Accident: ಘೋರ ದುರಂತ; ಗಾಳಿಪಟ ಹಿಡಿಯಲು ಹೋದ ಬಾಲಕ ಚರಂಡಿಗೆ ಬಿದ್ದು ಸಾವು
ಈಶಾನ್ಯ ದೆಹಲಿಯ ವೆಲ್ಕಮ್ ಪ್ರದೇಶದ ಲಕ್ಡಿ ಮಾರ್ಕೆಟ್ ಬಳಿಯ ಪುಲಿಯಾ ಬಳಿಯ ಚರಂಡಿಗೆ ಏಳು ವರ್ಷದ ಬಾಲಕ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರೂ ಬಾಲಕನನ್ನು ರಕ್ಷಿಸುವುದು ಸಾಧ್ಯವಾಗಲಿಲ್ಲ.


ನವದೆಹಲಿ: ಗಾಳಿಪಟ ಹಿಡಿಯಲು ಪ್ರಯತ್ನಿಸುತ್ತಿದ್ದ ಬಾಲಕನೊಬ್ಬ ತೆರೆದ ಚರಂಡಿಗೆ ಬಿದ್ದು ಸಾವನ್ನಪ್ಪಿರುವ (Boy Falls Into Drain) ಘಟನೆ ಈಶಾನ್ಯ ದೆಹಲಿಯ ( Northeast Delhi) ವೆಲ್ಕಮ್ (welcome) ಪ್ರದೇಶದಲ್ಲಿ ನಡೆದಿದೆ. ಬಾಲಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಗಾಳಿಪಟ ಹಿಡಿಯಲು ಪ್ರಯತ್ನಿಸುತ್ತಿದ್ದ ಏಳು ವರ್ಷದ ಬಾಲಕ ಶುಕ್ರವಾರ ಸಂಜೆ ಚರಂಡಿಗೆ ಬಿದ್ದಿದ್ದು, ಶನಿವಾರ ಬೆಳಗ್ಗೆ ಆತನ ಶವ ಪತ್ತೆಯಾಗಿದೆ. ಮಾಹಿತಿ ತಿಳಿದ ತಕ್ಷಣ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಆದರೂ ಬಾಲಕನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವೆಲ್ಕಮ್ ಪ್ರದೇಶದ ಪೊಲೀಸ್ ಠಾಣೆಗೆ ಶುಕ್ರವಾರ ಸಂಜೆ ಮಗುವೊಂದು ಚರಂಡಿಗೆ ಬಿದ್ದಿದೆ ಎನ್ನುವ ಮಾಹಿತಿ ಕರೆ ಬಂದಿದೆ. ಬಳಿಕ ತಕ್ಷಣ ಬಾಲಕನ ರಕ್ಷಣೆಗೆ ತೆರಳಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೆಲ್ಕಮ್ ಪ್ರದೇಶದ ಲಕ್ಡಿ ಮಾರ್ಕೆಟ್‌ನ ಪುಲಿಯಾ ಬಳಿಯ ಚರಂಡಿಯಲ್ಲಿ ಬಾಲಕ ಬಿದ್ದಿರುವ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ತಕ್ಷಣ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ)ಗೆ ಮಾಹಿತಿ ನೀಡಿದರು. ಸ್ಥಳೀಯ ಡೈವರ್‌ಗಳು ಮತ್ತು ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಯ ಸಹಾಯದಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಆದರೆ ಕತ್ತಲೆಯಾದ ಕಾರಣ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾಯಿತು.
ಶನಿವಾರ ಬೆಳಗ್ಗೆ ಮತ್ತೆ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಕೆಲವು ಕ್ಷಣಗಳ ಬಳಿಕ ಮುಳುಗಿದ ಮಗುವಿನ ಶವವನ್ನು ಚರಂಡಿಯಿಂದ ಹೊರತೆಗೆಯಲಾಯಿತು.
ಇದನ್ನೂ ಓದಿ: Actor Ajay Rao: ಸ್ಯಾಂಡಲ್‌ವುಡ್ ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ಗೆ ಅರ್ಜಿ
ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಟಿಬಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಗಾಳಿಪಟ ಹಿಡಿಯಲು ಪ್ರಯತ್ನಿಸುತ್ತಿದ್ದಾಗ ಬಾಲಕ ಆಕಸ್ಮಿಕವಾಗಿ ಚರಂಡಿಗೆ ಬಿದ್ದಿದ್ದಾನೆ ಎನ್ನಲಾಗಿದ್ದು, ಈ ಕುರಿತು ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.