ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Theertharoopa Thandeyavarige Review: ಬದುಕಿನ ಹುಡುಕಾಟದಲ್ಲಿ ಬಹಿರಂಗವಾಗುವ ಅಂತರಂಗದ ಸತ್ಯಗಳು!

Theertharoopa Thandeyavarige Movie Review: ತಂದೆಯ ಅಸ್ತಿತ್ವವನ್ನು ಹುಡುಕುವ ಒಬ್ಬ ಟ್ರಾವೆಲ್ ವ್ಲಾಗರ್‌ನ ಭಾವುಕ ಕಥೆಯನ್ನು ಒಳಗೊಂಡ ತೀರ್ಥರೂಪ ತಂದೆಯವರಿಗೆ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಅವರು ಹೇಗಿದೆ? ಯಾವ ರೀತಿಯ ಜಾನರ್‌ನ ಸಿನಿಮಾ ಇದು? ಇಲ್ಲಿದೆ ಸಿನಿಮಾ ವಿಮರ್ಶೆ, ಓದಿ.

'ತೀರ್ಥರೂಪ ತಂದೆಯವರಿಗೆ' ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

-

Avinash GR
Avinash GR Dec 31, 2025 5:16 PM

Movie: ತೀರ್ಥರೂಪ ತಂದೆಯವರಿಗೆ
Release Date: ಜನವರಿ 1, 2026
Language: ಕನ್ನಡ
Genre: ಡ್ರಾಮಾ
Director: ರಾಮೇನಹಳ್ಳಿ ಜಗನ್ನಾಥ
Cast: ನಿಹಾರ್ ಮುಕೇಶ್, ರಚನಾ ಇಂದರ್, ಸಿತಾರಾ, ರಾಜೇಶ್ ನಟರಂಗ, ರವೀಂದ್ರ ವಿಜಯ್, ಅಶ್ವಿತಾ ಆರ್. ಹೆಗಡೆ, ಶ್ರೀವತ್ಸ, ಶ್ರವಣ್‌,
Duration: 148 ನಿಮಿಷ
Rating: 3.5/5

ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಅವರು ಕನ್ನಡಿಗರಿಗೆ ಪರಿಚಯವಾಗಿದ್ದು ʻಹೊಂದಿಸಿ ಬರೆಯಿರಿʼ ಸಿನಿಮಾದ ಮೂಲಕ. ಹಲವು ಪಾತ್ರಗಳೊಂದಿಗೆ ಒಂದು ಭಾವನಾತ್ಮಕ ಕಥೆಯನ್ನು ತೀವ್ರತೆಯಿಂದ ಕಟ್ಟಿಕೊಟ್ಟಿದ್ದರು ಜಗನ್ನಾಥ. ʻಹೊಂದಿಸಿ ಬರೆಯಿರಿʼ ಚಿತ್ರಕ್ಕೆ ನೋಡುಗರಿಂದ ಮೆಚ್ಚುಗೆಯೂ ಸಿಕ್ಕಿತ್ತು. ಈ ಬಾರಿ ಕೌಟುಂಬಿಕ ಹಿನ್ನೆಲೆಯ ʻತೀರ್ಥರೂಪ ತಂದೆಯವರಿಗೆʼ ಸಿನಿಮಾವನ್ನು ಪ್ರೇಕ್ಷಕರ ಎದುರು ಇಟ್ಟಿದ್ದಾರೆ ಜಗನ್ನಾಥ.

ಇದು ಸಂಚಾರಿಯೊಬ್ಬನ ಹುಡುಕಾಟದ ಹಾದಿ

ಶೀರ್ಷಿಕೆ ನೋಡಿದ ಯಾರಿಗೇ ಆದರೂ ತಕ್ಷಣಕ್ಕೆ ಗೊತ್ತಾಗುವುದು ಏನೆಂದರೆ, ಇದೊಂದು ತಂದೆ ಕುರಿತ ಕಥೆ ಎಂಬುದು. ಹೌದು, ಅದು ಸತ್ಯ. ಈ ಚಿತ್ರದಲ್ಲಿ ತಂದೆ ಅನ್ನೋ ಪಾತ್ರ ಬಹಳ ಮುಖ್ಯವಾಗುತ್ತದೆ. ಇಡೀ ಚಿತ್ರದ ಕಥೆ ಸಾಗುವುದು ತಂದೆ ಪಾತ್ರದ ಸುತ್ತವೇ. ಆದರೆ ತಂದೆ ಎಂದರೆ ಯಾರು? ಜನ್ಮಕೊಟ್ಟವನು ಮಾತ್ರ ತಂದೆಯೇ? ಅಥವಾ ತಂದೆಯ ಜವಾಬ್ದಾರಿಯನ್ನು ಅರಿತು ಅನದನು ಮುಂದು ನಿಂತು ಮಾಡುವವರು ತಂದೆಯೋ? ಬಹಳ ಪದರಗಳುಳ್ಳ ಈ ಕಥೆಯನ್ನು ಆಯ್ಕೆ ಮಾಡಿಕೊಂಡು, ಅದಕ್ಕೊಂದು ತಂಗಾಳಿಯಂತಹ, ಅಲ್ಲಲ್ಲಿ ಬಿರುಗಾಳಿಯಂತಹ ಚಿತ್ರಕಥೆಯನ್ನು ಬರೆದುಕೊಂಡು ತೆರೆಗಿಳಿಸಿದ್ದಾರೆ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ.

ಬಹಳ ದಿನಗಳ ನಂತರ ಸ್ಯಾಂಡಲ್‌ವುಡ್‌ಗೆ ಮರಳಿದ ಹಿರಿಯ ನಟಿ ಸಿತಾರಾ; ತೀರ್ಥರೂಪ ತಂದೆಯವರಿಗೆ ಟ್ರೇಲರ್ ರಿಲೀಸ್

ತಾಯಿ ಜಾನಕಿ (ಸಿತಾರಾ) ಜೊತೆ ಇರುವ ಪೃಥ್ವಿ (ನಿಹಾರ್ ಮುಕೇಶ್) ಪೃಥ್ವಿ ಒಬ್ಬ ಟ್ರಾವೆಲ್ ವ್ಲಾಗ್ಗರ್. ಸೋಶಿಯಲ್‌ ಮೀಡಿಯಾದಲ್ಲಿ ತುಂಬಾ ಫೇಮಸ್. ತಂದೆ ಬಗ್ಗೆ ಮಾಹಿತಿ ಇಲ್ಲ. ಅವರೆಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಅವರೇಕೆ ನಮ್ಮಿಂದ ದೂರವಿದ್ದಾರೆ? ಇದ್ಯಾವುದಕ್ಕೂ ಅವನ ಬಳಿ ಉತ್ತರವಿಲ್ಲ. ತಾಯಿ ಜಾನಕಿ ಕೂಡ ಮಗನಿಗೆ ಜವಾಬು ನೀಡುತ್ತಿಲ್ಲ. ಇದು ತಾಯಿ ಮೇಲೆ ಪೃಥ್ವಿಗೆ ಅಸಹನೆ ಮೂಡಲು ಮುಖ್ಯ ಕಾರಣ. ವ್ಲಾಗ್ಗರ್ ಆಗಿ ಪಟಪಟನೇ ಮಾತಾಡುವ ಆತ ತಾಯಿ ಜೊತೆ ಒಂದೆರಡು ಮಾತುಗಳನ್ನು ಕೂಡ ಅಳೆದು ತೂಗಿ ಮಾತಾಡುತ್ತಾನೆ. ಆದರೂ ಮಗನ ಮೇಲೆ ಜಾನಕಿಗೆ ಅಪಾರ ಪ್ರೀತಿ. ಇತ್ತ ತಂದೆ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ಪರಿಸ್ಥಿತಿ ಬಂದಾಗ, ಕೊನೆಗೆ ತಾನೇ ತಂದೆಯ ಹುಡುಕಾಟವನ್ನು ಪೃಥ್ವಿ ಆರಂಭಿಸುತ್ತಾನೆ. ಆಗ ತನ್ನದೇ ಕುಟುಂಬದಲ್ಲಾದ ಅನೇಕ ವಿಚಾರಗಳು ಬಯಲಿಗೆ ಬರುತ್ತವೆ. ಅದನ್ನೆಲ್ಲಾ ಆತ ಹೇಗೆ ಸ್ವೀಕರಿಸುತ್ತಾನೆ? ಮನೆಯಿಂದ ದೂರವಾದ ತಂದೆ ಪುನಃ ಸಿಗುತ್ತಾರಾ? ಅನ್ನೋ ರೋಚಕ ಎಲಿಮೆಂಟ್‌ ಅನ್ನು ಇಟ್ಟುಕೊಂಡು, ಅದಕ್ಕೆ ಭಾವನಾತ್ಮಕತೆಯ ಲೇಪನ ಹಚ್ಚಿ ಹೇಳುತ್ತಾ ಸಾಗುತ್ತಾರೆ ಜಗನ್ನಾಥ.

ನಿರ್ದೇಶನ, ಮೇಕಿಂಗ್‌ ಹೇಗಿದೆ?

ಜಗನ್ನಾಥ ಯಾವುದೇ ಕಮರ್ಷಿಯಲ್‌ ಎಲಿಮಿಮೆಂಟ್‌ಗಳಿಗೆ ಗಂಟು ಬೀಳದೆ, ತಾವು ಅಂದುಕೊಂಡ ಕಥೆಯನ್ನು ಯಾವುದೇ ಅವಸರವಿಲ್ಲದೇ, ನೀಟಾಗಿ ಪ್ರೆಸೆಂಟ್‌ ಮಾಡುತ್ತಾ ಹೋಗಿದ್ದಾರೆ. ಅದು ಕೆಲವೊಮ್ಮೆ ಸಿನಿಮಾ ಅವಧಿ ಹೆಚ್ಚಾಗುವುದಕ್ಕೂ ಕಾರಣವಾಯ್ತೇನೋ ಎನಿಸುತ್ತದೆ. ಆರಂಭದಲ್ಲಿ ಬರುವ ಒಂದಷ್ಟು ಫ್ರೆಂಡ್ಸ್‌ ಗ್ಯಾಂಗ್‌ನ ಸೀನ್‌ಗಳು ಅಷ್ಟೇನೂ ಗಮನಸೆಳೆಯುವುದಿಲ್ಲವಾದರೂ, ನಂತರ ಸಿನಿಮಾ ತೆಗೆದುಕೊಳ್ಳವು ತಿರುವು ಪ್ರೇಕ್ಷಕರನ್ನ ಗಾಢವಾಗಿ ಸೆಳೆದುಕೊಂಡುಬಿಡುತ್ತದೆ. ಕೊನೆಯವರೆಗೂ ಮುಂದೇನಾಗಬಹುದು ಎಂಬ ಕುತೂಹಲದೊಂದಿಗೆ ಸಿನಿಮಾ ಸಾಗುತ್ತದೆ. ಕಮರ್ಷಿಯಲ್‌ ಮಾಸ್‌ ಸಿನಿಮಾಗಳ ಹೊಡಿ ಬಡಿ ಮಧ್ಯೆ ತಣ್ಣನೆಯ ಕೌಟುಂಬಿಕ ಕಥನವೊಂದನ್ನು ಸುಂದರವಾಗಿ ತೆರೆಮೇಲೆ ತರುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಮೇಕಿಂಗ್‌ಗಿಂತ ಪಾತ್ರಗಳ ಭಾವನೆಗಳಿಗೆ ಹೆಚ್ಚು ಗಮನ ನೀಡಿದ್ದಾರೆ. ಕೊನೆಯಲ್ಲಿ ಕೆಲ ಗೊಂದಲಗಳು ಉಳಿದುಕೊಳ್ಳುತ್ತವೆ. ಅದನ್ನು ನಿವಾರಿಸುವ ಅವಕಾಶ ಇತ್ತು. ಮಧ್ಯಂತರದಲ್ಲಿ ಬರುವ ಬಹುಮುಖ್ಯ ಪಾತ್ರಕ್ಕೆ ಅಲ್ಲಿಯೇ ಅಂತ್ಯ ಹಾಡಲಾಗಿರುತ್ತದೆ. ಆದರೂ ಅದು ಸಿನಿಮಾದ ಕೊನೆಯಲ್ಲಿ ಪ್ರತ್ಯಕ್ಷವಾಗುತ್ತದೆ. ಅದು ಹೇಗೆ ಎಂಬ ಬಗ್ಗೆ ಸಣ್ಣದಾಗಿ ತೋರಿಸಬಹುದಿತ್ತು.

ಈ ಚಿತ್ರದಲ್ಲಿ ಪತ್ರಕರ್ತರ ಪ್ರಭಾವ ಮತ್ತು ಜವಾಬ್ದಾರಿಯನ್ನು ನೆನಪಿಸುವಂತಹ ಕೆಲಸ ಮಾಡಲಾಗಿದೆ. ಜೊತೆಗೆ ಬಹಳ ವರ್ಷಗಳ ಹಿಂದೆ ನಡೆದ ಒಂದು ನೈಜ ಘಟನೆಯನ್ನು ಪುನಃ ನೆನಪಿಸುವಂತಹ ದೃಶ್ಯವೂ ಇದೆ. ಅದು ಕಥೆಗೆ ಬಹಳ ಪೂರಕವಾಗಿದೆ. ಜೋ ಕೋಸ್ಟಾ ಅವರ ಹಿನ್ನೆಲೆ ಸಂಗೀತ ಈ ಚಿತ್ರದ ಮುಖ್ಯ ಜೀವಾಳ. ಹಾಡುಗಳು ಕೂಡ ಸಿನಿಮಾದ ಆಶಯಕ್ಕೆ ಹೊಂದಿಕೊಂಡಿವೆ. ದೀಪಕ್ ಯರಗೆರಾ ಅವರ ಛಾಯಾಗ್ರಹಣ ಅದ್ಭುತವಾಗಿದೆ. ಇದೊಂದು ಟ್ರಾವೆಲ್‌ ಸಿನಿಮಾ ಆಗಿರುವುದರಿಂದ ಹಲವು ಸುಂದರವಾದ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.,

ಗಮನಸೆಳೆಯುವ ರವೀಂದ್ರ ವಿಜಯ್‌

ಈಗಾಗಲೇ ಬಹುಭಾಷೆಯಲ್ಲಿ ಫೇಮಸ್‌ ಆಗಿರುವ ನಟ ರವೀಂದ್ರ ವಿಜಯ್‌ ಅವರು ಈ ಚಿತ್ರದಲ್ಲಿ ಶಿವಶಂಕರ್‌ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೆರೆಮೇಲೆ ಅವರ ಪಾತ್ರ ಹೆಚ್ಚು ಇರದೇ ಇದ್ದರೂ, ಚಿತ್ರಮಂದಿರದ ಆಚೆಗೂ ಅವರು ಕಾಡುತ್ತಾರೆ. ಅಷ್ಟೊಂದು ಭಾವತೀವ್ರತೆಯೊಂದಿಗೆ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಟಿ ಸಿತಾರಾ ಬಹಳ ದಿನಗಳ ನಂತರ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಮೌನದಲ್ಲೇ ಹೆಚ್ಚು ಕಾಡುತ್ತಾರೆ. ಹೊಸ ಪ್ರತಿಭೆ ನಿಹಾರ್ ಮುಕೇಶ್‌ ನಟನೆ ಉತ್ತಮವಾಗಿದೆ. ಎಮೋಷನಲ್‌ ಸೀನ್‌ಗಳಲ್ಲಿ ಅವರು ಹೆಚ್ಚು ಇಷ್ಟವಾಗುತ್ತಾರೆ. ಅಕ್ಷರಾ ಪಾತ್ರಕ್ಕೆ ರಚನಾ ಇಂದರ್ ಒಪ್ಪಿದ್ದಾರೆ. ಅಜಿತ್‌ ಹಂದೆ ಮತ್ತು ರಾಜೇಶ್‌ ನಟರಂಗ ಅವರ ಪಾತ್ರಗಳು ಕಥೆಗೆ ಬಹುಮುಖ್ಯವಾಗಿವೆ.

ಒಟ್ಟಾರೆಯಾಗಿ, ಸಿನಿಮಾವು ಸರಳ, ಸುಂದರ, ಭಾವನಾತ್ಮಕ ಮತ್ತು ಹೃದಯಸ್ಪರ್ಶಿಯಾಗಿದೆ. ಅಲ್ಲಲ್ಲಿ ಬರುವ ಸಣ್ಣ ಪುಟ್ಟ ನ್ಯೂನತೆಗಳನ್ನು ಕಡೆಗಣಿಸಿದರೆ ಪ್ರೇಕ್ಷಕರಿಗೆ ಇದೊಂದು ಫೀಲ್‌ ಗುಡ್‌ ಮೂವೀ.