‘ಅಮ್ಮನ ಕೂಗು ದೇವರ ಕೂಗಿಗಿಂತ ಎತ್ತರ, ನನ್ನ ಬದುಕಲ್ಲಿ ನಾನು ಕ್ಷಮಿಸಿಕೊಳ್ಳಲಾಗದ ತಪ್ಪು ಮಾಡಿಬಿಟ್ಟೆ’; ತಾಯಿಯನ್ನು ನೆನೆದು ಜಗ್ಗೇಶ್ ಭಾವುಕ!
ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್ ತಮ್ಮ ತಾಯಿಯ ಎಐ ಫೋಟೋ ನೋಡಿ ಅತ್ಯಂತ ಭಾವುಕರಾಗಿದ್ದಾರೆ. 1995ರಲ್ಲಿ ತಮ್ಮ ತಾಯಿ ನಿಧನರಾಗುವ ಮುನ್ನ "ನಿನ್ನ ತೊಡೆಯ ಮೇಲೆ ಮಲಗಬೇಕು, ಒಬ್ಬಟ್ಟು ತಿನ್ನಿಸಬೇಕು" ಎಂದು ಬಯಸಿದ್ದಾಗ, ಶೂಟಿಂಗ್ ಬ್ಯುಸಿಯಿಂದಾಗಿ ಹೋಗಲಾಗದಿದ್ದಕ್ಕೆ ಜಗ್ಗೇಶ್ ತೀವ್ರ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.
-
ರಾಜ್ಯಸಭಾ ಸದಸ್ಯ, ʻನವರಸ ನಾಯಕʼ ಜಗ್ಗೇಶ್ ಅವರು ಆಗಾಗ ತಮ್ಮ ತಾಯಿ ಬರೆದುಕೊಳ್ಳುತ್ತಿರುತ್ತಾರೆ. ಅಮ್ಮ ಎಂದರೆ, ಅವರಿಗೆ ಅಪಾರ ಪ್ರೀತಿ, ಗೌರವ. ಅಮ್ಮನ ಬಗ್ಗೆ ಮಾತನಾಡಿದರೆ ಭಾವುಕರಾಗುವ ಜಗ್ಗೇಶ್ ಒಂದು ಅಪರೂಪದ ಘಟನೆಯನ್ನು ಹಂಚಿಕೊಂಡಿದ್ದಾರೆ. ಆತ್ಮೀಯರೊಬ್ಬರು ತಾಯಿ ಜೊತೆಗೆ ಜಗ್ಗೇಶ್ ಇರುವ ಒಂದು ಎಐ ಫೋಟೋ ರಚಿಸಿಕೊಟ್ಟಿದ್ದು, ಅದನ್ನು ಪೋಸ್ಟ್ ಮಾಡಿಕೊಂಡಿರುವ ಜಗ್ಗೇಶ್ ಮನದಾಳದ ಮಾತುಗಳನ್ನು ಬರೆದುಕೊಂಡಿದ್ದಾರೆ.
29ನೇ ವಯಸ್ಸಿನಲ್ಲೇ ಅಮ್ಮನನ್ನು ಕಳೆದುಕೊಂಡ ನತದೃಷ್ಟ ನಾನು
"ನನ್ನ ಆತ್ಮೀಯ ಸಹೋದರ ಮೇಘರಾಜ್, ನೀವು ನನ್ನನ್ನು ಅಳಿಸಿಬಿಟ್ಟಿರಿ... ನನ್ನ ಅಮ್ಮನ ಜೊತೆ ಈ ರೀತಿ ಫೋಟೋ ತೆಗೆಸಿಕೊಳ್ಳುವ ಭಾಗ್ಯವನ್ನು 29ನೇ ವಯಸ್ಸಿನಲ್ಲೇ ಕಳೆದುಕೊಂಡ ನತದೃಷ್ಟ ನಾನು! ಅಮ್ಮನಿಗೆ ಹೇಳಬೇಕೆಂದಿದ್ದ ನನ್ನ ಎಷ್ಟೋ ಆಸೆಗಳು ಕನಸಾಗಿಯೇ ಉಳಿದುಹೋದವು. ತನ್ನ ಮಗನ ಸರ್ವಸ್ವವನ್ನೂ ಅರಿತು ಸಾಂತ್ವನ ಹೇಳುವ ಏಕೈಕ ದೇವರೆಂದರೆ ಅದು 'ಅಮ್ಮ'.. ಅಮ್ಮನಿಲ್ಲದ ಜಗತ್ತಿನಲ್ಲಿ ಬದುಕು ಎಂದರೆ, ಪರದೆಯ ಮೇಲೆ ಚಿತ್ರವೇ ಮೂಡದಿದ್ದರೂ ಸುಮ್ಮನೆ ಕೂತು ನೋಡುವ ಖಾಲಿ ಪರದೆಯ ಮುಂದಿನ ಪ್ರೇಕ್ಷಕನಂತೆ" ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.
ಅಮ್ಮನಿಗೆ ಸಾವಿನ ಮುನ್ಸೂಚನೆ ಸಿಕ್ಕಿತ್ತೇನೋ
"ನಾನು ಯಾರಲ್ಲಿಯೂ ಹೇಳಿಕೊಳ್ಳದ ಸತ್ಯವನ್ನು ಈ ಚಿತ್ರ ನೋಡಿದಾಗ ಹೇಳಬೇಕು ಎನಿಸಿತು. 1995ರಲ್ಲಿ ಟೈಗರ್ ಪ್ರಭಾಕರ್ ಅವರ ಜೊತೆ ರಾತ್ರಿ-ಹಗಲು ‘ಅರ್ಜುನ್ ಅಭಿಮನ್ಯು’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದೆ. ಆಗ ಅಮ್ಮನಿಗೆ ಸಾವಿನ ಮುನ್ಸೂಚನೆ ಸಿಕ್ಕಿತ್ತೇನೋ... ನಾನು ಅಮ್ಮನನ್ನು ಭೇಟಿಯಾಗಿ 15 ದಿನಗಳಾಗಿದ್ದವು. ಆಗ ಅಮ್ಮ ನನ್ನ ಭಾವಮೈದುನ ರಂಗನಾಥನ ಬಳಿ, 'ರಂಗ, ಈಶನನ್ನು (ಜಗ್ಗೇಶ್) ಕರೆಸು, ನಾನು ಅವನನ್ನು ನೋಡಬೇಕು. ಅವನಿಗೆ ಇಷ್ಟವಾದ ಒಬ್ಬಟ್ಟು ಮಾಡಿ ತಿನ್ನಿಸಬೇಕು. ಅವನ ತೊಡೆಯ ಮೇಲೆ ಮಲಗಬೇಕು' ಎಂದಿದ್ದರಂತೆ. ರಂಗ ಈ ವಿಷಯವನ್ನು ನನಗೆ ತಿಳಿಸಿದ. ಆದರೆ ನತದೃಷ್ಟ ನಾನು, 'ಎರಡು ದಿನ ಬಿಟ್ಟು ಬರುತ್ತೇನೆ. ಈಗ ಕೇಳಿದರೆ ಪ್ರಭಾಕರ್ ಬಿಡುವುದಿಲ್ಲ, ನಿರ್ಮಾಪಕರ ಒತ್ತಡವೂ ಇದೆ' ಎಂದುಬಿಟ್ಟೆ" ಅಂತ ಜಗ್ಗೇಶ್ ಬರೆದುಕೊಂಡಿದ್ದಾರೆ.
ನಟ ಜಗ್ಗೇಶ್ ಅವರು ಹಂಚಿಕೊಂಡ ಪೋಸ್ಟ್
ಅಮ್ಮ ಬಾರದ ಲೋಕಕ್ಕೆ ನಿರ್ಗಮಿಸಿದ್ದಳು
"ಅದೇ ದಿನ ಸಂಜೆ 6:45ಕ್ಕೆ ನನಗೆ ಕೆಟ್ಟ ನಿದ್ರೆ ಆವರಿಸಿತು. ಪರಿಮಳ ಪಕ್ಕದಲ್ಲೇ ಕುಳಿತು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಳು. ಆಗ ಅಮ್ಮ ನನ್ನನ್ನು ದಾಟಿ ಹೋದಂತಾಯಿತು! ತಕ್ಷಣ ಎದ್ದು ನಿಂತೆ. ಪರಿಮಳ 'ಏನಾಯಿತು?' ಎಂದು ಕೇಳಿದಳು. ಆಗ ನನ್ನ ಬಾಯಿಂದ ಬಂದ ಮಾತು, 'ಅಮ್ಮ ಹೊರಟುಹೋದಳು' ಎಂಬುದು. ಸಮಯ ನೋಡಿದರೆ, ಸರಿಯಾಗಿ 6:48ಕ್ಕೆ ಅಮ್ಮ ಬಾರದ ಲೋಕಕ್ಕೆ ನಿರ್ಗಮಿಸಿದ್ದಳು" ಎಂದು ಜಗ್ಗೇಶ್ ತಿಳಿಸಿದ್ದಾರೆ.
Actor Jaggesh: ಕೆಟ್ಟ ಅಭ್ಯಾಸ ಬಿಟ್ಟುಬಿಡಿ! ಶ್ರೀಕೃಷ್ಣನ ಸಂದೇಶ ಹಂಚಿಕೊಂಡ ಜಗ್ಗೇಶ್
ಏಕಾಂತದಲ್ಲಿ ಒಬ್ಬನೇ ಕುಳಿತು ಅಳುತ್ತೇನೆ
"ಇಂದಿಗೂ ನನ್ನ ಬದುಕಿನಲ್ಲಿ 'ನಾನು ಕ್ಷಮಿಸಿಕೊಳ್ಳಲಾಗದ ತಪ್ಪು ಮಾಡಿಬಿಟ್ಟೆ' ಎಂದು ನನ್ನ ಮನಸ್ಸು ಕೊರಗುತ್ತದೆ. ಈ 64ನೇ ವಯಸ್ಸಿನಲ್ಲೂ 'ನನಗೆ ನನ್ನ ಅಮ್ಮ ಬೇಕು' ಎಂದು ಏಕಾಂತದಲ್ಲಿ ಒಬ್ಬನೇ ಕುಳಿತು ಅಳುತ್ತೇನೆ... ಓ ನನ್ನ ಮುದ್ದಿನ ಯುವ ಮಿತ್ರರೇ, ನಿಮ್ಮ ಅಮ್ಮ 'ಮಗು' ಎಂದು ಕೂಗಿದರೂ ಅಥವಾ ಕರೆ ಮಾಡಿದರೂ, ತಕ್ಷಣ ಓಡಿಹೋಗಿ ಅವರ ಬಳಿ ಇದ್ದುಬಿಡಿ. ಅಮ್ಮನ ಕೂಗು ದೇವರ ಕೂಗಿಗಿಂತಲೂ ಎತ್ತರದ್ದು. ತಾಯಿಗಿಂತ ಮಿಗಿಲಾದ ದೇವರಿಲ್ಲ..." ಎಂದು ಜಗ್ಗೇಶ್ ಹೇಳಿದ್ದಾರೆ.