ಕನ್ನಡ - ಹಿಂದಿಯಲ್ಲಿ ನಿರ್ಮಾಣವಾಗಲಿದೆ 'ಒರಿಜಿನಲ್ ಮಾನ್‌ಸ್ಟರ್'; ಶಿವರಾಜ್‌ಕುಮಾರ್ ಈ ಸಿನಿಮಾ ಒಪ್ಪಿಕೊಂಡಿದ್ದೇಕೆ?
'ಒರಿಜಿನಲ್ ಮಾನ್‌ಸ್ಟರ್' ಸಿನಿಮಾವು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಅದ್ಧೂರಿಯಾಗಿ ಸೆಟ್ಟೇರಿದೆ. ಸುಮಾರು ಎರಡೂವರೆ ವರ್ಷಗಳ ಬಿಡುವಿನ ನಂತರ ಆರ್. ಚಂದ್ರು ನಿರ್ದೇಶನಕ್ಕೆ ಮರಳಿದ್ದು, ಶಿವರಾಜಕುಮಾರ್ ನಾಯಕರಾಗಿ ಬಣ್ಣಹಚ್ಚಿದ್ದಾರೆ. ತೆಲುಗು ಖ್ಯಾತ ನಟ ಸುನೀಲ್ ಪ್ರಮುಖ ಪಾತ್ರದಲ್ಲಿದ್ದು, ಆಗಲೇ ಚಿತ್ರೀಕರಣ ಶುರುವಾಗಿದೆ.
-
'ತಾಜ್ ಮಹಲ್', 'ಚಾರ್ ಮಿನಾರ್', 'ಮೈಲಾರಿ', 'ಕಬ್ಜ' ಖ್ಯಾತಿಯ ನಿರ್ದೇಶಕ ಆರ್. ಚಂದ್ರು, ಸುಮಾರು ಎರಡೂವರೆ ವರ್ಷಗಳ ಬಳಿಕ 'ಒರಿಜಿನಲ್ ಮಾನ್‌ಸ್ಟರ್' ಚಿತ್ರದ ಮೂಲಕ ಮತ್ತೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಆನಂದ್ ಪಂಡಿತ್ ಅರ್ಪಿಸುವ, ಆರ್.ಸಿ. ಸ್ಟುಡಿಯೋಸ್ ಲಾಂಛನದಲ್ಲಿ ಯಮುನಾ ಚಂದ್ರು ನಿರ್ಮಿಸುತ್ತಿರುವ ಈ ಬಹುನಿರೀಕ್ಷಿತ ಚಿತ್ರದಲ್ಲಿ ʻಕರುನಾಡ ಚಕ್ರವರ್ತಿʼ ಡಾ. ಶಿವರಾಜ್‌ಕುಮಾರ್ ನಾಯಕರಾಗಿ ನಟಿಸುತ್ತಿದ್ದಾರೆ.
ಕನ್ನಡ ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಅದ್ಧೂರಿಯಾಗಿ ಸಿದ್ಧವಾಗುತ್ತಿರುವ ಈ ಸಿನಿಮಾದ ಮುಹೂರ್ತ ಸಮಾರಂಭವು ಈಚೆಗೆ ನೆರವೇರಿತು. ಗೀತಾ ಶಿವರಾಜಕುಮಾರ್, ನೈಸ್ ಸಂಸ್ಥೆಯ ಅಶೋಕ್ ಖೇಣಿ, ಮಾಧವ ಕಿರಣ್, ನಿರ್ಮಾಪಕರಾದ ಉದಯ್ ಕೆ. ಮೆಹ್ತಾ, ಗಂಗಾಧರ್ ಸೇರಿದಂತೆ ಹಲವು ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾದರು.
'ಮೈಲಾರಿ 2' ಚಿತ್ರವನ್ನೂ ಮಾಡುತ್ತೇವೆ
ಈ ಚಿತ್ರವನ್ನು ಒಪ್ಪಿಕೊಂಡ ಕಾರಣವನ್ನು ಹಂಚಿಕೊಂಡ ನಟ ಶಿವರಾಜಕುಮಾರ್, "ಕಥೆ ಹಿಡಿಸದಿದ್ದರೆ ನಾನು ಯಾವುದೇ ಪ್ರಾಜೆಕ್ಟ್ ಒಪ್ಪಿಕೊಳ್ಳುವುದಿಲ್ಲ. ಆರ್. ಚಂದ್ರು ಹೇಳಿದ ಈ ಎಳೆ ನನಗೆ ತಕ್ಷಣವೇ ಇಷ್ಟವಾಯಿತು. 'ಮೈಲಾರಿ' ಮತ್ತು 'ಕಬ್ಜ' ನಂತರ ಅವರೊಂದಿಗೆ ಮೂರನೇ ಬಾರಿ ಕೆಲಸ ಮಾಡುತ್ತಿದ್ದೇನೆ. 'ಮಾನ್‌ಸ್ಟರ್' ಎಂದರೆ ಬರೀ ದೈತ್ಯತನವಷ್ಟೇ ಅಲ್ಲ, ಅದರೊಳಗೆ ಒಂದು ಸೂಕ್ಷ್ಮವಾದ ಭಾವನಾತ್ಮಕ ಪದರವಿದೆ. ಎಮೋಷನ್ಸ್‌ಗಳನ್ನು ತೆರೆಮೇಲೆ ಕಟ್ಟಿಕೊಡುವುದರಲ್ಲಿ ಚಂದ್ರು ಸಿದ್ಧಹಸ್ತರು. ಈ ಚಿತ್ರದಲ್ಲೂ ಅದೇ ಪ್ರಮುಖ ಶಕ್ತಿಯಾಗಲಿದೆ. ನನ್ನ ಸಿನಿ ಕೆರಿಯರ್‌ನಲ್ಲೇ ಈವರೆಗೂ ಮಾಡಿರದ ವಿಭಿನ್ನ ಪಾತ್ರವಿದಾಗಿದ್ದು, ತೆಲುಗು ಮಿಶ್ರಿತ ಕನ್ನಡದಲ್ಲಿ ಸಂಭಾಷಣೆ ಇರಲಿದೆ. ಸುನೀಲ್ ಅವರಂತಹ ಪ್ರತಿಭಾವಂತ ನಟರ ಜೊತೆ ತೆರೆಹಂಚಿಕೊಳ್ಳುತ್ತಿರುವುದು ಸಂತಸ ತಂದಿದೆ. ಜೊತೆಗೆ, ಮುಂದಿನ ದಿನಗಳಲ್ಲಿ ಆರ್. ಚಂದ್ರು ಅವರೊಂದಿಗೆ 'ಮೈಲಾರಿ 2' ಚಿತ್ರವನ್ನೂ ಮಾಡುತ್ತೇವೆ" ಎಂದು ಹೇಳಿದರು.
ಶೂಟಿಂಗ್ ಶುರು
ಈ ಚಿತ್ರದ ಚಿತ್ರೀಕರಣದ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಆರ್. ಚಂದ್ರು, "ಶಿವರಾಜಕುಮಾರ್ ಅವರ ಬೆಂಬಲ ನನಗೆ ಸದಾ ಬೆನ್ನೆಲುಬಾಗಿದೆ. ಇಂದಿನಿಂದಲೇ ಚಿತ್ರೀಕರಣ ಶುರುವಾಗಿದ್ದು, ಬೆಂಗಳೂರಿನ ಎಚ್‌ಎಂಟಿ ಮೈದಾನದಲ್ಲಿ ಹಾಕಲಾಗಿರುವ ಬೃಹತ್ ಸೆಟ್‌ನಲ್ಲಿ ಮೊದಲ ಹಂತದ ಶೂಟಿಂಗ್ ನಡೆಯಲಿದೆ. ತೆಲುಗಿನ ಜನಪ್ರಿಯ ನಟ ಸುನೀಲ್ ಪ್ರಮುಖ ಪಾತ್ರದಲ್ಲಿದ್ದು, ಭಾರತದ ಹಲವು ಹೆಸರಾಂತ ತಾರೆಯರು ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಇದೊಂದು ದೊಡ್ಡ ಮಟ್ಟದ ಪ್ಯಾನ್ ಇಂಡಿಯಾ ಚಿತ್ರವಾಗಲಿದೆ" ಎಂದರು.
ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ
ಶಿವರಾಜಕುಮಾರ್ ಅವರೊಂದಿಗೆ ನಟಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ತೆಲುಗು ನಟ ಸುನೀಲ್, ಶಿವಣ್ಣ ಅವರ 'ಓಂ' ಚಿತ್ರವನ್ನು ಹಲವು ಬಾರಿ ವೀಕ್ಷಿಸಿ ಅಭಿಮಾನಿಯಾಗಿದ್ದು, ಚಂದ್ರು ಅವರು ಸಿದ್ಧಪಡಿಸಿರುವ ಈ ಭಾವನಾತ್ಮಕ ಆ್ಯಕ್ಷನ್ ಕಥೆ ಪ್ರೇಕ್ಷಕರನ್ನು ಖಂಡಿತ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ಹಾಗೂ ಎ.ಜೆ. ಶೆಟ್ಟಿ ಛಾಯಾಗ್ರಹಣ ಒದಗಿಸುತ್ತಿದ್ದಾರೆ.