ಭಾರತೀಯ ಸಂಗೀತ ಲೋಕದ ಲೆಜೆಂಡರಿ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ; ಗಾಯನ ನಿಲ್ಲಿಸಿದ ʻಮೆಲೋಡಿ ಕ್ವೀನ್ʼ
Asha Bhonsle Passes Away: ಭಾರತೀಯ ಸಂಗೀತ ಲೋಕದ ಶ್ರೇಷ್ಠ ಗಾಯಕಿ ಆಶಾ ಭೋಸ್ಲೆ (92) ಭಾನುವಾರ ನಿಧನರಾಗಿದ್ದಾರೆ. ಉಸಿರಾಟದ ತೊಂದರೆ ಮತ್ತು ಹೃದಯ ಸಂಬಂಧಿ ಸಮಸ್ಯೆಯಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
-
ಭಾರತೀಯ ಸಂಗೀತ ಲೋಕದ ಶ್ರೇಷ್ಠ ಗಾಯಕಿ ಆಶಾ ಭೋಸ್ಲೆ ಅವರು ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಶನಿವಾರ (ಏ.11) ಹೃದಯ ಸಂಬಂಧಿ ಸಮಸ್ಯೆ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು.
ಶನಿವಾರ ರಾತ್ರಿ ಅವರನ್ನು ಆಸ್ಪತ್ರೆಗೆ ಕರೆತರುವಾಗಲೇ ಅವರ ಸ್ಥಿತಿ ಗಂಭೀರವಾಗಿತ್ತು ಎನ್ನಲಾಗಿತ್ತು, ತಕ್ಷಣವೇ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಅವರು ಸ್ಪಂದಿಸದೇ ಭಾನುವಾರೆ ಕೊನೆಯುಸಿರೆಳೆದಿದ್ದಾರೆ. ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಡಾ. ಪ್ರತೀತ್ ಸಮದಾನಿ ಅವರು ಆಶಾ ಭೋಸ್ಲೆ ಅವರ ನಿಧನವನ್ನು ಖಚಿತಪಡಿಸಿದ್ದಾರೆ. ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆಯು ಸೋಮವಾರ (ಏ.13) ನಡೆಯಲಿದೆ.
ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು
ಇದಕ್ಕೂ ಮೊದಲು, ಆಶಾ ಭೋಸ್ಲೆ ಆಸ್ಪತ್ರೆಗೆ ದಾಖಲಾದಾಗ ಅವರ ಮೊಮ್ಮಗಳು ಜನೈ ಭೋಸ್ಲೆ ಒಂದು ಪೋಸ್ಟ್ ಹಂಚಿಕೊಂಡಿದ್ದರು. "ನನ್ನ ಅಜ್ಜಿ ಆಶಾ ಭೋಸ್ಲೆ ಅವರು ಅತಿಯಾದ ಆಯಾಸ ಮತ್ತು ಎದೆಯ ಸೋಂಕಿನಿಂದ ಬಳಲುತ್ತಿದ್ದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಮ್ಮ ಖಾಸಗಿತನವನ್ನು ಗೌರವಿಸಬೇಕೆಂದು ನಾವು ನಿಮ್ಮಲ್ಲಿ ವಿನಂತಿಸುತ್ತೇವೆ. ಚಿಕಿತ್ಸೆ ಮುಂದುವರಿಯುತ್ತಿದ್ದು, ಎಲ್ಲವೂ ಸರಿಯಾಗಲಿದೆ ಎಂದು ನಾವು ಭಾವಿಸುತ್ತೇವೆ. ಶೀಘ್ರದಲ್ಲೇ ನಿಮಗೆ ಸಕಾರಾತ್ಮಕ ಅಪ್‌ಡೇಟ್ ನೀಡುತ್ತೇವೆ" ಎಂದು ಬರೆದುಕೊಂಡಿದ್ದರು. ಆದರೆ ಈ ಪೋಸ್ಟ್ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಆಶಾ ಭೋಸ್ಲೆ ಅವರು ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಮೂಲದ ಆಶಾ ಭೋಸ್ಲೆ
1933ರ ಸೆಪ್ಟೆಂಬರ್ 8ರಂದು ಮಹಾರಾಷ್ಟ್ರದ ಸಾಂಗ್ಲಿಯ ಗೋಕರ್ ಮೂಲದ ಪಂಡಿತ್ ದೀನನಾಥ್ ಮಂಗೇಶ್ಕರ್ ಮತ್ತು ಶೇವಂತಿ ದಂಪತಿಗೆ ಜನಿಸಿದ ಮಗಳಾಗಿ ಜನಿಸಿದ ಆಶಾ ಭೋಸ್ಲೆ, ತಮ್ಮ 9ನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರು. ಆನಂತರ ಆಶಾ ಅವರ ಕುಟುಂಬವು ಮುಂಬೈಗೆ ಸ್ಥಳಾಂತರಗೊಂಡಿತು. ಆ ವೇಳೆಗೆ ಆಶಾ ಅವರ ಹಿರಿಯ ಸಹೋದರಿ ಲತಾ ಮಂಗೇಶ್ಕರ್ ಗಾಯಕಿಯಾಗಿ ವೃತ್ತಿಜೀವನ ಆರಂಭಿಸಿದ್ದರು. ಹಿಂದಿ ಚಿತ್ರರಂಗಕ್ಕೆ ಆಶಾ ಪ್ರವೇಶ ನೀಡಿದ್ದು 1948ರ 'ಚುನ್ರಿಯಾ' ಚಿತ್ರದ 'ಸಾವನ್ ಆಯಾ' ಹಾಡಿನ ಮೂಲಕ. 1949ರಲ್ಲಿ ಬಂದ 'ರಾತ್ ಕಿ ರಾಣಿ' ಚಿತ್ರಕ್ಕಾಗಿ ಆಶಾ ತಮ್ಮ ಮೊದಲ ಸೋಲೋ ಹಿಂದಿ ಗೀತೆಯನ್ನು ಹಾಡಿದರು.
Mohammed Siraj: ಆಶಾ ಭೋಸ್ಲೆ ಮೊಮ್ಮಗಳ ಜತೆ ರಕ್ಷಾಬಂಧನ ಆಚರಿಸಿದ ಸಿರಾಜ್
50, 60, 70ರ ದಶಕದ ಬಾಲಿವುಡ್ ಸಂಗೀತದ ಸುವರ್ಣ ಯುಗದ ಐಕಾನ್ ಗಾಯಕಿರಲ್ಲಿ ಆಶಾ ಕೂಡ ಒಬ್ಬರಾಗಿದ್ದರು. ಆಶಾ ಅವರು ತಮ್ಮ 'ಸೊಪ್ರಾನೊ' ಧ್ವನಿ ಮತ್ತು ಬಹುಮುಖ ಪ್ರತಿಭೆಗೆ ಹೆಸರುವಾಸಿಯಾಗಿದ್ದರು. ಸಿನಿಮಾ ಸಂಗೀತ, ಪಾಪ್, ಶಾಸ್ತ್ರೀಯ ಸಂಗೀತ, ಭಜನೆಗಳು, ಗಜಲ್‌ಗಳು, ಜಾನಪದ, ಕವ್ವಾಲಿ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಆಶಾ ಪಾಂಡಿತ್ಯ ಹೊಂದಿದ್ದರು. ತಮ್ಮ ಜೀವಿತಾವಧಿಯಲ್ಲಿ, ಆಶಾ ಅವರು 20ಕ್ಕೂ ಹೆಚ್ಚು ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ 12 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದರು.
ಆಶಾ ಭೋಸ್ಲೆ ಅವರಿಗೆ ಸಂದ ಗೌರವಗಳು
ಭಾರತೀಯ ಸಂಗೀತಕ್ಕೆ ಆಶಾ ಭೋಸ್ಲೆ ನೀಡಿದ ಕೊಡುಗೆಯನ್ನು ಗುರುತಿಸಿ ಅವರಿಗೆ 2000ರಲ್ಲಿ 'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿ ಮತ್ತು 2008 ರಲ್ಲಿ 'ಪದ್ಮ ವಿಭೂಷಣ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅವರು 'ಉಮ್ರಾವ್ ಜಾನ್' (1981) ಚಿತ್ರದ 'ದಿಲ್ ಚೀಜ್ ಕ್ಯಾ ಹೈ' ಮತ್ತು 'ಇಜಾಜತ್' (1987) ಚಿತ್ರದ 'ಮೇರಾ ಕುಚ್ ಸಮಾನ್' ಹಾಡಿಗಾಗಿ ಎರಡು ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕಿ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ.