ʻಕಾಂತಾರʼ ರೀತಿಯಲ್ಲೇ 2 ಪಾರ್ಟ್‌ಗಳಲ್ಲಿ ಬರಲಿದೆ ರಿಷಬ್ ಶೆಟ್ಟಿಯ ಹೊಸ ಸಿನಿಮಾ; ಇದರ ಬಜೆಟ್ 500 ಕೋಟಿ!
ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಅಭಿನಯದ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಸಿನಿಮಾ ಬರೋಬ್ಬರಿ 500 ಕೋಟಿ ರೂ. ಬಜೆಟ್‌ನಲ್ಲಿ ಎರಡು ಭಾಗಗಳಾಗಿ ನಿರ್ಮಾಣವಾಗಲಿದೆ. ಸಂದೀಪ್ ಸಿಂಗ್ ನಿರ್ದೇಶನದ ಈ ಐತಿಹಾಸಿಕ ಚಿತ್ರದ ಮೊದಲ ಭಾಗ 2028ರಲ್ಲಿ ಹಾಗೂ ಎರಡನೇ ಭಾಗ 2029ರಲ್ಲಿ ಬಿಡುಗಡೆಯಾಗಲಿದೆಯಂತೆ.
-
ʻಕಾಂತಾರ: ಚಾಪ್ಟರ್ 1ʼ ಸಿನಿಮಾದ ನಂತರ ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಜೈ ಹನುಮಾನ್ ಚಿತ್ರದ ಶೂಟಿಂಗ್‌ನಲ್ಲಿ ಮಗ್ನರಾಗಿದ್ದಾರೆ. ಇದರ ಮಧ್ಯೆ ಛತ್ರಪತಿ ಶಿವಾಜಿ ಮಹಾರಾಜ್ ಕುರಿತ ಸಿನಿಮಾವೊಂದನ್ನು ಅವರು ಅನೌನ್ಸ್ ಮಾಡಿದ್ದರು. 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಹೆಸರಿನ ಈ ಸಿನಿಮಾದ ಕುರಿತು ಇದೀಗ ಬಿಗ್ ನ್ಯೂಸ್‌ವೊಂದು ಹೊರಬಿದ್ದಿದೆ.
ಎರಡು ಭಾಗದಲ್ಲಿ ಬರಲಿದೆ ʻಶಿವಾಜಿ ಮಹಾರಾಜ್'
ಅದೇನಪ್ಪ ಅಂದರೆ, ಈ ಚಿತ್ರವು ಬರೋಬ್ಬರಿ 500 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಲಿದ್ದು, ಎರಡು ಪಾರ್ಟ್‌ಗಳಲ್ಲಿ ತೆರೆಗೆ ಬರಲಿದೆಯಂತೆ. ಸಂದೀಪ್ ಸಿಂಗ್ ನಿರ್ದೇಶಿಸಲಿರುವ ಈ ಚಿತ್ರವನ್ನು ಆರಂಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಮತ್ತು ಅವರ ಸಾಧನೆಗಳನ್ನು ಒಳಗೊಂಡ ಒಂದೇ ಸಿನಿಮಾವಾಗಿ ಘೋಷಿಸಲಾಗಿತ್ತು. ಆದರೆ, ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಶಿವಾಜಿ ಮಹಾರಾಜರ ಕಥೆಯ ವ್ಯಾಪ್ತಿಯನ್ನು ಸಂಪೂರ್ಣವಾಗಿ ತೆರೆಯ ಮೇಲೆ ತರಲು ಸಂದೀಪ್ ನಿರ್ಧರಿಸಿದ್ದು, ಈಗ ಅದನ್ನು ಎರಡು ಭಾಗದಲ್ಲಿ ಸಿನಿಮಾ ಮಾಡಲಿದ್ದಾರಂತೆ.
Rishab Shetty: ಐತಿಹಾಸಿಕ ಮೈಲಿಗಲ್ಲು; ದೀರ್ಘಾವಧಿ ಪ್ರಧಾನಿಯಾಗಿ ದಾಖಲೆ ಬರೆದ ಮೋದಿಗೆ ರಿಷಬ್ ಅಭಿನಂದನೆ
2028ರಲ್ಲಿ ಮೊದಲ ಭಾಗ ರಿಲೀಸ್
ಈ ಚಿತ್ರದ ಮೊದಲ ಭಾಗವನ್ನು 2028ರಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗುತ್ತಿದ್ದು, ಎರಡನೇ ಭಾಗವು 2029 ರಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ. ಶಿವಾಜಿ ಮಹಾರಾಜರ ಜೀವನದ ಮಹತ್ವದ ಘಟನೆಗಳು ನಡೆದ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲೇ ಈ ಸಿನಿಮಾದ ಪ್ರಮುಖ ಚಿತ್ರೀಕರಣ ನಡೆಯಲಿದೆ ಎಂದು ವರದಿಯಾಗಿದೆ. ಪ್ರಶಾಂತ್ ವರ್ಮ ನಿರ್ದೇಶನದ 'ಜೈ ಹನುಮಾನ್' ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಆ ಚಿತ್ರದ ಕೆಲಸ ಮುಗಿದ ನಂತರ ಈ ಐತಿಹಾಸಿಕ ಚಿತ್ರದ ಶೂಟಿಂಗ್ ಆರಂಭವಾಗುವ ನಿರೀಕ್ಷೆ ಇದೆ.
Rishab Shetty: ಹುಟ್ಟೂರು ಕೆರಾಡಿಯಲ್ಲಿ ಫಿಲ್ಮ್ಸಿಟಿ ನಿರ್ಮಿಸಿದ ರಿಷಬ್ ಶೆಟ್ಟಿ! ಡಿವೈನ್ ಸ್ಟಾರ್ ಕನಸು ನನಸು
'ಕಾಂತಾರ' ನಂತರ ಮತ್ತೊಂದು ಬಿಗ್ ಬಜೆಟ್ ಸಿನಿಮಾ
'ಕಾಂತಾರ' ಚಿತ್ರದ ಅಭೂತಪೂರ್ವ ಯಶಸ್ಸಿನ ಜೊತೆಗೆ ಅದರ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ನಂತರ ರಿಷಬ್ ಶೆಟ್ಟಿ, ಕಾಂತಾರ ಚಾಪ್ಟರ್ 1 ಮೂಲಕ ದೊಡ್ಡ ಗೆಲುವು ಪಡೆದುಕೊಂಡರು. ಈಗ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಮೂಲಕ ವೃತ್ತಿಜೀವನದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲಾಗುವಂತಹ ಸಿನಿಮಾ ಒಪ್ಪಿಕೊಂಡಿದ್ದಾರೆ.
ಹಿಂದಿಯಲ್ಲಿ ತಯಾರಾಗುವ ಈ ಸಿನಿಮಾವು ವಿವಿಧ ಭಾಷೆಗಳಿಗೆ ಡಬ್ ಆಗುವ ಸಾಧ್ಯತೆ ಇದೆ. ಸದ್ಯ 2026ರಲ್ಲಿ ರಿಷಬ್ ಶೆಟ್ಟಿ ಅವರ ಯಾವ ಸಿನಿಮಾವು ತೆರೆಗೆ ಬರುವುದಿಲ್ಲ. 2027ರಲ್ಲಿ ಜೈ ಹನುಮಾನ್ ತೆರೆಗೆ ಬರಲಿದ್ದು, 2028ರಲ್ಲಿ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ತೆರೆಗೆ ಬರಲಿದೆ.