ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎಂಎಲ್‌ಸಿ ಚುನಾವಣೆ ಸೋಲಿನ ಬೆನ್ನಲ್ಲೇ ಜೆಡಿಯು-ಬಿಜೆಪಿ ನಡುವೆ ಅಸಮಾಧಾನ; ತೇಜಸ್ವಿ ಯಾದವ್‌ಗೆ ಜನ್ಮದಿನದ ಶುಭಾಶಯ ಕೋರಿ ಹೊಸ ಸಂದೇಶ?

ಬಿಹಾರದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಾಲುದಾರರಾದ ಜನತಾದಳ (ಯುನೈಟೆಡ್) (ಜೆಡಿಯು) ಮತ್ತು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನಡುವೆ ತೀವ್ರ ಭಿನ್ನಾಭಿಪ್ರಾಯ ತಲೆದೋರಿದೆ. ಇತ್ತೀಚೆಗೆ ನಡೆದ ವಿಧಾನ ಪರಿಷತ್ (ಎಂಎಲ್‌ಸಿ) ಚುನಾವಣೆಯಲ್ಲಿ ಜೆಡಿಯು ಪಕ್ಷದ ಕಳಪೆ ಪ್ರದರ್ಶನ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರಿಗೆ ಜೆಡಿಯು ಮುಖಂಡರು ನೀಡಿರುವ ಜನ್ಮದಿನದ ಶುಭಾಶಯಗಳು ಬಿಹಾರ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿವೆ.

ಎಂಎಲ್‌ಸಿ ಚುನಾವಣೆ ಸೋಲಿನ ಬೆನ್ನಲ್ಲೇ ಜೆಡಿಯು-ಬಿಜೆಪಿ ನಡುವೆ ಅಸಮಾಧಾನ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 11, 2026 3:25 PM

ಪಟನಾ: ಬಿಹಾರದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಾಲುದಾರರಾದ ಜನತಾದಳ (ಯುನೈಟೆಡ್) (ಜೆಡಿಯು) ಮತ್ತು ಭಾರತೀಯ ಜನತಾ ಪಾರ್ಟಿ (BJP) ನಡುವೆ ತೀವ್ರ ಭಿನ್ನಾಭಿಪ್ರಾಯ ತಲೆದೋರಿದೆ. ಇತ್ತೀಚೆಗೆ ನಡೆದ ವಿಧಾನ ಪರಿಷತ್ (ಎಂಎಲ್‌ಸಿ) ಚುನಾವಣೆಯಲ್ಲಿ ಜೆಡಿಯು ಪಕ್ಷದ ಕಳಪೆ ಪ್ರದರ್ಶನ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ (Tejaswi Yadav) ಅವರಿಗೆ ಜೆಡಿಯು ಮುಖಂಡರು ನೀಡಿರುವ ಜನ್ಮದಿನದ ಶುಭಾಶಯಗಳು ಬಿಹಾರ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿವೆ.

ಇತ್ತೀಚೆಗೆ ನಡೆದ ಎಂಟು ವಿಧಾನ ಪರಿಷತ್ ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ತಲಾ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಆದರೆ, ಎನ್‌ಡಿಎ ಮೈತ್ರಿಕೂಟ ಕೇವಲ ಮೂರು ಸ್ಥಾನಗಳನ್ನು ಮಾತ್ರ ಗೆಲ್ಲಲು ಶಕ್ತವಾಯಿತು. ಇದರಲ್ಲಿ ಜೆಡಿಯು ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಮೂಲಕ ಭಾರಿ ಹಿನ್ನಡೆ ಅನುಭವಿಸಿತು. ಚುನಾವಣೆಯಲ್ಲಿ ಮೈತ್ರಿಪಕ್ಷದ ನಾಯಕರು ತಮಗೆ ಸರಿಯಾಗಿ ಪ್ರಚಾರ ಮಾಡಿಲ್ಲ ಮತ್ತು ಒಳಸಂಚು ನಡೆಸಿದ್ದಾರೆ ಎಂದು ಸೋತ ಜೆಡಿಯು ಅಭ್ಯರ್ಥಿಗಳು ಬಹಿರಂಗವಾಗಿಯೇ ಆರೋಪಿಸಿದ್ದಾರೆ.

ಜೆಡಿಯು ನಾಯಕರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದ್ದು ಬಿಜೆಪಿಯ ನಡೆ. ಅಕ್ಟೋಬರ್ 31ರಂದು, ಜೆಡಿಯು ಅಭ್ಯರ್ಥಿಗಳಾದ ಪುಷ್ಕರ್ ಆನಂದ್ ಮತ್ತು ಅಭಿಷೇಕ್ ಝಾ ಅವರನ್ನು ಸೋಲಿಸಿ ಗೆದ್ದಿದ್ದ ಇಬ್ಬರು ಸ್ವತಂತ್ರ ಅಭ್ಯರ್ಥಿಗಳಾದ ರಾಹುಲ್ ರಾಜ್ (ಬಿಜೆಪಿ ಬಂಡಾಯ ಅಭ್ಯರ್ಥಿ) ಮತ್ತು ಬನ್ಸಿಧರ್ ಬ್ರಜ್ವಾಸಿ ಅವರನ್ನು ಬಿಜೆಪಿ ಸ್ವಾಗತಿಸಿತ್ತು. ಎನ್‌ಡಿಎ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿ ಗೆದ್ದವರನ್ನು ಬಿಜೆಪಿ ಹೇಗೆ ಬರಮಾಡಿಕೊಂಡಿತು ಎಂದು ಜೆಡಿಯು ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ನಂಬಿಕೆ ಮುರಿದಿದೆ ಎಂದ ಜೆಡಿಯು ಸಚಿವ

ಮೈತ್ರಿಕೂಟದೊಳಗಿನ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯಿಸಿರುವ ಜೆಡಿಯು ಹಿರಿಯ ಸಚಿವ ಶ್ರವಣ್ ಕುಮಾರ್, "ಎಲ್ಲಿ ನಂಬಿಕೆ ಮುರಿದಿದೆ (ಭರವಸೆ ಟೂಟಾ) ಮತ್ತು ಅದನ್ನು ಹೇಗೆ ಸರಿಪಡಿಸಬಹುದು ಎಂಬುದರ ಕುರಿತು ಉನ್ನತ ಮಟ್ಟದ ಪರಿಶೀಲನೆ ನಡೆಯುತ್ತಿದೆ" ಎಂದು ಹೇಳುವ ಮೂಲಕ ಅಸಮಾಧಾನ ಇರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಬಿಜೆಪಿ ವಕ್ತಾರ ಮನೋಜ್ ಶರ್ಮಾ ಅವರು ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಬಿಹಾರ ರಾಜಕೀಯದಲ್ಲಿ ಸಂಚಲನ: ಜೆಡಿಯು ಸೇರಿದ ನಿತೀಶ್ ಕುಮಾರ್ ಪುತ್ರ ನಿಶಾಂತ್; ಡಿಸಿಎಂ ಪಟ್ಟಕ್ಕೆ ಹಾದಿ ಸುಗಮ

ತೇಜಸ್ವಿ ಯಾದವ್‌ಗೆ ಜನ್ಮದಿನದ ಶುಭಾಶಯ ಮತ್ತು ರಾಜಕೀಯ ಲೆಕ್ಕಾಚಾರ

ಬಿಜೆಪಿ ಮತ್ತು ಜೆಡಿಯು ನಡುವಿನ ಈ ತಿಕ್ಕಾಟದ ನಡುವೆಯೇ, ನವೆಂಬರ್ 9ರಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಜನ್ಮದಿನಕ್ಕೆ ಜೆಡಿಯು ಪಕ್ಷದ ಪ್ರಮುಖ ನಾಯಕರಾದ ಸಂಜಯ್ ಝಾ, ವಿಜಯ್ ಕುಮಾರ್ ಚೌಧರಿ ಮತ್ತು ನಿಶಾಂತ್ ಕುಮಾರ್ ಸಾರ್ವಜನಿಕವಾಗಿ ಶುಭಾಶಯ ಕೋರಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಸೇರಿದಂತೆ ಬಿಹಾರದ ಯಾವುದೇ ಪ್ರಮುಖ ಬಿಜೆಪಿ ನಾಯಕರು ತೇಜಸ್ವಿ ಅವರಿಗೆ ಶುಭಾಶಯ ಕೋರಿಲ್ಲ. ಎನ್‌ಡಿಎ ಮೈತ್ರಿಕೂಟದಲ್ಲಿ ಸಹಕಾರ ಮುಂದುವರಿಯದಿದ್ದರೆ ತಮಗೆ ಬೇರೆ ರಾಜಕೀಯ ಆಯ್ಕೆಗಳಿವೆ ಎಂಬ ಪರೋಕ್ಷ ಸಂದೇಶವನ್ನು ಜೆಡಿಯು ಈ ಮೂಲಕ ಬಿಜೆಪಿಗೆ ರವಾನಿಸಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.