ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Prajwal Devaraj: ಗಲ್ಫ್ ರಾಷ್ಟ್ರಗಳಲ್ಲಿ ರಿಲೀಸ್‌ ಆಗಲಿದೆ ಕನ್ನಡದ ʻಕರಾವಳಿʼ; ಈವರೆಗೂ ಈ ಸಿನಿಮಾ ಬಾಚಿಕೊಂಡ ಹಣವೆಷ್ಟು?

ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ಅಭಿನಯದ 'ಕರಾವಳಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿ, ಭರ್ಜರಿ ಯಶಸ್ಸು ಕಂಡಿದೆ. ಕಂಬಳದ ಹಿನ್ನೆಲೆಯ ಈ ಚಿತ್ರವು ಜುಲೈ 31ರಿಂದ ದುಬೈ ಹಾಗೂ ಅಬುಧಾಬಿಯಲ್ಲಿ ಬಿಡುಗಡೆಯಾಗಲಿದೆ.

ವಿದೇಶದಲ್ಲಿ ರಿಲೀಸ್‌ ಆಗಲಿದೆ ʻಕರಾವಳಿʼ; ಈವರೆಗೂ ಎಷ್ಟಾಯ್ತು ಕಲೆಕ್ಷನ್‌?

-

Avinash GR
Avinash GR Jul 29, 2026 8:19 PM

ಗುರುದತ್ ಗಾಣಿಗ ನಿರ್ದೇಶನದಲ್ಲಿ, ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಕರಾವಳಿ' ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಕಂಬಳದ ಕಥಾಹಂದರವನ್ನು ಕಣ್ತುಂಬಿಕೊಂಡ ಕನ್ನಡ ಸಿನಿಪ್ರಿಯರು, ಈ ಚಿತ್ರಕ್ಕೆ ಭರಪೂರ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ, ಈಗ ಗಲ್ಫ್ ರಾಷ್ಟ್ರಗಳಿಗೂ ಎಂಟ್ರಿ ನೀಡಲು ಸಜ್ಜಾಗಿದೆ.

ಇದೇ ಶುಕ್ರವಾರದಿಂದ (ಜುಲೈ 31) ದುಬೈ ಹಾಗೂ ಅಬುಧಾಬಿಯಲ್ಲಿ 'ಕರಾವಳಿ' ಸಿನಿಮಾ ಪ್ರದರ್ಶನಗೊಳ್ಳಲಿದೆ. ಈಗಾಗಲೇ ಸರ್ವಂ ಮಯಾ, ಜನ ನಾಯಗನ್, ಬಾಲನ್, ಕರಪ್ಪು, ಪೆದ್ದಿ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಹಿಟ್ ಸಿನಿಮಾಗಳನ್ನು ವಿದೇಶಗಳಲ್ಲಿ ರಿಲೀಸ್‌ ಮಾಡಿದ್ದ ಪ್ರಖ್ಯಾತ 'ಫಾರಾಸ್ ಸಿನಿಮಾಸ್' ಸಂಸ್ಥೆಯು ಈಗ 'ಕರಾವಳಿ' ಸಿನಿಮಾದ ಓವರ್‌ಸೀಸ್ ರಿಲೀಸ್‌ ಹಕ್ಕುಗಳನ್ನು ಪಡೆದುಕೊಂಡಿದ್ದು, ವಿದೇಶಗಳಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ.

Karavali movie controversy: 'ಕರಾವಳಿ' ಸಿನಿಮಾ ವಿವಾದದ ಬಗ್ಗೆ ರಕ್ಷಿತಾ ಪ್ರೇಮ್ ಹೇಳಿದ್ದೇನು?

6 ಕೋಟಿಗೂ ಅಧಿಕ ಕಲೆಕ್ಷನ್‌!

'ಕರಾವಳಿ' ಸಿನಿಮಾವು ಜುಲೈ 24 ರಂದು ರಾಜ್ಯದ 175ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಪ್ರೇಕ್ಷಕರಿಂದ ಸಿಗುತ್ತಿರುವ ಅತ್ಯುತ್ತಮ ಪ್ರತಿಕ್ರಿಯೆಯಿಂದಾಗಿ ಈಗ ಚಿತ್ರದ ಪ್ರದರ್ಶನಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ತೆರೆಕಂಡ ಮೊದಲ ದಿನವೇ ₹1 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ ಈ ಸಿನಿಮಾ, ಇದುವರೆಗೆ ಒಟ್ಟಾರೆಯಾಗಿ ₹6 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ ಎಂಬ ಮಾಹಿತಿ ಸಿಕ್ಕಿದೆ. ಕನ್ನಡ ಚಿತ್ರರಂಗದ ಪ್ರಸ್ತುತ ಪರಿಸ್ಥಿತಿಯಲ್ಲಿ ಇದನ್ನು ಅತ್ಯುತ್ತಮ ಕಲೆಕ್ಷನ್ ಎಂದೇ ವಿಶ್ಲೇಷಿಸಲಾಗುತ್ತಿದ್ದು, ಈ ವರ್ಷ ಉತ್ತಮ ಓಪನಿಂಗ್ ಪಡೆದ ಕನ್ನಡ ಸಿನಿಮಾಗಳಲ್ಲಿ ʻಕರಾವಳಿʼ ಕೂಡ ಒಂದಾಗಿದೆ.

Karavali Movie Review: ಕಂಬಳ ಗದ್ದೆಯಲ್ಲಿ ಸೇಡಿನ ಕಥೆ ಹೇಳುವ ʻಕರಾವಳಿʼ

5 ಲಕ್ಷಕ್ಕೂ ಹೆಚ್ಚು ಮಂದಿಯಿಂದ ವೀಕ್ಷಣೆ

ಬಿಡುಗಡೆಯಾದ 6ನೇ ದಿನದ ವೇಳೆಗೆ 5 ಲಕ್ಷಕ್ಕೂ ಹೆಚ್ಚು ಜನರು ʻಕರಾವಳಿʼ ಸಿನಿಮಾವನ್ನು ವೀಕ್ಷಿಸಿದ್ದಾರೆ ಎಂದು ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಪ್ರೇಕ್ಷಕರಿಂದ ವ್ಯಕ್ತವಾಗುತ್ತಿರುವ ಅಭೂತಪೂರ್ವ ಬೆಂಬಲವನ್ನು ಕಂಡು ಪರಭಾಷೆಯಲ್ಲೂ ಭಾರಿ ಬೇಡಿಕೆ ವ್ಯಕ್ತವಾಗಿದೆ. ಹೀಗಾಗಿ ಶೀಘ್ರದಲ್ಲೇ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.