ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್‌ಕುಮಾರ್‌ಗೆ ಜೋಡಿಯಾದ ನಟ ಪೃಥ್ವಿ ಅಂಬಾರ್; ʻಚೌಕಿದಾರ್ ʼ ಸಿನಿಮಾ ಟ್ರೇಲರ್ ಹೇಗಿದೆ?
Chowkidar Trailer: ಪೃಥ್ವಿ ಅಂಬಾರ್ ಮತ್ತು ಧನ್ಯಾ ರಾಮ್‌ಕುಮಾರ್ ನಟನೆಯ ಚೌಕಿದಾರ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಅಪ್ಪ - ಮಗನ ಬಾಂಧವ್ಯದ ಎಮೋಷನಲ್ ಕಥೆಯನ್ನು ತೆರೆಯ ಮೇಲೆ ತರಲು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಸಜ್ಜಾಗಿದ್ದಾರೆ.
-
ʻದಿಯಾʼ ಸಿನಿಮಾ ಖ್ಯಾತಿಯ ಪೃಥ್ವಿ ಅಂಬಾರ್ ಮತ್ತು ಡಾ. ರಾಜ್‌ಕುಮಾರ್ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ನಟಿಸಿರುವ ಬಹುನಿರೀಕ್ಷಿತ ʻಚೌಕಿದಾರ್ʼ ಸಿನಿಮಾವು ಈಗಾಗಲೇ ಟೈಟಲ್ ಹಾಗೂ ಕಂಟೆಂಟ್ ಮೂಲಕ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಿದೆ. ಈ ಕಾರ್ಯಕ್ರಮಕ್ಕೆ ಪೊಲೀಸ್ ಇನ್ಸ್ ಪೆಕ್ಟರ್ ರಾಘವೇಂದ್ರ ಗೌಡ ಹಾಗೂ ಹೈಕೋರ್ಟ್ ವಕೀಲರಾದ ಪ್ರವೀಣ್ ವಿಶೇಷ ಅತಿಥಿಯಾಗಿ ಆಗಮಿಸಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.
ಇದು ರಾಜಕೀಯ ಕುರಿತ ಸಿನಿಮಾ ಅಲ್ಲ
ಈ ಸಿನಿಮಾವನ್ನು ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸಿದ್ದಾರೆ. "ನಾನು ಹೇಳಬೇಕಾದ್ದನ್ನೆಲ್ಲಾ ಸಿನಿಮಾದಲ್ಲಿ ತೋರಿಸಿದ್ದೇನೆ. ಸಚಿನ್ ಬಸ್ರೂರು ಉತ್ತಮವಾಗಿ ಸಂಯೋಜಿಸಿದ್ದಾರೆ. ನಾಗೇಂದ್ರ ಪ್ರಸಾದ್, ಸಂತೋಷ್ ನಾಯಕ್, ಪ್ರಮೋದ್ ಮರವಂತೆ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಚೌಕಿದಾರ್ ಅಂದರೆ ಪ್ರೊಟೆಕ್ಟರ್. ಈ ಟೈಟಲ್ ರಾಜಕೀಯಕ್ಕೆ ಸಂಬಂಧವಿಲ್ಲ. ಜನವರಿ 30ರಂದು ಈ ಸಿನಿಮಾ ತೆರೆಗೆ ಬರಲಿದೆ" ಎಂದು ಚಂದ್ರಶೇಖರ್ ಬಂಡಿಯಪ್ಪ ಹೇಳಿದ್ದಾರೆ.
Chowkidar Movie: ʼಚೌಕಿದಾರ್ʼ ಟೀಸರ್ ರಿಲೀಸ್; ಹೊಸ ಅವತಾರದಲ್ಲಿ ಪೃಥ್ವಿ ಅಂಬಾರ್ ಅಬ್ಬರ
ಸಾಯಿ ಕುಮಾರ್ ಅವರೇ ನಿಜವಾದ ಹೀರೋ
"ನಮ್ಮ ಸಿನಿಮಾ ನಿರ್ದೇಶಕರು ಪ್ರತಿಯೊಂದನ್ನು ನನಗೆ ಗೈಡ್ ಮಾಡಿದ್ದಾರೆ. ಏನೇ ಕ್ರೆಡಿಟ್ ಬಂದರು ಅದು ಅವರಿಗೆ ಸಲ್ಲಬೇಕು. ಈ ಸ್ಕ್ರಿಪ್ಟ್ ಓದಿದ ನನ್ನ ಲೈಫ್‌ನಲ್ಲಿಯೇ ನಾನು ಒಂದಷ್ಟು ಬದಲಾವಣೆ ಮಾಡಿಕೊಂಡಿದ್ದೇನೆ. ಸಾಯಿಕುಮಾರ್ ಸರ್ ಈ ಚಿತ್ರದ ನಿಜವಾದ ನಾಯಕ. ಬರೀ ಎಂಟರ್‌ಟೇನ್‌ಮೆಂಟ್ ವಿಷಯವಾಗಿ ಇರದೇ, ಅದು ಒಂದಷ್ಟು ಆಲೋಚನೆ ಜನರನ್ನು ಮೂಡಿಸುವ ಕೆಲಸವನ್ನು ಚೌಕಿದಾರ್ ಸಿನಿಮಾ ಮಾಡಲಿದೆ" ಎನ್ನುತ್ತಾರೆ ಚಿತ್ರದ ಹೀರೋ ಪೃಥ್ವಿ ಅಂಬಾರ್.
ಚೌಕಿದಾರ್ ಸಿನಿಮಾ ಮೂಲಕ ಚಂದ್ರಶೇಖರ್ ಬಂಡಿಯಪ್ಪ ಕಾಡುವ ಕಥೆಯನ್ನು ಹೇಳಲು ಹೊರಟಿದ್ದಾರೆ. ಅಪ್ಪ ಮಗನ ಬಾಂಧವ್ಯವನ್ನು ಈ ಚಿತ್ರದಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಚೌಕಿದಾರ್ನಲ್ಲಿ, ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ಹಿರಿಯ ನಟ ಸಾಯಿ ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚೈತ್ರದ ಪ್ರೇಮಾಂಜಲಿ ಚಿತ್ರದ ನಾಯಕಿ ಶ್ವೇತಾ, ಸುಧಾರಾಣಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ, ಧರ್ಮ ಸೇರಿದಂತೆ ಮುಂತಾದವರು ನಟಿಸಿದ್ದಾರೆ.
ವಿಎಸ್ ಎಂಟರ್ಟೈನ್ಮೆಂಟ್ ಬ್ಯಾನರ್ನಡಿ ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡಿರುವ ಈ ಸಿನಿಮಾಕ್ಕೆ ನಿರ್ಮಾಣದಲ್ಲಿ ವಿದ್ಯಾದೇವಿ ಸಾಥ್ ಕೊಟ್ಟಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣವಿದೆ.
ಟ್ರೇಲರ್ ಬಿಡುಗಡೆ ಬಳಿಕ ಪೊಲೀಸ್ ಇನ್ಸ್ ಪೆಕ್ಟರ್ ರಾಘವೇಂದ್ರ ಗೌಡ, "ದೇಶವನ್ನು ಸೈನಿಕರು ಗಡಿಯಲ್ಲಿ ಕಾಯುತ್ತಾರೆ. ಅದೇ ರೀತಿ ಒಳ ಭಾಗದಲ್ಲಿ ಪೊಲೀಸರು ಕಾಯುತ್ತಾರೆ. ಕುಟುಂಬವನ್ನು ತಂದೆ ಎಂಬ ಚೌಕಿದಾರ್ ಕಾಯುತ್ತಾರೆ. ಅಂತಹ ಒಳ್ಳೆ ವಿಷಯ ಇಟ್ಕೊಂಡು ಸಿನಿಮಾ ಮಾಡಿದ್ದಾರೆ. ಟ್ರೇಲರ್ ನೋಡಿದಾಗ ತಂದೆ ತಾಯಿ ನೆನಪು ಬಂದರು. ನಾವು ಕೆಲಸದ ಒತ್ತಡದಲ್ಲಿ ತಂದೆ ತಾಯಿಯನ್ನು ಮರೆತುಬಿಡುತ್ತೇವೆ. ಅವರು ಇಲ್ಲದಾಗ ಅವರ ಪ್ರೀತಿ ಗೊತ್ತಾಗುತ್ತದೆ. ಚೌಕಿದಾರ್ ಇಡೀ ತಂಡಕ್ಕೆ ಒಳ್ಳೆದಾಗಲಿ" ಎಂದು ಹೇಳಿದರು.