ಪಶ್ಚಿಮ ಬಂಗಾಳದಲ್ಲಿ ದಾಖಲೆಯ ಶೇಕಡ 92.47ರಷ್ಟು ಮತದಾನ; ಯಾರಿಗೆ ಲಾಭ? ಯಾರಿಗೆ ನಷ್ಟ?
West Bengal Assembly Elections 2026: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡೂ ಹಂತಗಳ ಮತದಾನ ಮುಕ್ತಾಯವಾಗಿದೆ. ಜತೆಗೆ ಎರಡೂ ಹಂತಗಳಲ್ಲಿ ಒಟ್ಟು ಶೇಕಡ 92.47ರಷ್ಟು ಮತದಾನವಾಗಿ ದಾಖಲೆ ಬರೆದಿದೆ. ಎಕ್ಸಿಟ್ ಪೋಲ್ ವರದಿ ವಿಜೆಪಿ ಅದಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದೆ.
ಸಾಂದರ್ಭಿಕ ಚಿತ್ರ -
ಕೋಲ್ಕತ್ತಾ, ಏ. 29: ಬಹು ನಿರೀಕ್ಷಿತ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ (West Bengal Assembly Elections 2026) ಎರಡೂ ಹಂತಗಳ ಮತದಾನ ಮುಕ್ತಾಯವಾಗಿದೆ. ಜತೆಗೆ ಅಧಿಕ ಪ್ರಮಾಣದಲ್ಲಿ ಮತ ಚಲಾವಣೆಯಾಗುವ ಮೂಲಕ ಪಶ್ಚಿಮ ಬಂಗಾಳ ಈ ಬಾರಿ ಇತಿಹಾಸ ಬರೆದಿದೆ. ಎರಡೂ ಹಂತಗಳಲ್ಲಿ ಒಟ್ಟು ಶೇಕಡ 92.47ರಷ್ಟು ಮತದಾನವಾಗಿದೆ. ಆ ಮೂಲಕ ಸ್ವಾತಂತ್ರ್ಯದ ಬಳಿಕ ಅತೀ ಹೆಚ್ಚು ಮತದಾನ ನಡೆದ ದಾಖಲೆ ನಿರ್ಮಿಸಿದೆ. ಈ ಅತೀ ಹೆಚ್ಚಿನ ಮತದಾನ ಯಾವ ಪಕ್ಷಕ್ಕೆ ಅನುಕೂಲವಾಗಲಿದೆ ಎನ್ನುವ ಚರ್ಚೆ ಇದೀಗ ಆರಂಭವಾಗಿದ್ದು, ಮೇ 4ರ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.
ಪಶ್ಚಿಮ ಬಂಗಾಳ ಅತೀ ದೊಡ್ಡ ರಾಜ್ಯಗಳಲ್ಲಿ ಒಂದು. ಇಲ್ಲಿ ಒಟ್ಟು 294 ವಿಧಾನಸಭಾ ಕ್ಷೇತ್ರಗಳಿವೆ. ದೇಶದ ರಾಜಕೀಯದ ಮೇಲೆ ಪ್ರಭಾವ ಬೀರಬಲ್ಲ ಸಾಮರ್ಥ್ಯ ಹೊಂದಿರುವ, ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿರುವ ಈ ರಾಜ್ಯದಲ್ಲಿ ಯಾರು ಅಧಿಕಾರಕ್ಕೆ ಬರಲಿದ್ದಾರೆ ಎನ್ನುವ ಕುತೂಹಲ ದೇಶಾದ್ಯಂತ ಮನೆ ಮಾಡಿದೆ.
ಪಶ್ಚಿಮ ಬಂಗಾಳದಲ್ಲಿ ದಾಖಲೆಯ ಮತದಾನ:
🚨West Bengal records highest-ever poll-participation since Independence
— Kreately.in (@KreatelyMedia) April 29, 2026
Well done Gyanesh Kumar & security forces 👏 pic.twitter.com/ITC1uguCWV
ದಾಖಲೆಯ ಮತದಾನ
ಈ ಹಿಂದೆ ಅತೀ ಹೆಚ್ಚು ಮತದಾನವಾದ ದಾಖಲೆ 2011ರ ಚುನಾವಣೆ ಹೆಸರಿನಲ್ಲಿತ್ತು. ಅಂದು ಶೇಕಡ 84.72 ಮಂದಿ ಹಕ್ಕು ಚಲಾಯಿಸಿದ್ದರು. ಈ ಬಾರಿ ಅದನ್ನೂ ಮೀರಿ ಸುಮಾರು ಶೇಕಡ 8ರಷ್ಟು ಹೆಚ್ಚು ಮತದಾನವಾಗಿದೆ. ಏಪ್ರಿಲ್ 23ರ ಮೊದಲ ಹಂತದಲ್ಲಿ ಶೇಕಡ 93.19ರಷ್ಟು ಮತ್ತು ಏಪ್ರಿಲ್ 29ರ ದ್ವಿತೀಯ ಹಂತದಲ್ಲಿ ಶೇ. 91.66ರಷ್ಟು ಮತದಾನ ನಡೆದಿದೆ. ಪಶ್ಚಿಮ ಬಂಗಾಳ ಇದುವರೆಗೆ ಇಷ್ಟು ಪ್ರಮಾಣದಲ್ಲಿ ಮತದಾನ ಮಾಡಿರಲಿಲ್ಲ ಎನ್ನುವುದು ವಿಶೇಷ.
ಅಧಿಕಾರ ಬದಲಿಸಿದ್ದ ದಾಖಲೆಯ ಮತದಾನ
2011ರ ಚುನಾವಣೆ ಪದೇ ಪದೆ ನೆನಪಾಗಲೂ ಕಾರಣ ಇದೆ. ಅಂದಿನ ದಾಖಲೆಯ ಮತದಾನ 34 ವರ್ಷಗಳ ಎಡರಂಗದ ಅಧಿಕಾರವನ್ನು ಬದಲಾಯಿಸಿ ಟಿಎಂಸಿ ಸರ್ಕಾರ ರಚನೆಗೆ ಕಾರಣವಾಯಿತು. ಆ ಮೂಲಕ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಪಟ್ಟಕ್ಕೇರಿದರು. ಅದಾದ ಬಳಿಕ ಸತತ 3 ಅವಧಿಯಲ್ಲಿಯೂ ಅವರು ಸಿಎಂ ಆಗಿ ಮುಂದುವರಿದಿದ್ದು, 15 ವರ್ಷಗಳಿಂದ ಟಿಎಂಸಿ ಸರ್ಕಾರ ಆಡಳಿತದಲ್ಲಿದೆ. ಇದೀಗ ಮತ್ತೊಮ್ಮೆ ದಾಖಲೆಯ ಮತದಾನವಾಗಿದ್ದು ಟಿಎಂಸಿಯ ಆಡಳಿತ ಕೊನೆಗೊಳ್ಳಲಿದೆ ಎನ್ನುವ ಲೆಕ್ಕಾಚಾರ ಆರಂಭವಾಗಿದೆ.
ಪಶ್ಚಿಮ ಬಂಗಾಳ ಚುನಾವಣೆ: ಮಮತಾ ಬ್ಯಾನರ್ಜಿಯ ಭದ್ರ ಕೋಟೆಯನ್ನು ಭೇದಿಸುವುದೇ ಬಿಜೆಪಿ?
ಎಕ್ಸಿಟ್ ಪೋಲ್ ಹೇಳೋದೇನು?
ಇದೀಗ ಎಕ್ಸಿಟ್ ಪೋಲ್ ವರದಿ ಹೊರ ಬಂದಿದ್ದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. 6 ಸಮೀಕ್ಷೆಗಳಲ್ಲಿ 4 ಸಮೀಕ್ಷೆ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಒಟ್ಟು 294 ಸ್ಥಾನಗಳನ್ನು ಹೊಂದಿರುವ ಪಶ್ಚಿಮ ಬಂಗಾಳದ ವಿಧಾನ ಸಭೆಯಲ್ಲಿ ಬಹುಮತ ಪಡೆಯಲು 148 ಕ್ಷೇತ್ರಗಳನ್ನು ಗೆಲ್ಲುವುದು ಅತ್ಯಗತ್ಯ. ಪ್ರಜಾ ಪೋಲ್ ಅಂಕಿ ಅಂಶಗಳ ಪ್ರಕಾರ ಬಿಜೆಪಿ 178-208 ಸ್ಥಾನಗಳನ್ನು ಗೆಲ್ಲಲಿದ್ದು, ತೃಣಮೂಲ ಕಾಂಗ್ರೆಸ್ 85-110 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗಿದೆ. ಪಿ-ಮಾರ್ಕ್‌ನ ವರದಿ ಪ್ರಕಾರ ಬಿಜೆಪಿ 150-175 ಕ್ಷೇತ್ರಗಳನ್ನು ಮತ್ತು ತೃಣಮೂಲ 118-138 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.