ನಾಲ್ಕೇ ದಿನಕ್ಕೆ ಭಾರತದಲ್ಲಿ ದಾಖಲೆ ಬರೆದ ʻಸ್ಪೈಡರ್ ಮ್ಯಾನ್ʼ ಸಿನಿಮಾ; ಕರ್ನಾಟಕದಲ್ಲಿ ಅಬ್ಬರದ ಗಳಿಕೆ!
Spider-Man Brand New Day Box Office Collection Day 4: ಟಾಮ್ ಹಾಲ್ಯಾಂಡ್ ಅಭಿನಯದ 'ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಸಿನಿಮಾ ಭಾರತದ ಬಾಕ್ಸ್ ಆಫೀಸ್‌ನಲ್ಲಿ ನಾಲ್ಕೇ ದಿನಗಳಲ್ಲಿ 300 ಕೋಟಿ ರೂ. ಗಳಿಸಿ ಸಾರ್ವಕಾಲಿಕ ದಾಖಲೆ ಬರೆದಿದೆ. ಡೆಸ್ಟಿನ್ ಡೇನಿಯಲ್ ಕ್ರೆಟನ್ ನಿರ್ದೇಶನದ ಈ ಚಿತ್ರವು ಜಾಗತಿಕವಾಗಿ 8,843 ಕೋಟಿ ರೂ. ಬಾಚಿಕೊಂಡಿದೆ.
-
ಟಾಮ್ ಹಾಲ್ಯಾಂಡ್ ಅಭಿನಯದ ಬಹುನಿರೀಕ್ಷಿತ 'ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಸಿನಿಮಾವು ಭಾರತದಲ್ಲಿ ಗಳಿಕೆಯ ರಣಬೇಟೆಯನ್ನು ಮುಂದುವರಿಸಿದೆ. ಭಾತದಲ್ಲಿ ಯಾವುದೇ ಹಾಲಿವುಡ್ ಸಿನಿಮಾಗಳು ಮಾಡಿರದಂತಹ ದಾಖಲೆಗಳನ್ನು ಚಚ್ಚಿ ಹಾಕುತ್ತಿದೆ. ಮೊದಲ ವೀಕೆಂಡ್ ಮುಗಿಯುವ ಹೊತ್ತಿಗೆ ಈ ಸಿನಿಮಾವು ಭಾರತದಲ್ಲಿ ಭರ್ಜರಿ ಹಣವನ್ನು ಲೂಟಿ ಮಾಡಿದೆ. ಈವರೆಗೂ ಭಾರತದಲ್ಲಿ ಬಿಡುಗಡೆಯಾದ ಅತಿದೊಡ್ಡ ಹಾಲಿವುಡ್ ಚಿತ್ರಗಳ ಸಾಲಿನಲ್ಲಿ ತನ್ನ ಸ್ಥಾನವನ್ನು 'ಸ್ಪೈಡರ್-ಮ್ಯಾನ್ʼ ಇನ್ನಷ್ಟು ಭದ್ರಪಡಿಸಿಕೊಂಡಿದೆ.
300 ಕೋಟಿ ರೂ. ಗಳಿಕೆ
ಭಾರತದಲ್ಲಿ ಈ ಸಿನಿಮಾವು ನಾಲ್ಕೇ ದಿನಕ್ಕೆ 300+ ಕೋಟಿ ರೂ. ಹಣವನ್ನು ಬಾಚಿಕೊಂಡಿರವ ಮಾಹಿತಿ ಸಿಕ್ಕಿದೆ. ಅಚ್ಚರಿ ಎಂದರೆ, ನಿನ್ನೆ (ಆ.2) ಒಂದೇ ದಿನ ಭಾರತದಲ್ಲಿ 76 ಕೋಟಿ ರೂ. ಹಣವನ್ನು ಈ ಸಿನಿಮಾವು ಗಳಿಸಿದೆ. ಭಾನುವಾರದ ಕಲೆಕ್ಷನ್‌ನೊಂದಿಗೆ, ಚಿತ್ರದ ಭಾರತದ ಒಟ್ಟು ಗ್ರಾಸ್ ಗಳಿಕೆ 309 ಕೋಟಿ ರೂಪಾಯಿ ತಲುಪಿದೆ. ಇದರಲ್ಲಿ ಇಂಗ್ಲಿಷ್ ಆವೃತ್ತಿಯು ಗಳಿಕೆಯಲ್ಲಿ ಅತಿ ಹೆಚ್ಚಿನ ಪಾಲನ್ನು ಕೊಡುಗೆಯಾಗಿ ನೀಡುತ್ತಿದ್ದರೆ, ಹಿಂದಿ ಡಬ್ ಮಾಡಿದ ಆವೃತ್ತಿಯು ವಿಶೇಷವಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಉತ್ತಮ ಪ್ರೇಕ್ಷಕರ ಬೆಂಬಲವನ್ನು ಪಡೆಯುತ್ತಿದೆ.
ಮೊದಲ ಸೋಮವಾರದ ಗಳಿಕೆಯತ್ತ ಎಲ್ಲರ ಕಣ್ಣು
ಸಾಮಾನ್ಯವಾಗಿ ಮೊದಲ ಸೋಮವಾರದ ಮೇಲೆಯೇ ಎಲ್ಲರ ಕಣ್ಣು ಇರುತ್ತದೆ. ಒಂದು ಸಿನಿಮಾದ ಆರಂಭಿಕ ಗೆಲುವು ನಿಗದಿಯಾಗುವುದು ಮೊದಲ ಸೋಮವಾರವೇ. ಸದ್ಯ ಈ ಚಿತ್ರವು ಸೋಮವಾರವೂ ಸಹ ತನ್ನ ಕಲೆಕ್ಷನ್ ವೇಗವನ್ನು ಕಾಯ್ದುಕೊಂಡಿರುವ ನಿರೀಕ್ಷೆಯಿದೆ. ಭಾರತದಲ್ಲಿ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ನೀಡಲು ಯಾವುದೇ ಪ್ರಮುಖ ಸಿನಿಮಾಗಳಿಲ್ಲದಿರುವುದು ಮತ್ತು ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿರುವುದರಿಂದ, ಈ ಸೂಪರ್‌ಹೀರೋ ಸಿನಿಮಾವು ವಾರದ ದಿನಗಳಲ್ಲೂ ತನ್ನ ಕಲೆಕ್ಷನ್ ಅಬ್ಬರವನ್ನು ಮುಂದುವರಿಸುವ ನಿರೀಕ್ಷೆಯಿದೆ.
ವಿಶ್ವಾದ್ಯಂತ ಎಷ್ಟಾಗಿದೆ ಗಳಿಕೆ?
ಭಾರತದಲ್ಲಿನ ಯಶಸ್ಸಿನ ಜೊತೆಗೆ ವಿಶ್ವಾದ್ಯಂತ ಕೂಡ 'ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಸಿನಿಮಾವು ಜಾಗತಿಕ ಬಾಕ್ಸ್ ಆಫೀಸ್‌ನಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿದೆ. ಈ ಚಿತ್ರವು ತನ್ನ ಆರಂಭಿಕ ವಾರಾಂತ್ಯದಲ್ಲಿ ವಿಶ್ವಾದ್ಯಂತ 927 ಮಿಲಿಯನ್ ಡಾಲರ್) ಗಳಿಸಿದೆ. ಅಂದಾಜು 8,843 ಕೋಟಿ ರೂ. ಗಳಿಕೆ ಆಗಿದೆ. ಈ ಮೂಲಕ 'ಅವೆಂಜರ್ಸ್: ಎಂಡ್‌ಗೇಮ್' ನಂತರ ಸಿನಿಮಾ ಇತಿಹಾಸದಲ್ಲೇ ಎರಡನೇ ಅತಿದೊಡ್ಡ ಜಾಗತಿಕ ಓಪನಿಂಗ್ ಸಾಧಿಸಿದ ಚಿತ್ರವಾಗಿ 'ಸ್ಪೈಡರ್-ಮ್ಯಾನ್ʼ ದಾಖಲೆ ಬರೆದಿದೆ.
Rishab Shetty: ಹಾಲಿವುಡ್‌ನಲ್ಲಿ ಮಿಂಚಿದ ರಿಷಬ್ ಶೆಟ್ಟಿ! ಸ್ಪೈಡರ್ ಮ್ಯಾನ್ ಜೊತೆ ಡಿವೈನ್ ಸ್ಟಾರ್
ಡೆಸ್ಟಿನ್ ಡೇನಿಯಲ್ ಕ್ರೆಟನ್ ನಿರ್ದೇಶನದ 'ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಚಿತ್ರದಲ್ಲಿ ಟಾಮ್ ಹಾಲ್ಯಾಂಡ್ ಪೀಟರ್ ಪಾರ್ಕರ್/ಸ್ಪೈಡರ್-ಮ್ಯಾನ್ ಆಗಿ ಹಿಂತಿರುಗಿದ್ದಾರೆ. ಈ ಚಿತ್ರದಲ್ಲಿ ಝೆಂಡಾಯಾ, ಸಾಡಿ ಸಿಂಕ್, ಜೇಕಬ್ ಬ್ಯಾಟಲನ್ ಮತ್ತು ಜಾನ್ ಫಾವ್ರೋ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸ್ಪೈಡರ್-ಮ್ಯಾನ್ ಫ್ರಾಂಚೈಸಿಯ ಈ ಇತ್ತೀಚಿನ ಭಾಗವು ವಿಶ್ವಾದ್ಯಂತ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುತ್ತಿದೆ.
ಕರ್ನಾಟಕದಲ್ಲಿ ದಾಖಲೆ ಬರೆದ 'ಸ್ಪೈಡರ್-ಮ್ಯಾನ್ʼ
ಹೌದು, 2026ರಲ್ಲಿ ಕರ್ನಾಟಕದಲ್ಲಿ ವೀಕೆಂಡ್‌ನಲ್ಲಿ ಟಾಪ್ ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ 'ಸ್ಪೈಡರ್-ಮ್ಯಾನ್ʼ (37.05 ಕೋಟಿ) ಸಿನಿಮಾವು 2ನೇ ಸ್ಥಾನದಲ್ಲಿದೆ. ಧುರಂಧರ್ (53.83 ಕೋಟಿ) ಮೊದಲ ಸ್ಥಾನದಲ್ಲಿದೆ. ಜನ ನಾಯಗನ್ (23.80 ಕೋಟಿ) ಮೂರನೇ ಸ್ಥಾನದಲ್ಲಿದೆ. ರಾಮ್ ಚರಣ್ ಅವರ ಪೆದ್ದಿ (21.72 ಕೋಟಿ) ನಾಲ್ಕನೇ ಸ್ಥಾನದಲ್ಲಿದೆ. ವಿಪರ್ಯಾಸವೆಂದರೆ, ಕನ್ನಡ ಸಿನಿಮಾಗಳೇ ಲಿಸ್ಟ್‌ನಲ್ಲಿ ಇಲ್ಲ.
ಇನ್ನು, ʻಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇʼ ಸಿನಿಮಾವು ಕರ್ನಾಟಕದಲ್ಲಿ 37.05 ಕೋಟಿ ರೂ. ಗಳಿಸಿದೆ. ಮೊದಲ ದಿನ 8.90 ಕೋಟಿ ರೂ. ಗಳಿಸಿದ್ದ ಈ ಸಿನಿಮಾವು, ನಂತರದ ದಿನಗಳಲ್ಲಿ ಕ್ರಮವಾಗಿ 6.85 ಕೋಟಿ ರೂ., 10.28 ಕೋಟಿ ರೂ., 11.02 ಕೋಟಿ ರೂ. ಗಳಿಸಿದೆ. ಅಂದಹಾಗೆ, ಕರ್ನಾಟಕದಲ್ಲಿ ಹಾಲಿವುಡ್ ಸಿನಿಮಾವೊಂದರ ಸಾರ್ವಕಾಲಿಕ ಗರಿಷ್ಠ ಮೊದಲ ವಾರಾಂತ್ಯದ ಗ್ರಾಸ್ ಗಳಿಕೆಯಾಗಿದೆ.