ʼʼಪಾಂಡಿತ್ಯವನ್ನು ಅವಮಾನಿಸಬೇಡಿʼʼ: ಕಾಮಕೋಟಿ ಅವರನ್ನು ಗೋಮೂತ್ರ ತಜ್ಞ ಎಂದು ಕರೆದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಗೆ 215 ಶಿಕ್ಷಣ ತಜ್ಞರಿಂದ ಕ್ಲಾಸ್
V Kamakoti: ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಟಾಸ್ಕ್‌ಫೋರ್ಸ್‌ಗೆ ಆಯ್ಕೆಯಾಗಿರುವ ಐಐಟಿ ಮದ್ರಾಸ್ ನಿರ್ದೇಶಕ ಪ್ರೊ. ವಿ. ಕಾಮಕೋಟಿ ಅವರನ್ನು ಗೋಮೂತ್ರ ತಜ್ಞ ಎಂದು ಕರೆದು ಅವಮಾನಿಸಿದ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ಸಿಕ್ಷಣ ತಜ್ಞರು ಸಿಡಿದೆದ್ದಿದ್ದಾರೆ. ದೇಶದ ಸುಮಾರು 215ರಷ್ಟು ಉಪಕುಲಪತಿಗಳು, ಮಾಜಿ ಉಪಕುಲಪತಿಗಳು ಮತ್ತು ಶಿಕ್ಷಣ ತಜ್ಞರು ಬಹಿರಂಗ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಶ್ನೆ ಪತ್ರಿ ಸೋರಿಕೆ ತಡೆ ಮಸೂದೆ ಚರ್ಚೆ ವೇಳೆ ಪ್ರಿಯಾಂಕ ಗಾಂಧಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಪ್ರಿಯಾಂಕಾ ಗಾಂಧಿ ಮತ್ತು ಕಾಮಕೋಟಿ (ಸಂಗ್ರಹ ಚಿತ್ರ) -
ದೆಹಲಿ, ಜು. 30: ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಟಾಸ್ಕ್‌ಫೋರ್ಸ್‌ಗೆ ಆಯ್ಕೆಯಾಗಿರುವ ಐಐಟಿ ಮದ್ರಾಸ್ ನಿರ್ದೇಶಕ ಪ್ರೊ. ವಿ. ಕಾಮಕೋಟಿ (V Kamakoti) ಅವರನ್ನು ಗೋಮೂತ್ರ ತಜ್ಞ ಎಂದು ಕರೆದು ಅವಮಾನಿಸಿದ ಸಂಸದೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ವಿರುದ್ಧ ಇದೀಗ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಸಿದ್ಧ ವಿಜ್ಞಾನಿಯೊಬ್ಬರ ಶೈಕ್ಷಣಿಕ ಅರ್ಹತೆ ಮತ್ತು ಸಾಧನೆಗಳನ್ನು ಕೀಳಾಗಿ ವ್ಯಾಖ್ಯಾನಿಸಿದ್ದಕ್ಕಾಗಿ ಸುಮಾರು 215 ಶಿಕ್ಷಣ ತಜ್ಞರು ಪ್ರಿಯಾಂಕಾ ಗಾಂಧಿ ವಿರುದ್ಧ ಬಹಿರಂಗ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿ. ಕಾಮಕೋಟಿ ಅವರನ್ನು ಪ್ರಿಯಾಂಕಾ ಗಾಂಧಿʼಗೋಮೂತ್ರ ತಜ್ಞʼ ಎಂದು ಸಂಬೋಧಿಸಿದ್ದಲ್ಲದೆ ಅವರನ್ನು ಪರೀಕ್ಷಾ ಸುಧಾರಣಾ ಸಮಿತಿಗೆ ಸೇರ್ಪಡೆಗೊಳಿಸಿರುವುದನ್ನು ಪ್ರಶ್ನಿಸಿದ್ದರು. ಅವರು ನೇರವಾಗಿ ಕಾಮಕೋಟಿ ಹೆಸರು ಹೇಳದಿದ್ದರೂ ಉಲ್ಲೇಖಿಸಿದ್ದು ಅವರನ್ನೇ ಎನ್ನುವುದು ಸ್ಪಷ್ಟವಾಗಿ ತಿಳಿದು ಬಂದಿದೆ.
ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ಪತ್ರ ಶಿಕ್ಷಣ ತಜ್ಞರು:
215 Vice Chancellors, Former Vice Chancellors and Academics write an open letter to Congress MP Priyanka Gandhi against her remarks against IIT Madras director Prof V Kamakoti pic.twitter.com/ltCuG8IC56
— IANS (@ians_india) July 30, 2026
ಬಹಿರಂಗ ಪತ್ರದಲ್ಲಿ ಏನಿದೆ?
ʼʼಕಾಮಕೋಟಿ ಅವರನ್ನು ಗೋಮೂತ್ರ ತಜ್ಞ ಎಂದು ಕರೆದಿರುವ ನಿಮ್ಮ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಇದನ್ನು ವ್ಯಂಗ್ಯಕ್ಕಾಗಿ ಹೇಳಿರಲಿ ಅಥವಾ ರಾಜಕೀಯ ದ್ವೇಷಕ್ಕಾಗಿ ಹೇಳಿರಲಿ ಇಂತಹ ಹೇಳಿಕೆ ಗಂಭೀರ ಕಳವಳ ಹುಟ್ಟುಹಾಕುತ್ತದೆ. ವಿದ್ವಾಂಸರೊಬ್ಬರ ವ್ಯಕ್ತಿತ್ವಕ್ಕೆ ದಕ್ಕೆ ತರುವ ರೀತಿಯಲ್ಲಿ ಟೀಕಿಸುವುದು ಸರಿಯಲ್ಲ” ಎಂದು ಪತ್ರದಲ್ಲಿ ತಿಳಿಸಲಾಗಿದೆ. ಉಪಕುಲಪತಿಗಳು, ಮಾಜಿ ಉಪಕುಲಪತಿಗಳು ಮತ್ತು ಶಿಕ್ಷಣ ತಜ್ಞರು ಈ ಪತ್ರ ಬರೆದಿದ್ದಾರೆ.
"ಪ್ರೊಫೆಸರ್ ಕಾಮಕೋಟಿ ಭಾರತದ ಅಗ್ರಗಣ್ಯ ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಯೊಂದರ ಮುಖ್ಯಸ್ಥರು. ಅವರು ಐಐಟಿ ಮದ್ರಾಸ್‌ನಿಂದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಎಂ.ಎಸ್. ಪದವಿ ಮತ್ತು ಪಿಎಚ್‌ಡಿ ಹೊಂದಿದ್ದಾರೆ. 150ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ ಮತ್ತು 50ಕ್ಕೂ ಹೆಚ್ಚು ಆರ್&ಡಿ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆʼʼ ಎಂದು ವಿವರಿಸಲಾಗಿದೆ.
"ಅವರು ಡಿಆರ್‌ಡಿಒ ಅಕಾಡೆಮಿಕ್ ಎಕ್ಸಲೆನ್ಸ್ ಪ್ರಶಸ್ತಿ ಮತ್ತು ಇಂಡಿಯನ್ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್ ಟೆಕ್ನೋ ವಿಷನರಿ ಪ್ರಶಸ್ತಿ ಸೇರಿ ಹಲವಾರು ಗೌರವಗಳು ಮತ್ತು ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ. ಅವರು ದೇಶದ ಉನ್ನತ ತಂತ್ರಜ್ಞಾನ ತಜ್ಞರುʼʼ ಎಂದು ಬಣ್ಣಿಸಲಾಗಿದೆ.
215 ಗಣ್ಯರು ಸಹಿ ಮಾಡಿರುವ ಈ ಬಹಿರಂಗ ಪತ್ರದಲ್ಲಿ, "ಇಂತಹ ಹೇಳಿಕೆಯಿಂದ ಭಾರತದ ಶೈಕ್ಷಣಿಕ ಮತ್ತು ಸಂಶೋಧನಾ ಸಮುದಾಯಕ್ಕೆ ತಪ್ಪು ಸಂದೇಶ ಕಳುಹಿಸಿದಂತಾಗುತ್ತದೆ. ನಮ್ಮ ವಿಜ್ಞಾನಿಗಳು, ವಿದ್ವಾಂಸರು ಮತ್ತು ಶಿಕ್ಷಕರು ಭಯವಿಲ್ಲದೆ ಸಾರ್ವಜನಿಕ ಚರ್ಚೆಯಲ್ಲಿ ಭಾಗವಹಿಸಬಹುದು. ಅವರ ವಾದಗಳನ್ನು ಟೀಕಿಸಿ, ಅವರ ಪುರಾವೆಗಳನ್ನು ಪ್ರಶ್ನಿಸಿ, ಹೆಚ್ಚಿನ ಗುಣಮಟ್ಟದ ಸಾಕ್ಷಿ ಕೇಳಿ. ಆದರೆ ಅವರ ಪಾಂಡಿತ್ಯವನ್ನು ಅನುಮಾನದಿಂದ ನೋಡಬೇಡಿʼʼ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಕಾಂಗ್ರೆಸ್ ನಾಯಕರು ಪೊಲೀಸ್ ವಶಕ್ಕೆ; ಪ್ರಧಾನಿ ನಿವಾಸದ ಮುಂದೆ ಹೈಡ್ರಾಮ
ಯಾರು ಈ ಕಾಮಕೋಟಿ?
ಐಐಟಿ ಮದ್ರಾಸ್‌ನಿಂದ ಮಾಸ್ಟರ್ ಆಫ್ ಸೈನ್ಸ್ (ಎಂ.ಎಸ್.) ಮತ್ತು ಕಂಪ್ಯೂಟರ್ ಸೈನ್ಸ್ ಹಾಗೂ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ವೀಝಿನಾಥನ್ ಕಾಮಕೋಟಿ 2001ರಲ್ಲಿ ಅದೇ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇರ್ಪಡೆಗೊಂಡರು. 2022ರ ಜನವರಿಯಲ್ಲಿ ಐಐಟಿ ಮದ್ರಾಸ್‌ನ ನಿರ್ದೇಶಕರಾಗಿ ಆಯ್ಕೆಯಾದರು. ಕಂಪ್ಯೂಟರ್ ಆರ್ಕಿಟೆಕ್ಚರ್, ಮಾಹಿತಿ ಭದ್ರತೆ ಮತ್ತು ವಿಎಲ್‌ಎಸ್‌ಐ ವಿನ್ಯಾಸದಲ್ಲಿ ಪರಿಣತಿ ಹೊಂದಿರುವ ಅವರು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಡಿಯಲ್ಲಿ ಕಾರ್ಯನಿರ್ವಹಿಸುವ ಮೈಕ್ರೋಪ್ರೊಸೆಸರ್ ಅಭಿವೃದ್ಧಿ ಕಾರ್ಯಕ್ರಮ ಮತ್ತು ಸಂಸ್ಥೆಯಲ್ಲಿ ಮಾಹಿತಿ ಭದ್ರತಾ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮದ ಮುಂದಾಳತ್ವ ವಹಿಸಿಕೊಂಡಿದ್ದರು. ಇವರ ನೇತೃತ್ವದ ಸಂಶೋಧನಾ ತಂಡವು ಭಾರತದ ಮೊದಲ ಸ್ಥಳೀಯ ಮೈಕ್ರೋಪ್ರೊಸೆಸರ್ ಅಭಿವೃದ್ಧಿಪಡಿಸಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.