ಭಾರಿ ಸದ್ದು ಮಾಡಿದ್ದ ʻದಿ ಕೇರಳ ಸ್ಟೋರಿ 2ʼ ಸಿನಿಮಾ ಈವರೆಗೂ ಗಳಿಸಿದ ಹಣವೆಷ್ಟು? ಈ ಕಲೆಕ್ಷನ್‌ನಿಂದ ದಾಖಲೆ ಆಗಲು ಸಾಧ್ಯವೇ?
The Kerala Story 2 Box Office: ಭಾರಿ ವಿವಾದ ಮತ್ತು ಕಾನೂನು ಹೋರಾಟದ ನಡುವೆ ಫೆಬ್ರವರಿ 27 ರಂದು ಬಿಡುಗಡೆಯಾದ 'ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್' ಸಿನಿಮಾ ಎರಡು ದಿನಗಳಲ್ಲಿ ಸಾಧಾರಣ ಗಳಿಕೆ ಮಾಡಿದೆ. ಮೊದಲ ದಿನ ಕೇವಲ 75 ಲಕ್ಷ ರೂ. ಗಳಿಸಿದ್ದ ಈ ಚಿತ್ರ, ಎರಡನೇ ದಿನಕ್ಕೆ ಕೊಂಚ ಚೇತರಿಕೆ ಕಂಡಿದೆ.
-
ಭಾರಿ ವಿವಾದಕ್ಕೆ ಕಾರಣವಾಗಿದ್ದ ʻದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್ʼ ಸಿನಿಮಾವು ದೇಶಾದ್ಯಂತ ತೆರೆಕಂಡಿದೆ. ಆರಂಭದಲ್ಲಿ ಕೇರಳ ಹೈಕೋರ್ಟ್ ಈ ಸಿನಿಮಾವನ್ನು ರಿಲೀಸ್ ಮಾಡದಂತೆ ತಡೆಯಾಜ್ಞೆ ತಂದಿತ್ತು. ಕೊನೆ ಗಳಿಗೆಯಲ್ಲಿ ನ್ಯಾಯಾಲಯದಿಂದ ಅನುಮತಿ ಪಡೆದ ಚಿತ್ರತಂಡ, ಫೆ.27ರ ಸಂಜೆ ಹೊತ್ತಿಗೆ ಸಿನಿಮಾವನ್ನು ರಿಲೀಸ್ ಮಾಡಿತ್ತು. ಆದರೆ ಅಂದುಕೊಂಡ ಮಟ್ಟಕ್ಕೆ ಈ ಚಿತ್ರ ಗಳಿಕೆ ಮಾಡುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಎರಡು ದಿನಗಳ ಗಳಿಕೆ ಎಷ್ಟು?
ಮೂರು ವರ್ಷಗಳ ಹಿಂದೆ ರಿಲೀಸ್ ಆಗಿದ್ದ ʻದಿ ಕೇರಳ ಸ್ಟೋರಿʼ ಸಿನಿಮಾವು ಮೊದಲ ದಿನವೇ 8+ ಕೋಟಿ ರೂ. ಗಳಿಸಿತ್ತು. ಆದರೆ ʻದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್ʼ ಚಿತ್ರಕ್ಕೆ ಎರಡೂ ದಿನ ಕಳೆದರೂ ಆ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ. ಆರಂಭದಿಂದಲೂ ಭಾರಿ ಕುತೂಹಲ ಕೆರಳಿಸಿದ್ದ ದಿ ಕೇರಳ ಸ್ಟೋರಿ 2 ಚಿತ್ರವು ಮೊದಲ ದಿನ ಗಳಿಸಿದ್ದು ಬರೀ 75 ಲಕ್ಷ ರೂ. ಮಾತ್ರ. ಅದಕ್ಕೂ ಕಾರಣವಿದೆ. ಈ ಚಿತ್ರವು ಮೊದಲ ದಿನ ರಿಲೀಸ್ ಆಗಿದ್ದೇ ಸಂಜೆ ಮೇಲೆ. ಪ್ರೇಕ್ಷಕರಲ್ಲೂ ಬಿಡುಗಡೆ ಬಗ್ಗೆ ಗೊಂದಲ ಇದ್ದಿದ್ದರಿಂದ ಇಷ್ಟು ಕಡಿಮೆ ಗಳಿಕೆ ಆಗಿದೆ ಎನ್ನಬಹುದು.
ಆದರೆ ಎರಡನೇ ದಿನಕ್ಕೆ ಕಲಕ್ಷನ್‌ನಲ್ಲಿ ಏರಿಕೆ ಆಗಿದೆ. ಹೌದು, 2 ನೇ ದಿನದಂದು ಬಾಕ್ಸ್ ಆಫೀಸ್‌ನಲ್ಲಿ 4.65 ಕೋಟಿ ರೂ. ಗಳಿಕೆ ಆಗಿದ್ದು, ಚಿತ್ರದ ಒಟ್ಟು ಗಳಿಕೆ 5.40 ಕೋಟಿ ರೂ. ಆಗಿದೆ. ದಿ ಕೇರಳ ಸ್ಟೋರಿ ಸಿನಿಮಾವು ಅಂತಿಮವಾಗಿ 250 ಕೋಟಿ ರೂ.ಗಳವರೆಗೂ ಕಮಾಯಿ ಮಾಡಿತ್ತು. ಆ ಚಿತ್ರವು ನಿರ್ಮಾಪಕರಿಗೆ ಯಥೇಚ್ಛವಾದ ಲಾಭವನ್ನು ಕೊಟ್ಟಿತ್ತು. ಅದೇ ರೀತಿ ಈ ಚಿತ್ರದಿಂದಲೂ ದೊಡ್ಡ ಗಳಿಕೆ ಆಗಬಹುದು ಎಂಬ ನಿರೀಕ್ಷೆ ಇದೆ. ಆದರೆ ಸದ್ಯದ ಗಳಿಕೆಯನ್ನು ನೋಡಿದರೆ, ಅದು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.
'ದಿ ಕೇರಳ ಸ್ಟೋರಿ 2' ಚಿತ್ರತಂಡದ ವಿರುದ್ಧ ಪಿಣರಾಯಿ ವಿಜಯನ್ ಕೆಂಡ; ʻಸಿನಿಮಾ ಅಲ್ಲ, ಸುಳ್ಳು ಪ್ರಚಾರʼ ಎಂದ ಸಿಎಂ!
ಕಾಮಾಖ್ಯ ನಾರಾಯಣ್ ಸಿಂಗ್ ನಿರ್ದೇಶನದ ಈ ಚಿತ್ರವು ಮೊದಲ ದಿನದ ಕಲೆಕ್ಷನ್‌ಗೆ ಹೋಲಿಸಿದರೆ ಎರಡನೇ ದಿನಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಬೆಳವಣಿಗೆ ಕಂಡಿದೆ. ಯುವ ಹಿಂದೂ ಮಹಿಳೆಯರು ಅಂತರ್ಧರ್ಮೀಯ ವಿವಾಹಗಳಲ್ಲಿ ಹೇಗೆ ಸಿಕ್ಕಿಹಾಕಿಕೊಂಡಿದ್ದಾರೆ? ಮದುವೆ ನಂತರ ಎಂಥ ದೌರ್ಜನ್ಯವನ್ನು ಎದುರಿಸುತ್ತಾರೆ? ಬಲವಂತವಾಗಿ ಯಾವ ರೀತಿ ಮತಾಂತರಗೊಳ್ಳುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆಯಂತೆ. ಈ ಚಿತ್ರದ ಟ್ರೇಲರ್ ಬಿಡುಗಡೆಯಾದಾಗಲೇ ವಿವಾದವನ್ನು ಹುಟ್ಟುಹಾಕಿತ್ತು.
ವಿಪುಲ್ ಅಮೃತ್‌ಲಾಲ್ ಶಾ ನಿರ್ಮಾಣದ ದಿ ಕೇರಳ ಸ್ಟೋರಿ 2 ರಲ್ಲಿ ಉಲ್ಕಾ ಗುಪ್ತಾ, ಅದಿತಿ ಭಾಟಿಯಾ, ಐಶ್ವರ್ಯಾ ಓಜಾ, ಸುಮಿತ್ ಗಹ್ಲಾವತ್ ಮತ್ತು ಅರ್ಜನ್ ಸಿಂಗ್ ಔಜ್ಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. "ನೀವು ಚಿತ್ರವನ್ನು ನೋಡಿದಾಗ, ನಾವು ಕೇರಳದ ವಿರುದ್ಧ ಇಲ್ಲ ಎಂಬುದನ್ನು ನೀವು ಅರಿತುಕೊಳ್ಳುತ್ತೀರಿ. ಅಂತಹ ಮಹಾನ್ ರಾಜ್ಯವನ್ನು ದೂಷಿಸುವ ಅಪರಾಧಿಗಳ ವಿರುದ್ಧ ನಾವು ಇದ್ದೇವೆ" ಎಂದು ನಿರ್ಮಾಪಕರು ಹೇಳಿದ್ದಾರೆ.