ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ರೊಮ್ಯಾಂಟಿಕ್‌ ರಾಮು ಲವ್ಲೀ ಸೀತಾ’ ಚಿತ್ರದ ಟೈಟಲ್‌ ಟೀಸರ್‌ ಬಿಡುಗಡೆ ಮಾಡಿದ ʻರಿಯಲ್‌ ಸ್ಟಾರ್‌ʼ ಉಪೇಂದ್ರ

‘ರೊಮ್ಯಾಂಟಿಕ್‌ ರಾಮು ಲವ್ಲೀ ಸೀತಾ’ ಚಿತ್ರದ ಟೈಟಲ್ ಟೀಸರನ್ನು ನಟ ಉಪೇಂದ್ರ ಅದ್ಧೂರಿಯಾಗಿ ಅನಾವರಣಗೊಳಿಸಿದ್ದಾರೆ. ಪುಣ್ಯಕೋಟಿ ಆಶಯದಿಂದ ಪ್ರೇರಿತವಾದ ಈ ಕಥೆಯು ತಂದೆ-ಮಗಳ ನಿಸ್ವಾರ್ಥ ವಾತ್ಸಲ್ಯ, ಪ್ರೇಮ ಹಾಗೂ ಥ್ರಿಲ್ಲರ್ ತಿರುವುಗಳ ಹೊಸ ಅನುಭವ ನೀಡಲಿದೆಯಂತೆ.

‘ರೊಮ್ಯಾಂಟಿಕ್ ರಾಮು ಲವ್ಲೀ ಸೀತಾ’ ಚಿತ್ರದ ಟೀಸರ್ ರಿಲೀಸ್ ಮಾಡಿದ ಉಪೇಂದ್ರ!

-

Avinash GR
Avinash GR Nov 2, 2026 3:04 PM

ಪ್ರೀತಿ, ಕೌಟುಂಬಿಕ ಬಾಂಧವ್ಯ ಮತ್ತು ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ರೊಮ್ಯಾಂಟಿಕ್ ರಾಮು ಲವ್ಲಿ ಸೀತಾ’ ಚಿತ್ರದ ಮೊದಲ ಟೈಟಲ್ ಟೀಸರ್ ಬಿಡುಗಡೆಯಾಗಿದೆ. ನಟ ಮತ್ತು ನಿರ್ದೇಶಕ ‘ರಿಯಲ್ ಸ್ಟಾರ್’ ಉಪೇಂದ್ರ ಅವರು ಈ ಟೀಸರ್‌ ಅನ್ನು ಅನಾವರಣಗೊಳಿಸಿ, ಚಿತ್ರದ ಶೀರ್ಷಿಕೆ ಹಾಗೂ ವಿಶಿಷ್ಟ ಕಂಟೆಂಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

‘ಪುಣ್ಯಕೋಟಿ’ ಕಥೆಯಿಂದ ಸ್ಫೂರ್ತಿ

ಕರ್ನಾಟಕದ ಜನಪ್ರಿಯ ಜಾನಪದ ಕಥೆಯಾದ ‘ಪುಣ್ಯಕೋಟಿ’ಯ ಮೂಲ ಆಶಯದಿಂದ ಪ್ರೇರಿತವಾದ ಈ ಚಿತ್ರವು, ಮುಖ್ಯವಾಗಿ ತಂದೆ ಮತ್ತು ಮಗಳ ನಡುವಿನ ನಿಸ್ವಾರ್ಥ ಪ್ರೀತಿ, ವಾತ್ಸಲ್ಯ ಹಾಗೂ ಭಾವನಾತ್ಮಕ ಪಯಣವನ್ನು ಕೇಂದ್ರವಾಗಿರಿಸಿಕೊಂಡು ಸಾಗಲಿದೆ. ಯುವ ಮನಸ್ಸುಗಳ ಪ್ರೇಮಕಥೆ, ಹಾಸ್ಯ ಹಾಗೂ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವ ಥ್ರಿಲ್ಲರ್ ಅಂಶಗಳನ್ನು ಮೇಳೈಸಿ ಈ ಸಿನಿಮಾವನ್ನು ನಿರ್ಮಿಸಲಾಗಿದ್ದು, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ಭರವಸೆ ಮೂಡಿಸಿದೆ.

Actor Upendra: ಉಪೇಂದ್ರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್: ‘ನೆಕ್ಸ್ಟ್ ಲೆವೆಲ್’ ಫಸ್ಟ್ ಲುಕ್ ಔಟ್‌

ಪ್ರಮುಖ ಪಾತ್ರದಲ್ಲಿ ಬಿಗ್‌ ಬಾಸ್‌ ವಿನಯ್ ಗೌಡ

ಕಿರುತೆರೆಯ ನಟನೆಯ ಮೂಲಕ ವೃತ್ತಿಜೀವನ ಆರಂಭಿಸಿ, ನಂತರ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಹಾಗೂ ಗೀತರಚನೆಕಾರರಾಗಿ ಅನುಭವ ಪಡೆದಿರುವ ಪ್ರತಿಭಾವಂತ ಗೌರವ್ ಆರ್ಯನ್, ಈ ಚಿತ್ರದ ಮೂಲಕ ನಾಯಕನಟನಾಗಿ ಹಾಗೂ ಪೂರ್ಣಪ್ರಮಾಣದ ನಿರ್ದೇಶಕರಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ತುಳು ಚಿತ್ರರಂಗದಲ್ಲಿ ಗಮನ ಸೆಳೆದಿರುವ ನಟಿ ಸಿಂಚನಾ ಪಿ. ರಾವ್ ಸಾಥ್ ನೀಡಿದ್ದಾರೆ. ಬಿಗ್‌ಬಾಸ್ ಖ್ಯಾತಿಯ ವಿನಯ್ ಗೌಡ ಹಾಗೂ ರಂಗಭೂಮಿ ಕಲಾವಿದ ಚೇತನ್ ಎಂ. ಮಾದಾಪುರ ಪ್ರಮುಖ ಖಳನಟರ ಪಾತ್ರಗಳಲ್ಲಿ ಅಬ್ಬರಿಸಿದ್ದಾರೆ.

ಈ ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ?

ಜಿಆರ್‌ಎಲ್ ಟ್ರಾವೆಲ್ಸ್‌ನ ಮಾಲೀಕರಾದ ಗಂಗಾಧರಯ್ಯ ಅವರು ‘ಜಿಆರ್‌ಎಲ್ ಮೂವೀಸ್’ ಬ್ಯಾನರ್‌ನಡಿ ಈ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾರೆ. ಕ್ರಿಕೆಟ್ ಕ್ಷೇತ್ರದ ಡಿವಿಷನ್ ಲೀಗ್ ಆಟಗಾರ ಪ್ರಣಯ್ ಜಿ. ಗೌಡ ಹಾಗೂ ನಟ ಚೇತನ್ ಎಂ. ಮಾದಾಪುರ ಸಹ-ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಚಿತ್ರದಲ್ಲಿ ಹಿರಿಯ ನಟರಾದ ರಮೇಶ್ ಭಟ್, ಟೆನ್ನಿಸ್ ಕೃಷ್ಣ, ಬಿರಾದಾರ್, ಹಾಸ್ಯನಟ ವಿನೋದ್ ಗೊಬರಗಾಲ, ಮುಬಾರಕ್ ಅಲಿ, ಬೇಬಿ ನಿಧಿ, ರಾಘವ್ ರಾಮ್, ಫಿರೋಜ್ ಮಾಗರೆ, ಹರ್ಷಿತ ಟಿ.ಎ., ಕೀರ್ತನ ಗೌಡ, ಸುಪ್ರೀತಾ ಪ್ರೇಮ್ ಮತ್ತು ನಾಗರಾಜ್ ಸೇರಿದಂತೆ ದೊಡ್ಡ ತಾರಾಬಳಗವೇ ನಟಿಸಿದೆ.

ತಾಂತ್ರಿಕವಾಗಿಯೂ ಸಿನಿಮಾ ಶ್ರೀಮಂತವಾಗಿ ಮೂಡಿಬಂದಿದ್ದು, ಸುಧೀರ್ ಶಾಸ್ತ್ರೀ, ಶ್ರೀರಾಮ್ ಗಂಧರ್ವ ಹಾಗೂ ಗೌರವ್ ಆರ್ಯನ್ ಒಟ್ಟು 4 ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಕೆ.ಬಿ. ಪ್ರವೀಣ್ ಅವರ ಹಿನ್ನೆಲೆ ಸಂಗೀತ, ಮದನ್ ಹರಿಣಿ ಅವರ ನೃತ್ಯ ನಿರ್ದೇಶನ, ವಿನೋದ್ ಮತ್ತು ಚಂದ್ರು ಬಂಡೆ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಬೆಂಗಳೂರು, ತುಮಕೂರು, ಸಕಲೇಶಪುರ ಹಾಗೂ ಮಂಗಳೂರಿನ ಸುಂದರ ತಾಣಗಳಲ್ಲಿ ಸಿದ್ದು ಮೈಸೂರು ಮತ್ತು ಅರುಣ್ ಸುರೇಶ್ ಕ್ಯಾಮೆರಾ ಕೈಚಳಕ ತೋರಿಸಿದ್ದು, ಶಶಾಂಕ್ ನಾರಾಯಣ್ ಸಂಕಲನದ ಹೊಣೆ ಹೊತ್ತಿದ್ದಾರೆ.

ಸದ್ಯ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿರುವ ಚಿತ್ರತಂಡ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. ಟೈಟಲ್ ಟೀಸರ್ ಬಿಡುಗಡೆಯೊಂದಿಗೆ ಅಧಿಕೃತ ಪ್ರಚಾರಕ್ಕೆ ಅಡಿ ಇಟ್ಟಿರುವ ‘ರೊಮ್ಯಾಂಟಿಕ್ ರಾಮು ಲವ್ಲಿ ಸೀತಾ’ ಸಿನಿಮಾ, ಹೊಸ ವರ್ಷದ ಕೊಡುಗೆಯಾಗಿ ಜನವರಿ ತಿಂಗಳಲ್ಲಿ ರಾಜ್ಯಾದ್ಯಂತ ತೆರೆಕಾಣಲು ಯೋಜನೆ ರೂಪಿಸಿಕೊಂಡಿದೆ.