ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಂದು ‘ಟಾಕ್ಸಿಕ್‌’ ನೋಡಿ ತೆಗಳಿಕೆ, ಈಗ ‘ರಾಮಾಯಣ’ ಕಂಡು ಹೊಗಳಿಕೆ; ಯಶ್‌ ಅಭಿನಯಕ್ಕೆ ರಾಮ್‌ ಗೋಪಾಲ್‌ ವರ್ಮಾ ಫಿದಾ!

Ramayana Part 1 Movie: ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಅವರು ʻರಾಮಾಯಣʼ ಚಿತ್ರ ವಿಮರ್ಶೆ ಮಾಡಿದ್ದು, ನಟ ಯಶ್‌ ಅವರ ಅಭಿನಯಕ್ಕೆ ಮನಸೋತಿದ್ದಾರೆ. ಹಾಗೆಯೇ, ಈ ಚಿತ್ರದ ಬಗ್ಗೆ ನೆಗೆಟಿವ್‌ ರಿವ್ಯೂ ಮಾಡೋರನ್ನು ಬೀದಿ ನಾಯಿಗಳು ಎಂದು ಕರೆದಿದ್ದಾರೆ.

ʻರಾಮಾಯಣʼ ಚಿತ್ರದಲ್ಲಿನ ಯಶ್‌ ನಟನೆಗೆ ರಾಮ್‌ ಗೋಪಾಲ್‌ ವರ್ಮಾ ಫಿದಾ!

-

Avinash GR
Avinash GR Nov 9, 2026 7:24 PM

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾಕ್ಕೆ ಭಾರತೀಯ ಚಿತ್ರರಂಗದಾದ್ಯಂತ ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಸಾಲಿಗೆ ಈಗ ಖ್ಯಾತ ಹಾಗೂ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಸೇರ್ಪಡೆಗೊಂಡಿದ್ದು, ಚಿತ್ರದ ಕುರಿತು ವಿವರವಾದ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ ನಟ ಯಶ್ ಅಭಿನಯದ ‘ಟಾಕ್ಸಿಕ್‌’ ಸಿನಿಮಾ ತೆರೆಕಂಡ ಸಂದರ್ಭದಲ್ಲಿ, ಚಿತ್ರದ ಕುರಿತು ಸಾಕಷ್ಟು ನಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿ ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ವರ್ಮಾ, ಇದೀಗ ‘ರಾಮಾಯಣ’ದಲ್ಲಿ ರಾವಣನಾಗಿ ಅಬ್ಬರಿಸಿರುವ ʻರಾಕಿಂಗ್ ಸ್ಟಾರ್ʼ ಯಶ್ ಹಾಗೂ ಇಡೀ ಚಿತ್ರತಂಡದ ಕೆಲಸವನ್ನು ಮನಸಾರೆ ಶ್ಲಾಘಿಸಿದ್ದಾರೆ.

ಅದೊಂದು ಭಕ್ತಿಯ ಪರಾಕಾಷ್ಠೆಯ ಶಕ್ತಿ

‘ರಾಮಾಯಣ’ ಚಿತ್ರವು ಸಾಂಪ್ರದಾಯಿಕ ಭಕ್ತಿಪ್ರಧಾನ ಸಿನಿಮಾಗಳ ಚೌಕಟ್ಟನ್ನು ಮೀರಿದ ಒಂದು ಶಕ್ತಿಶಾಲಿ ಸಿನಿಮಾ ಅನುಭವ ಎಂದು ರಾಮ್ ಗೋಪಾಲ್ ವರ್ಮಾ ಬಣ್ಣಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಚಿತ್ರದ ಕುರಿತು ಬರೆದುಕೊಂಡಿರುವ ಅವರು, “ರಾಮಾಯಣ ಕೇವಲ ಒಂದು ಭಕ್ತಿಪ್ರಧಾನ ಚಿತ್ರವಲ್ಲ, ಅದೊಂದು ಭಕ್ತಿಯ ಪರಾಕಾಷ್ಠೆಯ ಶಕ್ತಿ. ಇಲ್ಲಿ ನಾಯಕ ಕಥೆಯ ಮೇಲೆ ತೇಲುವ ನೀಲಿ ಬಣ್ಣದ ದೇವರಲ್ಲ. ಬದಲಿಗೆ ಜಗತ್ತಿನ ಅಂತ್ಯವನ್ನು ಮೊದಲೇ ಕಣ್ಮುಂದೆ ಕಂಡಿದ್ದರೂ, ಸ್ವಇಚ್ಛೆಯಿಂದಲೇ ಆ ಧರ್ಮದ ಹಾದಿಯಲ್ಲಿ ಮುನ್ನಡೆಯಲು ನಿರ್ಧರಿಸಿದ ಒಬ್ಬ ಮಾನವ" ಎಂದು ಕೊಂಡಾಡಿದ್ದಾರೆ.

"ಇಲ್ಲಿ ಕಾಣಿಸುವುದು ಕೇವಲ ಒಂದು ಸಾಮ್ರಾಜ್ಯದ ಉದಯವಲ್ಲ, ಬದಲಿಗೆ ದೌರ್ಬಲ್ಯವನ್ನೇ ಸವಾಲಾಗಿ ಸ್ವೀಕರಿಸುವ ಮಾನಸಿಕತೆಯ ಉನ್ನತಿ. ಪ್ರತಿಯೊಂದು ಫ್ರೇಮ್ ಕೂಡ ಹಳೆಯ ನಿಯಮಗಳನ್ನು ಸುಟ್ಟುಹಾಕಿ, ಕೇವಲ ಶಕ್ತಿಯ ತರ್ಕದ ಆಧಾರದ ಮೇಲೆ ಮುನ್ನಡೆಯುವ ವ್ಯಕ್ತಿಯೊಬ್ಬನ ತೂಕವನ್ನು ಹೊತ್ತಿದೆ. ಇಲ್ಲಿನ ಹಿಂಸೆ ಕೇವಲ ಕಣ್ಣಿಗೆ ರಾಚುವ ದೃಶ್ಯ ವೈಭವವಲ್ಲ, ಅದು ಆ ಸನ್ನಿವೇಶಗಳ ಪರಿಣಾಮಗಳ ಸ್ಪಷ್ಟತೆ" ಎಂದು ವಿವರಿಸಿದ್ದಾರೆ.

ಪ್ರಭು ಶ್ರೀರಾಮನಾಗಿ ರಣಬೀರ್ ಉತ್ತಮ ನಟನೆ

ವಿಶೇಷವಾಗಿ ಸೀತಾಪಹರಣದ ನಂತರದ ದೃಶ್ಯದಲ್ಲಿ ಪ್ರಭು ಶ್ರೀರಾಮನಾಗಿ ರಣಬೀರ್ ಕಪೂರ್ ಅವರ ನಟನೆಯನ್ನು ವರ್ಮಾ ಪ್ರತ್ಯೇಕವಾಗಿ ಶ್ಲಾಘಿಸಿದ್ದಾರೆ. "ಸೀತಾಪಹರಣದ ನಂತರದ ಸನ್ನಿವೇಶದಲ್ಲಿ ರಣಬೀರ್, ಖಾಲಿಯಾದ ಆಶ್ರಮದಲ್ಲಿ ನಿಂತು ಸೀತೆ ಇದ್ದ ಜಾಗವನ್ನು ದಿಟ್ಟಿಸುವಾಗ, ಅವರ ಕಣ್ಣಲ್ಲಿರುವ ಆ ತೀವ್ರ ದುಃಖವು ಈಗಾಗಲೇ ಲೆಕ್ಕಾಚಾರವಾಗಿ ಬದಲಾಗಿರುವುದನ್ನು ತೋರಿಸಲು ಕ್ಯಾಮೆರಾವನ್ನು ಸಾಕಷ್ಟು ಹೊತ್ತು ಅವರ ಮುಖದ ಮೇಲೆಯೇ ನಿಲ್ಲಿಸಲಾಗಿದೆ" ಎಂದು ನಿರ್ದೇಶನದ ತಂತ್ರಜ್ಞಾನ ಹಾಗೂ ನಟನೆಯ ಸೂಕ್ಷ್ಮತೆಯನ್ನು ಮೆಚ್ಚಿಕೊಂಡಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ‘ರಾಮಾಯಣ’ Vs ‘ಧುರಂಧರ್’ ದಾಖಲೆಗಳ ಸೆಣೆಸಾಟ; ರಣವೀರ್ ಸಿಂಗ್ ಸಿನಿಮಾವನ್ನು ಹಿಂದಿಕ್ಕುತ್ತಾರಾ ರಣಬೀರ್, ಯಶ್?

ಯಶ್‌ ನಟನೆಗೆ ಆರ್‌ಜಿವಿ ಮನಸಾರೆ ಹೊಗಳಿಕೆ

ಇನ್ನು ಲಂಕೇಶ ರಾವಣನ ಪಾತ್ರದಲ್ಲಿ ಅಬ್ಬರಿಸಿರುವ ಯಶ್ ಅಭಿನಯದ ಕುರಿತು ಮಾತನಾಡುತ್ತಾ, “ಯಶ್ ಇಲ್ಲಿ ಕೇವಲ ಒಬ್ಬ ಸಾಮಾನ್ಯ ಎದುರಾಳಿಯಾಗಿ ಕಾಣಿಸಿಕೊಂಡಿಲ್ಲ. ನಾಶಮಾಡಲು ನಿರ್ಧರಿಸಿದ್ದನ್ನು ಈಗಾಗಲೇ ಒಪ್ಪಿಕೊಂಡಿರುವ ಪ್ರಬಲ ಮನಸ್ಥಿತಿಯಾಗಿ ಅವರು ನಟಿಸಿದ್ದಾರೆ. ಅವರು ಎಂದಿಗೂ ಧ್ವನಿ ಏರಿಸುವುದಿಲ್ಲ" ಎಂದು ಯಶ್ ಅವರ ಗಾಂಭೀರ್ಯದ ನಟನೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.

ರಾಮ್‌ ಗೋಪಾಲ್‌ ವರ್ಮಾ ಟ್ವೀಟ್‌



ಜಟಾಯು ಪಾತ್ರದಲ್ಲಿ ನಟಿಸಿದ ಅನುಪಮ್ ಖೇರ್ ಅವರ ಭಾವನಾತ್ಮಕ ಅಭಿನಯವನ್ನು ಕೊಂಡಾಡಿದ ವರ್ಮಾ, ಆ ಕಾಳಗವು ಕೇವಲ ನಿಷ್ಠೆಯ ಪ್ರದರ್ಶನವಲ್ಲ ಎಂದು ಬರೆದಿದ್ದಾರೆ. “ಜಟಾಯು ಅರ್ಧ ಮುರಿದ, ರಕ್ತಸಿಕ್ತವಾದ ರೆಕ್ಕೆಗಳೊಂದಿಗೆ ಮುನ್ನುಗ್ಗುವುದನ್ನು ನೋಡಿದರೆ ದೇಹ ಹೇಳುತ್ತಿರುವುದನ್ನು ಮನಸ್ಸು ಇನ್ನೂ ಒಪ್ಪಿಕೊಳ್ಳದಿರುವುದೇ ಅದಕ್ಕೆ ಕಾರಣ ಎನಿಸುತ್ತದೆ. ಆತ ಕೆಳಗೆ ಬಿದ್ದಾಗ, ಕ್ಯಾಮೆರಾ ಆತನ ಮುಖದ ಮೇಲೆಯೇ ಇರುತ್ತದೆ. ಅಲ್ಲಿ ಯಾವುದೇ ಚೀರಾಟವಿಲ್ಲ, ರೆಕ್ಕೆಗಳ ಬಡಿತ ನಿಂತ ಮೇಲೂ ಕಣ್ಣುಗಳ ಹಿಂದೆ ನಡೆಯುವ ಕೊನೆಯ ವಾದವಷ್ಟೇ ಉಳಿದಿರುತ್ತದೆ. ಅದು ಕೇವಲ ತ್ಯಾಗವಲ್ಲ" ಎಂದು ಆ ಸನ್ನಿವೇಶದ ಭಾವತೀವ್ರತೆಯನ್ನು ಹಂಚಿಕೊಂಡಿದ್ದಾರೆ.

ನೆಗೆಟಿವ್‌ ಮಾಡೋರನ್ನು ಬೀದಿನಾಯಿಯಂತೆ ನೋಡಿ

ತಮ್ಮ ಸುದೀರ್ಘ ವಿಮರ್ಶೆಯನ್ನು ಮುಕ್ತಾಯಗೊಳಿಸುತ್ತಾ ಚಿತ್ರದ ವಿರೋಧಿಗಳಿಗೆ ಖಡಕ್ ಸಂದೇಶ ರವಾನಿಸಿರುವ ವರ್ಮಾ, “ಒಟ್ಟಾರೆಯಾಗಿ, ಈ ಅದ್ಭುತ ಚಿತ್ರವನ್ನು ರೂಪಿಸಲು ಶ್ರಮಿಸಿದ ಪ್ರತಿಯೊಬ್ಬ ದಿಗ್ಗಜರಿಗೂ ನಾನು ಇದನ್ನೇ ಹೇಳಲು ಬಯಸುತ್ತೇನೆ, ಈ ಅದ್ಭುತ ವಿಸ್ಮಯವನ್ನು ಸೃಷ್ಟಿಸಲು ನೀವು ಹಾಕಿರುವ ಆನೆಯಂತಹ ಬೃಹತ್ ಪರಿಶ್ರಮದ ಮುಂದೆ, ಈ ಚಿತ್ರದ ಬಗ್ಗೆ ಬರುವ ಯಾವುದೇ ನಕಾರಾತ್ಮಕ ವಿಮರ್ಶೆಗಳನ್ನು ಬೊಗಳುವ ಬೀದಿ ನಾಯಿಗಳಂತೆ ಪರಿಗಣಿಸಿ" ಎಂದು ಸಲಹೆ ನೀಡಿದ್ದಾರೆ.

ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ರವಿ ದುಬೆ, ರಕುಲ್ ಪ್ರೀತ್ ಸಿಂಗ್, ಲಾರಾ ದತ್ತಾ ಮತ್ತು ಅರುಣ್ ಗೋವಿಲ್ ಸೇರಿದಂತೆ ಭಾರತೀಯ ಚಿತ್ರರಂಗದ ತಾರಾಗಣವಿರುವ ‘ರಾಮಾಯಣ: ಭಾಗ 1’ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ಎರಡನೇ ಭಾಗವು 2028 ರಲ್ಲಿ ತೆರೆಕಾಣಲು ಸಜ್ಜಾಗುತ್ತಿದೆ.