ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SS Rajamouli: ರಾಜಮೌಳಿಯ ಡ್ರೀಮ್‌ ಪ್ರಾಜೆಕ್ಟ್‌ ʼಮಹಾಭಾರತʼದಲ್ಲಿ ನಾನಿ; ಮತ್ತೆ ಒಂದಾಗಲಿದೆ ʼಈಗʼ ಜೋಡಿ

Actor Nani: 2012ರಲ್ಲಿ ತೆರೆಕಂಡ ಟಾಲಿವುಡ್‌ ʼಈಗʼ ಚಿತ್ರ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ಕಿಚ್ಚ ಸುದೀಪ್‌-ನಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಇದೀಗ ರಾಜಮೌಳಿ ಮತ್ತು ನಾನಿ ಮತ್ತೊಮ್ಮೆ ತೆರೆ ಮೇಲೆ ಒಂದಾಗಲು ಕಾಲ ಸನ್ನಿಹಿತವಾಗಿದೆ. ಹೌದು, ತಮ್ಮ ಡ್ರೀಮ್‌ ಪ್ರಾಜೆಕ್ಟ್‌ ʼಮಹಾಭಾರತʼದಲ್ಲಿ ನಾನಿ ನಟಿಸಲಿದ್ದಾರೆ ಎಂದು ರಾಜಮೌಳಿ ತಿಳಿಸಿದ್ದಾರೆ.

ರಾಜಮೌಳಿಯ ಡ್ರೀಮ್‌ ಪ್ರಾಜೆಕ್ಟ್‌ ʼಮಹಾಭಾರತʼದಲ್ಲಿ ನಾನಿ

ನಾನಿ ಮತ್ತು ಎಸ್‌.ಎಸ್‌.ರಾಜಮೌಳಿ.

Profile Ramesh B Apr 28, 2025 8:35 PM

ಹೂದರಾಬಾದ್‌: ಮಹೋನ್ನತ ಪುರಾಣ ಗ್ರಂಥಗಳಾದ ʼರಾಮಾಯಣʼ (Ramayana) ಮತ್ತು ʼಮಹಾಭಾರತʼ (Mahabharatham)ಕ್ಕೆ ದೇಶದಲ್ಲಿ ಪೂಜ್ಯನೀಯ ಸ್ಥಾನವಿದೆ. ಶತ ಶತಮಾನಗಳ ಹಿಂದೆ ರಚಿಸಲ್ಪಟ್ಟ ಈ ಗ್ರಂಥಗಳು ಇಂದಿಗೂ ಪ್ರಸ್ತುತ ಎನಿಸುವ ಜೀವನ ಮೌಲ್ಯಗಳನ್ನು ಸಾರುತ್ತವೆ. ಹೀಗಾಗಿ ಈ ಗ್ರಂಥಗಳನ್ನು ಆಧರಿಸಿ ಅನೇಕ ಕಲೆ, ಸಾಹಿತ್ಯ ಪ್ರಕಾರಗಳು ರಚನೆಯಾಗಿವೆ. ಸಿನಿಮಾಗಳೂ ತಯಾರಾಗಿವೆ. ಪ್ರಸ್ತುತ ಬಾಲಿವುಡ್‌ನಲ್ಲಿ ಜನಪ್ರಿಯ ನಿರ್ದೇಶಕ ನಿತೇಶ್‌ ತಿವಾರಿ ʼರಾಮಾಯಣʼವನ್ನು ತೆರೆಗೆ ತರಲು ಸಜ್ಜಾಗಿದ್ದಾರೆ. ರಣಬೀರ್‌ ಕಪೂರ್‌ (Ranbir Kapoor) ಮತ್ತು ಯಶ್‌ (Yash) ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಈಗಾಗಲೇ ಕುತೂಹಲದ ಕೇಂದ್ರಬಿಂದು ಎನಿಸಿಕೊಂಡಿದೆ. ಇತ್ತ ಟಾಲಿವುಡ್‌ನಲ್ಲಿ ʼಮಹಾಭಾರತʼ ಚಿತ್ರ ತಯಾರಾಗುವ ಸಾಧ್ಯತೆ ಇದೆ. ಹೌದು, ತೆರೆಮೇಲೆ ಮ್ಯಾಜಿಕ್‌ ಸೃಷ್ಟಿಸುವ ಮಾಂತ್ರಿಕ ನಿರ್ದೇಶಕ ಎಸ್.ಎಸ್‌.ರಾಜಮೌಳಿ (SS Rajamouli) ʼಮಹಾಭಾರತʼಕ್ಕೆ ದೃಶ್ಯ ರೂಪ ಕೊಡಲು ಮುಂದಾಗಿದ್ದು, ತಮ್ಮ ಡ್ರೀಮ್‌ ಪ್ರಾಜೆಕ್ಟ್‌ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

ಲೇಟೆಸ್ಟ್‌ ಅಪ್‌ಡೇಟ್‌ ಪ್ರಕಾರ, ರಾಜಮೌಳಿ ಅವರ 'ಮಹಾಭಾರತ'ದಲ್ಲಿ ಟಾಲಿವುಡ್‌ನ ನ್ಯಾಚುರಲ್‌ ಸ್ಟಾರ್‌ ನಾನಿ (Nani) ನಟಿಸಲಿದ್ದಾರೆ. ಈ ಬಗ್ಗೆ ಸ್ವತಃ ರಾಜಮೌಳಿಯೇ ಮಾಹಿತಿ ನೀಡಿದ್ದಾರೆ. ತಾವು ಆ್ಯಕ್ಷನ್‌ ಕಟ್‌ ಹೇಳಲಿರುವ 'ಮಹಾಭಾರತ' ಚಿತ್ರದಲ್ಲಿ ನಾನಿ ಅವರಿಗೆ ಪ್ರಮುಖ ಪಾತ್ರ ನೀಡುವುದಾಗಿ ತಿಳಿಸಿದ್ದಾರೆ. ಯಾವ ಪಾತ್ರ ಎನ್ನುವ ಗುಟ್ಟು ಸದ್ಯ ರಟ್ಟಾಗಿಲ್ಲ.

ತಮ್ಮ ಕನಸಿನ ʼಮಹಾಭಾರತʼ ಚಿತ್ರದ ಬಗ್ಗೆ ನಿರ್ದೇಶಕ ರಾಜಮೌಳಿ ಮಾತನಾಡಿರುವ ವಿಡಿಯೊ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Actor Nani: 'ಹಿಟ್ 3' ಚಿತ್ರದ ಬೆಚ್ಚಿಬೀಳಿಸುವ ಟೀಸರ್ ಔಟ್‌; ಬರ್ತ್‌ಡೇ ದಿನ ಮಾಸ್ ರೂಪ ತಾಳಿದ ನಾನಿ

ಸದ್ಯ ಟಾಲಿವುಡ್‌ನಲ್ಲಿ ನಿರೀಕ್ಷೆ ಮೂಡಿಸಿರುವ ನಾನಿ-ಶ್ರೀನಿಧಿ ಶೆಟ್ಟಿ ನಟನೆಯ 'ಹಿಟ್‌ 3' (Hit: The Third Case) ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಮೇ 1ರಂದು ಇದು ತೆರೆಗೆ ಬರಲಿದೆ. ಹೀಗಾಗಿ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇದರ ಭಾಗವಾಗಿ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಪ್ರೀ ರಿಲೀಸ್‌ ಇವೆಂಟ್‌ ನಡೆಯಿತು. ಇದರಲ್ಲಿ ಭಾಗವಹಿಸಿದ ರಾಜಮೌಳಿ ತಮ್ಮ ಕನಸಿನ ʼಮಹಾಭಾರತʼ ಚಿತ್ರದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದರು.

ʼʼರಾಜಮೌಳಿ ಅವರ ʼಮಹಾಭಾರತʼದಲ್ಲಿ ನಾನಿ ನಟಿಸುತ್ತಿದ್ದಾರೆ ಎನ್ನುವ ವದಂತಿ ಹಬ್ಬಿದೆ. ಇದು ನಿಜವೇ?ʼʼ ಎಂದು ಕಾರ್ಯಕ್ರಮದ ನಿರೂಪಕರು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ರಾಜಮೌಳಿ, ʼʼಮಹಾಭಾರತʼ ನನ್ನ ಕನಸಿನ ಪ್ರಾಜೆಕ್ಟ್‌. ಅದ್ಧೂರಿಯಾಗಿ ಇದನ್ನು ವಿವಿಧ ಭಾಗಗಳಲ್ಲಿ ತೆರೆಗೆ ತರಬೇಕೆಂಬ ಯೋಜನೆ ಇದೆ. ಯಾರು ಯಾವ ಪಾತ್ರ ನಿರ್ವಹಿಸಲಿದ್ದಾರೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಒಂದಂತೂ ನಿಜ. ಈ ಚಿತ್ರದಲ್ಲಿ ನಾನಿ ಇರುವುದು ಪಕ್ಕಾ. ಅವರು ಯಾವ ಪಾತ್ರ ನಿರ್ವಹಿಸಲಿದ್ದಾರೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆʼʼ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಜತೆಗೆ ʼಮಹಾಭಾರತʼದ ಅಪ್‌ಡೇಟ್‌ಗಾಗಿ ಕಾಯುತ್ತಿದ್ದ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ನೀಡಿದ್ದಾರೆ. ಈ ಮೂಲಕ ʼಮಹಾಭಾರತʼ ಸೆಟ್ಟೇರುವುದು ಖಚಿತವಾದಂತಾಗಿದೆ.

2ನೇ ಬಾರಿ ಒಂದಾಗಲಿದೆ ಹಿಟ್‌ ಜೋಡಿ

ಎಲ್ಲವೂ ಅಂದುಕೊಂಡಂತಾದರೆ ರಾಜಮೌಳಿ ಮತ್ತು ನಾನಿ ಜೋಡಿ 2ನೇ ಬಾರಿಗೆ ಒಂದಾಗಲಿದೆ. ಈ ಹಿಂದೆ ಇವರಿಬ್ಬರು 2012ರಲ್ಲಿ ತೆರೆಕಂಡ ತೆಲುಗಿನ ʼಈಗʼ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ನೊಣವೊಂದರ ಸೇಡಿನ ಕಥೆ ಹೊಂದಿದ್ದ ಈ ಸಿನಿಮಾದಲ್ಲಿ ನಾನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಸಾಕಷ್ಟು ಮೆಚ್ಚುಗೆ ಗಳಿಸಿದ್ದರು. ಕಿಚ್ಚ ಸುದೀಪ್‌ ಮತ್ತು ಸಮಂತಾ ಕೂಡ ಈ ಸಿನಿಮಾದಲ್ಲಿ ನಟಿಸಿದ್ದರು. ಅದಾಗ್ಯೂ ಸದ್ಯಕ್ಕಂತೂ ʼಮಹಾಭಾರತʼ ಆರಂಭವಾಗುವ ಲಕ್ಷಣಗಳಿಲ್ಲ. ಈಗ ರಾಜಮೌಳಿ ಮಹೇಶ್‌ ಬಾಬು ನಟನೆಯ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಅದ್ಧೂರಿ ಬಜೆಟ್‌ನ ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್‌ ಸುಕುಮಾರನ್‌ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಶೂಟಿಂಗ್‌ ಭರದಿಂದ ಸಾಗುತ್ತಿದೆ.