ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳಿಂದ ಗುಂಡಿನ ದಾಳಿ, ಹತ್ತು ನಕ್ಸಲರ ಹತ್ಯೆ
ಮೈನ್‌ಪುರ್ ಅರಣ್ಯ ಪ್ರದೇಶದಲ್ಲಿ ನಕ್ಸಲೀಯರು ಅಡಗಿಕೊಂಡಿದ್ದಾರೆ ಎಂಬ ಗುಪ್ತಚರ ಮಾಹಿತಿ ದೊರೆತ ಬಳಿಕ ಕಾರ್ಯಾಚರಣೆ ನಡೆಸಲಾಗಿತ್ತು. ಸ್ಥಳದಲ್ಲಿ ಬೆಳಗ್ಗಿನಿಂದಲೇ ಭದ್ರತಾ ಪಡೆಗಳು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಹಲವು ಹಿರಿಯ ನಕ್ಸಲ್ ನಾಯಕರು ಸೇರಿ 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

-

ಗರಿಯಾಬಂದ್ (ಛತ್ತೀಸ್‌ಗಢ): ಛತ್ತೀಸ್‌ಗಢ (Chhattisgarh) ರಾಜ್ಯದ ಗರಿಯಾಬಂದ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು (Security forces) ನಡೆಸಿದ ಪ್ರಮುಖ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ (Anti-Naxal operation) ಹಿರಿಯ ನಕ್ಸಲ್ ನಾಯಕ ಸೇರಿದಂತೆ ಒಟ್ಟು 10 ನಕ್ಸಲೀಯರು ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾರೆ. ಹತ್ಯೆಯಾದ ನಕ್ಸಲ್ ಪೈಕಿ ತಲೆಗೆ ಒಂದು ಕೋಟಿ ರೂಪಾಯಿ ಬಹುಮಾನ ಘೋಷಿಸಲ್ಪಟ್ಟಿದ್ದ ಹಿರಿಯ ನಕ್ಸಲ್ ನಾಯಕ ಮನೋಜ್ ಅಲಿಯಾಸ್ ಮೊಡೆಮ್ ಬಾಲಕೃಷ್ಣ ಕೂಡ ಇದ್ದ.
ಮುಂದುವರೆದು, ಮೈನ್‌ಪುರ್ ಅರಣ್ಯ ಪ್ರದೇಶದಲ್ಲಿ ನಕ್ಸಲೀಯರು ಅಡಗಿಕೊಂಡಿದ್ದಾರೆ ಎಂಬ ಗುಪ್ತಚರ ಮಾಹಿತಿಯ ಮೇರೆಗೆ ಇ-30, ಎಸ್‌ಟಿಎಫ್ ಮತ್ತು ಸಿಆರ್‌ಪಿಎಫ್ ಕೋಬ್ರಾ ಕಮಾಂಡೋಗಳ ಜಂಟಿ ಪಡೆಗಳು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಅದರಂತೆ, ಸ್ಥಳದಲ್ಲಿ ಬೆಳಗ್ಗಿನಿಂದಲೇ ಭದ್ರತಾ ಪಡೆಗಳು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಹಲವು ಹಿರಿಯ ನಕ್ಸಲ್ ನಾಯಕರು ಸೇರಿ 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಿಂದ 180 ಕಿ.ಮೀ ದೂರದಲ್ಲಿರುವ ಈ ಪ್ರದೇಶದಲ್ಲಿ ಉನ್ನತ ನಕ್ಸಲರ ಚಲನವಲನದ ಬಗ್ಗೆ ಮಾಹಿತಿ ಪಡೆದ ನಂತರ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ನ ಹಿರಿಯ ನಾಯಕ ಮತ್ತು ಕೇಂದ್ರ ಸಮಿತಿ ಸದಸ್ಯ (ಸಿಸಿಎಂ) ಮೋಡೆಮ್ ಬಾಲಕೃಷ್ಣ ಅವರು ಎನ್‌ಕೌಂಟರ್‌ನಲ್ಲಿ ಹತರಾಗುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ಹತ್ಯೆಯಾದ ನಕ್ಸಲೀಯರಲ್ಲಿ ಮನೋಜ್ ಅಲಿಯಾಸ್ ಮೊಡೆಮ್ ಬಾಲಕೃಷ್ಣ ಪ್ರಮುಖರಾಗಿದ್ದು, ಇವರು ಹಲವು ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇವರ ತಲೆಗೆ ಒಂದು ಕೋಟಿ ರೂಪಾಯಿ ಬಹುಮಾನ ಘೋಷಿಸಲ್ಪಟ್ಟಿತ್ತು. ಅಧಿಕಾರಿಗಳ ಪ್ರಕಾರ, ಇವರ ಸಾವಿನಿಂದ ನಕ್ಸಲ್ ಚಟುವಟಿಕೆಗಳಿಗೆ ದೊಡ್ಡ ಹೊಡೆತ ಬಿದ್ದಿದೆ.
ಕಾರ್ಯಾಚರಣೆಯಲ್ಲಿ ಸಿಆರ್‌ಪಿಎಫ್ ಕೋಬ್ರಾ ಕಮಾಂಡೋಗಳು ಮತ್ತು ಛತ್ತೀಸ್‌ಗಢ ಪೊಲೀಸ್ ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಗುಂಡಿನ ಚಕಮಕಿಯ ನಂತರ ಭದ್ರತಾ ಪಡೆಗಳು ಪ್ರದೇಶವನ್ನು ಸಂಪೂರ್ಣವಾಗಿ ಕಟ್ಟು ಹಾಕಿ, ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಹಾಗಾಗಿ, ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದ್ದು, ಇದು ಅದರ ಭಾಗವಾಗಿ ನಡೆದಿದೆ.