ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಕರುನಾಡ ಚಕ್ರವರ್ತಿʼ ಶಿವರಾಜ್‌ಕುಮಾರ್‌ ವೃತ್ತಿ ಬದುಕಿಗೆ 40 ವರ್ಷ; ಸಿಎಂ ಸಿದ್ದರಾಮಯ್ಯ - ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ ಏನ್‌ ಹೇಳಿದ್ರು ನೋಡಿ!

ShivaRajkumar: ನಟ ಶಿವರಾಜ್‌ಕುಮಾರ್‌ ಅವರು ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ್ದು, ಆ ಸಂಭ್ರಮವನ್ನು ಸ್ಯಾಂಡಲ್‌ವುಡ್‌ ಆಚರಿಸುತ್ತಿದೆ. 1986ರಲ್ಲಿ 'ಆನಂದ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಹ್ಯಾಟ್ರಿಕ್ ಹೀರೋ, ಯಶಸ್ವಿ ನಾಲ್ಕು ದಶಕಗಳನ್ನು ಪೂರೈಸಿದ್ದಾರೆ. ಈ ಐತಿಹಾಸಿಕ ಮೈಲಿಗಲ್ಲಿಗೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಹಾಗೂ ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಅವರು ಪ್ರೀತಿಯ ಶುಭಾಶಯ ಕೋರಿದ್ದಾರೆ.

ಶಿವಣ್ಣ ವೃತ್ತಿ ಬದುಕಿಗೆ 40 ವರ್ಷ; ಶುಭಕೋರಿದ ಸಿಎಂ ಸಿದ್ದರಾಮಯ್ಯ

-

Avinash GR
Avinash GR Feb 20, 2026 6:59 PM

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ಅವರು ಕನ್ನಡ ಚಿತ್ರರಂಕ್ಕೆ ಕಾಲಿಟ್ಟು ಭರ್ತಿ 40 ವರ್ಷಗಳಾಗಿವೆ. 1986ರ ಫೆಬ್ರವರಿಯಲ್ಲಿ ಆನಂದ್‌ ಸಿನಿಮಾದ ಮೂಲಕ ಶಿವರಾಜ್‌ಕುಮಾರ್‌ ಅವರು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಇದೀಗ ಚಿತ್ರರಂಗದಲ್ಲಿ 40 ವರ್ಷ ಪೂರೈಸಿರುವ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭಾಶಯ ತಿಳಿಸಿದ್ದಾರೆ. ಅಲ್ಲದೆ, ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಕೂಡ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಟ್ವೀಟ್‌ ಮೂಲಕ ಅಭಿನಂದನೆಗಳನ್ನು ತಿಳಿಸಿರುವ ಸಿಎಂ ಸಿದ್ದರಾಮಯ್ಯ, "ಕನ್ನಡ ಚಿತ್ರರಂಗದಲ್ಲಿ ಸಾರ್ಥಕ 4 ದಶಕಗಳನ್ನು ಪೂರೈಸಿರುವ ಖ್ಯಾತ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಅಭಿನಂದನೆಗಳು. ಬಿಡುವಿನ ವೇಳೆ ಶಿವರಾಜ್ ಕುಮಾರ್ ಅವರ ಹಲವು ಸಿನಿಮಾಗಳನ್ನು ನಾನು ನೋಡಿ ಆನಂದಿಸಿದ್ದೇನೆ. ರಥಸಪ್ತಮಿ, ಜನುಮದ ಜೋಡಿ, ಜೋಡಿಹಕ್ಕಿ, ಟಗರು ಹೀಗೆ ಸಾಲು ಸಾಲು ಹಿಟ್ ಸಿನೆಮಾಗಳ‌ ಮೂಲಕ ಕನ್ನಡ ಚಿತ್ರರಂಗದ ಕೀರ್ತಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಶಿವರಾಜ್ ಕುಮಾರ್ ಅವರ ಅಭಿನಯಕ್ಕೆ ಅವರೇ ಸಾಟಿ. ಕಲಾಸೇವೆಯ ಜೊತೆ ಸಾಮಾಜಿಕ‌ ಸೇವೆಯಲ್ಲೂ ನಿರತರಾಗಿರುವ ಕನ್ನಡಿಗರ ಪ್ರೀತಿಯ ಶಿವಣ್ಣನಿಗೆ ಭಗವಂತ ಆಯುರಾರೋಗ್ಯವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ" ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಟ್ವೀಟ್‌



ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಿದ ಶಿವಣ್ಣ

ಸಿಎಂ ಸಿದ್ದರಾಮಯ್ಯ ಅವರ ಈ ಮಾತುಗಳಿಗೆ ಧನ್ಯವಾದಗಳನ್ನು ಹೇಳಿರುವ ಶಿವಣ್ಣ, "ಕಲೆಗೆ, ನಟರಿಗೆ ಹಾಗೂ ಕನ್ನಡ ಚಿತ್ರರಂಗಕ್ಕೆ ನೀವು ನೀಡುತ್ತಿರುವ ಸಹಕಾರಕ್ಕೆ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಜೊತೆಗಿನ ಒಡನಾಟ ನನಗೂ ಹಾಗೂ ನಮ್ಮ ಕುಟುಂಬಕ್ಕೂ ತುಂಬಾ ಅಮೂಲ್ಯ, ನಿಮ್ಮ ಪ್ರೀತಿಗೆ ಸದಾ ಚಿರಋಣಿ" ಎಂದಿದ್ದಾರೆ.

ಪವನ್‌ ಕಲ್ಯಾಣ್‌ ಹೇಳಿದ್ದೇನು?

"ಕನ್ನಡ ಚಿತ್ರರಂಗದಲ್ಲಿ ನಾಲ್ಕು ಯಶಸ್ವಿ ದಶಕಗಳನ್ನು ಪೂರೈಸಿದ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನನ್ನ ನೆಚ್ಚಿನ ನಾಯಕ, ಕನ್ನಡದ ಸೂಪರ್ ಸ್ಟಾರ್ ಡಾ. ರಾಜ್‌ಕುಮಾರ್ ಅವರ ಪರಂಪರೆಯನ್ನು ಅತ್ಯಂತ ಹೆಮ್ಮೆಯಿಂದ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅವರಿಗೆ ಮುಂದೆಯೂ ಸದಾ ಯಶಸ್ಸು, ಉತ್ತಮ ಆರೋಗ್ಯ ಮತ್ತು ಇನ್ನಷ್ಟು ಮೈಲಿಗಲ್ಲುಗಳು ಲಭಿಸಲಿ ಎಂದು ಹಾರೈಸುತ್ತೇನೆ" ಎಂದು ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ತಿಳಿಸಿದ್ದಾರೆ.

ಪವನ್‌ ಕಲ್ಯಾಣ್‌ ಟ್ವೀಟ್‌



ಇದಕ್ಕೆ ಪ್ರತಿಕ್ರಿಯಿಸಿರುವ ಶಿವರಾಜ್‌ಕುಮಾರ್‌, "ಪವನ್ ಕಲ್ಯಾಣ್ ಅವರೇ, ಅಪ್ಪಾಜಿ ಮತ್ತು ನನ್ನ ಮೇಲಿರುವ ನಿಮ್ಮ ಈ ಪ್ರೀತಿ ನನಗೂ ಹಾಗೂ ನನ್ನ ಕುಟುಂಬಕ್ಕೂ ಬಹಳ ಅರ್ಥಪೂರ್ಣವಾದುದು. ನಿಮ್ಮ ಈ ಕೃತಜ್ಞತೆಯ ನುಡಿಗಳಿಗೆ ಧನ್ಯವಾದಗಳು, ಇದನ್ನು ನಾವು ಸದಾ ಗೌರವಿಸುತ್ತೇವೆ. ನಿಮಗೂ ಕೂಡ ಯಾವಾಗಲೂ ಎಲ್ಲವೂ ಒಳ್ಳೆಯದೇ ಆಗಲಿ ಎಂದು ಹಾರೈಸುತ್ತೇನೆ" ಎಂದು ಹೇಳಿದ್ದಾರೆ.