ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಮಾರ್ಕ್‌ʼ ನಿರ್ಮಾಪಕರ ಜೊತೆ ಶಿವಣ್ಣ ಹೊಸ ಸಿನಿಮಾ; ಸ್ಯಾಂಡಲ್‌ವುಡ್‌ಗೆ ಮರಳಿದ ಪುನೀತ್‌ ʻಚಕ್ರವ್ಯೂಹʼ ಡೈರೆಕ್ಟರ್‌

Shivarajkumar Sathyajyothi Films Movie: ʻಕಿಚ್ಚʼ ಸುದೀಪ್ ಅಭಿನಯದ 'ಮಾರ್ಕ್' ಚಿತ್ರವನ್ನು ನಿರ್ಮಿಸಿದ್ದ ಸತ್ಯಜ್ಯೋತಿ ಫಿಲ್ಮ್ಸ್ ಈಗ ಶಿವಣ್ಣನ ಹೊಸ ಸಿನಿಮಾಗೆ ಬಂಡವಾಳ ಹೂಡುತ್ತಿದೆ. ಪುನೀತ್ ರಾಜಕುಮಾರ್ ಅವರ 'ಚಕ್ರವ್ಯೂಹ' ಖ್ಯಾತಿಯ ಎಂ. ಶರವಣನ್ ಈ ಚಿತ್ರಕ್ಕೆ ನಿರ್ದೇಶಕರಾಗಿದ್ದು, ಈ ಚಿತ್ರವು ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಲಿದೆ.

'ಮಾರ್ಕ್' ನಿರ್ಮಾಪಕರ ಜೊತೆ ಶಿವಣ್ಣ ಹೊಸ ಸಿನಿಮಾ ಘೋಷಣೆ; ಡೈರೆಕ್ಟರ್‌ ಯಾರು?

-

Avinash GR
Avinash GR Apr 15, 2026 7:09 PM

ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಸತ್ಯಜ್ಯೋತಿ ಫಿಲ್ಮ್ಸ್ ಕರ್ನಾಟಕದಲ್ಲಿ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳಲು ಸತತ ಪ್ರಯತ್ನ ನಡೆಸುತ್ತಿದೆ. ಈ ಹಿಂದೆ ವಿಷ್ಣುವರ್ಧನ್ ಅಭಿನಯದ 'ಸತ್ಯಜ್ಯೋತಿ' (1986) ಚಿತ್ರಕ್ಕೆ ಬಂಡವಾಳ ಹೂಡಿದ್ದ ಈ ಸಂಸ್ಥೆ, ಇತ್ತೀಚೆಗೆ ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' (2025) ಚಿತ್ರವನ್ನು ನಿರ್ಮಾಣ ಮಾಡಿತ್ತು. ಇದೀಗ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಅವರೊಂದಿಗೆ ಹೊಸ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿದೆ.

ಪೋಸ್ಟರ್‌ ಮೂಲಕ ಸಿನಿಮಾ ಘೋಷಣೆ

ಒಂದು ಪೋಸ್ಟರ್‌ ರಿಲೀಸ್ ಮಾಡುವ ಮೂಲಕ ಚಿತ್ರದ ಘೋಷಣೆ ಮಾಡಲಾಗಿದೆ. ಪೋಸ್ಟರ್‌ನಲ್ಲಿ ವಿಂಟೇಜ್ ಶೈಲಿಯ ದೊಡ್ಡ ಕೀಲಿಯೊಂದನ್ನು ನಿಲ್ಲಿಸಿರುವ ಚಿತ್ರದ ಸುತ್ತ ಕೆಲವು ಗುಂಡುಗಳು (Bullets) ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದು ಪೋಸ್ಟರ್‌ಗೆ ಒಂದು ಗಂಭೀರತೆ ಮತ್ತು ರೋಚಕತೆಯನ್ನು ನೀಡಿದೆ. ಕಥೆಯ ಬಗ್ಗೆ ಯಾವುದೇ ಸುಳಿವು ನೀಡದ ಈ ಪೋಸ್ಟರ್, ಸಿನಿಮಾದ ಗುಟ್ಟನ್ನು ಕಾಪಾಡುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು.

ʻದೇಶಭಕ್ತಿಗಾಗಿ ಒಬ್ಬ ಸೈನಿಕ ಪಡುವ ಶ್ರಮವೇ ಈ ಸಿನಿಮಾದ ಆತ್ಮʼ; ʻಧುರಂಧರ್‌ 2ʼ ಚಿತ್ರವನ್ನು ಹಾಡಿಹೊಗಳಿದ ಶಿವರಾಜ್‌ಕುಮಾರ್‌

ಕನ್ನಡಕ್ಕೆ ಮರಳಿದ ಚಕ್ರವ್ಯೂಹ ಡೈರೆಕ್ಟರ್

ಇನ್ನೂ ಹೆಸರಿಡದ ಈ ಚಿತ್ರವನ್ನು ಟಿ. ಜಿ. ತ್ಯಾಗರಾಜನ್ ಅರ್ಪಿಸುತ್ತಿದ್ದು, ಸೆಂಥಿಲ್ ತ್ಯಾಗರಾಜನ್ ಮತ್ತು ಅರ್ಜುನ್ ತ್ಯಾಗರಾಜನ್ ನಿರ್ಮಿಸುತ್ತಿದ್ದಾರೆ. ಜೈ ನಟನೆಯ ತಮಿಳು ಸಿನಿಮಾ 'ಎಂಗೇಯಂ ಎಪ್ಪೋದುಂ' (2011) ಖ್ಯಾತಿಯ ಎಂ. ಶರವಣನ್ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಹಿಂದೆ ʻಪವರ್‌ ಸ್ಟಾರ್‌ʼ ಪುನೀತ್ ರಾಜಕುಮಾರ್ ಅಭಿನಯದ 'ಚಕ್ರವ್ಯೂಹ' ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದ್ದ ಶರವಣನ್, ಈಗ ಶಿವರಾಜ್‌ಕುಮಾರ್‌ ಅವರಿಗೆ ನಿರ್ದೇಶನ ಮಾಡುವ ಚಾನ್ಸ್‌ ಸಿಕ್ಕಿದೆ. ಇದು ಇವರ ಎರಡನೇ ಸಿನಿಮಾ.

ʻಕರುನಾಡ ಚಕ್ರವರ್ತಿʼ ಶಿವರಾಜ್‌ಕುಮಾರ್‌ ವೃತ್ತಿ ಬದುಕಿಗೆ 40 ವರ್ಷ; ಸಿಎಂ ಸಿದ್ದರಾಮಯ್ಯ - ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ ಏನ್‌ ಹೇಳಿದ್ರು ನೋಡಿ!

ಶಿವರಾಜ್‌ಕುಮಾರ್ ಅವರೊಂದಿಗೆ ಕೆಲಸ ಮಾಡಬೇಕು ಎಂಬುದು ಸತ್ಯಜ್ಯೋತಿ ಫಿಲ್ಮ್ಸ್‌ ತಂಡದವರು ಬಹಳ ದಿನಗಳಿಂದ ಕಾಯುತ್ತಿದ್ದರು. ಶರವಣನ್ ಹೇಳಿದ ಕಥೆಯ ನರೇಷನ್‌ ಅನ್ನು ಕೇಳಿದ ಶಿವಣ್ಣ, ಕೇವಲ 15 ನಿಮಿಷಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದಾರಂತೆ. ಈ ಕಾಲದ ಪ್ರೇಕ್ಷಕರಿಗೆ ಇಷ್ಟವಾಗುವಂತಹ ನ್ಯೂ-ಏಜ್ ಮತ್ತು ಟ್ರೆಂಡಿ ವಿಷಯವನ್ನು ಒಳಗೊಂಡಿರುವ ಕಥೆಯಂತೆ. ಈ ಚಿತ್ರವನ್ನು ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಿಸಲಾಗುತ್ತಿದ್ದು, ಇತರೆ ಭಾಷೆಗಳಿಗೂ ಡಬ್ ಮಾಡಿ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಸದ್ಯ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, ಚಿತ್ರತಂಡವು ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿದೆ. ಶೀಘ್ರದಲ್ಲೇ ಅಧಿಕೃತ ಮುಹೂರ್ತ ಹಾಗೂ ತಾಂತ್ರಿಕ ವರ್ಗದ ವಿವರಗಳು ಬಹಿರಂಗವಾಗಲಿದೆ.

ಶಿವಣ್ಣ ಸಖತ್ ಬ್ಯುಸಿ

ಅತ್ತ ಶಿವರಾಜ್‌ಕುಮಾರ್ ಅವರು ಸಖತ್‌ ಬ್ಯುಸಿ ಆಗಿದಾರೆ. ಜೀ ಕನ್ನಡ ವಾಹಿನಿಯ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನ ತೀರ್ಪುಗಾರರ ಜವಾಬ್ದಾರಿ ಮುಗಿಸಿದ್ಧಾರೆ. ಈಚೆಗಷ್ಟೇ ಫಿನಾಲೆ ಮುಗಿದಿದೆ. ಸದ್ಯ ಪವನ್ ಒಡೆಯರ್ ನಿರ್ದೇಶನದ 'ಬೇಲ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಶಿವಣ್ಣ, ಮುಂದಿನ 15 ದಿನಗಳಲ್ಲಿ ಸಂಪೂರ್ಣ ಚಿತ್ರೀಕರಣ ಮುಗಿಸಲಿದ್ದಾರೆ.

ಸತ್ಯಜ್ಯೋತಿ ಫಿಲ್ಮ್ಸ್‌ ಹಂಚಿಕೊಂಡಿರುವ ಪೋಸ್ಟರ್‌



ಇದರ ಜೊತೆಗೆ ಹೇಮಂತ್ ಎಂ. ರಾವ್ ಅವರ '666 ಆಪರೇಷನ್ ಡ್ರೀಮ್ ಥಿಯೇಟರ್'ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಪರಮೇಶ್ವರ್ ಹಿವ್ರಾಲೆ ನಿರ್ದೇಶನದ 'ಗುಮ್ಮಡಿ ನರಸಯ್ಯ' ಮತ್ತು ಶ್ರೀನಿ ನಿರ್ದೇಶನದ 'ಎ ಫಾರ್ ಆನಂದ್' ಚಿತ್ರಗಳು ಅವರ ಕೈಯಲ್ಲಿದ್ದು, ಶಿವಣ್ಣ ಫುಲ್ ಬ್ಯುಸಿಯಾಗಿದ್ದಾರೆ.