ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shah Rukh Khan: 'ಕಿಂಗ್' ಚಿತ್ರದ ಹೊಸ ಹಾಡಿನಲ್ಲಿ ಮತ್ತೆ ಕೇಸರಿ ಉಡುಪಿನಲ್ಲಿ ದೀಪಿಕಾ ಪಡುಕೋಣೆ; 'ಬೇಷರಮ್ ರಂಗ್' ವಿವಾದ ನೆನಪಿಸಿಕೊಂಡ ನೆಟ್ಟಿಗರು

ಶಾರುಖ್‌ ಖಾನ್‌ ಅಭಿನಯದ 'ಕಿಂಗ್' ಸಿನಿಮಾದ ರೊಮ್ಯಾಂಟಿಕ್‌ ಹಾಡು 'ತು ಮಿಲ್ ಜಾಯೆ' ಬಿಡುಗಡೆಯಾಗಿದ್ದು, ಅದರಲ್ಲಿ ದೀಪಿಕಾ ಪಡುಕೋಣೆ ಮತ್ತೊಮ್ಮೆ ಕೇಸರಿ ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ. ಇದು ಈ ಹಿಂದೆ 'ಪಠಾಣ್' ಚಿತ್ರದ 'ಬೇಷರಮ್ ರಂಗ್' ಸೃಷ್ಟಿಸಿದ್ದ ಭಾರಿ ವಿವಾದವನ್ನು ಮತ್ತೆ ನೆನಪು ಮಾಡಿದೆ.

King Movie Song Release: 'ಬೇಷರಮ್ ರಂಗ್' ವಿವಾದ ನೆನಪಿಸಿದ ದೀಪಿಕಾ!

-

Avinash GR
Avinash GR Nov 2, 2026 3:46 PM

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತೊಮ್ಮೆ ಕೇಸರಿ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ 'ಕಿಂಗ್' ಚಿತ್ರದ 'ತು ಮಿಲ್ ಜಾಯೆ' ಎಂಬ ರೋಮ್ಯಾಂಟಿಕ್ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದರಲ್ಲಿ ದೀಪಿಕಾ ಅವರ ಆಕರ್ಷಕ ಲುಕ್ ಗಮನ ಸೆಳೆದಿದೆ. ಹಾಡಿನ ದೃಶ್ಯ ವೈಭವ ಹಾಗೂ ರೊಮ್ಯಾನ್ಸ್ ಅನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿರುವ ಬೆನ್ನಲ್ಲೇ, ದೀಪಿಕಾ ಧರಿಸಿರುವ ಕೇಸರಿ ಬಣ್ಣದ ಉಡುಗೆ ಸೋಶಿಯಲ್‌ ಮೀಡಿಯಾದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಮತ್ತೆ ಕೇಸರಿ ಬಟ್ಟೆ ಧರಿಸಿದ ದೀಪಿಕಾ

ಶಾರುಖ್ ಖಾನ್ ಅವರ 61ನೇ ಹುಟ್ಟುಹಬ್ಬದ ಪ್ರಯುಕ್ತ ಈ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ಹಾಡು ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ದೀಪಿಕಾ ಅವರ ಉಡುಪಿನ ಬಣ್ಣವನ್ನು ನೆಟ್ಟಿಗರು ಗುರುತಿಸಿದ್ದಾರೆ. ಅದು 2023ರ ಬ್ಲಾಕ್‌ಬಸ್ಟರ್ 'ಪಠಾಣ್' ಚಿತ್ರದ 'ಬೇಷರಮ್ ರಂಗ್' ಹಾಡಿನಲ್ಲಿ ದೀಪಿಕಾ ಧರಿಸಿದ್ದ ಕೇಸರಿ ಬಿಕಿನಿ ಸೃಷ್ಟಿಸಿದ್ದ ಭಾರಿ ವಿವಾದವನ್ನು ನೆನಪಿಸಿದೆ. 'ಪಠಾಣ್' ಚಿತ್ರವನ್ನು ನಿರ್ದೇಶಿಸಿದ್ದ ಸಿದ್ಧಾರ್ಥ್ ಆನಂದ್ ಅವರೇ ʻಕಿಂಗ್‌ʼ ಚಿತ್ರಕ್ಕೂ ಸಾರಥ್ಯ ವಹಿಸಿರುವುದರಿಂದ, ಹಿಂದಿನ ಟ್ರೋಲ್‌ಗಳು ಮತ್ತು ವಿವಾದಕ್ಕೆ ಚಿತ್ರತಂಡ ಈ ಮೂಲಕ ಪರೋಕ್ಷವಾಗಿ ತಿರುಗೇಟು ನೀಡಿದೆಯೇ ಎಂಬ ಮಾತುಗಳು ಕೇಳಿಬರುತ್ತಿವೆ.

ವಿರೋಧಿಗಳಿಗೆ ತಿರುಗೇಟು?

ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಂತೆ ಭಿನ್ನ ಅಭಿಪ್ರಾಯಗಳು ಮತ್ತು ತಮಾಷೆಯ ಪೋಸ್ಟ್‌ಗಳು ಹರಿದಾಡುತ್ತಿವೆ. ಕೇಸರಿ ಉಡುಪಿನಲ್ಲಿರುವ ದೀಪಿಕಾ ಅವರ ಸ್ಕ್ರೀನ್‌ಶಾಟ್ ಹಂಚಿಕೊಂಡ ಬಳಕೆದಾರರೊಬ್ಬರು, "ಚಿತ್ರತಂಡ ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಿರುವಂತಿದೆ, ಇದು ನಿಜಕ್ಕೂ ತಮಾಷೆಯಾಗಿದೆ" ಎಂದು ಬರೆದುಕೊಂಡಿದ್ದರೆ, ಮತ್ತೊಬ್ಬರು "ಶಾರುಖ್ ಖಾನ್ ಹಳೆಯ ವಿರೋಧಿಗಳಿಗೆ ಟ್ರೋಲ್ ಮಾಡಿದ್ರಾ?" ಎಂದು ಪ್ರಶ್ನಿಸಿದ್ದಾರೆ. ಇನ್‌ಸ್ಟಾಗ್ರಾಮ್ ಹಾಗೂ ಟ್ವಿಟರ್ ವೇದಿಕೆಗಳಲ್ಲಿ "ದೀಪಿಕಾ ಮತ್ತೆ ಕೇಸರಿಯಲ್ಲಿ.. ವಿರೋಧಿಗಳಿಗೆ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ತುಣುಕುಗಳು ವೈರಲ್ ಆಗುತ್ತಿವೆ.

ಏನಿದು 'ಬೇಷರಮ್ ರಂಗ್' ವಿವಾದ?

2023ರಲ್ಲಿ ತೆರೆಕಂಡ 'ಪಠಾಣ್' ಚಿತ್ರದ 'ಬೇಷರಮ್ ರಂಗ್' ಹಾಡು ಬಿಡುಗಡೆಯಾದಾಗ ದೀಪಿಕಾ ಧರಿಸಿದ್ದ ಕೇಸರಿ ಬಣ್ಣದ ಬಿಕಿನಿ ಭಾರಿ ಸದ್ದು ಮಾಡಿತ್ತು. ಕೇಸರಿ ಬಣ್ಣವನ್ನು 'ನಾಚಿಕೆಯಿಲ್ಲದ ಬಣ್ಣ' ಎಂಬರ್ಥ ಬರುವ ಹಾಡಿನಲ್ಲಿ ಬಳಸಲಾಗಿದೆ ಎಂದು ಆರೋಪಿಸಿ ಹಲವು ಧಾರ್ಮಿಕ ಮತ್ತು ರಾಜಕೀಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು. ಮಧ್ಯಪ್ರದೇಶದ ಅಂದಿನ ಗೃಹ ಸಚಿವ ನರೋತ್ತಮ್ ಮಿಶ್ರಾ ಸೇರಿದಂತೆ ಹಲವರು ಹಾಡಿನ ದೃಶ್ಯಗಳನ್ನು ಬದಲಿಸದಿದ್ದರೆ ರಾಜ್ಯದಲ್ಲಿ ಚಿತ್ರವನ್ನು ನಿಷೇಧಿಸುವುದಾಗಿ ಎಚ್ಚರಿಕೆ ನೀಡಿದ್ದರು.

Sharukh Khan: ಶಾರುಖ್‌ ಖಾನ್-‌ ದೀಪಿಕಾ ಪಡುಕೋಣೆ ವಿರುದ್ಧ ಎಫ್‌ಐಆರ್‌ ದಾಖಲು

ಬಳಿಕ ನಿರ್ದೇಶಕ ಸಿದ್ಧಾರ್ಥ್ ಆನಂದ್ ಸ್ಪಷ್ಟನೆ ನೀಡಿ, ಕೇವಲ ಬಿಸಿಲಿನ ವಾತಾವರಣಕ್ಕೆ ಪೂರಕವಾಗಿ ಬಣ್ಣವನ್ನು ಆಯ್ಕೆ ಮಾಡಲಾಗಿತ್ತೇ ಹೊರತು ಯಾವುದೇ ದುರುದ್ದೇಶವಿರಲಿಲ್ಲ ಎಂದಿದ್ದರು. ಅಂತಿಮವಾಗಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಸೂಚನೆಯ ಮೇರೆಗೆ ಹಾಡಿನ ಕೆಲವು ದೃಶ್ಯಗಳಲ್ಲಿ ಬದಲಾವಣೆ ಮಾಡಲಾಗಿತ್ತು.

ನೆಟ್ಟಿಗರು ಏನಂದ್ರು ನೋಡಿ



ಭರ್ಜರಿ ತಾರಾಗಣದ 'ಕಿಂಗ್'

ಅಂದಹಾಗೆ, ಖ್ಯಾತ ಗಾಯಕರಾದ ಅರಿಜಿತ್ ಸಿಂಗ್ ಮತ್ತು ಎಡ್ ಶೀರನ್ ಕಂಠಸಿರಿಯಲ್ಲಿ ಮೂಡಿಬಂದಿರುವ 'ಕಿಂಗ್' ಚಿತ್ರದ 'ತು ಮಿಲ್ ಜಾಯೆ' ಹಾಡು ಭಾರಿ ಸದ್ದು ಮಾಡುತ್ತಿದೆ. ಈ ಚಿತ್ರದ ಮೂಲಕ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ, ರಾಣಿ ಮುಖರ್ಜಿ, ಕರೀನಾ ಕಪೂರ್ ಖಾನ್, ಅಭಿಷೇಕ್ ಬಚ್ಚನ್, ಅನಿಲ್ ಕಪೂರ್, ಜಾಕಿ ಶ್ರಾಫ್, ಅರ್ಷದ್ ವಾರ್ಸಿ, ಜೈದೀಪ್ ಅಹ್ಲಾವತ್, ರಾಘವ್ ಜುಯಲ್, ಸೌರಭ್ ಶುಕ್ಲಾ ಮತ್ತು ಅಭಯ್ ವರ್ಮಾ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ.