Prajwal Devaraj: ʻಕರಾವಳಿʼ ಚಿತ್ರಕ್ಕಾಗಿ 700 ವರ್ಷಗಳ ಇತಿಹಾಸವಿರುವ ಕಟಪಾಡಿ ಕಂಬಳದಲ್ಲಿ ಇದೇ ಮೊದಲ ಬಾರಿಗೆ ಶೂಟಿಂಗ್
ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ನಟನೆಯ 'ಕರಾವಳಿ' ಚಿತ್ರದ ‘ಸೋಲ್ ಆಫ್ ಕರಾವಳಿ’ ಹಾಡು ಬಿಡುಗಡೆಯಾಗಿದೆ. 700 ವರ್ಷಗಳ ಭವ್ಯ ಇತಿಹಾಸವಿರುವ ಪ್ರಸಿದ್ಧ ಕಟಪಾಡಿ ಕಂಬಳದ ನೈಜ ಟ್ರ್ಯಾಕ್‌ನಲ್ಲಿ ಈ ಹಾಡನ್ನು ಇದೇ ಮೊದಲ ಬಾರಿಗೆ ಚಿತ್ರೀಕರಿಸಿರುವುದು ವಿಶೇಷ. ಗುರುದತ್ ಗಾಣಿಗ ನಿರ್ದೇಶನದ ಈ ಸಿನಿಮಾ ಜುಲೈ 24ಕ್ಕೆ ತೆರೆಕಾಣಲಿದೆ.
-
ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾದ ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ರಿಲೀಸ್‌ಗೆ ರೆಡಿಯಾಗಿದೆ. ಈ ಸಿನಿಮಾದ ‘ಸೋಲ್ ಆಫ್ ಕರಾವಳಿ’ (Soul of Karavali) ಹಾಡು ಬಿಡುಗಡೆಯಾಗಿದ್ದು, ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕರಾವಳಿ ಭಾಗದ ಹೆಮ್ಮೆಯ ಜಾನಪದ ಕ್ರೀಡೆಯಾದ 'ಕಂಬಳ'ವೇ ಈ ಹಾಡಿನ ಪ್ರಮುಖ ಹೈಲೈಟ್ ಆಗಿದ್ದು, ಸಂಪೂರ್ಣ ಕಂಬಳದ ವೈಭವವನ್ನು ಈ ಹಾಡಿನಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ.
700 ವರ್ಷಗಳ ಇತಿಹಾಸವಿರುವ ಟ್ರ್ಯಾಕ್‌ನಲ್ಲಿ ಚಿತ್ರೀಕರಣ
"ಕಡಲಿಂದ ನಾಡು... ಕಡಲಿಂದ ಕಾಡು..." ಎಂಬ ಸಾಲುಗಳಿಂದ ಆರಂಭವಾಗುವ ಈ ಹಾಡನ್ನು ಪ್ರಸಿದ್ಧ ಕಟಪಾಡಿ ಕಂಬಳದ ಟ್ರ್ಯಾಕ್‌ನಲ್ಲಿ ಚಿತ್ರೀಕರಿಸಲಾಗಿದೆ. ಕಟಪಾಡಿ ಕಂಬಳಕ್ಕೆ ಸುಮಾರು 700 ವರ್ಷಗಳ ಭವ್ಯ ಇತಿಹಾಸವಿದ್ದು, ಕರಾವಳಿಯಲ್ಲೇ ಅತ್ಯಂತ ಸಾಂಪ್ರದಾಯಿಕ ಹಾಗೂ ಮಹತ್ವದ ಕಂಬಳವಾಗಿ ಗುರುತಿಸಿಕೊಂಡಿದೆ. ವಿಶೇಷವೆಂದರೆ, ಕಳೆದ ಏಳು ಶತಮಾನಗಳಿಂದ ಒಂದೇ ಕುಟುಂಬ ಈ ಕಂಬಳವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.
ಇಷ್ಟು ಸುದೀರ್ಘ ಇತಿಹಾಸವಿರುವ ಕಟಪಾಡಿ ಕಂಬಳದಲ್ಲಿ ಸಿನಿಮಾವೊಂದರ ಚಿತ್ರೀಕರಣಕ್ಕೆ ಅವಕಾಶ ನೀಡಿರುವುದು ಇದೇ ಮೊದಲ ಬಾರಿಯಾಗಿದ್ದು, ಚಿತ್ರತಂಡ ಈ ಅವಕಾಶವನ್ನು ಅತ್ಯಂತ ಅದ್ಭುತವಾಗಿ ಬಳಸಿಕೊಂಡಿದೆ.
Kannada New Movie: 'ಸು ಫ್ರಂ ಸೋ' ರಿಲೀಸ್ ದಿನವೇ ಬರ್ತಿದೆ 'ಕರಾವಳಿ'!
ನೈಜತೆಗೆ ಧಕ್ಕೆ ಬಾರದಂತೆ ಚಿತ್ರೀಕರಣ
ಸಾಂಪ್ರದಾಯಿಕ ಕ್ರೀಡೆ ಕಂಬಳದ ನೈಜತೆಯನ್ನು ಕಿಂಚಿತ್ತೂ ಕಳೆದುಕೊಳ್ಳದೆ, ಅಷ್ಟೇ ನೈಜವಾಗಿ ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಚಿತ್ರತಂಡಕ್ಕೆ ದೊಡ್ಡ ಸವಾಲಾಗಿತ್ತು. ಆದರೆ, ಈಗ ಬಿಡುಗಡೆಯಾಗಿರುವ ಹಾಡನ್ನು ನೋಡಿದರೆ ಸಿನಿಮಾ ತಂಡ ಈ ಸವಾಲನ್ನು ಯಶಸ್ವಿಯಾಗಿ ಮೆಟ್ಟಿ ನಿಂತಿರುವುದು ಸ್ಪಷ್ಟವಾಗುತ್ತದೆ.
ಈ ಸಿನಿಮಾಕ್ಕೆ ಯಾರೆಲ್ಲಾ ಕೆಲಸ ಮಾಡಿದ್ದಾರೆ?
ಗುರುದತ್ ಗಾಣಿಗ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ಕಲಾವಿದರು ಹಾಗೂ ತಂತ್ರಜ್ಞರು ಕೈಜೋಡಿಸಿದ್ದಾರೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ 'ಡೈನಾಮಿಕ್ ಪ್ರಿನ್ಸ್' ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ ಹಾಗೂ ನಾಯಕಿಯಾಗಿ ಸಂಪದಾ ಅವರು ನಟಿಸಿದ್ದಾರೆ. ಇವರೊಂದಿಗೆ ಮಿತ್ರ, ರಮೇಶ್ ಇಂದಿರ ಹಾಗೂ ಶ್ರೀಧರ್ ಅವರಂತಹ ಅನುಭವೀ ಕಲಾವಿದರ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಸಚಿನ್ ಬಸ್ರೂರು ಅವರ ಸಂಗೀತ ನಿರ್ದೇಶನವಿದ್ದು, ಪ್ರಮೋದ್ ಮರವಂತೆ ಅವರ ಸಾಹಿತ್ಯಕ್ಕೆ ಸಾಯಿ ವಿಗ್ನೇಶ್ ಧ್ವನಿಯಾಗಿದ್ದಾರೆ. ಇನ್ನು ಕರಾವಳಿಯ ವಿಶಿಷ್ಟ ಸೊಗಡು ಮತ್ತು ಸಂಸ್ಕೃತಿಯನ್ನು ಛಾಯಾಗ್ರಾಹಕ ಅಭಿಮನ್ಯೂ ಸದಾನಂದನ್ ಅವರು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದಿದ್ದಾರೆ.
ಜುಲೈ 24ಕ್ಕೆ ಅದ್ದೂರಿ ಬಿಡುಗಡೆ
‘ಗಾಣಿಗ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ವಿಕೆ ಫಿಲ್ಮ್ ಅಸೋಸಿಯೇಷನ್ ಸಹಯೋಗದೊಂದಿಗೆ ಈ ಚಿತ್ರ ನಿರ್ಮಾಣವಾಗಿದೆ. ಕನ್ನಡ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ (KVN Productions) ಈ ಚಿತ್ರವನ್ನು ಪ್ರೆಸೆಂಟ್ ಮಾಡುವುದರ ಜೊತೆಗೆ ವಿತರಣೆಯ ಜವಾಬ್ದಾರಿಯನ್ನೂ ಹೊತ್ತುಕೊಂಡಿದೆ. 'ಕರಾವಳಿ' ಸಿನಿಮಾ ಜುಲೈ 24ರಂದು ಅದ್ಧೂರಿಯಾಗಿ ವಿಶ್ವಾದ್ಯಂತ ತೆರೆಕಾಣಲು ಸಜ್ಜಾಗಿದೆ.