ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ಸ್ಥಾಪನೆಯ ಸಂಚು ವಿಫಲ: ಆಂಧ್ರ ಪ್ರದೇಶ ಪೊಲೀಸರಿಂದ ಅಂತಾರಾಷ್ಟ್ರೀಯ ಭಯೋತ್ಪಾದಕ ಜಾಲ ಬಯಲು

ಆಂಧ್ರ ಪ್ರದೇಶದಲ್ಲಿ ಐಸಿಸ್ ಮತ್ತು ಅಲ್-ಖೈದಾ ಸಂಪರ್ಕ ಹೊಂದಿದ್ದ ಭಯೋತ್ಪಾದಕ ಜಾಲವನ್ನು ಪೊಲೀಸರು ಭೇದಿಸಿ 12 ಮಂದಿಯನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಪ್ರೇರೇಪಿಸಿ, ಶಸ್ತ್ರಾಸ್ತ್ರ ತರಬೇತಿ ಮತ್ತು ಐಇಡಿ ತಯಾರಿಕೆ ಕುರಿತು ಮಾಹಿತಿ ಹಂಚಲಾಗುತ್ತಿತ್ತು. ಈ ವೇಳೆ ಮಹಿಳೆಯರಿಗಾಗಿ ಪ್ರತ್ಯೇಕ ಘಟಕ ರಚನೆ ಯತ್ನವೂ ಪತ್ತೆಯಾಗಿದೆ.

ಆಂಧ್ರದಲ್ಲಿ ಐಸಿಸ್ ಸಂಪರ್ಕದ ಭಯೋತ್ಪಾದಕ ಜಾಲ ಪತ್ತೆ: 12 ಮಂದಿ ಬಂಧನ

ಶಂಕಿತ ಭಯೋತ್ಪಾದಕಿ (ಸಂಗ್ರಹ ಚಿತ್ರ) -

Profile
Sushmitha Jain Apr 6, 2026 6:20 PM

ನವದೆಹಲಿ, ಏ. 6: ಐಸಿಸ್ (ISIS) ಮತ್ತು ಅಲ್-ಖೈದಾದಂತಹ (Al-Qaeda) ಜಾಗತಿಕ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ಬೃಹತ್ ಭಯೋತ್ಪಾದಕ ಜಾಲವೊಂದನ್ನು ಆಂಧ್ರ ಪ್ರದೇಶ (Andhra Pradesh) ಪೊಲೀಸರು ಪತ್ತೆಹಚ್ಚಿದ್ದಾರೆ. ಜಿಹಾದಿ ಪ್ರಚಾರದ ವಿಡಿಯೊಗಳು ಮತ್ತು ಒಸಾಮಾ ಬಿನ್ ಲಾಡೆನ್ (Osama bin Laden) ಹಾಗೂ ಜಾಕಿರ್ ನಾಯ್ಕ್ (Zakir Naik) ಅಂತಹ ಮೂಲಭೂತವಾದಿಗಳ ಭಾಷಣಗಳ ಮೂಲಕ ಯುವಕರನ್ನು ದಿಕ್ಕು ತಪ್ಪಿಸುತ್ತಿದ್ದ ಈ ಜಾಲದ 12 ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.

ತನಿಖೆಯ ವೇಳೆ ಅತ್ಯಂತ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ. ಈ ಗುಂಪು ಮಹಿಳೆಯರನ್ನು ಸೆಳೆಯಲು 'ಖವಾತೀನ್' ಎಂಬ ಪ್ರತ್ಯೇಕ ಘಟಕವನ್ನು ಸ್ಥಾಪಿಸಲು ಮುಂದಾಗಿತ್ತು. ಹೈದರಾಬಾದ್‌ನಲ್ಲಿ ಬಂಧಿತಳಾದ ಸಯೀದಾ ಬೇಗಂ ಎಂಬ ವಿಧವೆ, ಪಾಕಿಸ್ತಾನ ಮತ್ತು ಜಮ್ಮು-ಕಾಶ್ಮೀರದ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದು, ಮಹಿಳೆಯರನ್ನು ಈ ಜಾಲಕ್ಕೆ ಸೇರಿಸುವ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.

ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಮಹಿಳೆಯ ಬಂಧನ:



ಪಾಕಿಸ್ತಾನ ಮತ್ತು ಅಫ್ಘಾನ್ ಸಂಪರ್ಕ

ಬಂಧಿತ ಮುಖ್ಯ ಆರೋಪಿ ರಹಮತುಲ್ಲಾ ಶರೀಫ್ ಮತ್ತು ಆತನ ಸಹಚರರು ಪಾಕಿಸ್ತಾನ, ಅಫ್ಘಾನಿಸ್ತಾನ, ಸಿರಿಯಾ ಮತ್ತು ಬಾಂಗ್ಲಾದೇಶದ ಉಗ್ರರೊಂದಿಗೆ ನೇರ ಸಂಪರ್ಕದಲ್ಲಿದ್ದರು. ಇವರು ಸುಮಾರು 40ಕ್ಕೂ ಹೆಚ್ಚು ಇನ್‌ಸ್ಟಾಗ್ರಾಮ್ ಖಾತೆಗಳು ಮತ್ತು ಆನ್‌ಲೈನ್ ಚಾಟ್ ಗ್ರೂಪ್‌ಗಳ ಮೂಲಕ ಜಿಹಾದಿ ಸಿದ್ಧಾಂತಗಳನ್ನು ಹರಡುತ್ತಿದ್ದರು. ಭಾರತದಲ್ಲಿ ಇಸ್ಲಾಮಿಕ್ ಆಡಳಿತ ಅಥವಾ 'ಖಿಲಾಫತ್' ಸ್ಥಾಪಿಸುವುದು ಇವರ ಮುಖ್ಯ ಗುರಿಯಾಗಿತ್ತು.

ಅರುಣಾಚಲ ಸಿಎಂ ಕುಟುಂಬಕ್ಕೆ ಸುತ್ತಿಕೊಂಡ 1,270 ಕೋಟಿ ರುಪಾಯಿ ಗುತ್ತಿಗೆ ಹಗರಣ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

ಶಸ್ತ್ರಾಸ್ತ್ರ ತರಬೇತಿ ಮತ್ತು ಐಇಡಿ ತಯಾರಿಕೆ

ಯುವಕರನ್ನು ಧಾರ್ಮಿಕ ಶಿಕ್ಷಣದ ಹೆಸರಿನಲ್ಲಿ ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನಕ್ಕೆ ಕರೆದೊಯ್ದು ಅಲ್ಲಿ ಸ್ನೈಪರ್ ರೈಫಲ್‌ ಸೇರಿದಂತೆ ಆಧುನಿಕ ಶಸ್ತ್ರಾಸ್ತ್ರಗಳ ತರಬೇತಿ ನೀಡುವ ಭರವಸೆಯನ್ನು ವಿದೇಶಿ ಹ್ಯಾಂಡ್ಲರ್‌ಗಳು ನೀಡಿದ್ದರು. ಅಷ್ಟೇ ಅಲ್ಲದೆ, ಕಪ್ಪು ಪೌಡರ್ ಮತ್ತು ಸುಧಾರಿತ ಸ್ಫೋಟಕ ಸಾಧನಗಳನ್ನು (IED) ತಯಾರಿಸುವ ವಿಧಾನದ ಬಗ್ಗೆ ಪಿಡಿಎಫ್ ದಾಖಲೆಗಳು ಮತ್ತು ವಿಡಿಯೊಗಳನ್ನು ಈ ಗುಂಪು ಹಂಚಿಕೊಂಡಿರುವುದು ಪತ್ತೆಯಾಗಿದೆ.

ದೇಶಾದ್ಯಂತ ಕಾರ್ಯಾಚರಣೆ

ಆಂಧ್ರ ಪ್ರದೇಶದ ಗುಪ್ತಚರ ಮತ್ತು ವಿಜಯವಾಡ ಪೊಲೀಸರು ಬಿಹಾರ, ದೆಹಲಿ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ರಾಜಸ್ಥಾನಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಶಂಕಿತರನ್ನು ಸೆರೆ ಹಿಡಿದಿದ್ದಾರೆ. ಬಂಧಿತರು ಇಸಿಸ್ ಧ್ವಜ ಹಿಡಿದು ಫೋಟೊ ತೆಗೆಸಿಕೊಂಡಿರುವುದು ಮತ್ತು ಮುಸ್ಲಿಮೇತರರನ್ನು ಗುರಿಯಾಗಿಸುವ ಬಗ್ಗೆ ವಿದೇಶಿ ಹ್ಯಾಂಡ್ಲರ್‌ಗಳಿಂದ ಸೂಚನೆ ಪಡೆಯುತ್ತಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಸದ್ಯ ಭದ್ರತಾ ಸಂಸ್ಥೆಗಳು ಈ ಜಾಲದ ಹಣಕಾಸಿನ ಮೂಲಗಳು ಮತ್ತು ಇನ್ನಷ್ಟು ಸಂಚುಗಳ ಬಗ್ಗೆ ಆಳವಾದ ತನಿಖೆ ನಡೆಸುತ್ತಿವೆ.