ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಈ ಒಂದು ಕಾರಣಕ್ಕೆ ಅಂದು ಪದ್ಮ ಭೂಷಣ ಪ್ರಶಸ್ತಿ ನಿರಾಕರಿಸಿದ್ದ ಗಾಯಕಿ ಎಸ್‌. ಜಾನಕಿ

ಹಿನ್ನೆಲೆ ಗಾಯನಕ್ಕಾಗಿ 4 ಬಾರಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಗಾಯಕಿ, ಗಾನ ಕೋಗಿಲೆ ಎಸ್‌. ಜಾನಕಿ ಮೈಸೂರಿನಲ್ಲಿ ನಿಧನ ಹೊಂದಿದರು. ಅವರು 2013ರಲ್ಲಿ ತಮ್ಮನ್ನು ಅರಸಿಕೊಂಡು ಬಂದಿದ್ದ ಪದ್ಮ ಭೂಷಣ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದರು. ಅದೇಕೆ ಎನ್ನುವ ವಿವರ ಇಲ್ಲಿದೆ.

ಪದ್ಮ ಭೂಷಣ ಪ್ರಶಸ್ತಿ ನಿರಾಕರಿಸಿದ್ದೇಕೆ ಗಾಯಕಿ ಎಸ್‌. ಜಾನಕಿ?

ಎಸ್‌. ಜಾನಕಿ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Jul 11, 2026 9:29 PM

ಬೆಂಗಳೂರು, ಜು. 11: ಹಿನ್ನೆಲೆ ಗಾಯನಕ್ಕಾಗಿ 4 ಬಾರಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಗಾಯಕಿ, ಗಾನ ಕೋಗಿಲೆ ಎಸ್‌. ಜಾನಕಿ (S Janaki) ಮೈಸೂರಿನಲ್ಲಿ ನಿಧನ ಹೊಂದಿದರು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೈಸೂರು ಅಪೋಲೋ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು. ಸುಮಾರು 6 ದಶಕಗಳ ಕಾಲ 48 ಸಾವಿರಕ್ಕೂ ಅಧಿಕ ಹಾಡುಗಳಿಗೆ ‍ಧ್ವನಿ ನೀಡಿದ್ದ ಅವರನ್ನು ಕಳೆದುಕೊಂಡು ಭಾರತೀಯ ಚಿತ್ರರಂಗ ಅಕರಶಃ ಕಣ್ಣೀರಿಡುತ್ತಿದೆ. 1938ರಲ್ಲಿ ಆಂಧ್ರ ಪ್ರದೇಶದ ಗುಂಟೂರ್‌ನಲ್ಲಿ ಜನಿಸಿದ ಎಸ್‌. ಜಾನಕಿ 20ಕ್ಕಿಂತ ಅಧಿಕ ಭಾರತೀಯ ಭಾಷೆಗಳಲ್ಲಿ ಹಾಡಿದ್ದಾರೆ. ಅಲ್ಲದೆ ಅನೇಕ ವಿದೇಶಿ ಭಾಷೆಗಳ ಹಾಡನ್ನೂ ತಮ್ಮ ಸುಮಧುರ ಕಂಠದಿಂದ ಶ್ರೀಮಂತಗೊಳಿಸಿದ್ದಾರೆ. ಅವರು 2013ರಲ್ಲಿ ತಮ್ಮನ್ನು ಅರಸಿಕೊಂಡು ಬಂದಿದ್ದ ಪದ್ಮ ಭೂಷಣ (Padma Bhushan) ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದರು. ಅದೇಕೆ ಎನ್ನುವ ವಿವರ ಇಲ್ಲಿದೆ.

2013ರಲ್ಲಿ ಅಂದಿನ ಕೇಂದ್ರ ಸರ್ಕಾರ ಗಾನ ಕೋಗಿಲೆ ಜಾನಕಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಿಸಿದಾಗ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರು. ತಡವಾಗಿಯಾದರೂ ತಮ್ಮ ನೆಚ್ಚಿನ ಗಾಯಕಿಗೆ ಪ್ರತಿಷ್ಠಿತ ಪ್ರಶಸ್ತಿ ಬಂತಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದರು. ಆದರೆ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸುವ ಮೂಲಕ ಜಾನಕಿ ಎಲ್ಲರಿಗೂ ಶಾಕ್‌ ನೀಡಿದ್ದರು.

6 ತಿಂಗಳ ಹಿಂದಷ್ಟೇ ಇದ್ದೊಬ್ಬ ಮಗನನ್ನು ಕಳೆದುಕೊಂಡಿದ್ದ ಎಸ್‌. ಜಾನಕಿ; ಇಳಿವಯಸ್ಸಿನಲ್ಲಿ ಕಾಡಿತೇ ಪುತ್ರಶೋಕ?

ಜಾನಕಿ ಅವರ ಈ ನಿರ್ಧಾರಕ್ಕೆ ಕಾರಣವೇನು?

ಜಾನಕಿ ಅವರ ಈ ನಿರ್ಧಾರ ಎಲ್ಲರನ್ನೂ ಅಚ್ಚರಿಗೆ ದೂಡಿತ್ತು. ಇದೇ ವೇಳೆ ಜಾನಕಿ ತಮ್ಮ ನಿರ್ಧಾರಕ್ಕೆ ಕಾರಣವನ್ನೂ ಬಹಿರಂಗಪಡಿಸಿದರು. ತಡವಾಗಿ ತಮ್ಮ ಪ್ರತಿಭೆಯನ್ನು ಗುರುತಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಸುಮಾರು ಐದೂವರೆ ದಶಕಗಳ ಕಾಲ ಗಾಯನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೂ ಪ್ರಶಸ್ತಿ ತಡವಾಗಿ ತಮ್ಮನ್ನು ಅರಸಿಕೊಂಡು ಬಂದಿದೆ ಎಂದು ಹೇಳಿದ್ದರು.

ʼʼನಾನು ಪದ್ಮ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ. ನಾನು 55 ವರ್ಷಗಳಿಂದ ಹಾಡುತ್ತಿದ್ದೇನೆ. ವಿವಿಧ ಭಾಷೆಗಳಲ್ಲಿ ಅಭಿಮಾನಿಗಳು ನನ್ನನ್ನು ಗುರುತಿಸಿದ್ದಾರೆ. ಅದನ್ನೇ ನಾನು ಅತಿ ದೊಡ್ಡ ಪ್ರಶಸ್ತಿ ಎಂದು ಭಾವಿಸುತ್ತೇನೆʼʼ ಎಂಬುದಾಗಿ ತಿಳಿಸಿದ್ದರು. ಅದಾಗ್ಯೂ ತಮಗೆ ಸರ್ಕಾರದ ವಿರುದ್ಧ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆ ಮೂಲಕ ಸಾತ್ವಿಕ ಸಿಟ್ಟನ್ನು ಹೊರ ಹಾಕಿದ್ದರು.

ಗಾನ ಕೋಗಿಲೆ ಎಸ್.ಜಾನಕಿ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳಿವು!

"ನಾನು 5 ದಶಕಗಳಿಂದ ಹಾಡುತ್ತಿದ್ದೇನೆ. ನಾನು ಹಲವು ಭಾಷೆಗಳಲ್ಲಿ ವಿವಿಧ ರೀತಿಯ ಹಾಡುಗಳಿಗೆ ಧ್ವನಿ ನೀಡಿದ್ದೇನೆ. ಅವರೆಲ್ಲರೂ ನನ್ನ ಹಾಡುಗಳನ್ನು ಮೆಚ್ಚಿಕೊಂಡಿದ್ದಾರೆ. ಮಲಯಾಳಿಗಳು ಸಹ ನನ್ನ ಉಚ್ಚಾರಣೆ ಸರಿಯಾಗಿದೆ ಎಂದು ಹೇಳಿದ್ದಾರೆ. ಜನರಿಂದ ಮನ್ನಣೆ ಪಡೆಯುವುದಕ್ಕಿಂತ ನನಗೆ ಬೇರೇನು ಬೇಕು?" ಎಂದು ವಿನಮ್ರತೆಯಿಂದ ಪ್ರಶ್ನಿಸಿದ್ದರು.

"ನನಗೆ ಸರ್ಕಾರದ ಬಗ್ಗೆ ಯಾವುದೇ ದೂರು ಇಲ್ಲ. ಸರ್ಕಾರ ತಪ್ಪು ಮಾಡಿದೆ ಎಂದು ನಾನು ಭಾವಿಸುವುದಿಲ್ಲ. ಆದರೆ ನಾನು ಪದ್ಮ ಪ್ರಶಸ್ತಿಯನ್ನು ನಿರಾಕರಿಸಲು ನಿರ್ಧರಿಸಿದ್ದೇನೆ" ಎಂದು ಪ್ರಶಸ್ತಿ ಘೋಷಣೆಯಾದಾಗ ಕೇರಳಂನಲ್ಲಿದ್ದ ಜಾನಕಿ ತಮ್ಮ ನಿರ್ಧಾರ ಪ್ರಕಟಿಸಿದ್ದರು. ತಮಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಸಿಗಬೇಕಿತ್ತು ಎಂದು ಅವರು ಬಹಿರಂಗವಾಗಿ ಹೇಳಿಕೊಂಡಿದ್ದರು.

ಮನರಂಜನೆಯ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.