Pavithra Bandhana Serial: 'ಪವಿತ್ರ ಬಂಧನ’ದಲ್ಲಿ ಬದಲಾದ ನಮ್ರತಾ ಪಾತ್ರಧಾರಿ; ರುಹಾನಿ ಶೆಟ್ಟಿ ಗುಡ್ ಬೈ!
Pavithra Bandhana Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಪವಿತ್ರ ಬಂಧನ’ದಲ್ಲಿ ಮಹತ್ವದ ಬದಲಾವಣೆಯಾಗಿದೆ. ಧಾರಾವಾಹಿಯ ನಮ್ರತಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ರುಹಾನಿ ಶೆಟ್ಟಿ ಇದೀಗ ಪಾತ್ರದಿಂದ ಹೊರಬಂದಿದ್ದಾರೆ. ಅವರ ಬದಲಿಗೆ ಯಾವ ನಟಿ ಎಂಟ್ರಿ ಕೊಟ್ಟಿದ್ದಾರೆ? ತಿಳಿಯಲು ಮುಂದೆ ಓದಿ.
ಪವಿತ್ರ ಬಂಧನ -
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಪವಿತ್ರ ಬಂಧನ’ದಲ್ಲಿ ಮಹತ್ವದ ಬದಲಾವಣೆಯಾಗಿದೆ. ಧಾರಾವಾಹಿಯ ನಮ್ರತಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ರುಹಾನಿ ಶೆಟ್ಟಿ ಇದೀಗ ಪಾತ್ರದಿಂದ ಹೊರಬಂದಿದ್ದಾರೆ. ಅವರ ಬದಲಿಗೆ ಯಾವ ನಟಿ ಎಂಟ್ರಿ ಕೊಟ್ಟಿದ್ದಾರೆ? ತಿಳಿಯಲು ಮುಂದೆ ಓದಿ.
‘ನಿನ್ನ ಜೊತೆ ನನ್ನ ಕಥೆ’ ಧಾರಾವಾಹಿಯ ಮೂಲಕ ಗುರುತಿಸಿಕೊಂಡಿರುವ ನಟಿ ಲಿಖಿತಾ ಎಂಟ್ರಿ ಕೊಟ್ಟಿದ್ದಾರೆ. ಇನ್ಮುಂದೆ ನಮ್ರತಾ ಪಾತ್ರಕ್ಕೆ ಲಿಖಿತಾ ಬಣ್ಣ ಹಚ್ಚಲಿದ್ದಾರೆ. ಆದರೆ ಈ ಬದಲಾವಣೆಯನ್ನು ಕೆಲವು ವೀಕ್ಷಕರು ಅಷ್ಟಾಗಿ ಸ್ವಾಗತಿಸಿಲ್ಲ. ನಮ್ರತಾ ಪಾತ್ರದಲ್ಲಿ ರುಹಾನಿ ಶೆಟ್ಟಿ ಅವರ ಅಭಿನಯವೇ ಚೆನ್ನಾಗಿತ್ತು. ಅವರೇ ಮುಂದುವರಿದಿದ್ದರೆ ಉತ್ತಮವಾಗಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಐಟಿ ಉದ್ಯೋಗಿ
ನಮ್ರತಾ ಪಾತ್ರಕ್ಕೆ ಹೊಸದಾಗಿ ಆಗಮಿಸಿರುವ ಲಿಖಿತಾ ಅವರ ಹಿನ್ನೆಲೆಯೂ ಕುತೂಹಲಕಾರಿಯಾಗಿದೆ. ಮೂಲತಃ ಕೊಡಗಿನ ವಿರಾಜಪೇಟೆಯವರಾದ ಇವರು ನಟಿಯಾಗುವ ಮೊದಲು ಐಟಿ ಉದ್ಯೋಗಿಯಾಗಿದ್ದರು. ವಿದ್ಯಾಭ್ಯಾಸ ಮುಗಿಸಿದ ಬಳಿಕ ಪ್ರತಿಷ್ಠಿತ ಆಕ್ಸೆಂಚರ್ ಕಂಪನಿಯಲ್ಲಿ ಸುಮಾರು ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದರು.
ಆದರೆ ಬಾಲ್ಯದಿಂದಲೂ ನಟನೆಯ ಬಗ್ಗೆ ಆಸಕ್ತಿ ಹೊಂದಿದ್ದ ಲಿಖಿತಾ ಅವರಿಗೆ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುವ ಆಸೆಯಿತ್ತು. ಹೀಗಾಗಿ ಉತ್ತಮ ಉದ್ಯೋಗವನ್ನೇ ತೊರೆದು ಕಿರುತೆರೆಯತ್ತ ಹೆಜ್ಜೆ ಇಟ್ಟರು.
ಸ್ನೇಹಿತರೊಬ್ಬರ ರೆಫರೆನ್ಸ್ ಮೂಲಕ ಅವರಿಗೆ ಮೊದಲ ಅವಕಾಶ ದೊರೆಯಿತು. ‘ಶ್ರೀದೇವಿ ಮಹಾತ್ಮೆ’ ಧಾರಾವಾಹಿಯಲ್ಲಿ ಪಾರ್ವತಿಯ ಗೆಳತಿಯ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಗೆ ಪರಿಚಿತರಾದರು.
ಇದನ್ನೂ ಓದಿ: Gowri Putra Serial: ಈ ಕಡೆ ತವರಿನ ಬಂಧ ಗಟ್ಟಿ, ಆ ಕಡೆ ಕಾರ್ತಿಕ್ನ ಮದುವೆ!
ವಿಲನ್ ಪಾತ್ರದ ಮೂಲಕ ಗಮನ ಸೆಳೆದಿದ್ದ ನಟಿ!
‘ಶ್ರೀದೇವಿ ಮಹಾತ್ಮೆ’ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಲಿಖಿತಾ ಅವರಿಗೆ ಮತ್ತೊಂದು ಅವಕಾಶ ಒದಗಿಬಂತು. ‘ನಿನ್ನ ಜೊತೆ ನನ್ನ ಕಥೆ’ ಧಾರಾವಾಹಿಯಲ್ಲಿ ವಿಲನ್ ಪಾತ್ರಕ್ಕಾಗಿ ಆಡಿಷನ್ ನಡೆಯುತ್ತಿತ್ತು. ಇದರಲ್ಲಿ ಆಯ್ಕೆಯಾದ ಅವರು ಮನಸ್ವಿನಿ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದರು.
ನಕಾರಾತ್ಮಕ ಪಾತ್ರದಲ್ಲಿಯೂ ತಮ್ಮ ಅಭಿನಯದ ಮೂಲಕ ಗುರುತಿಸಿಕೊಂಡಿದ್ದ ಲಿಖಿತಾ ಅವರಿಗೆ ಇದೀಗ ‘ಪವಿತ್ರ ಬಂಧನ’ದಲ್ಲಿ ನಮ್ರತಾ ಪಾತ್ರ ನಿರ್ವಹಿಸುವ ಅವಕಾಶ ಸಿಕ್ಕಿದೆ. ಹೊಸ ಪಾತ್ರದಲ್ಲಿ ಅವರು ಹೇಗೆ ಮೋಡಿ ಮಾಡಲಿದ್ದಾರೆ ಎಂಬ ಕುತೂಹಲ ಕಿರುತೆರೆ ಪ್ರೇಕ್ಷಕರಲ್ಲಿದೆ.
ಪವಿತ್ರಾ-ದೇವದತ್ ಬದುಕಿನಲ್ಲಿ ಪ್ರೀತಿಯ ಹೊಸ ಅಧ್ಯಾಯ!
‘ಪವಿತ್ರ ಬಂಧನ’ ಕೇವಲ ಪ್ರೇಮಕಥೆಯಲ್ಲ. ಸಂಬಂಧಗಳ ಸೂಕ್ಷ್ಮತೆ, ತ್ಯಾಗ, ಕುಟುಂಬದ ಜವಾಬ್ದಾರಿ ಹಾಗೂ ಭಾವನಾತ್ಮಕ ಸಂಘರ್ಷಗಳನ್ನು ಒಳಗೊಂಡಿರುವ ಕಥಾಹಂದರ ಹೊಂದಿದೆ. ಧಾರಾವಾಹಿಯಲ್ಲಿ ಸೂರಜ್ ಸಿಂಗ್ ದೇವದತ್ ದೇಶ್ಮುಖ್ ಪಾತ್ರದಲ್ಲಿ ಹಾಗೂ ‘ಬೃಂದಾವನ’ ಖ್ಯಾತಿಯ ಅಮೂಲ್ಯಾ ಭಾರದ್ವಾಜ್ ಪವಿತ್ರಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಸನ್ನಿವೇಶಗಳು ಪವಿತ್ರಾಳನ್ನು ದೇವದತ್ ಅವರನ್ನು ಮದುವೆಯಾಗುವ ಪರಿಸ್ಥಿತಿಗೆ ತಳ್ಳುತ್ತವೆ. ಪರಸ್ಪರ ಮನಸ್ಸನ್ನು ಸಂಪೂರ್ಣವಾಗಿ ಅರಿಯುವ ಮೊದಲೇ ದಾಂಪತ್ಯ ಜೀವನಕ್ಕೆ ಕಾಲಿಡುವ ಈ ಜೋಡಿಯ ಬದುಕಿನಲ್ಲಿ ಹಲವು ಗೊಂದಲಗಳು ಎದುರಾಗುತ್ತವೆ.
ಹಳೆಯ ಭಾವನೆಗಳು ಮತ್ತು ಹೊಸ ಸಂಬಂಧದ ನಡುವಿನ ಸಂಘರ್ಷದ ನಡುವೆಯೂ ಪವಿತ್ರಾ ಹಾಗೂ ದೇವದತ್ ನಡುವೆ ಪ್ರೀತಿ ನಿಧಾನವಾಗಿ ಚಿಗುರೊಡೆಯುತ್ತಿದೆ. ಇವರ ಸಂಬಂಧ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದೇ ಧಾರಾವಾಹಿಯ ಪ್ರಮುಖ ಕುತೂಹಲ.
ಇದನ್ನೂ ಓದಿ: Bigg Boss Kannada 13: ಕಳಪೆ ಆಯ್ಕೆಯಲ್ಲಿ ಮನೆಯವರ ಒಮ್ಮತ; ಈ ಮೂವರು ಜೈಲಿಗೆ, ಕಣ್ಣೀರಿಟ್ಟ ಗಾನವಿ!
ದೊಡ್ಡ ತಾರಾಬಳಗ
‘ಪವಿತ್ರ ಬಂಧನ’ ಧಾರಾವಾಹಿಯನ್ನು ಉತ್ತಮ್ ಮಧು ನಿರ್ದೇಶಿಸುತ್ತಿದ್ದಾರೆ. ಮಹೇಶ್ ಅವರೊಂದಿಗೆ ಸೇರಿ ಉತ್ತಮ್ ಮಧು ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಧಾರಾವಾಹಿಯಲ್ಲಿ ಸೂರಜ್ ಸಿಂಗ್ , ಅಮೂಲ್ಯಾ ಭಾರದ್ವಾಜ್ , ಅನುಷಾ ರಾವ್ , ವಿಜಯ್ ಕಾಶಿ ಹಾಗೂ ಅಂಬರೀಶ್ ಸಾರಂಗಿ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ. ಪ್ರತಿದಿನ ಸಂಜೆ 6.30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.