ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಮ ಮಂದಿರ ಹುಂಡಿ ಕಳವು ಆರೋಪಿ ಅನುಕಲ್ಪ್ ಮಿಶ್ರಾಗೆ ಮತ್ತೊಂದು ಸಂಕಷ್ಟ; ಚಿಕ್ಕಮ್ಮನ ಮೇಲೆಯೇ ಹಲ್ಲೆ ನಡೆಸಿದ್ದ ಪಾಪಿ

Anukalp Mishra: ಅಯೋಧ್ಯೆಯ ರಾಮ ಮಂದಿರ ಹುಂಡಿ ಕಳವು ಪ್ರಕರಣದ ಪ್ರಮುಖ ಆರೋಪಿ ಅನುಕಲ್ಪ್ ಮಿಶ್ರಾ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಕುಟುಂಬ ಕಲಹದ ನಡುವೆ ಚಿಕ್ಕಮ್ಮ ನೇಹಾ ಮಿಶ್ರಾ ಅವರ ಮೇಲೆ ಹಲ್ಲೆ ನಡೆಸಿ, ಕತ್ತು ಹಿಸುಕಲು ಯತ್ನ, ಮೊಬೈಲ್ ಹಾಗೂ ನಗದು ಕಸಿದುಕೊಂಡ ಆರೋಪದಡಿ ಆತ ಸೇರಿ ಎಂಟು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಹುಂಡಿ ಕಳವು ಆರೋಪಿ ಅನುಕಲ್ಪ್ ಮಿಶ್ರಾಗೆ ಮತ್ತೊಂದು ಸಂಕಷ್ಟ

ಅನುಕಲ್ಪ್ ಮಿಶ್ರಾ ಮತ್ತು ರಾಮ ಮಂದಿರ (ಸಂಗ್ರಹ ಚಿತ್ರ) -

Profile
Sushmitha Jain Jul 6, 2026 5:34 PM

ಲಖನೌ, ಜು. 6: ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರದ (Ram Temple) ಕಾಣಿಕೆ ಹುಂಡಿಯಿಂದ ಹಣ ಕಳವು ಪ್ರಕರಣದ ಪ್ರಮುಖ ಆರೋಪಿ ಅನುಕಲ್ಪ್ ಮಿಶ್ರಾ (Anukalp Mishra) ವಿರುದ್ಧ ಮತ್ತೊಂದು ಗಂಭೀರ ಪ್ರಕರಣ ದಾಖಲಾಗಿದೆ. ಈ ಬಾರಿ ಆತನ ಚಿಕ್ಕಮ್ಮ ನೇಹಾ ಮಿಶ್ರಾ (Neha Mishra) ದೂರು ದಾಖಲಿಸಿದ್ದಾರೆ. ಅನುಕಲ್ಪ್ ಸೇರಿ ಎಂಟು ಮಂದಿಯ ವಿರುದ್ಧ ಹಲ್ಲೆ, ದರೋಡೆ ಹಾಗೂ ಕಿರುಕುಳದ ಆರೋಪ ಮಾಡಿದ್ದಾರೆ.

2016ರಲ್ಲಿ ಬ್ರಿಜೆಂದ್ರ ಮಿಶ್ರಾ ಅವರನ್ನು ವಿವಾಹವಾಗಿದ್ದ ನೇಹಾ ಮಿಶ್ರಾ ಕುಟುಂಬ ಕಲಹದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಪತಿಯ ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಆದರೆ ಏಪ್ರಿಲ್ 28ರಂದು ಬ್ರಿಜೆಂದ್ರ ಮಿಶ್ರಾ ಮತ್ತು ಇತರರು ಕೊಠಡಿಯ ಬೀಗ ಒಡೆದು ತಮ್ಮ ವಸ್ತುಗಳನ್ನು ಹೊರಗೆ ಎಸೆದಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ವಿಚಾರ ತಿಳಿದ ಬಳಿಕ ಏಪ್ರಿಲ್ 30ರಂದು ತಾಯಿ, ಇಬ್ಬರು ಸಹೋದರಿಯರು ಹಾಗೂ ಸಂಬಂಧಿಕರೊಂದಿಗೆ ಮನೆಗೆ ತೆರಳಿದಾಗ, ಬ್ರಿಜೆಂದ್ರ ಮಿಶ್ರಾ, ಅವರ ಎರಡನೇ ಪತ್ನಿ ಪಲ್ಲವಿ, ಅನುಕಲ್ಪ್ ಮಿಶ್ರಾ ಹಾಗೂ ಇತರರು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ನೇಹಾ ಆರೋಪಿಸಿದ್ದಾರೆ.

ರಾಮ ಮಂದಿರದಲ್ಲಿದ್ದ ಚಿನ್ನಲೇಪಿತ 'ರಾಮಚರಿತ ಮಾನಸ'ದ ಫೋಟೋ ಹಂಚಿಕೊಂಡ ಗೋಪಾಲ್‌ ನಾಗರಕಟ್ಟೆ

ಹಲ್ಲೆಯ ವೇಳೆ ಪತಿ ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ್ದು, ತನ್ನ ಮೇಲೆ ಲೈಂಗಿಕ ಕಿರುಕುಳ ಎಸಗಿದ್ದಾನೆ. ಅಲ್ಲದೆ ಮೊಬೈಲ್ ಫೋನ್, ಪರ್ಸ್ ಹಾಗೂ 20 ಸಾವಿರ ರುಪಾಯಿ ನಗದು ಕಸಿದುಕೊಂಡಿದ್ದಾನೆ. ತನ್ನ ಸಹೋದರಿಯ ಐಫೋನ್‌ನ್ನು ಒಡೆದು ಹಾಕಿದ್ದು, ಮತ್ತೊಬ್ಬ ಸಹೋದರಿಯ ಚಿನ್ನದ ಸರ ಮತ್ತು ಕಿವಿಯೋಲೆಗಳನ್ನು ಕಸಿದುಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಘಟನೆಯಲ್ಲಿ ತಾಯಿ ಮೇಲೆಯೂ ಹಲ್ಲೆ ನಡೆಸಲಾಗಿದೆ ಎಂದು ನೇಹಾ ಆರೋಪಿಸಿದ್ದು, ಪತಿ ಪರವಾಗಿದ್ದ ಪಲ್ಲವಿ, ಬ್ಯೂಟಿ ಮತ್ತು ಸೀತಾ ಅವರ ವಿರುದ್ಧವೂ ದೂರು ನೀಡಿದ್ದಾರೆ.

ಘಟನೆಯ ವೇಳೆ ತುರ್ತು ಪೊಲೀಸ್ ಸಹಾಯವಾಣಿ ಕರೆ ಮಾಡಿದ ನಂತರ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ನೇಹಾ ನೀಡಿದ ದೂರಿನ ಆಧಾರದ ಮೇಲೆ ಅನುಕಲ್ಪ್ ಮಿಶ್ರಾ ಸೇರಿದಂತೆ ಎಲ್ಲ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಮ ಮಂದಿರದ ಹಿಉಂಡಿ ಕಾಣಿಕೆ ಎಣಿಕೆ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕಾಣಿಕೆ ಹಣ ಕಳವು ಮಾಡಿದ ಆರೋಪದಲ್ಲಿ ಅನುಕಲ್ಪ್ ಮಿಶ್ರಾ ಈಗಾಗಲೇ ಬಂಧನದಲ್ಲಿದ್ದು, ಈ ಪ್ರಕರಣದಲ್ಲೂ ಪ್ರಮುಖ ಆರೋಪಿಯಾಗಿದ್ದಾನೆ.