ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ಗೆಳತಿ ಗಾಯತ್ರಿ’ ಧಾರಾವಾಹಿ ಮೂಲಕ ವೈಷ್ಣವಿ ಗೌಡ ಕಮ್‌ಬ್ಯಾಕ್, ಜೊತೆಯಾದ ಕೃತ್ತಿಕಾ ರವೀಂದ್ರ; ಈ ಸೀರಿಯಲ್‌ ಯಾವಾಗಿಂದ ಪ್ರಸಾರ?

'ಗೆಳತಿ ಗಾಯತ್ರಿ' ಧಾರಾವಾಹಿ ಮೂಲಕ ನಟಿ ವೈಷ್ಣವಿ ಗೌಡ ಮದುವೆಯ ನಂತರ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಕೃತ್ತಿಕಾ ರವೀಂದ್ರ ಗಾಯತ್ರಿಯಾಗಿ ಹಾಗೂ ವೈಷ್ಣವಿ ಪಾರ್ವತಿಯಾಗಿ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಬಾಲ್ಯದಲ್ಲಿ ದೂರವಾದ ಇಬ್ಬರು ಪ್ರಾಣಸ್ನೇಹಿತೆಯರ ಹುಡುಕಾಟ ಹಾಗೂ ವಿಧಿ ನೀಡುವ ಭಾವನಾತ್ಮಕ ತಿರುವುಗಳ ಕಥಾಹಂದರವನ್ನು ಈ ಧಾರಾವಾಹಿ ಹೊಂದಿದೆ.

‘ಗೆಳತಿ ಗಾಯತ್ರಿ’ ಧಾರಾವಾಹಿಗಾಗಿ ಜೊತೆಯಾದ ವೈಷ್ಣವಿ ಗೌಡ-ಕೃತ್ತಿಕಾ ರವೀಂದ್ರ

-

Avinash GR
Avinash GR Aug 10, 2026 7:52 PM

ವೈವಿಧ್ಯಮಯ ಕಥೆಗಳ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಮನಗೆದ್ದಿರುವ 'ಸನ್ ಉದಯ' ವಾಹಿನಿ, 'ಭಾಗ್ಯವಂತರು' ಧಾರಾವಾಹಿಯ ಯಶಸ್ಸಿನ ಬಳಿಕ ಮತ್ತೊಂದು ವಿಭಿನ್ನ ಕಥಾಹಂದರ ಹೊತ್ತು ತರುತ್ತಿದೆ. ಸ್ನೇಹ, ನೆನಪು ಹಾಗೂ ಭಾವನಾತ್ಮಕ ಬಾಂಧವ್ಯವನ್ನು ಸಾರುವ ‘ಗೆಳತಿ ಗಾಯತ್ರಿ’ ಎಂಬ ಹೊಸ ಧಾರಾವಾಹಿ ಇದೇ ಆಗಸ್ಟ್ 17ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.

ಈ ಧಾರಾವಾಹಿಯ ಮೂಲಕ ಜನಪ್ರಿಯ ನಟಿ ವೈಷ್ಣವಿ ಗೌಡ ಅವರು ಮತ್ತೆ ಕಿರುತೆರೆಗೆ ಕಮ್‌ಬ್ಯಾಕ್ ಮಾಡುತ್ತಿರುವುದು ಅವರ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮತ್ತು ಸಂತಸ ಮೂಡಿಸಿದೆ. ಮದುವೆ ಬಳಿಕ ವೈಷ್ಣವಿ ಗೌಡ ಕಿರುತೆರೆಗೆ ಮರಳುತ್ತಾರಾ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಪ್ರಮುಖ ಪಾತ್ರದಲ್ಲಿ ವೈಷ್ಣವಿ ಗೌಡ – ಕೃತ್ತಿಕಾ ರವೀಂದ್ರ

ನಟಿ ವೈಷ್ಣವಿ ಗೌಡ ಅವರು ಈ ಧಾರಾವಾಹಿಯಲ್ಲಿ ‘ಪಾರ್ವತಿ’ ಎಂಬ ಶ್ರೀಮಂತ ಹಾಗೂ ಸುಖಿ ಕುಟುಂಬದ ಗೃಹಿಣಿಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಮತ್ತೊಬ್ಬ ಪ್ರಸಿದ್ಧ ನಟಿ ಕೃತ್ತಿಕಾ ರವೀಂದ್ರ ಅವರು ‘ಗಾಯತ್ರಿ’ ಎಂಬ ಶೀರ್ಷಿಕೆ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಈ ಇಬ್ಬರೂ ನಟಿಯರ ಕಾಂಬಿನೇಷನ್ ಪರದೆಯ ಮೇಲೆ ಇಬ್ಬರು ಆತ್ಮೀಯ ಗೆಳತಿಯರ ಭಾವನಾತ್ಮಕ ಪಯಣವನ್ನು ಅನಾವರಣಗೊಳಿಸಲಿದೆ. ನಟ ನಾಗಾರ್ಜುನ ನಾಯಕನಾಗಿ ನಟಿಸುತ್ತಿದ್ದು, ಪದ್ಮಿನಿ ಮತ್ತು ರಾಘು ಇತರೆ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಸ್ನೇಹದ ಅನನ್ಯ ಪಯಣದ ಕಥಾಹಂದರ

ಬಾಲ್ಯದಲ್ಲಿ ಒಂದಾಗಿ ಆಡಿ ಬೆಳೆದ ಪಾರ್ವತಿ ಮತ್ತು ಗಾಯತ್ರಿ ಕಾಲ ಸರಿದಂತೆ ಕಾರಣಾಂತರಗಳಿಂದ ದೂರವಾಗುತ್ತಾರೆ. ಶ್ರೀಮಂತ ಕುಟುಂಬ, ಪ್ರೀತಿಯ ಪತಿ ಮತ್ತು ಮುದ್ದಾದ ಮಗಳಿದ್ದರೂ ಪಾರ್ವತಿಗೆ ಬಾಲ್ಯದ ಗೆಳತಿ ಗಾಯತ್ರಿಯನ್ನು ಕಾಣುವ ಹಂಬಲ ಮಾಸುವುದಿಲ್ಲ. ತನ್ನ ಪ್ರಾಣಸ್ನೇಹಿತೆಯನ್ನು ಹುಡುಕುವ ಪಾರ್ವತಿಯ ನಂಬಿಕೆ ಕೊನೆಗೂ ಫಲ ನೀಡುತ್ತದೆಯೇ? ವರ್ಷಗಳ ಬಳಿಕ ಈ ಗೆಳತಿಯರು ಒಂದಾಗುತ್ತಾರೆಯೇ? ಇವರ ಸ್ನೇಹಕ್ಕೆ ವಿಧಿ ಯಾವ ತಿರುವು ನೀಡಲಿದೆ ಎಂಬುದೇ ಈ ಕಥೆಯ ಮೂಲ ಎಳೆಯಾಗಿದೆ.

Vaishnavi Gowda: ಈ ಸೀರಿಯಲ್‌ನಲ್ಲಿ ವೈಷ್ಣವಿ ಗೌಡ? ಯಾವ ವಾಹಿನಿ?

ಜೆ.ಜಯಮ್ಮ, ಮಿಲನ ಪ್ರಕಾಶ್‌ ಮತ್ತು ತಶ್ವಿನಿ ನಿರ್ಮಾಪಕರಾಗಿ, ಡಿ.ಓ.ಪಿಯಾಗಿ ಅನಂತ ಗೌಡ ಕಾರ್ಯನಿರ್ಹಿಸಲಿದ್ದಾರೆ. ವಿಕಾಸ ನೇಗಿಲೋಣಿ ಚಿತ್ರಕಥೆ ಮತ್ತು ಅಭಿಜ್ಞಾ ಸಂಭಾಷಣೆ ಹೊಣೆ ಹೊತ್ತಿದ್ದಾರೆ. ಸ್ನೇಹ, ನೆನಪು, ಪ್ರೀತಿ, ನಿರೀಕ್ಷೆ, ಕನವರಿಕೆ ಮತ್ತು ಭಾವನೆಗಳ ಸಂಗಮವಾಗಿ, ಪ್ರತಿಯೊಬ್ಬರ ಹೃದಯ ತಟ್ಟುವ 'ಗೆಳತಿ ಗಾಯತ್ರಿ' ಸನ್ ಉದಯದಲ್ಲಿ ಇದೇ ಆಗಸ್ಟ್ 17 ಸೋಮವಾರದಿಂದ ಸಂಜೆ 7ಕ್ಕೆ ಪ್ರಸಾರವಾಗಲಿದೆ.