'ಧುರಂಧರ್ 2' ಚಿತ್ರದ ಮೊದಲ ಹಾಡು ರಿಲೀಸ್; ಮೋಡಿ ಮಾಡ್ತಿದೆ ಪಂಜಾಬಿ ಶೈಲಿಯ ʻಆರಿ ಆರಿʼ ಸಾಂಗ್, ಜಾದೂ ಮಾಡಿದ ಬಾಂಬೆ ರಾಕರ್ಸ್
ರಣವೀರ್ ಸಿಂಗ್ ನಟನೆಯ 'ಧುರಂಧರ್: ದಿ ರಿವೇಂಜ್' ಚಿತ್ರದ ಮೊದಲ ಹಾಡು 'ಆರಿ ಆರಿ' ಗುರುವಾರ (ಮಾ.12) ಬಿಡುಗಡೆಯಾಗಿದ್ದು, ಪಂಜಾಬಿ ಶೈಲಿಯ ಸಂಗೀತದಿಂದ ಎಲ್ಲರ ಗಮನ ಸೆಳೆಯುತ್ತಿದೆ. ಶಾಶ್ವತ್ ಸಚದೇವ್ ಸಂಗೀತ ನೀಡಿದ್ದು, ಜನಪ್ರಿಯ 'ಬಾಂಬೆ ರಾಕರ್ಸ್' ತಂಡವು ಈ ಹಾಡಿಗೆ ಕೆಲಸ ಮಾಡಿದೆ.
-
ರಣವೀರ್ ಸಿಂಗ್ ನಟನೆಯ 'ಧುರಂಧರ್: ದಿ ರಿವೇಂಜ್' ಸಿನಿಮಾವು ಮಾರ್ಚ್ 19ರಂದು ಗ್ರ್ಯಾಂಡ್ ಆಗಿ ತೆರೆಗೆ ಬರುತ್ತಿದೆ. ಈಗಾಗಲೇ ಪೇಯ್ಡ್ ಪ್ರೀಮಿಯರ್ ಶೋಗಳ ಟಿಕೆಟ್‌ಗಳು ಕೂಡ ಬಿಸಿ ದೋಸೆಯಂತೆ ಸೇಲ್ ಆಗುತ್ತಿದ್ದು, ಮೊದಲ ದಿನವೇ ಭರ್ಜರಿ ಕಮಾಯಿ ಆಗುವ ಎಲ್ಲಾ ಲಕ್ಷಣಗಳು ಗೋಚರವಾಗಿವೆ. ಅಂದಹಾಗೆ, ಈ ಚಿತ್ರದ ಮೊದಲ ಹಾಡನ್ನು ರಿಲೀಸ್ ಮಾಡಲಾಗಿದ್ದು, ಸಿನಿಪ್ರಿಯರಿಂದ ಮೆಚ್ಚುಗೆ ಪಡೆದುಕೊಂಡಿದೆ.
ಹಾಡುಗಳು ಮೇಲಿದೆ ದೊಡ್ಡ ನಿರೀಕ್ಷೆ
ʻಧುರಂಧರ್ 1ʼ ಚಿತ್ರದ ಹಾಡುಗಳು ಭಾರಿ ಹಿಟ್ ಆಗಿದ್ದವು. ಶಾಶ್ವತ್ ಸಚದೇವ್ ಸಂಗೀತ ಸಂಯೋಜನೆಯ ಎಲ್ಲಾ ಹಾಡುಗಳು ದೊಡ್ಡ ಹಿಟ್ ಆಗಿದ್ದವು. ಹಾಗಾಗಿ, ʻಧುರಂಧರ್ 2ʼ ಹಾಡುಗಳ ಬಗ್ಗೆಯೂ ನಿರೀಕ್ಷೆ ಜೋರಾಗಿತ್ತು. ಇದೀಗ ಅದಕ್ಕೆ ಉತ್ತರವಾಗಿ ʻಆರಿ ಆರಿ..ʼ ಹಾಡು ರಿಲೀಸ್ ಆಗಿದೆ. ಗುರುವಾರ (ಮಾರ್ಚ್ 12) ಈ ಹಾಡು ಬಿಡುಗಡೆಯಾಗಿದ್ದು, ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಮತ್ತೊಮ್ಮೆ ಹಾಡುಗಳ ಮೂಲಕ ಮೋಡಿ ಮಾಡುವ ಸೂಚನೆಯನ್ನು ಶಾಶ್ವತ್ ಸಚದೇವ್ ನೀಡಿದ್ದಾರೆ.
ಈ ಹಾಡಿಗೆ ಕೆಲಸ ಮಾಡಿದ ಬಾಂಬೆ ರಾಕರ್ಸ್
ವಿಶೇಷವೆಂದರೆ, ಈ ಹಾಡಿಗೆ ಬಾಂಬೆ ರಾಕರ್ಸ್ ತಂಡ ಕೆಲಸ ಮಾಡಿದೆ. ಭಾರತೀಯ ಪಾಪ್ ಸಂಗೀತ (Indi-pop) ಲೋಕದಲ್ಲಿ ದೊಡ್ಡ ಕ್ರಾಂತಿ ಮಾಡಿದ ತಂಡವು ಹಲವು ಯಶಸ್ವಿ ಗೀತೆಗಳನ್ನು ಕೊಟ್ಟಿದೆ. ಬಾಂಬೆ ರಾಕರ್ಸ್ ಪ್ರಸಿದ್ಧಿಯಾಗಿದ್ದೇ ವಿಭಿನ್ನ ಶೈಲಿಯಿಂದ. ಪಂಜಾಬಿ ಸಾಹಿತ್ಯಕ್ಕೆ ಪಾಶ್ಚಾತ್ಯ Hip-Hop, R&B ಮತ್ತು ಹೌಸ್ ಮ್ಯೂಸಿಕ್ ಅನ್ನು ಮಿಕ್ಸ್ ಮಾಡಿ ಹಾಡುಗಳನ್ನು ಸಂಯೋಜನೆ ಮಾಡುವುದು ಇವರ ಸ್ಪೆಷಾಲಿಟಿ. ಇದೀಗ ಈ ತಂಡ 'ಆರಿ ಆರಿ' ಹಾಡಿಗೆ ಕೆಲಸ ಮಾಡಿದೆ. ಆರಿ ಆರಿ ಹಾಡು ಮೊದಲು ಸೃಷ್ಟಿಯಾಗಿದ್ದೇ ಬಾಂಬೆ ರಾಕರ್ಸ್ ತಂಡದಿಂದ. ಇದೀಗ ಅದನ್ನು ಧುರಂಧರ್ 2 ಸಿನಿಮಾಗೆ ಬಳಕೆ ಮಾಡಿಕೊಳ್ಳಲಾಗಿದೆ.
Dhurandhar OTT: ಬ್ಯಾನ್ ಆದ್ರೂ ಪಾಕಿಸ್ತಾನದಲ್ಲಿ ನೆಟ್‌ಫ್ಲಿಕ್ಸ್ ಟ್ರೆಂಡಿಂಗ್‌ನಲ್ಲಿ ಧುರಂಧರ್ ನಂಬರ್ 1!
ಈ ಹೊಸ ವರ್ಷನ್‌ನ 'ಆರಿ ಆರಿ' ಹಾಡು ಸಮಕಾಲೀನ ಸಂಗೀತ ಮತ್ತು ಪಂಜಾಬಿ ಶೈಲಿಯ ಸಮ್ಮಿಶ್ರಣವಾಗಿದ್ದು, ಇದರಲ್ಲಿ ನವತೇಜ್ ಸಿಂಗ್ ರೆಹಾಲ್ (ಬಾಂಬೆ ರಾಕರ್ಸ್), ಖಾನ್ ಸಾಬ್, ಜಾಸ್ಮಿನ್ ಸ್ಯಾಂಡ್ಲಾಸ್ ಮತ್ತು ಸುಧೀರ್ ಯದುವಂಶಿ ಧ್ವನಿ ನೀಡಿದ್ದಾರೆ. ರೆಬೆಲ್ ಮತ್ತು ಟೋಕನ್ ಅವರು ರಾಪ್ ಭಾಗವನ್ನು ಬರೆದು ಹಾಡಿದ್ದಾರೆ. ಇರ್ಷಾದ್ ಕಾಮಿಲ್ ಮತ್ತು ಬಾಂಬೆ ರಾಕರ್ಸ್ ತಂಡ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.
ಅಂದಹಾಗೆ, ʻಧುರಂಧರ್ 2ʼ ಸಿನಿಮಾ ಮಾರ್ಚ್ 19ರಂದು ತೆರೆಗೆ ಬರಲಿದ್ದು, ಮೊದಲ ಭಾಗವು ಎಲ್ಲಿಗೆ ಅಂತ್ಯಗೊಂಡಿತ್ತೋ ಅಲ್ಲಿಂದಲೇ ಈ ಕಥೆ ಮುಂದುವರಿಯಲಿದೆ. ಕರಾಚಿಯ ಲಿಯಾರಿಯ ಹೊಸ ರಾಜನಾಗಿ ಹಮ್ಜಾ ಹೇಗೆ ಉದಯಿಸುತ್ತಾನೆ ಮತ್ತು ಪಾಕಿಸ್ತಾನದ ಅಪರಾಧ ಹಾಗೂ ರಾಜಕೀಯ ಲೋಕದಲ್ಲಿ ತನ್ನ ಸ್ಥಾನವನ್ನು ಹೇಗೆ ಗಟ್ಟಿಗೊಳಿಸುತ್ತಾನೆ ಎಂಬ ಕಥೆಯನ್ನು ಈ ಚಿತ್ರ ಮುಂದುವರಿಸಲಿದೆ.