ʻರಾಗಿಣಿ MMS 3' ಸಿನಿಮಾಗೆ ನಾಯಕಿಯಾದ ನಟಿ ತಮನ್ನಾ ಭಾಟಿಯಾ; ಲಂಡನ್‌ನಲ್ಲಿ ಶೂಟಿಂಗ್ ಶುರು
ಬಾಲಾಜಿ ಮೋಷನ್ ಪಿಕ್ಚರ್ಸ್ ಸಂಸ್ಥೆಯು ತನ್ನ ಯಶಸ್ವಿ ಹಾರರ್ ಫ್ರಾಂಚೈಸಿ ‘ರಾಗಿಣಿ MMS’ನ ಮೂರನೇ ಭಾಗವನ್ನು ಅಧಿಕೃತವಾಗಿ ಪ್ರಕಟಿಸಿದೆ. ಶಶಾಂಕ ಘೋಷ್ ನಿರ್ದೇಶನದ ಈ ಡೇಟ್ ನೈಟ್ ಹಾರರ್ ಸಿನಿಮಾದಲ್ಲಿ ತಮನ್ನಾ ಭಾಟಿಯಾ ಮತ್ತು ಜುನೈದ್ ಖಾನ್ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ.
-
ಬಾಲಾಜಿ ಮೋಷನ್ ಪಿಕ್ಚರ್ಸ್ ಸಂಸ್ಥೆಯು ತನ್ನ ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ಹಾರರ್ ಸರಣಿಯಾದ 'ರಾಗಿಣಿ ಎಮ್‌ಎಮ್‌ಎಸ್'ನ ಮೂರನೇ ಭಾಗವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. 'ರಾಗಿಣಿ MMS 3' ಹೆಸರಿನ ಈ ಹೊಸ ಚಿತ್ರದಲ್ಲಿ ನಟಿ ತಮನ್ನಾ ಭಾಟಿಯಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ತಮನ್ನಾಗೆ ಜೋಡಿಯಾಗಿ ನಟ ಜುನೈದ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಮೊದಲ ಬಾರಿಗೆ ಒಂದಾದ ಹೊಸ ಜೋಡಿ
ಬೆಳ್ಳಿತೆರೆಯ ಮೇಲೆ ತಮನ್ನಾ ಭಾಟಿಯಾ ಮತ್ತು ಜುನೈದ್ ಖಾನ್ ಮೊದಲ ಬಾರಿಗೆ ಒಂದಾಗುತ್ತಿದ್ದು, ಚಿತ್ರತಂಡ ಈಗಾಗಲೇ ಲಂಡನ್‌ನಲ್ಲಿ ಚಿತ್ರದ ಮೊದಲ ಹಂತದ ಶೂಟಿಂಗ್ ಅನ್ನು ಭರದಿಂದ ಆರಂಭಿಸಿದೆ. ಇವರಿಬ್ಬರು ಲಂಡನ್ ಶೆಡ್ಯೂಲ್‌ನಲ್ಲಿ ಪಾಲ್ಗೊಂಡಿರುವ ಫೋಟೋಗಳು ಸದ್ಯ ಸದ್ದು ಮಾಡುತ್ತಿವೆ. ಈ ಬಹುನಿರೀಕ್ಷಿತ 'ಡೇಟ್ ನೈಟ್ ಹಾರರ್' ಶೈಲಿಯ ಸಿನಿಮಾವು 2027ರಲ್ಲಿ ವಿಶ್ವಾದ್ಯಂತ ತೆರೆಕಾಣಲಿದೆ.
ಮತ್ತೊಮ್ಮೆ ಒಂದಾದ ಯಶಸ್ವಿ ಕಾಂಬಿನೇಷನ್
ಈ ಚಿತ್ರವನ್ನು ಖ್ಯಾತ ನಿರ್ದೇಶಕ ಶಶಾಂಕ ಘೋಷ್ ನಿರ್ದೇಶಿಸುತ್ತಿದ್ದಾರೆ. ಬಾಲಾಜಿ ಮೋಷನ್ ಪಿಕ್ಚರ್ಸ್ ಸಂಸ್ಥೆಯು ಈ ಹಿಂದೆ ಶಶಾಂಕ್ ಘೋಷ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಸೂಪರ್ ಹಿಟ್ 'ವೀರೆ ದಿ ವೆಡ್ಡಿಂಗ್' ಮತ್ತು 'ಫ್ರೆಡ್ಡಿ' ಚಿತ್ರಗಳ ನಂತರ, ಇದೀಗ 'ರಾಗಿಣಿ 3' ಚಿತ್ರಕ್ಕಾಗಿ ಮತ್ತೊಮ್ಮೆ ಕೈಜೋಡಿಸಿವೆ.
"ಈ ಚಿತ್ರವು ಹಾರರ್ ಜೊತೆಗೆ ಪ್ರಣಯ ಮತ್ತು ಅನಿರೀಕ್ಷಿತ ತಿರುವುಗಳನ್ನು ಒಳಗೊಂಡಿರಲಿದೆ. ಸರಣಿಯ ಮೂಲ ಆಶಯ ಹಾಗೂ ರೋಮಾಂಚನವನ್ನು ಕಾಯ್ದುಕೊಳ್ಳುತ್ತಲೇ, ಇಂದಿನ ಟ್ರೆಂಡ್‌ಗೆ ತಕ್ಕಂತೆ ಈ ಜಾನರ್‌ಗೆ ಹೊಸ ಸ್ಪರ್ಶ ನೀಡಲಾಗುವುದು" ಎಂದು ನಿರ್ದೇಶಕ ಶಶಾಂಕ ಘೋಷ್ ಹಾಗೂ ನಿರ್ಮಾಪಕರು ಭರವಸೆ ನೀಡಿದ್ದಾರೆ.
Star Fashion Review 2026: ರೆಕ್ಕೆಯಂತೆ ಕಾಣುವ ಹೈ ಫ್ಯಾಷನವೇರ್‌ಗೆ ಸೈ ಎಂದ ತಮನ್ನಾ
ತಮನ್ನಾ ಮತ್ತು ಜುನೈದ್‌ಗೆ ಹೊಸ ಅನುಭವ
ಹಿಂದಿ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಕಮರ್ಷಿಯಲ್ ಸಿನಿಮಾಗಳ ಮೂಲಕ ಮಿಂಚಿರುವ ತಮನ್ನಾ ಭಾಟಿಯಾಗೆ ಈ ಚಿತ್ರದಲ್ಲಿ ಅತ್ಯಂತ ವಿಭಿನ್ನವಾದ ಪಾತ್ರ ಸಿಕ್ಕಿದೆ. ಇನ್ನು ನಟ ಜುನೈದ್ ಖಾನ್ ಅವರಿಗೂ ಇದು ವೃತ್ತಿಜೀವನದ ಮೊದಲ ಹಾರರ್ ಸಿನಿಮಾವಾಗಿದೆ. ಏಕ್ತಾ ಕಪೂರ್ ಒಡೆತನದ ಬಾಲಾಜಿ ಟೆಲಿಫಿಲ್ಮ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಬಾಲಾಜಿ ಮೋಷನ್ ಪಿಕ್ಚರ್ಸ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದೆ. ಚಿತ್ರದ ಉಳಿದ ತಾರಾಗಣ ಮತ್ತು ಕಥೆಯ ಹೆಚ್ಚಿನ ವಿವರಗಳು ಮುಂಬರುವ ತಿಂಗಳುಗಳಲ್ಲಿ ಅಧಿಕೃತವಾಗಿ ಹೊರಬೀಳಲಿವೆ.
ತಮನ್ನಾ ಕೈಯಲ್ಲಿವೆ ಬ್ಯಾಕ್-ಟು-ಬ್ಯಾಕ್ ಸಿನಿಮಾಗಳು
ಈ ವರ್ಷ ತಮನ್ನಾ ಭಾಟಿಯಾ ಅವರ ಕೈಯಲ್ಲಿ ಹಲವು ದೊಡ್ಡ ಸಿನಿಮಾಗಳಿವೆ. ಸಿದ್ಧಾರ್ಥ್ ಮಲ್ಹೋತ್ರಾ ಜೊತೆಯಾಗಿ ನಟಿಸಿರುವ 'ವ್ವಾನ್ - ಫೋರ್ಸ್ ಆಫ್ ದಿ ಫಾರೆಸ್ಟ್' ಚಿತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಕಾಲಿವುಡ್ ನಟ ವಿಶಾಲ್ ನಟನೆಯ ಆಕ್ಷನ್-ಕಾಮಿಡಿ ಚಿತ್ರ 'ಪುರುಷನ್' ಮತ್ತು ಸಿದ್ಧಾಂತ್ ಚತುರ್ವೇದಿ ನಟನೆಯ ಬಹುನಿರೀಕ್ಷಿತ ಬಯೋಪಿಕ್ ಚಿತ್ರ 'ವಿ. ಶಾಂತಾರಾಮ್' ನಲ್ಲೂ ತಮನ್ನಾ ಪ್ರಮುಖ ಪಾತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.