ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚೀನಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಶೈನ್ ಶೆಟ್ಟಿ ನಟನೆಯ ‘ಶಂಕರಾಭರಣ’ ಸಿನಿಮಾ ಪ್ರದರ್ಶನ; ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡ ಚಿತ್ರದ ಹೆಗ್ಗಳಿಕೆ

ಶೈನ್‌ ಶೆಟ್ಟಿ ನಟನೆಯ ‘ಶಂಕರಾಭರಣ’ ಚಿತ್ರವು ಪ್ರತಿಷ್ಠಿತ ‘39ನೇ ಚೀನಾ ಫಿಲ್ಮ್ ಗೋಲ್ಡನ್ ರೂಸ್ಟರ್ ಆ್ಯಂಡ್ ಹಂಡ್ರೆಡ್ ಫ್ಲವರ್ಸ್ ಫೆಸ್ಟಿವಲ್’ಗೆ ಆಯ್ಕೆಯಾಗಿ ಪ್ರದರ್ಶನಗೊಂಡ ಮೊಟ್ಟಮೊದಲ ಕನ್ನಡ ಸಿನಿಮಾ ಎಂಬ ಇತಿಹಾಸ ನಿರ್ಮಿಸಿದೆ. ಸುಮಂತ್ ಭಟ್ ನಿರ್ದೇಶನದ ಈ ಕರಾವಳಿ ಹಿನ್ನೆಲೆಯ ಭಾವನಾತ್ಮಕ ಕಥೆಯನ್ನು ಜಾಗತಿಕ ಸಿನಿಪ್ರೇಮಿಗಳು ಕನ್ನಡ ಭಾಷೆಯಲ್ಲೇ ಸಬ್‌ಟೈಟಲ್ ಜೊತೆ ಕಣ್ತುಂಬಿಕೊಂಡು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚೀನಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಶೈನ್ ಶೆಟ್ಟಿ ನಟನೆಯ ‘ಶಂಕರಾಭರಣ’ ಪ್ರದರ್ಶನ

-

Avinash GR
Avinash GR Nov 9, 2026 6:38 PM

ಕನ್ನಡ ಚಿತ್ರರಂಗದ ಹಿರಿಮೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ‘ಬಿಗ್ ಬಾಸ್’ ಖ್ಯಾತಿಯ ನಟ ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ಯಶಸ್ವಿಯಾಗಿದೆ. ಪ್ರತಿಷ್ಠಿತ ‘39ನೇ ಚೀನಾ ಫಿಲ್ಮ್ ಗೋಲ್ಡನ್ ರೂಸ್ಟರ್ ಆ್ಯಂಡ್ ಹಂಡ್ರೆಡ್ ಫ್ಲವರ್ಸ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಆಯ್ಕೆಯಾಗಿ ಪ್ರದರ್ಶನಗೊಂಡ ಮೊದಲ ಕನ್ನಡ ಚಿತ್ರ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ‘ಶಂಕರಾಭರಣ’ ಸಿನಿಮಾ ಪಾತ್ರವಾಗಿದೆ.

ಈ ಹಿಂದೆ ಹಿಂದಿಯ ‘ರೈಡ್’ ಹಾಗೂ ತಮಿಳಿನ ‘ಮಹಾರಾಜ’ ಚಿತ್ರಗಳು ಈ ವೇದಿಕೆಯಲ್ಲಿ ಪ್ರದರ್ಶನ ಕಂಡು ಸದ್ದು ಮಾಡಿದ್ದವು. ಇದೀಗ ಜಗತ್ತಿನ ನಾನಾ ರಾಷ್ಟ್ರಗಳ ಶ್ರೇಷ್ಠ ಚಿತ್ರಗಳ ನಡುವೆ ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸುವ ಮಹತ್ವದ ಗೌರವ ‘ಶಂಕರಾಭರಣ’ ಚಿತ್ರಕ್ಕೆ ಒಲಿದಿದ್ದು, ಚಿತ್ರೋತ್ಸವದಲ್ಲಿ ಚಿತ್ರದ ವಿಶೇಷ ಪ್ರೀಮಿಯರ್ ಶೋ ಕೂಡ ಯಶಸ್ವಿಯಾಗಿ ನೆರವೇರಿದೆ. ವಿಶ್ವದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸಿನಿಪ್ರೇಮಿಗಳು ಮೂಲ ಕನ್ನಡ ಭಾಷೆಯಲ್ಲಿಯೇ ಸಬ್‌ಟೈಟಲ್‌ನೊಂದಿಗೆ ಈ ಚಿತ್ರವನ್ನು ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಥೆ ಬರೆದ ಶೈನ್‌ ಶೆಟ್ಟಿ

ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಿಂಚುತ್ತಿರುವ ಬೆನ್ನಲ್ಲೇ, ಇತ್ತ ಚಿತ್ರತಂಡವು ಸಿನಿಮಾದ ಅಧಿಕೃತ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರ ನಿರೀಕ್ಷೆಯನ್ನು ಗರಿಗೆದರಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಮತ್ತು ಹಾಡುಗಳ ಮೂಲಕ ಸಿನಿರಸಿಕರ ಗಮನ ಸೆಳೆದಿದ್ದ ಚಿತ್ರಕ್ಕೆ, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸುಮಂತ್ ಭಟ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ವಿಶೇಷವೆಂದರೆ, ನಾಯಕ ನಟ ಶೈನ್ ಶೆಟ್ಟಿ ಈ ಚಿತ್ರಕ್ಕೆ ನಟನೆಯಷ್ಟೇ ಅಲ್ಲದೆ ಕಥೆಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ತಮ್ಮ ಜೀವನದ ನೈಜ ಅನುಭವಗಳು ಹಾಗೂ ಕರಾವಳಿ ಭಾಗದಲ್ಲಿ ತಾವು ಕಂಡ ಘಟನೆಗಳನ್ನು ಆಧರಿಸಿ ಶೈನ್ ಶೆಟ್ಟಿ ಹೆಣೆದಿರುವ ಕಥೆಗೆ ಸುಮಂತ್ ಭಟ್ ಸೊಗಸಾದ ದೃಶ್ಯರೂಪ ನೀಡಿದ್ದಾರೆ. ಇಡೀ ಸಿನಿಮಾವನ್ನು ಕರಾವಳಿಯ ಪ್ರಕೃತಿ ಸೌಂದರ್ಯ ಹಾಗೂ ಹಸಿರಿನ ಪರಿಸರದಲ್ಲೇ ಅದ್ಭುತವಾಗಿ ಸೆರೆಹಿಡಿಯಲಾಗಿದ್ದು, ಖ್ಯಾತ ನಟ ಸಂಪತ್ ರಾಜ್ ಖಳನಾಯಕನಾಗಿ ಅಬ್ಬರಿಸಿದ್ದಾರೆ.

‘ಬಿಗ್ ಬಾಸ್’ ವಿನ್ನರ್ ಶೈನ್ ಶೆಟ್ಟಿ ನಟನೆಯ ‘ಶಂಕರಾಭರಣ’ ಟ್ರೇಲರ್ ರಿಲೀಸ್; ಕರಾವಳಿ ಸೊಗಡಿನ ಹಾರರ್ ಥ್ರಿಲ್ಲರ್ ಬಸ್ ಜರ್ನಿ!

ಕಲಾವಿದನಾಗಿ ಗುರುತಿಸಿಕೊಂಡಿರುವ ಶೈನ್ ಶೆಟ್ಟಿ ಈ ಸಿನಿಮಾದ ಮೂಲಕ ನಿರ್ಮಾಪಕರಾಗಿಯೂ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಗುಣಮಟ್ಟದ ಕಂಟೆಂಟ್ ಆಧಾರಿತ ಸಿನಿಮಾಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಧ್ಯೇಯದೊಂದಿಗೆ ಆರಂಭವಾಗಿರುವ ‘ರಂಗಸ್ಥಳ ಸ್ಟುಡಿಯೋ’ ಬ್ಯಾನರ್ ಅಡಿಯಲ್ಲಿ ದಿವಾಕರ್ ಶೆಟ್ಟಿ ಹಾಗೂ ಶೈನ್ ಶೆಟ್ಟಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಲಯಾಳಂ ಚಿತ್ರರಂಗದ 17ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಪ್ರತಿಭಾವಂತ ನಟಿ ತನ್ವಿ ರಾಮ್ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.

ಇವರ ಜೊತೆಗೆ ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರ ಪತ್ನಿ ಕೃತಿ ಮಹತ್ವದ ಪಾತ್ರದಲ್ಲಿ ನಟಿಸಿದ್ದಾರೆ. ಪ್ರತಿಭಾವಂತ ಸಂಗೀತ ನಿರ್ದೇಶಕ ಚರಣ್ ರಾಜ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಅವರ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಚಿತ್ರಕ್ಕೆ ಪ್ರಮುಖ ಶಕ್ತಿಯಾಗಲಿವೆ ಎಂಬ ಮಾತುಗಳು ಸಿನಿವಲಯದಲ್ಲಿ ಕೇಳಿಬಂದಿವೆ.