ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೆಹಲಿ ಹಿಂಸಾಚಾರ: CJP ಪ್ರತಿಭಟನಾಕಾರರ ಪಾಸ್‌ಪೋರ್ಟ್ ರದ್ದು ಮಾಡಲಾಗುತ್ತಾ? ಪೊಲೀಸರು ಹೇಳಿದ್ದೇನು?

ಕಾಕ್‌ರೋಚ್ ಜನತಾ ಪಕ್ಷ (CJP) ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ಪಾಸ್‌ಪೋರ್ಟ್ ರದ್ದುಪಡಿಸಲಾಗುತ್ತದೆ ಎಂಬ ವರದಿಗಳನ್ನು ದೆಹಲಿ ಪೊಲೀಸರು ತಳ್ಳಿಹಾಕಿದ್ದಾರೆ. ಯಾವುದೇ ಅಧಿಕೃತ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿರುವ ಪೊಲೀಸರು, ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಇದೇ ವೇಳೆ, CJP ಪ್ರತಿನಿಧಿಗಳು ಹಾಗೂ ಕೇಂದ್ರ ಸಚಿವರ ನಡುವೆ ಇಂದು ಮಹತ್ವದ ಮಾತುಕತೆ ನಡೆಯುವ ಸಾಧ್ಯತೆ ಇದೆ.

CJP ಪ್ರತಿಭಟನಾಕಾರರ ಪಾಸ್‌ಪೋರ್ಟ್ ರದ್ದು ಮಾಡಲಾಗುತ್ತಾ?

ಪಾಸ್‌ಪೋರ್ಟ್ ರದ್ದು ವರದಿ ದಾರಿತಪ್ಪಿಸುವ ಸುದ್ದಿ -

Profile
Sushmitha Jain Jul 24, 2026 6:38 PM

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಕಾಕ್ರೋಚ್ ಪಾರ್ಟಿ (Cockroach Janta Party (CJP) ಪ್ರತಿಭಟನೆ ವೇಳೆ ಹಿಂಸಾಚಾರದಲ್ಲಿ ಭಾಗಿಯಾಗಿದ್ದವರ ಪಾಸ್‌ಪೋರ್ಟ್‌ಗಳನ್ನು ರದ್ದುಪಡಿಸಲಾಗುತ್ತದೆ ಎಂಬ ವರದಿಗಳನ್ನು ದೆಹಲಿ ಪೊಲೀಸರು ತಳ್ಳಿಹಾಕಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ X ನಲ್ಲಿ ಪ್ರಕಟಣೆ ನೀಡಿರುವ ದೆಹಲಿ ಪೊಲೀಸರು, "CJP ಪ್ರತಿಭಟನಾಕಾರರ ಪಾಸ್‌ಪೋರ್ಟ್ ರದ್ದುಪಡಿಸುವ ಕುರಿತು ಯಾವುದೇ ನಿರ್ಧಾರವನ್ನು ಘೋಷಿಸಲಾಗಿಲ್ಲ. ಇಂತಹ ಸುದ್ದಿಗಳು ತಪ್ಪು ಮತ್ತು ದಾರಿತಪ್ಪಿಸುವಂತಿವೆ" ಎಂದು ಸ್ಪಷ್ಟಪಡಿಸಿದ್ದಾರೆ.

ಅಧಿಕೃತ ಮಾಹಿತಿಯನ್ನೇ ನಂಬುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ ಪೊಲೀಸರು, ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಬಾರದು ಅಥವಾ ಪ್ರಸಾರ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದಕ್ಕೂ ಮುನ್ನ, ಜುಲೈ 20ರಂದು ನಡೆದ ಹಿಂಸಾಚಾರದಲ್ಲಿ ನೇರವಾಗಿ ಭಾಗಿಯಾಗಿದ್ದವರನ್ನು ಸಿಸಿಟಿವಿ ದೃಶ್ಯಗಳು, ವಿಡಿಯೊ ದಾಖಲೆಗಳು ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಗುರುತಿಸಿ, ಅವರ ವಿರುದ್ಧ ಕಾನೂನು ಕ್ರಮದ ಜೊತೆಗೆ ಪಾಸ್‌ಪೋರ್ಟ್ ರದ್ದುಪಡಿಸುವ ಪ್ರಕ್ರಿಯೆ ಆರಂಭಿಸಲಾಗಬಹುದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.



ಜುಲೈ 20ರಂದು ನಡೆದಿದ್ದೇನು?

ನೀಟ್ - ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ CJP 'ಚಲೋ ಸಂಸತ್' ಮೆರವಣಿಗೆ ನಡೆಸಿತ್ತು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿದ್ದು, ಎರಡೂ ಕಡೆಯ ಹಲವರು ಗಾಯಗೊಂಡಿದ್ದರು.

ಪರಿಸ್ಥಿತಿಯನ್ನು ನಿಯಂತ್ರಿಸಲು ದೆಹಲಿ ಪೊಲೀಸರು ಅಶ್ರುವಾಯು ಪ್ರಯೋಗಿಸಿ ಲಾಠಿ ಪ್ರಹಾರ ನಡೆಸಿದ್ದರು. ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಅತಿಯಾದ ಬಲಪ್ರಯೋಗದ ಆರೋಪ ಮಾಡಿದ್ದರೆ, ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಮಾತ್ರ ಕೈಗೊಂಡಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದರು.

NEET ಸೋರಿಕೆ ವಿವಾದ: ಸಚಿವರ ರಾಜೀನಾಮೆ ಸಿಗುವವರೆಗೂ ಹೋರಾಟ ಎಂದ CJP

ಇಂದು ಮಹತ್ವದ ಸಭೆ

ಪ್ರತಿಭಟನೆ ಹಲವು ದಿನಗಳಿಂದ ಮುಂದುವರಿದಿರುವ ಹಿನ್ನೆಲೆಯಲ್ಲಿ, CJP ಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದ ಕೆಲವು ಸಚಿವರು ಇಂದು ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ಸಭೆ ನಡೆಸಿ ಪ್ರತಿಭಟನಾಕಾರರ ಬೇಡಿಕೆಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ.

ಸೋನಂ ವಾಂಗ್ಚುಕ್ ಉಪವಾಸ ಅಂತ್ಯ

ಜೂನ್ 28ರಿಂದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ನಡೆಸುತ್ತಿದ್ದ ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್, ಗುರುಗ್ರಾಮದ ಮೆಡಾಂಟಾ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ತಮ್ಮ 26 ದಿನಗಳ ಉಪವಾಸವನ್ನು ಅಂತ್ಯಗೊಳಿಸಿದರು.

ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹಾಗೂ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರ ಸಮ್ಮುಖದಲ್ಲಿ ವಾಂಗ್ಚುಕ್ ಅವರಿಗೆ ಸೂಪ್ ನೀಡಿ ಉಪವಾಸ ಮುಕ್ತಾಯಗೊಳಿಸಲಾಯಿತು.

ಈ ವೇಳೆ ಮಾತನಾಡಿದ ಜೆ.ಪಿ. ನಡ್ಡಾ, "ಶಾಂತಿಯುತವಾಗಿ ಪ್ರತಿಭಟನೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸದಿರುವ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿದೆ. ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಅಗತ್ಯ ಶಿಕ್ಷಣ ಸುಧಾರಣೆಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಲಿದೆ. ಇತ್ತೀಚಿನ NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವ ವಿಚಾರವನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ" ಎಂದು ಹೇಳಿದರು.

ಉಪವಾಸ ಮುಕ್ತಾಯದ ಬಳಿಕ ಮಾತನಾಡಿದ ಸೋನಂ ವಾಂಗ್ಚುಕ್, "ನನ್ನ ಉಪವಾಸವನ್ನು ಅಂತ್ಯಗೊಳಿಸಲು ಸಾಧ್ಯವಾಗಿರುವುದಕ್ಕೆ ಸಂತೋಷವಾಗಿದೆ. ಸರ್ಕಾರಕ್ಕೆ ಧನ್ಯವಾದಗಳು" ಎಂದು ತಿಳಿಸಿದ್ದಾರೆ.