ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಹುಲ್‌ ಗಾಂಧಿಗಿಂತ ಮೊದಲು ಗಂಡು ಮಗುವಿಗೆ ಜನ್ಮ ನೀಡಿದ್ದ ಸೋನಿಯಾ ಗಾಂಧಿ; ಅವಧಿಗೂ ಮುನ್ನ ಜನಿಸಿದ ಮಗುವಿನ ಸಾವಿನ ಬಗ್ಗೆ ಆತ್ಮಕಥೆಯಲ್ಲಿ ವಿವರಿಸಿದ ಕಾಂಗ್ರೆಸ್‌ ನಾಯಕಿ

Sonia Gandhi: ಸೋನಿಯಾ ಗಾಂಧಿ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್'ನಲ್ಲಿ ವೈಯಕ್ತಿಕ ಜೀವನದ ಹಲವು ಘಟನೆಗಳನ್ನು ತೆರೆದಿಟ್ಟಿದ್ದಾರೆ. ರಾಹುಲ್‌ ಗಾಂಧಿ ಜನಿಸುವ ಮೊದಲೇ ಸೋನಿಯಾ ಗಾಂಧಿ ಅವರಿಗೆ ಗಂಡು ಮಗು ಜನಿಸಿತ್ತು. ಅವಧಿಗೂ ಮುನ್ನ ಜನಿಸಿದ ಕಾರಣ ಹುಟ್ಟಿದ ಕೆಲವೇ ಗಂಟೆಗಳಲ್ಲಿ ಅದು ಮೃತಪಟ್ಟಿತ್ತು. ಈ ಕಹಿ ಘಟನೆಯನ್ನು ಅವರು ಆತ್ಮಕಥೆಯಲ್ಲಿ ಬಿಚ್ಚಿಟ್ಟಿದ್ದಾರೆ.

ರಾಹುಲ್‌ಗಿಂತ ಮೊದಲು ಗಂಡು ಮಗುವಿಗೆ ಜನ್ಮ ನೀಡಿದ್ದ ಸೋನಿಯಾ

ಆತ್ಮಕಥೆಯೊಂದಿಗೆ ಸೋನಿಯಾ ಗಾಂಧಿ -

Ramesh Ballamoole
Ramesh Ballamoole Nov 11, 2026 5:55 PM

ದೆಹಲಿ, ನ. 11: ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ಬಿಡುಗಡೆಯಾಗಿದೆ. ಆತ್ಮಕಥೆಯಲ್ಲಿ ಸೋನಿಯಾ ಗಾಂಧಿ ಅವರ ವೈಯಕ್ತಿಕ ಜೀವನದ ಹಲವು ಘಟನೆಗಳ ಕುರಿತು ಬರೆಯಲಾಗಿದೆ. ರಾಹುಲ್‌ ಗಾಂಧಿ ಜನಿಸುವುದಕ್ಕೂ ಒಂದು ವರ್ಷ ಮೊದಲು ಸೋನಿಯಾ ಗಾಂಧಿ-ರಾಜೀವ್‌ ಗಾಂಧಿ ದಂಪತಿ ಗಂಡು ಮಗುವೊಂದನ್ನು ಕಳೆದುಕೊಂಡಿದ್ದರು. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಅನುಭವಿಸಿದ ನೋವನ್ನು ಸೋನಿಯಾ ಗಾಂಧಿ ಮೊದಲ ಬಾರಿಗೆ ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.

1969ರಲ್ಲಿ ತಾವು ಗರ್ಭಿಣಿ ಎಂದು ತಿಳಿಸಿದಾಗ ರಾಜೀವ್‌ ಗಾಂಧಿ ಮತ್ತು ಅತ್ತೆ ಇಂದಿರಾ ಗಾಂಧಿ ಬಹಳ ಸಂತಸಗೊಂಡಿದ್ದರು ಎಂದು ಸೋನಿಯಾ ಗಾಂಧಿ ನೆನಪಿಸಿಕೊಂಡಿದ್ದಾರೆ. "ಒಂದು ದೊಡ್ಡ ಮಗು ಇನ್ನೊಂದು ಮಗುವಿಗೆ ಜನ್ಮ ನೀಡುತ್ತಿದೆ" ಎಂದು ಹರ್ಷ ವ್ಯಕ್ತಪಡಿಸಿದ್ದರು. ದಿನವೂ ವ್ಯಾಯಾಮ ಮಾಡಬೇಕು, ಆರೋಗ್ಯಕರ ಆಹಾರವನ್ನು ಮಾತ್ರ ಸೇವಿಸಬೇಕೆಂದು ಇಂದಿರಾ ಗಾಂಧಿ ಆದೇಶಿಸಿದ್ದರೆಂದು ಸೋನಿಯಾ ಗಾಂಧಿ ತಿಳಿಸಿದ್ದು, ಆದರೆ ಅದನ್ನು ಪಾಲಿಸಲು ಸಾಧ್ಯವಾಗಲಿಲ್ಲ ಎಂದು ಬರೆದುಕೊಂಡಿದ್ದಾರೆ. ಆದರೆ ಆ ಸಂತಸ ಹೆಚ್ಚು ದಿನ ಉಳಿಯಲಿಲ್ಲ.

ಪ್ರಣಬ್ ಮುಖರ್ಜಿಗೆ ಪ್ರಧಾನಿಯಾಗುವ ಆಸೆಯಿತ್ತು; ಸೋನಿಯಾ ಗಾಂಧಿ ಆತ್ಮಕಥನದಲ್ಲಿ ಬಹಿರಂಗಗೊಂಡಿದ್ದ ಸತ್ಯಗಳೇನು?

ಜನಿಸಿದ ಒಂದು ಗಂಟೆಯಲ್ಲೇ ಮೃತಪಟ್ಟ ಮಗು

ಸೋನಿಯಾ ಗಾಂಧಿ ಏಳು ತಿಂಗಳವರೆಗೆ ಆರೋಗ್ಯವಾಗಿದ್ದರು. ಆದರೆ "ಏಳನೇ ತಿಂಗಳ ಆರಂಭದಲ್ಲಿ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿತು. ಕೂಡಲೇ ಆಸ್ಪತ್ರೆಗೆ ದಾಖಲಾದಾಗ ಅವಧಿಗೂ ಮುನ್ನ ಮಗು ಜನಿಸಿತು. ಮಗು ಜನಿಸಿದಾಗ ಆರೋಗ್ಯವಾಗಿತ್ತು. ಕಪ್ಪು ಕೂದಲು ಮತ್ತು ಉದ್ದನೆಯ ಬೆರಳುಗಳನ್ನು ಹೊಂದಿದ್ದು ನೋಡಲು ತುಂಬ ಸುಂದರವಾಗಿತ್ತು. ಆ ಮಗುವನ್ನು ನೋಡಿದ ತಕ್ಷಣವೇ ನಮಗೆ ತುಂಬ ಪ್ರೀತಿ ಹುಟ್ಟಿತ್ತು. ಆದರೆ ಆ ಮಗು ಬದುಕುಳಿಯುವ ಬಗ್ಗೆ ಡಾಕ್ಟರ್‌ ಅನುಮಾನ ವ್ಯಕ್ತಪಡಿಸಿದ್ದರು. ಮರುದಿನ ಬೆಳಿಗ್ಗೆ 6:30ರ ಸುಮಾರಿಗೆ ಮಗು ಕೊನೆಯುಸಿರೆಳೆಯಿತು" ಎಂದು ಸೋನಿಯಾ ಬರೆದುಕೊಂಡಿದ್ದಾರೆ. ಈ ಸುದ್ದಿ ಕೇಳಿ ಪ್ರವಾಸದಲ್ಲಿದ್ದ ಇಂದಿರಾ ಗಾಂಧಿ ಕಣ್ಣೀರು ಹಾಕುತ್ತಲೇ ಓಡಿಬಂದಿದ್ದರು ಎಂದು ಸೋನಿಯಾ ಗಾಂಧಿ ಬರೆದುಕೊಂಡಿದ್ದಾರೆ.

ಹಿಂದೂ ಸಂಪ್ರದಾಯದ ಪ್ರಕಾರ ನವಜಾತ ಶಿಶುಗಳು ಮೃತಪಟ್ಟರೆ ಮೃತದೇಹವನ್ನು ನದಿಗೆ ಬಿಡಲಾಗುತ್ತದೆ. ಆದರೆ ಇದಕ್ಕೆ ಸೋನಿಯಾ ಗಾಂಧಿ ಸಿದ್ಧರಿರಲಿಲ್ಲ. ಒಮ್ಮೆ ಓಖ್ಲಾ ಬ್ಯಾರೇಜ್‌ ಬಳಿ ನದಿಯಲ್ಲಿ ತೇಲುತ್ತಿದ್ದ ಶವವೊಂದನ್ನು ನಾಯಿಗಳು ಎಳೆದಾಡಿ ತಿನ್ನುತ್ತಿದ್ದವು. ಇದನ್ನು ನೋಡಿ ಸೋನಿಯಾ ಗಾಂಧಿ ತಮ್ಮ ಮಗುವನ್ನು ನದಿಗೆ ಎಸೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಅಂತಿಮವಾಗಿ ರಾಜೀವ್ ಮತ್ತು ಸಂಜಯ್ ಗಾಂಧಿ ಸೇರಿ, ತಮ್ಮ ತಂದೆ ಫಿರೋಜ್ ಗಾಂಧಿ ಅವರಿಗೆ ಸೇರಿದ ಮೆಹ್ರೌಲಿಯ ತೋಟದ ಮನೆಯಲ್ಲಿ ಮಗುವಿನ ಅಂತ್ಯಸಂಸ್ಕಾರ ನೆರವೇರಿಸಿದರು.

ಅಪಹರಣದ ಭೀತಿಯಿಂದ ರಾಹುಲ್, ಪ್ರಿಯಾಂಕಾರನ್ನು ಶಾಲೆಯಿಂದ ಅರ್ಧದಲ್ಲೇ ಕರೆತರಲಾಗಿತ್ತು; ಸೋನಿಯಾ ಗಾಂಧಿ ಹೇಳಿದ್ದೇನು?

ಪತ್ರಿಕೆ ವರದಿಯಿಂದ ಆಘಾತ

ಮಗುವನ್ನು ಕಳೆದುಕೊಂಡು ದುಃಖದಲ್ಲಿದ್ದ ಸೋನಿಯಾ ಗಾಂಧಿ ಅವರಿಗೆ, ಪತ್ರಿಕೆಯೊಂದು ಮಾಡಿದ್ದ ವರದಿ ಮತ್ತಷ್ಟು ಆಘಾತ ನೀಡಿತ್ತು. ಪತ್ರಿಕೆಯಲ್ಲಿ "ಅಕ್ರಮ ಮಗುವಿನ ಅಜ್ಜಿಯಾಗುವ ಇಂದಿರಾ ಗಾಂಧಿ ಅವರ ಪ್ರಯತ್ನ ವಿಫಲವಾಗಿದೆ" ಎಂದು ಅತ್ಯಂತ ಕೀಳಾಗಿ ಬರೆಯಲಾಗಿತ್ತು. ಇದನ್ನು ಓದಿ ಕಣ್ಣೀರಿಟ್ಟಿದ್ದ ಸೋನಿಯಾ ಅವರಿಗೆ ರಾಜೀವ್ ಗಾಂಧಿ ಸಾಂತ್ವನ ಹೇಳಿದ್ದರು. ಈ ಎಲ್ಲ ವಿಚಾರ ಸೋನಿಯಾ ಅವರ ಆತ್ಮಕಥೆಯಲ್ಲಿ ದಾಖಲಾಗಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ