ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

150 ಕೋಟಿ ಬಾಚಿ ಇತಿಹಾಸ ಸೃಷ್ಟಿಸಿದ ʻಪ್ರೇಮದ ಊರಲಿʼ; 800 ಕೋಟಿ ಕ್ಲಬ್‌ನತ್ತ ರಜನಿಕಾಂತ್‌ ನಟನೆಯ ʻಜೈಲರ್‌ 2ʼ ಸಿನಿಮಾ

ʻಪ್ರೇಮದ ಊರಲಿʼ ಮತ್ತು ʻಜೈಲರ್‌ 2ʼ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿ ಮುನ್ನುಗ್ಗುತ್ತಿವೆ. ಕೇವಲ 2 ಕೋಟಿ ವೆಚ್ಚದಲ್ಲಿ ಸಿದ್ಧಗೊಂಡ ಹೊಸಬರ ‘ಪ್ರೇಮದ ಊರಲಿ’ ಚಿತ್ರವು ಬರೋಬ್ಬರಿ 150 ಕೋಟಿ ರೂಪಾಯಿ ಬಾಚಿ ದಾಖಲೆ ಬರೆದಿದೆ. ಇನ್ನೊಂದೆಡೆ ರಜನಿಕಾಂತ್ ಅಭಿನಯದ ‘ಜೈಲರ್ 2’ ಸಿನಿಮಾದ ಗಳಿಕೆ 800 ಕೋಟಿ ರೂಪಾಯಿ ಗಳಿಸಿ, ಸಂಚಲನ ಮೂಡಿಸಿದೆ.

ಬಾಕ್ಸ್‌ ಆಫೀಸ್‌ನಲ್ಲಿ ʻಪ್ರೇಮದ ಊರಲಿʼ - ʻಜೈಲರ್‌ 2ʼ ಸಿನಿಮಾಗಳ ಧಮಾಕ!

-

Avinash GR
Avinash GR Nov 1, 2026 7:25 PM

ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್‌ನಲ್ಲಿ ಸದ್ಯ ಧಮಾಕಾ ಮುಂದುವರಿದಿದೆ. ಒಂದೆಡೆ ಸ್ಯಾಂಡಲ್‌ವುಡ್‌ನ ಅಚ್ಚರಿಯ ಹಿಟ್ ಆಗಿ ಹೊರಹೊಮ್ಮಿರುವ ಹೊಸಬರ ʻಪ್ರೇಮದ ಊರಲಿʼ ಚಿತ್ರ ಬರೋಬ್ಬರಿ 150 ಕೋಟಿ ರೂ. ಕ್ಲಬ್ ಸೇರಿ ದಾಖಲೆ ಬರೆದಿದ್ದರೆ, ಇನ್ನೊಂದೆಡೆ ತಲೈವಾ ರಜನಿಕಾಂತ್ ಅಭಿನಯದ ಮೆಗಾ ಬ್ಲಾಕ್‌ಬಸ್ಟರ್ 'ಜೈಲರ್ 2' ವಿಶ್ವಾದ್ಯಂತ 800 ಕೋಟಿ ರೂ. ಗಡಿಯತ್ತ ದಾಪುಗಾಲು ಹಾಕುತ್ತಿದೆ.

ದಾಖಲೆ ಬರೆದ ಕನ್ನಡದ ʻಪ್ರೇಮದ ಊರಲಿʼ

ಮನೋಜ್‌ ಕುಮಾರ್‌ ನಿರ್ದೇಶನದ ʻಪ್ರೇಮದ ಊರಲಿʼ ಸಿನಿಮಾವು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ 37 ದಿನಗಳನ್ನು ಪೂರೈಸಿದ್ದು, ಸದ್ಯ ಗಲ್ಲಾಪೆಟ್ಟಿಗೆಯಲ್ಲಿ 150 ಕೋಟಿಗೂ ಅಧಿಕ ಮೊತ್ತವನ್ನು ಬಾಚಿಕೊಂಡಿದೆ. ಕೇವಲ 2 ಕೋಟಿ ರೂಪಾಯಿಗಳ ಸಣ್ಣ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ಇಂತಹದೊಂದು ಜಾದೂ ಮಾಡುತ್ತದೆ ಎಂದು ಯಾರೆಂದರೆ ಯಾರೂ ನಿರೀಕ್ಷಿಸಿರಲಿಲ್ಲ. 2026ರಲ್ಲಿ ಈ ಮಟ್ಟದ ಅಭೂತಪೂರ್ವ ಕಲೆಕ್ಷನ್ ಮಾಡಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ಸಿನಿಮಾ ಪಾತ್ರವಾಗಿದೆ.

ಸಂಪೂರ್ಣವಾಗಿ ಹೊಸ ಪ್ರತಿಭೆಗಳಿಂದ ಮೂಡಿಬಂದ ಚಿತ್ರವೊಂದು ಭಾರತೀಯ ಚಿತ್ರರಂಗವೇ ಬೆರಗುಗೊಳ್ಳುವಂತಹ ಸಾಧನೆ ಮಾಡಿರುವುದು ವಿಶೇಷ. ರಂಗಾಯಣ ರಘು, ಶ್ರೀರಾಮ್‌, ರಮಿಕಾ ಶಿವು ಹಾಗೂ ತಪಸ್ವಿನಿ ಪೂಣಚ್ಚ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಸುನಾದ್‌ ಗೌತಮ್‌ ಅವರ ಸಂಗೀತ ಪ್ರೇಕ್ಷಕರ ಮನಗೆದ್ದಿದೆ.

ಭಾರತದಲ್ಲಿ 500 ಕೋಟಿ ರೂ. ಕ್ಲಬ್‌ ಸೇರಿದ ಜೈಲರ್‌ 2

ಇನ್ನೊಂದೆಡೆ, ಅಕ್ಟೋಬರ್ 15ರಂದು ವಿಶ್ವಾದ್ಯಂತ ತೆರೆಕಂಡಿದ್ದ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್ 2' ಮೂರನೇ ವಾರದಲ್ಲೂ ತನ್ನ ಭರ್ಜರಿ ಓಟವನ್ನು ಮುಂದುವರಿಸಿದೆ. ಶನಿವಾರ (ಅಕ್ಟೋಬರ್ 31) ತನ್ನ 17ನೇ ದಿನದಂದು ಭಾರತದಲ್ಲಿ ಚಿತ್ರವು ಬರೋಬ್ಬರಿ 9.35 ಕೋಟಿ ಗಳಿಸಿದೆ. ಶುಕ್ರವಾರದ ಕಲೆಕ್ಷನ್ ಆದ 5.50 ಕೋಟಿಗೆ ಹೋಲಿಸಿದರೆ ಶನಿವಾರದ ಗಳಿಕೆಯಲ್ಲಿ ಶೇ. 70ರಷ್ಟು ಜಿಗಿತ ದಾಖಲಾಗಿದೆ. ಇದರೊಂದಿಗೆ ಭಾರತದ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಚಿತ್ರದ ಒಟ್ಟು ಗಳಿಕೆ 520.35 ಕೋಟಿ ದಾಟಿದೆ.

Jailer 2 Review: ಮತ್ತೆ ಮುಂದುವರಿದ ಲಾಜಿಕ್‌ ಇಲ್ಲದ 'ಟೈಗರ್ ಮುತ್ತುವೇಲ್ ಪಾಂಡಿಯನ್' ಚಾಣಾಕ್ಷತನ!

ಕರ್ನಾಟಕದಲ್ಲಿ ಈವರೆಗೂ ಆಗಿರುವ ಗಳಿಕೆ ಎಷ್ಟು?

ವಿದೇಶಿ ಮಾರುಕಟ್ಟೆಯಲ್ಲೂ ರಜನಿಕಾಂತ್ ಹವಾ ಮುಂದುವರಿದಿದ್ದು, ಶನಿವಾರ ವಿದೇಶಿ ಮಾರುಕಟ್ಟೆಗಳಿಂದ 3 ಕೋಟಿ ಹರಿದುಬಂದಿದೆ. ಇದರೊಂದಿಗೆ ಚಿತ್ರದ ಓವರ್‌ಸೀಸ್‌ನ ಒಟ್ಟು ಕಲೆಕ್ಷನ್ 270.50 ಕೋಟಿಗೆ ತಲುಪಿದ್ದು, ವಿಶ್ವಾದ್ಯಂತ ಒಟ್ಟು ಗಳಿಕೆ 790.85 ಕೋಟಿ ಮುಟ್ಟಿದೆ. ಈ ಮೂಲಕ ಚಿತ್ರವು ಅಧಿಕೃತವಾಗಿ 800 ಕೋಟಿ ಕ್ಲಬ್ ಪ್ರವೇಶಿಸಲು ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಇಲ್ಲಿಯವರೆಗೆ ಮಾರಾಟವಾದ ಒಟ್ಟು ಟಿಕೆಟ್‌ಗಳ ಸಂಖ್ಯೆ 3 ಕೋಟಿಯ ಗಡಿ ದಾಟಿದೆ. ವಿಶೇಷವೆಂದರೆ, ಕರ್ನಾಟಕದಲ್ಲೇ ಈ ಚಿತ್ರದ ಗಳಿಕೆಯು 100 ಕೋಟಿ ಗಳಿಕೆಯ ಸನಿಹದಲ್ಲಿದೆ.

ನೆಲ್ಸನ್‌ ದಿಲೀಪ್‌ ಕುಮಾರ್‌ ನಿರ್ದೇಶನದ ಈ ಬಿಗ್ ಬಜೆಟ್ ಸಿನಿಮಾವನ್ನು ಸನ್‌ ಪಿಕ್ಚರ್ಸ್‌ನ ಕಲಾನಿಧಿ ಮಾರನ್‌ ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಚಿತ್ರದ ಗೆಲುವಿಗೆ ಪ್ರಮುಖ ಬಲ ತುಂಬಿದೆ. ಶಿವರಾಜ್‌ಕುಮಾರ್‌, ಮೋಹನ್‌ಲಾಲ್‌, ವಿದ್ಯಾ ಬಾಲನ್‌, ಎಸ್‌ಜೆ ಸೂರ್ಯ, ಮಿಥುನ್‌ ಚಕ್ರವರ್ತಿ ಹಾಗೂ ರಮ್ಯಾಕೃಷ್ಣ ಮುಂತಾದ ಬಹುತಾರಾಗಣ ಈ ಚಿತ್ರದಲ್ಲಿದ್ದು, ಚಿತ್ರಪ್ರೇಮಿಗಳನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.