ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನಲ್ಲಿ ಪತ್ನಿಯನ್ನು ಕೊಂದು ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟು ಪರಾರಿಯಾದ ಪತಿ; ಐದು ದಿನಗಳ ಬಳಿಕ ಕೊಲೆ ರಹಸ್ಯ ಬಯಲಾಗಿದ್ದೇಗೆ?

ಬೆಂಗಳೂರಿನ ಹೊರವಲಯದ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಹಾರ ಮೂಲದ ಮಹಿಳೆ ರೀಮಾ ಕುಮಾರಿಯನ್ನು ಪತಿ ಧೀರಜ್ ಕುಮಾರ್ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಕೊಲೆ ಮಾಡಿದ ಬಳಿಕ ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಮನೆಯೊಳಗೆ ಬಿಟ್ಟು ಆರೋಪಿಯು ಪರಾರಿಯಾಗಿದ್ದಾನೆ. ಸುಮಾರು ಐದು ದಿನಗಳ ಬಳಿಕ ಮನೆಯಿಂದ ಬರುತ್ತಿದ್ದ ತೀವ್ರ ದುರ್ವಾಸನೆ ಗಮನಿಸಿದ ಸಹೋದ್ಯೋಗಿ ಮತ್ತು ನೆರೆಹೊರೆಯವರು ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದು, ಬಾಗಿಲು ತೆರೆಯುತ್ತಿದ್ದಂತೆ ಕೊಳೆತ ಸ್ಥಿತಿಯಲ್ಲಿದ್ದ ಶವ ಪತ್ತೆಯಾಗಿದೆ.

ಬೆಂಗಳೂರಿನಲ್ಲಿ ಪತ್ನಿ ಹತ್ಯೆ: ಬಿಹಾರಕ್ಕೆ ಪರಾರಿಯಾದ ಪತಿ

ಸಾಂದರ್ಭಿಕ ಚಿತ್ರ -

Profile
Sushmitha Jain Jul 30, 2026 5:44 PM

ಬೆಂಗಳೂರು, ಜು.30: ಬಿಹಾರ (Bihar) ಮೂಲದ ಮಹಿಳೆಯೊಬ್ಬರನ್ನು ಪತಿಯೇ ಕೊಲೆ ಮಾಡಿ, ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಮನೆಯೊಳಗೆ ಬಿಟ್ಟು ಪರಾರಿ ಆಗಿರುವ ಭೀಕರ ಘಟನೆ ನಗರದ ಹೊರವಲಯದ ಕುಂಬಳಗೋಡು (Kumbalagodu) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತಳನ್ನು ರೀಮಾ ಕುಮಾರಿ ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಧೀರಜ್ ಕುಮಾರ್ ಪ್ರಮುಖ ಆರೋಪಿಯಾಗಿದ್ದಾನೆ. ಕೊಲೆ ನಡೆದ ಬಳಿಕ ಆತ ತನ್ನ ಸ್ವಗ್ರಾಮವಾದ ಬಿಹಾರಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ದಂಪತಿ ಸುಮಾರು ಒಂದು ವರ್ಷದ ಹಿಂದೆ ಉದ್ಯೋಗಕ್ಕಾಗಿ ಬಿಹಾರದಿಂದ ಬೆಂಗಳೂರಿಗೆ ಬಂದು, ಗೆರುಪಾಳ್ಯ ಸಮೀಪದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಪ್ರೇಮ ವಿವಾಹವಾಗಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಭಾನುವಾರವೇ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲೆ ಮಾಡಿದ ಬಳಿಕ ಧೀರಜ್ ಕುಮಾರ್, ಪತ್ನಿಯ ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಮನೆಯ ಶೌಚಾಲಯದ ಸಮೀಪ ಇಟ್ಟು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾನೆ.

Crime News: ಅನುಕಂಪದ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ತಾಯಿಯನ್ನೇ ಕೊಂದ ಪಾಪಿ ಮಗಳು; ಸಹೋದರನ ಸಣ್ಣ ಅನುಮಾನದಿಂದ ಬೆಳಕಿಗೆ ಬಂತು ಭಯಾನಕ ಸಂಚು

ರೀಮಾ ಕುಮಾರಿ ನಾಲ್ಕೈದು ದಿನಗಳಿಂದ ಕೆಲಸಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಸಹೋದ್ಯೋಗಿಯೊಬ್ಬರು ಗುರುವಾರ ಮನೆಗೆ ಭೇಟಿ ನೀಡಿದ್ದರು. ಆಗ ಮನೆಯಿಂದ ತೀವ್ರ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮನೆ ಬಾಗಿಲು ತೆರೆದಾಗ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸ್ಥಳೀಯರ ಪ್ರಕಾರ, ದಂಪತಿ ಸ್ನೇಹಪರರಾಗಿದ್ದು, ಪ್ರತಿದಿನ ಬೆಳಿಗ್ಗೆ ಸುಮಾರು 8.30 ಗಂಟೆಗೆ ಕೆಲಸಕ್ಕೆ ತೆರಳಿ ಸಂಜೆ ಮನೆಗೆ ಮರಳುತ್ತಿದ್ದರು. "ಇಂತಹ ಘಟನೆ ನಡೆಯುತ್ತದೆ ಎಂದು ನಾವು ಊಹಿಸಿಯೂ ಇರಲಿಲ್ಲ" ಎಂದು ನೆರೆಹೊರೆಯವರು ತಿಳಿಸಿದ್ದಾರೆ.

ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಕೊಲೆಗೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಧೀರಜ್ ಕುಮಾರ್ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.