ಸ್ಯಾಂಡಲ್‌ವುಡ್‌ನಲ್ಲಿ ʻಸ್ಟಾರ್ʼ ಆಗಲು ಬಂದ ʻಪ್ಯಾಟೆ ಮಂದಿ ಕಾಡಿಗ್ ಬಂದ್ರುʼ ವಿನ್ನರ್ ಶರತ್
ಶರತ್ ಪ್ರಕಾಶ್ ಅವರು ಸ್ಟಾರ್ ಸಿನಿಮಾದ ಮೂಲದ ಸ್ಯಾಂಡಲ್‌ವುಡ್‌ನಲ್ಲಿ ನಾಯಕನಾಗಿ ಮಿಂಚಲು ಸಜ್ಜಾಗಿದ್ದಾರೆ. 'ಪ್ಯಾಟೆ ಮಂದಿ ಕಾಡಿಗ್ ಬಂದ್ರು' ಸೀಸನ್ 2ರ ವಿಜೇತರಾದ ಇವರು, ಈ ಚಿತ್ರವನ್ನು ಸ್ವತಃ ನಿರ್ಮಿಸಿ ನಟಿಸಿದ್ದಾರೆ. ಬೆಂಗಳೂರಿನ ಸ್ಲಂಗಳಲ್ಲಿ ನಡೆಯುವ ನೈಜ ಘಟನೆಗಳ ಆಧಾರಿತ ರೌಡಿಸಂ ಕಥೆಯ ಜೊತೆಗೆ ತಂದೆ-ಮಗಳ ಬಾಂಧವ್ಯದ ಸೆಂಟಿಮೆಂಟ್ ಅನ್ನು ನಿರ್ದೇಶಕ ವಿಜಯಸೂರ್ಯ ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರಂತೆ.
-
ಬಣ್ಣದ ಲೋಕಕ್ಕೆ ಎಂಟ್ರಿಕೊಡಬೇಕು, ಸ್ಟಾರ್ ಆಗಬೇಕು ಅನ್ನೋದು ಎಲ್ಲಾ ಕಲಾವಿದರ ಆಸೆ, ಕನಸು ಆಗಿರುತ್ತದೆ. ಸದ್ಯ ಇಲ್ಲೊಂದು ತಂಡ ʻಸ್ಟಾರ್ʼ ಹೆಸರಿನಲ್ಲೇ ಒಂದು ಸಿನಿಮಾ ಮಾಡಿದೆ. ಈಚೆಗೆ ಇದರ ಟ್ರೇಲರ್ ರಿಲೀಸ್ ಆಗಿದ್ದು, ಅದನ್ನು ಸೆಕ್ಯುರಿಟಿ ಗಾರ್ಡ್ ಕೈಯಿಂದ ರಿಲೀಶ್ ಮಾಡಿಸಿದ್ದು ವಿಶೇಷ. ಈ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಂಡಿರುವುದು ʻಪ್ಯಾಟೆ ಮಂದಿ ಕಾಡಿಗ್ ಬಂದ್ರುʼ ಸೀಸನ್ 2ರ ವಿನ್ನರ್ ಆಗಿರುವ ಶರತ್ ಪ್ರಕಾಶ್.
ಹೀರೋನೇ ಈ ಸಿನಿಮಾಗೆ ನಿರ್ಮಾಪಕ
ಲಯನ್ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಸ್ಟಾರ್' ಚಿತ್ರಕ್ಕೆ 'ಭೂಮಿಗೆ ಹತ್ರ' ಎಂಬ ಅರ್ಥಪೂರ್ಣ ಅಡಿಬರಹವಿದೆ. ವಿಶೇಷವೆಂದರೆ, ಈ ಚಿತ್ರದ ಮೂಲಕ ಶರತ್ ಪ್ರಕಾಶ್ ಅವರು ನಿರ್ಮಾಪಕರಾಗಿರುವುದರ ಜೊತೆಗೆ ನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುವ ಜವಾಬ್ದಾರಿಯನ್ನು ವಿಜಯಸೂರ್ಯ ಹೊತ್ತಿದ್ದಾರೆ.
Kiran Raj: ಹೊಸ ಸೀರಿಯಲ್ ಬೆನ್ನಲ್ಲೇ ಹೊಸ ಸಿನಿಮಾ ಅನೌನ್ಸ್ ಮಾಡಿದ ಕಿರಣ್ ರಾಜ್
ಚಿತ್ರದ ತಾರಾಗಣದಲ್ಲಿ ನಾಯಕ ಶರತ್ ಪ್ರಕಾಶ್ ಅವರಿಗೆ ರಜತ ರಕ್ಷ ನಾಯಕಿಯಾಗಿ ಸಾಥ್ ನೀಡಿದ್ದು, ಉಳಿದಂತೆ ಹಲವು ರಂಗಭೂಮಿ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಮೂರು ಹಾಡುಗಳಿಗೆ ವಿಕಾಸ್ ವಸಿಷ್ಠ ಸಂಗೀತ ಸಂಯೋಜನೆ ಮಾಡಿದ್ದಾರೆ. ತಾಂತ್ರಿಕ ವರ್ಗದಲ್ಲಿ ಎಪಿಎಸ್‌ಕೆ ಅವರ ಛಾಯಾಗ್ರಹಣ, ವಿನು ಮನಸು ಅವರ ಹಿನ್ನೆಲೆ ಸಂಗೀತ ಮತ್ತು ಶಶಿಧರ್ ಪಿ. ಅವರ ಸಂಕಲನವಿದೆ.
ನಮ್ಮ ತಂದೆ ರಾಜ್ ಸಿನಿಮಾಗಳಲ್ಲಿ ಫೈಟರ್
"ನಮ್ಮ ತಂದೆ ಪ್ರಕಾಶ್ ಅವರು ಡಾ. ರಾಜ್‌ಕುಮಾರ್ ಕಾಲದಿಂದಲೂ ಸಿನಿಮಾಗಳಲ್ಲಿ ಫೈಟರ್ ಆಗಿ ಕಾಣಿಸಿಕೊಂಡಿದ್ದರು. ಪ್ಯಾಟೆ ಮಂದಿ ಕಾಡಿಗ್ ಬಂದ್ರುʼ ಸೀಸನ್ 2ರಲ್ಲಿ ವಿನ್ನರ್ ಆದಮೇಲೆ ನನಗೆ ಹಲವು ಸಿನಿಮಾ ಅವಕಾಶಗಳು ಬಂದವು. ಇಲ್ಲಿಯವರೆಗೂ ಸುಮಾರು 25ಕ್ಕೂ ಅಧಿಕ ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ. ಆದರೆ ನನಗೆ ಬ್ರೇಕ್ ಸಿಕ್ಕಿಲ್ಲ. ನಿರ್ದೇಶಕರು ಹೇಳಿದ ಒನ್ ಲೈನ್ ಇಷ್ಟವಾಯಿತು. ರೌಡಿಸಂ ಅಲ್ಲದೆ, ತಂದೆ ಮಗಳ ಬಾಂಧವ್ಯ, ತಾಯಿ ಸೆಂಟಿಮೆಂಟ್, ಪ್ರೀತಿ ಇವೆಲ್ಲವೂ ಕೂಡಿಕೊಂಡು ನೋಡುಗರಿಗೆ, ಇದು ಮನರಂಜನೆ ನೀಡಲಿದೆ" ಎನ್ನುತ್ತಾರೆ ನಟ ಮತ್ತು ನಿರ್ಮಾಪಕ ಶರತ್ ಪ್ರಕಾಶ್.
""ಗ್ಯಾಂಗ್‌ಗಳ ನಡುವಿನ ಸಂಘರ್ಷ, ಹೊಡೆದಾಟ ಮತ್ತು ಒಂದಷ್ಟು ಆಟಗಳ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ಈ ಸವಾಲುಗಳನ್ನು ನಾಯಕ ಹೇಗೆ ಎದುರಿಸುತ್ತಾನೆ ಎಂಬುದೇ ಕುತೂಹಲ. ಇಲ್ಲಿನ ಪ್ರತಿಯೊಂದು ಸನ್ನಿವೇಶವೂ ನಮ್ಮದೇ ಏರಿಯಾದಲ್ಲಿ ನಡೆದ ನೈಜ ಘಟನೆಗಳಂತೆ ಭಾಸವಾಗುತ್ತವೆ. ಅಷ್ಟೊಂದು ನೈಜವಾಗಿ ಬೆಂಗಳೂರಿನ ಸ್ಲಂಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಯಕನಿಗೆ 'ಸ್ಟಾರ್' ಎಂಬ ಹೆಸರು ಬರಲು ಕಾರಣವೇನು ಎಂಬ ಗುಟ್ಟು ಸಿನಿಮಾ ನೋಡಿದರೇ ತಿಳಿಯಲಿದೆ. ವೈಯಕ್ತಿಕ ಮತ್ತು ವೃತ್ತಿಪರ ಕಾರಣಗಳಿಂದ ರೌಡಿಸಂ ಹೇಗೆ ಹುಟ್ಟಿಕೊಳ್ಳುತ್ತದೆ ಎಂಬುದನ್ನು ಇಲ್ಲಿ ತೋರಿಸಲಾಗಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ರಂಗಭೂಮಿ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ" ಎಂದು ನಿರ್ದೇಶಕ ವಿಜಯ್ ಸೂರ್ಯ ಮಾಹಿತಿ ನೀಡಿದರು.
ಹೀರೋ ರೌಡಿ ಆಗಿದ್ದರೂ, ನನ್ನ ಮುಂದೆ ಬೆಣ್ಣೆಯಂತೆ ಕರಗುವ ಆತನ ನಡವಳಿಕೆ ಎದುರಾಳಿಗೆ ಅಸ್ತ್ರವಾದಾಗ ಮುಂದೇನು ಆಗಲಿದೆ ಎಂಬುದೇ ಕೌತುಕ. ನನ್ನ ಮೂಲಕ ಕಥೆಗೆ ಮಹತ್ವದ ತಿರುವು ಸಿಗಲಿದೆ. ಊಹಿಸಲಾಗದಂತಹ ಟ್ವಿಸ್ಟ್‌ಗಳು ಬರುತ್ತದೆ" ಎನ್ನುತ್ತಾರೆ ನಾಯಕಿ ರಜತಾ ರಕ್ಷ.