Bihar Bypoll: ಪ್ರಶಾಂತ್ ಕಿಶೋರ್‌ಗೆ ಬೆದರಿತಾ ಬಿಜೆಪಿ? ಬ್ಯಾಂಕಿಪುರದಲ್ಲಿ ಅಭ್ಯರ್ಥಿ ಬದಲಾವಣೆ; ಅಭಿಷೇಕ್ ಬಂಟಿ ಬದಲು ನೀರಜ್ ಸಿನ್ಹಾಗೆ ಟಿಕೆಟ್
Bankipur Bypoll: ಬಿಹಾರದ ಬ್ಯಾಂಕಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಮಹತ್ವದ ಬದಲಾವಣೆ ಮಾಡಿದೆ. ನಾಮಪತ್ರ ಸಲ್ಲಿಸಿದ ಕೇವಲ ಒಂದು ದಿನದೊಳಗೆ ಅಭಿಷೇಕ್ ಬಂಟಿ ಅವರನ್ನು ಬದಲಿಸಿ ನೀರಜ್ ಕುಮಾರ್ ಸಿನ್ಹಾ ಅವರಿಗೆ ಟಿಕೆಟ್ ನೀಡಲಾಗಿದೆ. ವೈಯಕ್ತಿಕ ಕಾರಣಗಳಿಂದ ಸ್ಪರ್ಧೆಯಿಂದ ಹಿಂದೆ ಸರಿದಿರುವುದಾಗಿ ಬಂಟಿ ತಿಳಿಸಿದ್ದಾರೆ. ಮೇವು ಹಗರಣಕ್ಕೆ ಸಂಬಂಧಿಸಿದ ವಿಚಾರ ಚುನಾವಣಾ ವಿಷಯವಾಗುವ ಸಾಧ್ಯತೆಯನ್ನು ಗಮನಿಸಿ ಬಿಜೆಪಿ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ನಾಮಪತ್ರ ಹಿಂಪಡೆದ ಅಭಿಷೇಕ್ ಬಂಟಿ ಮತ್ತು ಪ್ರಶಾಂತ್ ಕಿಶೋರ್ -
ಪಾಟ್ನಾ, ಜು. 11: ಬಿಹಾರದ ಬ್ಯಾಂಕಿಪುರ ವಿಧಾನಸಭಾ ಉಪಚುನಾವಣೆಯಲ್ಲಿ (Bankipur Bypoll) ಬಿಜೆಪಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ನಾಮಪತ್ರ ಸಲ್ಲಿಸಿದ ಕೇವಲ ಒಂದು ದಿನದೊಳಗೆ ಪಕ್ಷ ತನ್ನ ಅಭ್ಯರ್ಥಿಯನ್ನು ಬದಲಾಯಿಸಿದ್ದು, ಅಭಿಷೇಕ್ ಬಂಟಿ (Abhishek Bunty) ಅವರ ಬದಲಿಗೆ ನೀರಜ್ ಕುಮಾರ್ ಸಿನ್ಹಾ (Neeraj Kumar Sinha) ಅವರನ್ನು ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಿದೆ.
ಗುರುವಾರ (ಜುಲೈ 9) ಮುಖ್ಯಮಂತ್ರಿ ಸಮ್ರಾಟ್ ಚೌಧರಿ ಸೇರಿ ಎನ್‌ಡಿಎ ನಾಯಕರ ಸಮ್ಮುಖದಲ್ಲಿ ಅಭಿಷೇಕ್ ಬಂಟಿ ಭರ್ಜರಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಶುಕ್ರವಾರ ಅವರು 'ವೈಯಕ್ತಿಕ ಕಾರಣಗಳಿಂದ' ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಂಜಯ್ ಸಾರೋಗಿಗೆ ಪತ್ರ ಬರೆದು ಸ್ಪರ್ಧೆಯಿಂದ ಹಿಂದೆ ಸರಿದರು. ನಂತರ ಸುದ್ದಿಗೋಷ್ಠಿಯಲ್ಲೂ ಇದೇ ಕಾರಣವನ್ನು ತಿಳಿಸಿದ ಅವರು ಭಾವೋದ್ವಿಗ್ನರಾಗಿದ್ದರು.
ಅಭ್ಯರ್ಥಿ ಬದಲಾವಣೆಯ ಹಿಂದಿನ ಕಾರಣವೇನು?
ಮೂಲಗಳ ಪ್ರಕಾರ, ಅಭಿಷೇಕ್ ಬಂಟಿ ಅವರ ತಂದೆ ರವೀಂದ್ರ ಪ್ರಸಾದ್ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಮೇವು ಹಗರಣ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದರು. 2022ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಲಾಲು ಪ್ರಸಾದ್ ಯಾದವ್ ಸೇರಿ 75 ಮಂದಿಗೆ ಶಿಕ್ಷೆ ವಿಧಿಸಿತ್ತು. ಆಗ ಮಘಧ್ ಕೆಮಿಕಲ್ ಕಾರ್ಪೊರೇಷನ್‌ನ ವ್ಯವಸ್ಥಾಪಕರಾಗಿದ್ದ ರವೀಂದ್ರ ಪ್ರಸಾದ್ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಈ ವಿಚಾರವನ್ನು ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಚುನಾವಣಾ ಪ್ರಚಾರದಲ್ಲಿ ಪ್ರಮುಖ ಅಸ್ತ್ರವನ್ನಾಗಿ ಬಳಸುವ ಸಾಧ್ಯತೆ ಇದ್ದುದರಿಂದ, ಬಿಜೆಪಿ ಮುನ್ನೆಚ್ಚರಿಕೆ ಕ್ರಮವಾಗಿ ಅಭ್ಯರ್ಥಿಯನ್ನು ಬದಲಾಯಿಸಿದೆ ಎನ್ನಲಾಗಿದೆ.
ಬರೋಬ್ಬರಿ 20 ವರ್ಷಗಳ ಬಳಿಕ ಸರ್ಕಾರಿ ಬಂಗಲೆ ಖಾಲಿ ಮಾಡಿದ ಬಿಹಾರ ಮಾಜಿ ಸಿಎಂ ರಾಬ್ರಿ ದೇವಿ
ಬಿಜೆಪಿ ತಂತ್ರ ಬದಲಾವಣೆ
ಮೂಲಗಳ ಪ್ರಕಾರ, ಪ್ರಶಾಂತ್ ಕಿಶೋರ್ ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿದ್ದು, ಅದನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಲು ಸಿದ್ಧರಾಗಿದ್ದರು. ಇದರಿಂದ ಚುನಾವಣೆಯ ಜತೆಗೆ ಪಕ್ಷದ ಇಮೇಜ್‌ಗೂ ಧಕ್ಕೆಯಾಗಬಹುದು ಎಂಬ ಆತಂಕದಲ್ಲಿ ಬಿಜೆಪಿ ಸಾಮಾನ್ಯ ಪಕ್ಷದ ಕಾರ್ಯಕರ್ತರಾಗಿರುವ ನೀರಜ್ ಕುಮಾರ್ ಸಿನ್ಹಾ ಅವರಿಗೆ ಟಿಕೆಟ್ ನೀಡಿದೆ.
ಹೈವೋಲ್ಟೇಜ್ ಕದನ
ರಾಜ್ಯಸಭೆಗೆ ಆಯ್ಕೆಯಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಿತಿನ್ ನಬೀನ್ ಬ್ಯಾಂಕಿಪುರ ಕ್ಷೇತ್ರವನ್ನು ತೆರವುಗೊಳಿಸಿದ್ದರಿಂದ ಈ ಉಪಚುನಾವಣೆ ನಡೆಯುತ್ತಿದೆ. 1995ರಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಸೋತಿಲ್ಲ. ಆದಾಗ್ಯೂ, ಈ ಬಾರಿ ಜನ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ಕಣಕ್ಕಿಳಿದಿರುವುದರಿಂದ ಬ್ಯಾಂಕಿಪುರದಲ್ಲಿ ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ.