ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ಕರ್ನಾಟಕ ರತ್ನ’ ಡಾ. ಪುನೀತ್‌ ರಾಜ್‌ಕುಮಾರ್ 5ನೇ ವರ್ಷದ ಪುಣ್ಯಸ್ಮರಣೆ; ಕನ್ನಡಿಗರ ಹೃದಯದಲ್ಲಿ ಸದಾ ಮಿನುಗುವ ಅಪ್ಪು

Dr Puneeth Rajkumar: ‘ಕರ್ನಾಟಕ ರತ್ನ’ ಡಾ. ಪುನೀತ್‌ ರಾಜ್‌ಕುಮಾರ್ ಅವರ 5ನೇ ವರ್ಷದ ಪುಣ್ಯಸ್ಮರಣೆಯ ಈ ದಿನದಂದು ರಾಜ್ಯಾದ್ಯಂತ ಕಂಠೀರವ ಸ್ಮಾರಕಕ್ಕೆ ಜನಸಾಗರ ಹರಿದುಬರುತ್ತಿದೆ. ಸರಳತೆ ಮತ್ತು ಸಾಮಾಜಿಕ ಬದ್ಧತೆಯ ಅಪ್ಪು ಅವರ ಆದರ್ಶ ಜೀವನ ಎಂದಿಗೂ ಸ್ಫೂರ್ತಿದಾಯಕ.

ಪುನೀತ್ ರಾಜ್‌ಕುಮಾರ್ 5ನೇ ಪುಣ್ಯತಿಥಿ; ಅಪ್ಪು ಬದುಕು ಸದಾ ಎಲ್ಲರಿಗೂ ಆದರ್ಶ

-

Avinash GR
Avinash GR Oct 29, 2026 3:41 PM

‘ಕರ್ನಾಟಕ ರತ್ನ’, ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಇಂದಿಗೆ (ಅಕ್ಟೋಬರ್ 29) ಭರ್ತಿ ಐದು ವರ್ಷಗಳು ಸಂದಿವೆ. ಅವರು ಭೌತಿಕವಾಗಿ ದೂರವಾಗಿ ಅರ್ಧ ದಶಕವೇ ಉರುಳಿದ್ದರೂ, ಕನ್ನಡಿಗರ ಎದೆಯಲ್ಲಿ ಅವರ ನೆನಪುಗಳು ಎಂದಿಗಿಂತಲೂ ಹೆಚ್ಚು ಹಸಿರಾಗಿ, ದಿನದಿಂದ ದಿನಕ್ಕೆ ಜನರಿಗೆ ಮತ್ತಷ್ಟು ಆಪ್ತವಾಗುತ್ತಲೇ ಇವೆ.

ಅಪ್ಪು ಅವರ 5ನೇ ಪುಣ್ಯತಿಥಿಯ ಅಂಗವಾಗಿ ರಾಜ್ಯಾದ್ಯಂತ ಅಭಿಮಾನಿಗಳು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸ್ಮಾರಕಕ್ಕೆ ಧಾವಿಸಿ ನಮನ ಸಲ್ಲಿಸುತ್ತಿದ್ದಾರೆ. ಕೇವಲ ಭಾವಚಿತ್ರಕ್ಕೆ ಹಾರ ಹಾಕಿ ಕೈಮುಗಿಯುವುದಷ್ಟೇ ಅಲ್ಲದೆ, ರಕ್ತದಾನ, ಅನ್ನಸಂತರ್ಪಣೆ ಹಾಗೂ ಬಡ ಮಕ್ಕಳಿಗೆ ಶಾಲಾ ಸಾಮಗ್ರಿಗಳ ವಿತರಣೆಯಂತಹ ಹತ್ತು ಹಲವು ಸಮಾಜಮುಖಿ ಕೆಲಸಗಳ ಮೂಲಕ ತಮ್ಮ ನೆಚ್ಚಿನ ನಟನ ಸಾರ್ಥಕ ಬದುಕನ್ನು ಸ್ಮರಿಸುತ್ತಿದ್ದಾರೆ.

ಅಪ್ಪು ಎಲ್ಲರಿಗೂ ಆಪ್ತ

ಡಾ. ರಾಜ್‌ಕುಮಾರ್ ಅವರ ಪುತ್ರನಾಗಿ ಜನಿಸಿದರೂ, ಸ್ವಂತ ಪರಿಶ್ರಮದಿಂದಲೇ ʻಪವರ್ ಸ್ಟಾರ್ʼ ಪಟ್ಟಕ್ಕೇರಿದ ಪುನೀತ್ ಅವರ ಸರಳತೆ ಮತ್ತು ವಿನಯಶೀಲತೆ ಇಂದಿಗೂ ಎಲ್ಲರಿಗೂ ಮಾದರಿ. ಮೇರು ನಟನ ಕುಟುಂಬದ ಹಿನ್ನೆಲೆಯಿದ್ದರೂ ಸೂಕ್ತ ಸಿದ್ಧತೆಗಳೊಂದಿಗೆ ನಾಯಕನಾಗಿ ಪಾದಾರ್ಪಣೆ ಮಾಡಿದ ಅವರು, ಸ್ಟಾರ್‌ಡಮ್ ಅನ್ನು ಎಂದಿಗೂ ತಲೆಗೇರಿಸಿಕೊಂಡವರಲ್ಲ.

ಹಿರಿಯರನ್ನು ಗೌರವಿಸುವ, ಕಿರಿಯರನ್ನು ಪ್ರೀತಿಸುವ ಅವರ ಸದ್ಗುಣವೇ ಅವರನ್ನು ಮನೆಮಾತಾಗಿಸಿತು. ಬಾಲನಟನಾಗಿದ್ದಾಗಿನಿಂದಲೂ ಮುಖದಲ್ಲಿದ್ದ ಅದೇ ಮುಗ್ಧ ನಗೆ ಕೊನೆಯವರೆಗೂ ಉಳಿದಿದ್ದರಿಂದ, ಪುಟಾಣಿ ಕಂದಮ್ಮಗಳಿಂದಿಡಿದು ವಯೋವೃದ್ಧರವರೆಗೂ ಅಪ್ಪು ಎಂದರೆ ಅಚ್ಚುಮೆಚ್ಚು. ಅವರ ಮಾತು, ಎಲ್ಲರನ್ನೂ ನಗುಮುಖದಿಂದಲೇ ಎದುರುಗೊಳ್ಳುತ್ತಿದ್ದ ಆ ನಡೆ ಕನ್ನಡಿಗರನ್ನು ಅಪಾರವಾಗಿ ಸೆಳೆದಿತ್ತು.

ಸಮಾಜಮುಖಿ ಕೆಲಸಗಳಲ್ಲಿ ಸದಾ ಮುಂದು

ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವುದರಲ್ಲಿ ಅಪ್ಪು ಸದಾ ಮುಂದು. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದೆಂಬಂತೆ ಯಾವುದೇ ಪ್ರಚಾರದ ಹಪಾಹಪಿಯಿಲ್ಲದೆ ನೂರಾರು ಅಸಹಾಯಕರಿಗೆ ಆಸರೆಯಾಗಿದ್ದ ಪುನೀತ್, ಸಾಮಾಜಿಕ ಕಳಕಳಿಯ ಹಲವು ಜಾಹೀರಾತುಗಳಲ್ಲಿ ಯಾವುದೇ ಸಂಭಾವನೆಯನ್ನೂ ಪಡೆಯದೆ ನಟಿಸಿ ಸೈ ಎನಿಸಿಕೊಂಡಿದ್ದರು.

Puneeth Rajkumar : ಪುನೀತ್ ರಾಜ್​​ಕುಮಾರ್ ಪುಣ್ಯಸ್ಮರಣೆ; ಮರೆಯಲಾಗದ ಅಪ್ಪು ನೆನಪು

ಅಪ್ಪು ನಿರ್ದೇಶಕರ ನಟ

ಚಿತ್ರರಂಗದಲ್ಲಿ ತಮ್ಮದೇ ಆದ ಅಳಿಸಲಾಗದ ಛಾಪು ಮೂಡಿಸಿದ್ದ ಪುನೀತ್, ಸದಭಿರುಚಿಯ ಕೌಟುಂಬಿಕ ಕಥೆಗಳನ್ನೇ ಆಯ್ಕೆ ಮಾಡಿಕೊಂಡು ಮಹಿಳಾ ಪ್ರೇಕ್ಷಕರ ಮೆಚ್ಚುಗೆ ಗಳಿಸುವುದರ ಜೊತೆಗೆ, ಯುವಜನತೆಯ ನೆಚ್ಚಿನ ನಾಯಕರಾಗಿದ್ದರು. ಡ್ಯಾನ್ಸ್‌ನಲ್ಲಿ ಅವರಿಗೆ ಅವರೇ ಸಾಟಿಯಾಗಿದ್ದರು. ಸಿನಿಮಾ ಸೆಟ್‌ಗೆ ಬಂದಾಗ ನಿರ್ದೇಶಕರ ನಟನಾಗಿ, ಯಾವುದೇ ಹಮ್ಮಿಲ್ಲದೆ ಲೈಟ್‌ಬಾಯ್‌ನಿಂದ ಹಿಡಿದು ಪ್ರತಿಯೊಬ್ಬ ತಂತ್ರಜ್ಞರೊಂದಿಗೂ ಆತ್ಮೀಯವಾಗಿ ಬೆರೆಯುತ್ತಿದ್ದರು. ತಮ್ಮ ಓರಗೆಯ ಕಲಾವಿದರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು.

ಅಪ್ಪು ಜೀವನ ಮೌಲ್ಯಗಳು ಸದಾ ಸ್ಮರಣೀಯ

ಉತ್ತಮ ಆಹಾರಪ್ರಿಯರಾಗಿದ್ದ ಅವರು ಶಿಸ್ತಿನ ಜೀವನ ನಡೆಸುತ್ತಿದ್ದರು. ಕುಟುಂಬಕ್ಕೆ ಅಪಾರ ಪ್ರಾಮುಖ್ಯತೆ ನೀಡುತ್ತಿದ್ದ ಅವರು, ಅಣ್ಣ-ಅಕ್ಕಂದಿರ ಮೇಲೆ ಗೌರವ ಇಟ್ಟುಕೊಂಡಿದ್ದರು. ಪತ್ನಿ ಅಶ್ವಿನಿ ಅವರ ಜತೆಗಿನ ಅವರ ಸಾಂಸಾರಿಕ ಬಾಂಧವ್ಯ ಇಡೀ ಸಮಾಜಕ್ಕೇ ಆದರ್ಶವಾಗಿತ್ತು. ಗಾಸಿಪ್‌ಗಳಿಂದ ದೂರವಿದ್ದ ಅವರು ಅತ್ಯಂತ ತಾಳ್ಮೆ ಮತ್ತು ಸೌಜನ್ಯದಿಂದ ನಡೆದುಕೊಳ್ಳುತ್ತಿದ್ದರು.

ಇಷ್ಟೇ ಅಲ್ಲದೆ, ತಮ್ಮ ಪಿಆರ್‌ಕೆ ಬ್ಯಾನರ್ ಮೂಲಕ ಹೊಸ ಪ್ರತಿಭೆಗಳು, ಹೊಸ ನಿರ್ದೇಶಕರಿಗೆ ವೇದಿಕೆ ಕಲ್ಪಿಸಿ ಪ್ರೋತ್ಸಾಹ ನೀಡಿದ ದಾರಿದೀಪವಾಗಿದ್ದರು ಪುನೀತ್. ದೇಹ ತೊರೆದರೂ ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಚಿರಂಜೀವಿಯಾಗಿ ನೆಲೆಸಿರುವ ಅಪ್ಪು ಅವರ ವ್ಯಕ್ತಿತ್ವ ಹಾಗೂ ಜೀವನ ಮೌಲ್ಯಗಳು ಸದಾ ಸ್ಮರಣೀಯ.