ತಾಯಿ 7ನೇ ಮಗುವಿಗೆ ಜನ್ಮ ನೀಡಿದ ಮರುದಿನವೇ ಹಸಿವಿನಿಂದ ಬಳಲಿ 2 ವರ್ಷದ ಕಂದಮ್ಮ ಸಾವು: ಕೇರಳಂನಲ್ಲಿ ಮನಕಲಕುವ ದುರಂತ
Keralam Starvation Case: ಕೇರಳಂನ ಆಲಪ್ಪುಳ ಜಿಲ್ಲೆಯ ಕಾರ್ತಿಕಪ್ಪಳ್ಳಿಯಲ್ಲಿ ಎರಡು ವರ್ಷದ ಗಂಡು ಮಗು ಹಸಿವು ಮತ್ತು ಅಪೌಷ್ಟಿಕತೆಯಿಂದ ಮೃತಪಟ್ಟಿದೆ. ಮಗುವಿನ ತಾಯಿ ತನ್ನ ಏಳನೇ ಮಗುವಿಗೆ ಜನ್ಮ ನೀಡಿದ ಮರುದಿನ ಈ ಘಟನೆ ನಡೆದಿದೆ. ಮೃತಪಟ್ಟ ಮಗುವಿನ ತೂಕ ಕೇವಲ 7 ಕೆ.ಜಿ. ಇತ್ತು ಎಂದು ವರದಿಯಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ -
ತಿರುವನಂತಪುರಂ, ಅ. 20: ಕೇರಳಂನ ಆಲಪ್ಪುಳ (Alappuzha) ಜಿಲ್ಲೆಯಲ್ಲಿ ಹಸಿವು ಮತ್ತು ಅಪೌಷ್ಟಿಕತೆಯಿಂದ ಎರಡು ವರ್ಷದ ಗಂಡು ಮಗು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮಗುವಿನ 30 ವರ್ಷದ ತಾಯಿ ಶನಿವಾರ (ಅಕ್ಟೋಬರ್ 17) ರಾತ್ರಿ ಆಸ್ಪತ್ರೆಯಲ್ಲಿ ತನ್ನ ಏಳನೇ ಮಗುವಿಗೆ ಜನ್ಮ ನೀಡಿದ ಮರುದಿನವೇ ಈ ದುರ್ಘಟನೆ ಸಂಭವಿಸಿದೆ. ಈ ಘಟನೆ ಸ್ಥಳೀಯವಾಗಿ ತೀವ್ರ ಕಳವಳಕ್ಕೆ ಕಾರಣವಾಗಿದೆ.
ಜಿಲ್ಲೆಯ ಕಾರ್ತಿಕಪ್ಪಳ್ಳಿ ಪ್ರದೇಶದಲ್ಲಿರುವ ಮನೆಯಲ್ಲಿ ಭಾನುವಾರ ಬೆಳಗ್ಗೆ ಮಗು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಗುವಿನ ತಾಯಿ ಆಲಪ್ಪುಳದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಗು ಅಪೌಷ್ಟಿಕತೆ ಮತ್ತು ಹಸಿವಿನಿಂದ ಮೃತಪಟ್ಟಿರುವುದಾಗಿ ತಿಳಿದುಬಂದ ಹಿನ್ನೆಲೆಯಲ್ಲಿ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಎರಡು ವರ್ಷದ ಮಗು 10ರಿಂದ 15 ಕೆ.ಜಿ. ತೂಕ ಹೊಂದಿರುತ್ತದೆ. ಆದರೆ ಮೃತಪಟ್ಟ ಮಗುವಿನ ತೂಕ ಕೇವಲ 7 ಕೆ.ಜಿ. ಇತ್ತು ಎಂದು ವರದಿಯಾಗಿದೆ. ಇದು ಮಗುವಿನ ಪೌಷ್ಟಿಕಾಂಶದ ಕೊರತೆಯ ಗಂಭೀರತೆಯನ್ನು ಸೂಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರ್ಥಿಕ ಸಂಕಷ್ಟವೇ ಸಾವಿಗೆ ಕಾರಣ ಎಂದ ತಂದೆ
ಆಟೋ ಚಾಲಕನಾಗಿರುವ ಮಗುವಿನ ತಂದೆ, ಕುಟುಂಬದ ಆರ್ಥಿಕ ಸಂಕಷ್ಟದಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ. ಆದರೆ, ಮಕ್ಕಳ ಪಾಲನೆಯಲ್ಲಿ ಪೋಷಕರ ನಿರ್ಲಕ್ಷ್ಯ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಸೋಮವಾರ, ದಂಪತಿಯ ಉಳಿದ ನಾಲ್ವರು ಹೆಣ್ಣುಮಕ್ಕಳ ಆರೈಕೆಯ ಜವಾಬ್ದಾರಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ವಹಿಸಿಕೊಂಡಿದೆ. ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ರಾಜ್ಯ ಆಯೋಗವೂ ಘಟನೆಯ ಕುರಿತು ತನಿಖೆ ಆರಂಭಿಸಿದೆ.
ಈ ಹಿಂದೆಯೂ ಮಕ್ಕಳ ಆರೈಕೆಗೆ ಮುಂದಾಗಿದ ಅಧಿಕಾರಿಗಳು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಬಿಂದು ಕೃಷ್ಣ ಅವರು, ಮಕ್ಕಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಲು ತಮ್ಮ ಇಲಾಖೆಯ ಅಧಿಕಾರಿಗಳು ಹಲವು ಬಾರಿ ಮಧ್ಯ ಪ್ರವೇಶಿಸಿದ್ದರು ಎಂದು ತಿಳಿಸಿದ್ದಾರೆ.
ಮಕ್ಕಳಿಗೆ ಸರಿಯಾದ ಆರೈಕೆ ದೊರೆಯುತ್ತಿಲ್ಲ ಎಂಬುದು ಗಮನಕ್ಕೆ ಬಂದ ಬಳಿಕ ಅಧಿಕಾರಿಗಳು ಪೋಷಕರನ್ನು ಭೇಟಿಯಾಗಿ, ಮಕ್ಕಳನ್ನು ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸಿದ್ದರು. ಆದರೆ ಇತ್ತೀಚೆಗೆ ಪೋಷಕರು ಮಕ್ಕಳನ್ನು ಬಲವಂತವಾಗಿ ಮರಳಿ ಮನೆಗೆ ಕರೆದುಕೊಂಡು ಹೋಗಿದ್ದರು ಎಂದು ಸಚಿವೆ ಹೇಳಿದ್ದಾರೆ.
ಕಾರ್ತಿಕಪ್ಪಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ಸಿನಿ ಅನಿಲ್ ಅವರ ಪ್ರಕಾರ, ಈ ಕುಟುಂಬವು ಕೆಲವು ವರ್ಷಗಳ ಹಿಂದೆ ಮತ್ತೊಂದು ಮಗುವನ್ನೂ ಕಳೆದುಕೊಂಡಿತ್ತು. ಆ ಮಗು ಕೆಳಗೆ ಬಿದ್ದು ಗಾಯಗೊಂಡಿದ್ದರಿಂದ ಮೃತಪಟ್ಟಿದೆ ಎಂದು ಆಗ ಪೋಷಕರು ತಿಳಿಸಿದ್ದರು.
ಟೈಗರ್ ಶ್ರಾಫ್ಗೆ ಗುಂಡಿಟ್ಟ ಮೂವರನ್ನು ಮುಂಬೈ ಪೊಲೀಸರು ಪತ್ತೆ ಹಚ್ಚಿದ ರೋಚಕ ಕಾರ್ಯಾಚರಣೆಯ ವಿವರ ಇಲ್ಲಿದೆ
ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಕ್ರಮ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಸಮಗ್ರ ಶಿಶು ಅಭಿವೃದ್ಧಿ ಸೇವೆ (ICDS) ಯೋಜನೆಯಡಿ ಕುಟುಂಬಕ್ಕೆ ಕಡ್ಡಾಯವಾಗಿ ನೀಡಬೇಕಾದ ಪೌಷ್ಟಿಕಾಂಶ ಪೂರಕಗಳನ್ನು ಒದಗಿಸಲಾಗಿತ್ತು. ಆದರೂ ಮಕ್ಕಳ ಆರೈಕೆಗೆ ಸಂಬಂಧಿಸಿದಂತೆ ಅಧಿಕಾರಿಗಳು ನೀಡಿದ ಸೂಚನೆಗಳನ್ನು ಪೋಷಕರು ಪಾಲಿಸಲು ಹಿಂದೇಟು ಹಾಕುತ್ತಿದ್ದರು ಎಂದು ಸಿನಿ ಅನಿಲ್ ಆರೋಪಿಸಿದ್ದಾರೆ.
ಇತ್ತೀಚೆಗೆ ಮಕ್ಕಳನ್ನು ಆರೈಕೆ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ ತಾಯಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಮಕ್ಕಳನ್ನು ಮತ್ತೆ ಪೋಷಕರ ವಶಕ್ಕೆ ಒಪ್ಪಿಸಬೇಕಾಯಿತು ಎಂದು ಅವರು ತಿಳಿಸಿದ್ದಾರೆ.
ಕುಟುಂಬವು ಕುಟುಂಬ ಯೋಜನೆಗೂ ಸಹಕರಿಸಲು ಸಿದ್ಧವಿರಲಿಲ್ಲ ಎಂದು ಅವರು ಹೇಳಿದ್ದಾರೆ. ಕುಟುಂಬ ಯೋಜನೆಗೆ ಸಂಬಂಧಿಸಿದ ವೈದ್ಯಕೀಯ ವಿಧಾನಗಳ ಬಗ್ಗೆ ಭಯವಿದೆ ಎಂದು ತಾಯಿ ಆಶಾ ಕಾರ್ಯಕರ್ತೆಯರಿಗೆ ತಿಳಿಸಿದ್ದರು ಎನ್ನಲಾಗಿದೆ. ತಾಯಿಗೆ 19ನೇ ವಯಸ್ಸಿನಲ್ಲೇ ಮೊದಲ ಹೆರಿಗೆಯಾಗಿತ್ತು. ತಂದೆ ಮಕ್ಕಳನ್ನು ಬೆಳೆಸಲು ಹಾಗೂ ಆಹಾರದಂತಹ ಮೂಲಭೂತ ಅಗತ್ಯಗಳನ್ನು ಪೂರೈಸಲು ಆಸಕ್ತಿ ತೋರಿಸುತ್ತಿರಲಿಲ್ಲ ಎಂದು ಸಿನಿ ಅನಿಲ್ ದೂರಿದ್ದಾರೆ. ಅಲ್ಲದೆ, ಮಕ್ಕಳು ಶಾಲೆಗೂ ಹೋಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.