಜ್ಞತೆ ಸಲ್ಲಿಸಿದ್ದರು.
ಈ ಚಿತ್ರದ ಹಾಡುಗಳಿಗೆ ಎಸ್ ಥಮನ್ ಸಂಗೀತ ನೀಡಿದ್ದಾರೆ. "ರಾಜಾ ಸಾಬ್ ಚಿತ್ರದ ಹಾಡುಗಳು ಅದ್ಭುತವಾಗಿ ಬಂದಿವೆ. ಈ ಹಿಂದೆ ಬಿಡುಗಡೆಯಾದ ಸಾಂಗ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಈಗ 'ಸಹನಾ ಸಹನಾ' ಎಂಬ ಗೀತೆಯನ್ನು ನಿಮ್ಮ ಮುಂದೆ ತಂದಿದ್ದೇವೆ. ಚಿತ್ರದಲ್ಲಿ ಪ್ರಭಾಸ್ ಅವರ ಡ್ಯಾನ್ಸ್ ಮತ್ತು ಸ್ಟೈಲ್ ಅಭಿಮಾನಿಗಳಿಗೆ ಹಬ್ಬವಾಗಲಿದೆ" ಎಂದು ಲುಲು ಮಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದರು.