ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಜೀವ ಕಸಿದ ಮೂಢ ನಂಬಿಕೆ; ಮಗುವಿನ ಅನಾರೋಗ್ಯಕ್ಕೆ ನೆರೆಮನೆಯ ಮಹಿಳೆಯೇ ಕಾರಣ ಎಂದು ಆರೋಪಿಸಿ ಹೊಡೆದು ಕೊಂದ ಪಾಪಿಗಳು

Bihar Horror: ಮಾಟಮಂತ್ರ ಮಾಡುತ್ತಿದ್ದಾರೆ ಎನ್ನುವ ಅನುಮಾನದ ಮೇರೆಗೆ 35 ವರ್ಷದ ಮಹಿಳೆಯನ್ನು ನೆರೆಮನೆಯವರು ಕೊಲೆ ಮಾಡಿರುವ ಘಟನೆ ಬಿಹಾರದ ನವಾಡ ಜಿಲ್ಲೆಯಲ್ಲಿ ನಡೆದಿದೆ. ಆ ಮೂಲಕ ಮೂಢ ನಂಬಿಕೆ ಮತ್ತೊಂದು ಜೀವವೊಂದು ಬಲಿಯಾಗಿದೆ.

35 ವರ್ಷದ ಮಹಿಳೆಯ ಹತ್ಯೆಗೆ ಕಾರಣವಾಯ್ತು ಮೂಢ ನಂಬಿಕೆ; ಏನಿದು ಘಟನೆ?

ಎಐ ಚಿತ್ರ. -

Ramesh B
Ramesh B Jan 9, 2026 9:28 PM

ಪಾಟ್ನಾ, ಜ. 9: ಮೂಢ ನಂಬಿಕೆ, ವದಂತಿ ಮತ್ತು ದ್ವೇಷ ಯಾವ ರೀತಿ ಮಾರಣಾಂತಿಕವಾಗಿ ಬದಲಾಗುತ್ತದೆ ಎನ್ನುವುದಕ್ಕೆ ಬಿಹಾರದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಮಾಟಮಂತ್ರ ಮಾಡುತ್ತಿದ್ದಾರೆ ಎನ್ನುವ ಅನುಮಾನದ ಮೇರೆಗೆ 35 ವರ್ಷದ ಮಹಿಳೆಯನ್ನು ನೆರೆಮನೆಯವರು ಕೊಲೆ ಮಾಡಿದ್ದು, ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ (Bihar Horror). ನವಾಡ ಜಿಲ್ಲೆಯಲ್ಲಿ ಈ ಬೀಭತ್ಸ ಘಟನೆ ನಡೆದಿದ್ದು, ಬಿಹಾರದಲ್ಲಿ ಅಂಧ ವಿಶ್ವಾಸ ಹೇಗೆ ಮುಗ್ಧರ ಜೀವ ಕಸಿಯುತ್ತದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಎನಿಸಿಕೊಂಡಿದೆ.

ತನ್ನದಲ್ಲದ ತಪ್ಪಿಗೆ ಉದ್ರಿಕ್ತ ಜನರ ಕೈಗೆ ಸಿಕ್ಕಿ ಮೃತಪಟ್ಟ ಮಹಿಳೆಯನ್ನು ಕಿರಣ್‌ ದೇವಿ ಎಂದು ಗುರುತಿಸಲಾಗಿದೆ. ಗ್ರಾಮಸ್ಥರ ಮೂಢ ನಂಬಿಕೆಯೇ ಕಿರಣ್‌ ದೇವಿಯ ಸಾವಿಗೆ ಕಾರಣ ಎಂದು ಅವರ ಮನೆಯವರು ತಿಳಿಸಿದ್ದಾರೆ.

ಘಟನೆಯ ವಿವರ

ನೆರೆ ಮನೆಯ ಮಗುವಿಗೆ ಇತ್ತೀಚೆಗೆ ಕಾಯಿಲೆ ಕಾಣಿಸಿಕೊಂಡಿತ್ತು. ಮೃತ ಮಹಿಳೆಯ ಮನೆಯವರೇ ಇದಕ್ಕೆ ಕಾರಣ. ಕಿರಣ್‌ ಮಾಟ ಮಂತ್ರ ಮಾಡಿ ಮಗುವಿಗೆ ಕಾಯಿಲೆ ತರಿಸಿದ್ದಾಳೆ ಎಂದು ಆರೋಪಿಸಿ ಮಗುವಿನ ಮನೆಯವರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಅಸ್ವಸ್ಥಗೊಂಡ ಮಗುವಿನ ಸಂಬಂಧಿಕರಾದ ಮುಕೇಶ್‌ ಚೌಧರಿ, ಮಹೇಂದ್ರ ಚೌಧರಿ, ನಾಟ್ರು ಚೌಧರಿ ಮತ್ತು ಶೋಭಾ ದೇವಿ ಮತ್ತಿತರರು ಸೇರಿ ಇಟ್ಟಿಗೆ, ಕಲ್ಲು ಮತ್ತು ಕಬ್ಬಿಣ ಸರಳುಗಳಿಂದ ಕಿರಣ್‌ ದೇವಿ ಮೇಲೆ ಆಕ್ರಮಣ ನಡೆಸಿದ್ದರು.

ಮಾಟ, ಮಂತ್ರ ತೆಗೆಸುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ಮುಸ್ಲಿಂ ಧರ್ಮಗುರು ಆರೆಸ್ಟ್

ಈ ದಾಳಿಯ ವೇಳೆ ಕಿರಣ್‌ ದೇವಿ ಮೃತಪಟ್ಟರೆ, ಅವರ ನಾದಿನಿ ಲಲಿತಾ ದೇವಿ ಮತ್ತು ಅತ್ತಿಗೆ ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ʼʼಗಂಭೀರ ಗಾಯಗಳೊಂದಿಗೆ ಕಿರಣ್‌ ದೇವಿ ಅವರನ್ನು ಆಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ ತೀವ್ರ ರಕ್ತಸ್ರಾವವಾಗಿದ್ದರಿಂದ ದಾರಿ ಮಧ್ಯದಲ್ಲೇ ಅವರು ಅಸುನೀಗಿದ್ದರುʼʼ ಎಂದು ವೈದ್ಯರು ತಿಳಿಸಿದ್ದಾರೆ. ಕಿರಣ್‌ ದೇವಿ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೂಢನಂಬಿಕೆ ನಾಲ್ವರು ಮಕ್ಕಳು ಅನಾಥವಾಗುವಂತಾಗಿದೆ.

ಸಂತ್ರಸ್ತೆಯ ಸಂಬಂಧಿಕರು ಹೇಳಿದ್ದೇನು?

ಮೃತ ಕಿರಣ್‌ ದೇವಿ ಅವರ ಅತ್ತಿಗೆ ರೇಖಾ ದೇವಿ ಘಟನೆ ಬಗ್ಗೆ ಮಾತನಾಡಿ, ʼʼನೆರೆಮನೆಯ ಮುಖೇಶ್‌ ಚೌಧರಿಯ ಮಗು ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಯಿತು. ವೈದ್ಯರ ಬಳಿ ಕರೆದುಕೊಂಡು ಹೋದಾಗ ಮಗುವಿಗೆ ಮೆದುಳು ಸಂಬಂಧಿ ಕಾಯಿಲೆ ಇರುವುದು ಪತ್ತೆಯಾಯಿತು. ಇದಕ್ಕೆಲ್ಲ ಕಾರಣ ಕಿರಣ್‌ ದೇವಿ ಎಂಬುದು ಮುಕೇಶ್‌ ಮನೆಯವರ ಆರೋಪವಾಗಿತ್ತು. ಕಿರಣ್‌ ಮಾಟ ಮಂತ್ರ ಮಾಡಿದ ಕಾರಣ ಮಗುವಿಗೆ ಕಾಯಿಲೆ ವಕ್ಕರಿಸಿದೆ ಎಂದು ವಾದಿಸುತ್ತಿದ್ದರು. ಕೊನೆಗೊಂದು ದಿನ ಇದೇ ಕಾರಣಕ್ಕೆ ದಾಳಿ ನಡೆಸಿದರುʼʼ ಎಂದು ವಿವರಿಸಿದ್ದಾರೆ.

ʼʼ2 ಕುಟುಂಬಗಳ ಮಧ್ಯೆ ನಡೆಯುತ್ತಿದ್ದ ವಾಗ್ವಾದ, ಆರೋಪ-ಪ್ರತ್ಯಾರೋಪ ಜಗಳಕ್ಕೆ ಕಾರಣವಾಯಿತು. ಈ ಸಂಘರ್ಷದಲ್ಲಿ ಒಟ್ಟು 4-5 ಮಂದಿ ಗಾಯಗೊಂಡಿದ್ದಾರೆ. ಈ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ತನಿಖೆ ಆರಂಭವಾಗಿದೆʼʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇದೇ ರೀತಿಯ ಘಟನೆ ಹಿಂದೆಯೂ ನಡೆದಿದೆ. ಕಳೆದ ವರ್ಷ ಮಾಟ ಮಾಡುತ್ತಿದ್ದಾರೆ ಎನ್ನುವ ಅನುಮಾನದ ಮೇರೆಗೆ ಇಬ್ಬರನ್ನು ಹತ್ಯೆ ಮಾಡಲಾಗಿತ್ತು.