ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼನೇಣು ಹಾಕಿದ್ರೂ ʼವಂದೇ ಮಾತರಂʼ ಹಾಡೋದು 2 ಪ್ಯಾರಾ ಮಾತ್ರʼʼ: ಕಾಂಗ್ರೆಸ್‌ ನಿಲುವು ಸ್ಪಷ್ಟಪಡಿಸಿದ ಬಿ.ಕೆ. ಹರಿಪ್ರಸಾದ್‌

Vande Mataram Controversy: ʼವಂದೇ ಮಾತರಂʼ ಗೀತೆಯ ಬಗ್ಗೆ ಕಾಂಗ್ರೆಸ್‌ ನಿಲುವನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಸ್ಪಷ್ಟಪಡಿಸಿದ್ದಾರೆ. ''ನಮ್ಮನ್ನು ಜೈಲಿಗೆ ಹಾಕಿದ್ರೂ ನೇಣು ಹಾಕಿದ್ರೂ ನಾವು ʼವಂದೇ ಮಾತರಂʼನ 2 ಪ್ಯಾರಾ ಮಾತ್ರ ಹಾಡೋದುʼʼ ಎಂದು ಹೇಳಿದ್ದಾರೆ.

ʼವಂದೇ ಮಾತರಂʼ: ಕಾಂಗ್ರೆಸ್‌ ನಿಲುವು ಸ್ಪಷ್ಟಪಡಿಸಿದ ಹರಿಪ್ರಸಾದ್‌

ಬಿ.ಕೆ. ಹರಿಪ್ರಸಾದ್‌ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Aug 18, 2026 9:16 PM

ದಿಲ್ಲಿ, ಆ. 18: ''ನಮ್ಮನ್ನು ಜೈಲಿಗೆ ಹಾಕಿದ್ರೂ ನೇಣು ಹಾಕಿದ್ರೂ ನಾವು ʼವಂದೇ ಮಾತರಂʼನ 2 ಪ್ಯಾರಾ ಮಾತ್ರ ಹಾಡೋದುʼʼ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ (BK Hariprasad) ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದಾರೆ (Vande Mataram Controversy). ʼʼಇದು ನನ್ನ ನಿಲುವು ಮಾತ್ರವಲ್ಲ ಕಾಂಗ್ರೆಸ್‌ನದ್ದು (Congress) ಕೂಡʼʼ ಎಂದು ಸ್ಪಷ್ಟಪಡಿಸಿದ್ದಾರೆ. ದಿಲ್ಲಿಯಲ್ಲಿ ಮಂಗಳವಾರ (ಆಗಸ್ಟ್‌ 18) ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್​ನ ಯಾವ ಕಾರ್ಯಕ್ರಮಗಳಲ್ಲಿಯೂ 'ವಂದೇ ಮಾತರಂ' ಗೀತೆಯನ್ನು ಪೂರ್ಣವಾಗಿ ಹಾಡಲ್ಲ ಎಂದಿದ್ದಾರೆ.

ಸ್ವಾತಂತ್ರ್ಯೋತ್ಸವದಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ʼವಂದೇ ಮಾತರಂʼ ಗೀತೆಯನ್ನು ಅರ್ಧದಲ್ಲೇ ನಿಲ್ಲಿಸಲು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಸೂಚಿಸಿದ್ದರು ಎನ್ನಲಾದ ವಿಡಿಯೊ ವೈರಲ್‌ ಆದ ಬಳಿಕ ವಿವಾದ ಭುಗಿಲೆದ್ದಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೀತೆಗೆ ಕಾಂಗ್ರೆಸ್‌ ಗೌರವ ಕೊಡುತ್ತಿಲ್ಲ ಎಂದು ಬಿಜೆಪಿ ಆರೋಪಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಮಧ್ಯೆಯೇ ಈ ಹೇಳಿಕೆ ಹೊರ ಬಿದ್ದಿದೆ.

'ವಂದೇ ಮಾತರಂ' ಗೀತೆ ಬಗ್ಗೆ ಬಿ.ಕೆ. ಹರಿಪ್ರಸಾದ್‌ ಹೇಳಿಕೆ:



ʼʼಸರ್ಕಾರ ಈ ಕುರಿತು ಕಾನೂನು ರೂಪಿಸಿರಬಹುದು. ಆದರೆ ಕೆಪಿಸಿಸಿ ಅಧ್ಯಕ್ಷನಾಗಿ 1896ರಿಂದ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಸಾಂಪ್ರದಾಯಿಕವಾಗಿ ಹಾಡುತ್ತಾ ಬಂದಿರುವ ʼವಂದೇ ಮಾತರಂʼನ 2 ಚರಣಗಳನ್ನಷ್ಟೇ ನಾವು ಹಾಡುವುದನ್ನು ಮುಂದುವರಿಸಿಕೊಂಡು ಹೋಗುತ್ತೇವೆʼʼ ಎಂದು ತಿಳಿಸಿದ್ದಾರೆ. ʼʼನಮ್ಮನ್ನು ಜೈಲಿಗೆ ಹಾಕ್ತಾರೋ, ನೇಣು ಹಾಕ್ತಾರೋ ಹಾಕಲಿ. ನಾವು ಮಾತ್ರ ʼವಂದೇ ಮಾತರಂʼನ 2 ಪ್ಯಾರಾವನ್ನಷ್ಟೇ ಹಾಡುವುದು. ಹಾಡಿನ ಬಗ್ಗೆ ನಮ್ಮ ವಿರೋಧವಿಲ್ಲ, ಆದರೆ 2 ಪ್ಯಾರ ಮಾತ್ರ ಹೇಳೋಕೆ ಆಗೋದು. ಪೂರ್ಣವಾಗಿ ಯಾವ ಕಾರ್ಯಕ್ರಮದಲ್ಲಿಯೂ ಹಾಡುವುದಿಲ್ಲ'' ಎಂದು ಹೇಳಿದ್ದಾರೆ.

ಸೋನಿಯಾ ಗಾಂಧಿ ವಿರುದ್ಧ ಮಂಗಳೂರಿನಲ್ಲಿ ದೂರು; ಎಫ್‌ಐಆರ್‌ ದಾಖಲಿಸದಿದ್ದರೆ ಹೈಕೋರ್ಟ್‌ ಮೊರೆ ಹೋಗುವುದಾಗಿ ಬಿಜೆಪಿ ಮುಖಂಡ ವಿಕಾಸ್ ಎಚ್ಚರಿಕೆ

ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಸೋನಿಯಾ ಗಾಂಧಿ ಪೂರ್ಣ ʼವಂದೇ ಮಾತರಂʼ ಹಾಡಿಗೆ ಆಕ್ಷೇಪವೆತ್ತಿದ ಬಗ್ಗೆ ಕೇಳಿದ ಪ್ರಶ್ನೆಗೆ, ʼʼಇದು ಬಿಜೆಪಿಯವರ ಸೃಷ್ಟಿ. ಅವರು ತಮಗೆ ಬೇಕಾದಂತೆ ತಿರುಚಿಕೊಳ್ಳುತ್ತಾರೆ. ಆರ್‌ಎಸ್‌ಎಸ್ ಕಚೇರಿಯಲ್ಲಿ ʼಸದಾ ವತ್ಸಲೇʼ ಬದಲಿಗೆ ʼವಂದೇ ಮಾತರಂʼ ಹಾಡುತ್ತಾರೆಯೇ ಕೇಳಿʼʼ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕ ಸರ್ಕಾರದ ನಿಲುವು

ಇನ್ನು ಸ್ವಾತಂತ್ರ್ಯೋತ್ಸವದ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ʼವಂದೇ ಮಾತರಂʼ ಪೂರ್ಣವಾಗಿ ಹಾಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ʼʼಕರ್ನಾಟಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ʼವಂದೇ ಮಾತರಂʼ ಪೂರ್ಣ ಗೀತೆ ಹಾಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಇದು ಕಾಂಗ್ರೆಸ್ ನೇತೃತ್ವದ ಸರ್ಕಾರವಾದರೂ ಜನರಿಂದ ಆಯ್ಕೆಯಾದ ಸರ್ಕಾರ. ಅದು ಕಾನೂನಿಗೆ ಬದ್ಧವಾಗಿದೆ. ಕಾನೂನು ರೂಪಿಸಿದ್ದರೆ, ಸರ್ಕಾರ ಅದನ್ನು ಪಾಲಿಸಲೇಬೇಕುʼʼ ಎಂದು ವಿವರಿಸಿದ್ದಾರೆ.

ವಂದೇ ಮಾತರಂ ಗೀತೆಗೆ ಸೋನಿಯಾ ಗಾಂಧಿ ಆಕ್ಷೇಪ? ಬಿಜೆಪಿ ಆರೋಪ, ಕಾಂಗ್ರೆಸ್ ಸ್ಪಷ್ಟನೆ

ʼವಂದೇ ಮಾತರಂʼ ಹಾಡಲ್ಲ ಎಂದ ಉತ್ತರ ಪ್ರದೇಶ ಕಾಂಗ್ರೆಸ್‌ ಸಂಸದ ಮಸೂದ್‌

ಇನ್ನು ಉತ್ತರ ಪ್ರದೇಶದ ಕಾಂಗ್ರೆಸ್‌ ಸಂಸದ ಇಮ್ರಾನ್‌ ಮಸೂದ್‌, ʼʼವಂದೇ ಮಾತರಂʼ ರಾಷ್ಟ್ರೀಯ ಗಾನಕ್ಕೆ ಎದ್ದು ನಿಂತು ಗೌರವ ಸಲ್ಲಿಸಿದರೂ ಅದನ್ನು ಯಾವುದೇ ಕಾರಣಕ್ಕೂ ಹಾಡುವುದಿಲ್ಲʼʼ ಎಂದು ಹೇಳಿದ್ದಾರೆ. ʼʼಅಲ್ಲಾಹ್‌ ಹೊರತುಪಡಿಸಿ ನಾನು ಬೇರೆ ಯಾರನ್ನೂ ಆರಾಧಿಸಲಾರೆ. ಸಂವಿಧಾನವು ನನಗೆ ಈ ಹಕ್ಕನ್ನು ನೀಡಿದೆ. ಈ ಹಕ್ಕನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲʼʼ ಎಂದು ಹೇಳಿದ್ದಾರೆ.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.