ಸತತ ಸೋಲಿನಿಂದ ಕಂಗೆಟ್ಟ ರಾಮ್ ಪೋತಿನೇನಿ; ಗೆಲುವಿಗಾಗಿ ಹೊಸ ಸಾಹಸಕ್ಕೆ ಮುಂದಾದ ತೆಲುಗು ನಟ
ಸತತ ಸೋಲುಗಳಿಂದ ಕಂಗಾಲಾಗಿರುವ ಟಾಲಿವುಡ್ ನಟ ರಾಮ್ ಪೋತಿನೇನಿ ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ತಮ್ಮ ವೃತ್ತಿಜೀವನದ 23ನೇ ಚಿತ್ರಕ್ಕೆ ಅವರೇ ಸ್ವತಃ ಆಕ್ಷನ್ ಕಟ್ ಹೇಳುತ್ತಿದ್ದು, ನಿರ್ದೇಶಕರಾಗಿ ಹೊಸ ಅವತಾರ ಎತ್ತಿದ್ದಾರೆ. ಈ ಚಿತ್ರವು ಡಿಸೆಂಬರ್‌ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
-
ಟಾಲಿವುಡ್‌ನ ಎನರ್ಜೆಟಿಕ್ ಸ್ಟಾರ್ ರಾಮ್ ಪೋತಿನೇನಿ ಈಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅಭಿಮಾನಿಗಳು ನೆಚ್ಚಿನ ನಟನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಈ ವಿಶೇಷ ಸಂದರ್ಭದಲ್ಲಿಯೇ ರಾಮ್ ಪೋತಿನೇನಿ ತಮ್ಮ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ಅವರ ವೃತ್ತಿಜೀವನದ 23ನೇ ಸಿನಿಮಾದ ಅಧಿಕೃತ ಘೋಷಣೆ ಆಗಿದ್ದು, ಇದುಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಯಾಕೆ ಗೊತ್ತಾ?
ನಿರ್ದೇಶಕರಾದ ನಟ ರಾಮ್ ಪೋತಿನೇನಿ
ಯಾಕೆಂದರೆ, ಈ ಬಾರಿ ನಟ ರಾಮ್ ಪೋತಿನೇನಿ ಕೇವಲ ಹೀರೋ ಆಗಿ ಮಾತ್ರವಲ್ಲದೆ, ಈ ಸಿನಿಮಾದ ನಿರ್ದೇಶಕರಾಗಿಯೂ ಹೊಸ ಅವತಾರ ಎತ್ತಿದ್ದಾರೆ. ಹೌದು, ತಮ್ಮ ವೃತ್ತಿಜೀವನದಲ್ಲೇ ಮೊದಲ ಬಾರಿಗೆ ರಾಮ್ ಪೋತಿನೇನಿ ಅವರು 'RAPO 23' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ತೆರೆಕಂಡಿದ್ದ 'ಆಂಧ್ರ ಕಿಂಗ್ ತಾಲೂಕಾ' ಸಿನಿಮಾದ ಹಾಡುಗಳಿಗೆ ಸಾಹಿತ್ಯ ಬರೆದು ತಮ್ಮಲ್ಲಿನ ಮಲ್ಟಿ-ಟ್ಯಾಲೆಂಟ್ ಪ್ರದರ್ಶಿಸಿದ್ದ ರಾಮ್, ಈಗ ನೇರವಾಗಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.
ಹೊಸ ಹೇರ್‌ಸ್ಟೈಲ್‌ನಲ್ಲಿ ಮಿಂಚಿಂಗ್
ಜನ್ಮದಿನದ ಅಂಗವಾಗಿ ಬಿಡುಗಡೆ ಮಾಡಲಾಗಿರುವ ಚಿತ್ರದ ಪ್ರೀ-ಲುಕ್ ಪೋಸ್ಟರ್ ಸಖತ್ ರಗಡ್ ಹಾಗೂ ಇಂಟೆನ್ಸಿವ್ ಆಗಿದೆ. ಈ ಚಿತ್ರದಲ್ಲಿ ರಾಮ್ ಪೋತಿನೇನಿ ಅವರು 'ವೀರ' ಎಂಬ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೋಸ್ಟರ್‌ನಲ್ಲಿ ಅವರು ಸ್ಟೈಲಿಶ್ ಜಾಕೆಟ್ ಧರಿಸಿ, ಆಕರ್ಷಕ 'ವಿ ಕಟ್' ಹೇರ್ ಸ್ಟೈಲ್‌ನಲ್ಲಿ ಬೆನ್ನು ಮಾಡಿ ನಿಂತಿದ್ದಾರೆ. ಆದರೆ ಹೀರೋ ಲುಕ್ ರಿವೀಲ್ ಮಾಡದೆ ಗೌಪ್ಯವಾಗಿಟ್ಟಿರುವುದು ಸಿನಿಮಾದ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ.
ಪ್ರಸ್ತುತ ಈ ಚಿತ್ರಕ್ಕೆ 'RAPO 23' ಎಂದು ತಾತ್ಕಾಲಿಕ ಶೀರ್ಷಿಕೆ ಇಡಲಾಗಿದೆ. ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ 'ಸೈಕಲಾಜಿಕಲ್ ಥ್ರಿಲ್ಲರ್' ಶೈಲಿಯ ಸಿನಿಮಾವಾಗಿದ್ದು, ರಾಮ್ ಅವರ ಇಮೇಜ್‌ಗೆ ಸಂಪೂರ್ಣ ಹೊಸ ಆಯಾಮ ನೀಡಲಿದೆ ಎನ್ನಲಾಗಿದೆ. ಮತ್ತೊಂದು ವಿಶೇಷವೆಂದರೆ, ಈ ಚಿತ್ರವನ್ನು ರಾಮ್ ಪೋತಿನೇನಿ ಅವರ ಸ್ವಂತ ನಿರ್ಮಾಣ ಸಂಸ್ಥೆಯಾದ 'ರಾಪೋ ಸಿನಿಮ್ಯಾಟಿಕ್ಸ್' ಬ್ಯಾನರ್ ಅಡಿಯಲ್ಲೇ ಅತ್ಯಂತ ಅದ್ಧೂರಿಯಾಗಿ ನಿರ್ಮಿಸಲಾಗುತ್ತಿದೆ.
ಚಿತ್ರದ ಪ್ರಮುಖ ತಾರಾಗಣ ಹಾಗೂ ತಾಂತ್ರಿಕ ಬಳಗದ ಕುರಿತು ಇನ್ನೂ ಯಾವುದೇ ವಿವರಗಳನ್ನು ಬಿಟ್ಟುಕೊಟ್ಟಿಲ್ಲ. ಮುಂಬರುವ ದಿನಗಳಲ್ಲಿ ದೊಡ್ಡ ಮಟ್ಟದ ಅಪ್ಡೇಟ್‌ಗಳನ್ನು ನೀಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಪಕ್ಕಾ ಪ್ಲಾನಿಂಗ್‌ನೊಂದಿಗೆ ಕಣಕ್ಕಿಳಿಯುತ್ತಿರುವ ಈ ಚಿತ್ರತಂಡ ಜೂನ್ ತಿಂಗಳಿನಿಂದ ಶೂಟಿಂಗ್ ಆರಂಭಿಸಲಿದೆ.
ಅಷ್ಟೇ ಅಲ್ಲದೆ, ಇದೇ ವರ್ಷದ ಡಿಸೆಂಬರ್‌ನಲ್ಲಿ ಈ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಈಗಿನಿಂದಲೇ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಟನೆಯ ಜೊತೆಗೆ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿರುವ ಎನರ್ಜೆಟಿಕ್ ಸ್ಟಾರ್ ರಾಮ್ ಪೋತಿನೇನಿ ಅವರಿಗೆ ಈ ಹೊಸ ಇನ್ನಿಂಗ್ಸ್ ಹೊಸ ಯಶಸ್ಸು ತರಲಿ ಎಂಬುದೇ ಅಭಿಮಾನಿಗಳ ಹಾರೈಕೆ.
ಸಾಲು ಸಾಲು ಸೋಲಿನಿಂದ ಕಂಗೆಟ್ಟಿರುವ ರಾಮ್
ರಾಮ್ ಪೋತಿನೇನಿ ಅವರಿಗೆ 2019ರ 'ಇಸ್ಮಾರ್ಟ್ ಶಂಕರ್' ಸಿನಿಮಾ ಭರ್ಜರಿ ಗೆಲುವು ತಂದುಕೊಟ್ಟ ನಂತರ ಬಾಕ್ಸ್ ಆಫೀಸ್‌ನಲ್ಲಿ ಸತತ ಹಿನ್ನಡೆ ಆಗಿದೆ. ದ್ವಿಪಾತ್ರದಲ್ಲಿದ್ದ ತಮಿಳು ರಿಮೇಕ್ ಚಿತ್ರ 'ರೆಡ್' (2021) ಕೋವಿಡ್ ನಂತರ ಮಿಶ್ರ ಪ್ರತಿಕ್ರಿಯೆಯೊಂದಿಗೆ ಆವರೇಜ್ ಎನಿಸಿಕೊಂಡರೆ, ಖಡಕ್ ಪೊಲೀಸ್ ಪಾತ್ರದ ದ್ವಿಭಾಷಾ ಚಿತ್ರ 'ದಿ ವಾರಿಯರ್ʼ (2022) ದೊಡ್ಡ ಸೋಲು ಕಂಡಿತು.
ಆ ಬಳಿಕ ಬಂದ 'ಸ್ಕಂದ' (2023) ಮತ್ತು 'ಡಬಲ್ ಇಸ್ಮಾರ್ಟ್' (2024) ಸಿನಿಮಾಗಳು ಪ್ರೇಕ್ಷಕರ ನಿರಾಸೆಗೆ ಕಾರಣವಾದವು. ಇನ್ನು ಇತ್ತೀಚೆಗೆ ಉಪೇಂದ್ರ ಪ್ರಮುಖ ಪಾತ್ರ ಮಾಡಿದ್ದ 'ಆಂಧ್ರ ಕಿಂಗ್ ತಾಲೂಕು' (2025) ಚಿತ್ರ ಕೂಡ ವಿಮರ್ಶಾತ್ಮಕವಾಗಿ ಪರವಾಗಿಲ್ಲ ಎನಿಸಿಕೊಂಡರೂ ಕಲೆಕ್ಷನ್ ವಿಚಾರದಲ್ಲಿ ಫ್ಲಾಪ್ ಪಟ್ಟಿಗೆ ಸೇರಿತು. ಪ್ರಸ್ತುತ ಈ ಸಾಲು ಸಾಲು ಸೋಲುಗಳಿಂದ ಹೊರಬರಲು ರಾಮ್ ಅವರು ತಾವೇ ಸ್ವತಃ ನಿರ್ದೇಶಕರಾಗಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.