ಭಾರತದ ಆಪರೇಷನ್ ಸಿಂದೂರ್‌ಗೆ ಹೆದರಿ ಸಂವಿಧಾನಾತ್ಮಕ ಬದಲಾವಣೆಗೆ ಮುಂದಾದ ಪಾಕಿಸ್ತಾನ
ಭಾರತದ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಪಾಕಿಸ್ತಾನದ ಹಲವು ವೈಫಲ್ಯಗಳನ್ನು ಬಹಿರಂಗಪಡಿಸಿದೆ. ಈ ಕಾರ್ಯಾಚರಣೆಯಿಂದ ಪಾಕಿಸ್ತಾನದ ಭದ್ರತಾ ವ್ಯವಸ್ಥೆ ಮತ್ತು ಆಡಳಿತದ ದೌರ್ಬಲ್ಯಗಳು ಹೊರಬಂದಿದ್ದು, ಅದರ ಪರಿಣಾಮವಾಗಿ ಅಲ್ಲಿನ ಸಂವಿಧಾನಾತ್ಮಕ ಬದಲಾವಣೆಗಳಿಗೆ ಒತ್ತಡ ಉಂಟಾಯಿತು ಎಂದು ಸಿಡಿಎಸ್ ಜನರಲ್ ಅನಿಲ್ ಚೌಹಾನ್ ಹೇಳಿದ್ದಾರೆ.
ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚೌಹಾನ್ -
ನವದೆಹಲಿ, ಜ. 10: ʼʼಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರ್ (Operation Sindoor) ಸಂದರ್ಭದಲ್ಲಿ ಬಹಿರಂಗವಾದ ಪಾಕಿಸ್ತಾನದ (Pakistan) ವೈಫಲ್ಯಗಳೇ ಅದರ ಇತ್ತೀಚಿನ ಸಂವಿಧಾನ ತಿದ್ದುಪಡಿಗಳಿಗೆ ಕಾರಣʼʼ ಎಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ (Chief of Defence Staff General) ಅನಿಲ್ ಚೌಹಾನ್ (Anil Chauhan) ಶುಕ್ರವಾರ ಹೇಳಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಬಹಿರಂಗವಾದ ವೈಫಲ್ಯಗಳನ್ನು ಸರಿಪಡಿಸಲು ಶತ್ರು ರಾಷ್ಟ್ರವು ಆತುರದಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಪುಣೆಯ ಪಬ್ಲಿಕ್ ಪಾಲಿಸಿ ಫೆಸ್ಟಿವಲ್‌ನಲ್ಲಿ ಮಾತನಾಡಿದ ಜನರಲ್ ಚೌಹಾನ್, “ಪಾಕಿಸ್ತಾನದಲ್ಲಿ ಆತುರದಲ್ಲಿ ಮಾಡಲಾದ ಸಂವಿಧಾನ ತಿದ್ದುಪಡಿ ಮತ್ತು ಬದಲಾವಣೆಗಳಿಂದ, ಈ ಕಾರ್ಯಾಚರಣೆಯಲ್ಲಿ ಎಲ್ಲವೂ ಸರಿಯಾಗಿ ನಡೆದಿಲ್ಲ ಎಂಬುದನ್ನು ಒಪ್ಪಿಕೊಂಡಂತಾಗಿದೆ" ಎಂದು ಹೇಳಿದರು.
ಪಾಕ್ ರಕ್ಷಣಾ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆ
ಪಾಕ್ ಸಂವಿಧಾನದ 243ನೇ ವಿಧಿಗೆ ಮಾಡಲಾದ ತಿದ್ದುಪಡಿಯಿಂದ ದೇಶದ ಉನ್ನತ ರಕ್ಷಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳು ಕಂಡುಬಂದಿವೆ. ಮೂರೂ ಸೇನಾ ಪಡೆಗಳ ನಡುವೆ ಸಮನ್ವಯತೆ ಉತ್ತೇಜಿಸುವ ಉದ್ದೇಶದಿಂದ ಸ್ಥಾಪಿಸಲಾಗಿದ್ದ ಜಾಯಿಂಟ್ ಚೀಫ್ಸ್ ಆಫ್ ಸ್ಟಾಫ್ ಸಮಿತಿಯ ಅಧ್ಯಕ್ಷರ ಹುದ್ದೆಯನ್ನು ರದ್ದುಗೊಳಿಸಲಾಗಿದೆ. ಅದರ ಬದಲಾಗಿ ಚೀಫ್ ಆಫ್ ಡಿಫೆನ್ಸ್ ಫೋರ್ಸಸ್ (ಸಿಡಿಎಫ್) ಎಂಬ ಹೊಸ ಹುದ್ದೆಯನ್ನು ರಚಿಸಲಾಗಿದೆ ಎಂದು ಜನರಲ್ ಚೌಹಾನ್ ವಿವರಿಸಿದ್ದಾರೆ.
“ಈ ಹುದ್ದೆಯನ್ನು ಕೇವಲ ಸೇನಾ ಮುಖ್ಯಸ್ಥರು ಮಾತ್ರ ರಚಿಸಬಹುದಾಗಿದ್ದು, ಇದು ಸಂಯುಕ್ತತೆಯ ಮೂಲ ತತ್ತ್ವಕ್ಕೆ ವಿರುದ್ಧವಾಗಿದೆ” ಎಂದು ಜನರಲ್ ಚೌಹಾನ್ ಹೇಳಿದ್ದಾರೆ. ಇಷ್ಟೇ ಅಲ್ಲದೆ ಪಾಕಿಸ್ತಾನವು ನ್ಯಾಷನಲ್ ಸ್ಟ್ರಾಟಜಿ ಕಮಾಂಡ್ ಹಾಗೂ ಆರ್ಮಿ ರಾಕೆಟ್ ಫೋರ್ಸಸ್ ಕಮಾಂಡ್ ಅನ್ನು ಕೂಡ ಸ್ಥಾಪಿಸಿದೆ. “ಸಾಂಪ್ರದಾಯಿಕ ಹಾಗೂ ತಂತ್ರಾತ್ಮಕ ಎರಡೂ ದೃಷ್ಟಿಕೋನಗಳಿಂದ ಇದು ಅವರ ಸಾಮರ್ಥ್ಯವನ್ನು ಬಲಪಡಿಸಬಹುದು. ಆದರೆ ವಾಸ್ತವದಲ್ಲಿ ಅವರು ಹೊಸ ರಚನೆಗಳ ಮೂಲಕ ಅಧಿಕಾರವನ್ನು ಕೇಂದ್ರೀಕರಿಸಿದ್ದಾರೆ” ಎಂದು ಸಿಡಿಎಸ್ ಹೇಳಿದ್ದಾರೆ.
“ಈ ಮೂಲಕ ಭೂ ಆಧಾರಿತ ಕಾರ್ಯಾಚರಣೆಗಳು, ನೌಕಾಪಡೆ ಮತ್ತು ವಾಯುಪಡೆಯೊಂದಿಗೆ ಸಿಡಿಎಫ್ ಮೂಲಕ ನಡೆದ ಜಂಟಿ ಕಾರ್ಯಾಚರಣೆಗಳು ಜತೆಗೆ ತಂತ್ರಾತ್ಮಕ ಮತ್ತು ಅಣು ಸಂಬಂಧಿತ ವಿಷಯಗಳಿಗೆ ಸೇನಾ ಮುಖ್ಯಸ್ಥರೇ ಹೊಣೆಗಾರರಾಗುತ್ತಾರೆ” ಎಂದು ಜನರಲ್ ಚೌಹಾನ್ ತಿಳಿಸಿದ್ದಾರೆ.
ಭಾರತಕ್ಕೆ ಪಾಠ ಮತ್ತು ಕಾರ್ಯಾಚರಣಾತ್ಮಕ ಸಿದ್ಧತೆ
ಆಪರೇಷನ್ ಸಿಂದೂರ್ ಹಾಗೂ ಅದಕ್ಕೂ ಮುನ್ನ ನಡೆದ ಉರಿ ಸರ್ಜಿಕಲ್ ಸ್ಟ್ರೈಕ್, ಡೋಕ್ಲಾಂ ಮತ್ತು ಗಾಲ್ವಾನ್ ಸಂಘರ್ಷಗಳು, ಬಾಲಾಕೋಟ್ ವಾಯು ದಾಳಿ ಸೇರಿದಂತೆ ಹಿಂದಿನ ಅನುಭವಗಳಿಂದ ಕಲಿತ ಪಾಠಗಳೊಂದಿಗೆ ಈ ಬೆಳವಣಿಗೆಗಳನ್ನು ಚೌಹಾನ್ ಜೋಡಿಸಿದ್ದಾರೆ.
ಎಲ್ಲ ಸಂದರ್ಭಗಳಲ್ಲಿಯೂ ಕಮಾಂಡ್ ರಚನೆಗಳನ್ನು ಪ್ರಮಾಣೀರಿಸಲು ಭಾರತ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ಪ್ರಸ್ತಾವಿತ ಸಂಯುಕ್ತ ಥಿಯೇಟರ್ ಕಮಾಂಡ್‌ಗಳ ಕುರಿತು ಮಾತನಾಡುತ್ತಾ, “ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರವು 2026ರ ಮೇ 30ರವರೆಗೆ ಗಡುವು ನೀಡಿದೆ. ಆದರೆ ಸಶಸ್ತ್ರ ಪಡೆಗಳು ಅವಧಿಗಿಂತ ಮುಂಚೆಯೇ ಈ ರಚನೆಯನ್ನು ಸ್ಥಾಪಿಸಲು ಕೆಲಸ ಮಾಡುತ್ತಿವೆ” ಎಂದು ಜನರಲ್ ಚೌಹಾನ್ ತಿಳಿಸಿದ್ದಾರೆ.
ತಂತ್ರಾತ್ಮಕ ಪರಿಣಾಮಗಳು
ಸಾಂಪ್ರದಾಯಿಕ ಹಾಗೂ ಅಣು ಬೆದರಿಕೆಗಳಿಗೆ ಸಮಾನವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವಿರುವ ಮಾನಕೃತ ಕಮಾಂಡ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದರ ಮೇಲೆ ಭಾರತ ಗಮನ ಹರಿಸುತ್ತಿದೆ ಎಂದು ಜನರಲ್ ಚೌಹಾನ್ ಹೇಳಿದ್ದಾರೆ.
ಆಪರೇಷನ್ ಸಿಂದೂರ್‌ಗೆ ತಾತ್ಕಾಲಿಕ ವಿರಾಮ ನೀಡಲಾಗಿದೆ ಎಂದ ಅವರು, ಇತ್ತೀಚಿನ ಕಾರ್ಯಾಚರಣೆಗಳಿಂದ ಪಡೆದ ಪಾಠಗಳು ಭಾರತದ ರಕ್ಷಣಾ ಯೋಜನೆ ಮತ್ತು ಉನ್ನತ ಕಮಾಂಡ್ ರಚನೆಗಳನ್ನು ಮುಂದುವರೆದು ರೂಪಿಸುತ್ತಿವೆ ಎಂದು ತಿಳಿಸಿದರು.